PLEASE LOGIN TO KANNADANET.COM FOR REGULAR NEWS-UPDATES

೧)    ಬಸವ ಪಟ ಆರೋಹಣ ಕಾರ್ಯಕ್ರಮ : ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ೪ ದಿನ 'ಬಸವ ಪಟ ಆರೋಹಣ' ಎಂಬ ಧಾರ್ಮಿಕ ಕಾರ್ಯಕ್ರಮವೂ ಜರುಗುತ್ತದೆ. ಭಕ್ತರು ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರುವ ಬಸವಪಟಕ್ಕೆ ವಿಧಿವಿಧಾನವಾಗಿ ಪೂಜೆ ಸಲ್ಲಿಸಿ, ನೈವೇದ್ಯ ಮಾಡಿ ಆ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಶ್ರೀ ಗವಿಮಠದ ಕರ್ತೃ ಗದ್ದುಗೆಯ ಸುತ್ತ ೫ ಸುತ್ತ ಪ್ರದಕ್ಷಿಣೆ ಹಾಕುತ್ತಾ ಗವಿಸಿದ್ಧೇಶ್ವರನ ಜಯಘೋಷಗಳೊಂದಿಗೆ ಶ್ರೀ ಗವಿಮಠದ ಕರ್ತೃ ಗದ್ದುಗೆಯ ದ್ವಾರ ಬಾಗಿಲಿನ ಎದುರಿಗಿರುವ ಕಲ್ಲಿನ ಮೇಲ್ಮಂಟಪದ ಕಂಭಕ್ಕೆ ಬಸವ ಪಟ ಕಟ್ಟುತ್ತಾರೆ. ಇದುವೇ 'ಬಸವ ಪಟ ಆರೋಹಣ'.  ಶ್ರೀ ಗವಿಸಿದ್ಧನ ಸನ್ನಿಧಿಯಲ್ಲಿ ಬಸವ ಪಟ ಆರೋಹಣ ಮಾಡುವ ಉದ್ದೇಶವೆಂದರೆ ನಮ್ಮದು ಕೃಷಿ ಪ್ರಧಾನ ನಾಡು. ಆ ಕಾರಣಕ್ಕಾಗಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪೃಕೃತಿ ಇವುಗಳಿಗೆ ಪೂಜೆ ಸಲ್ಲಿಸುವದು ನಮ್ಮ ಪ್ರಥಮ ಕರ್ತವ್ಯವಾಗಿದೆ. ಶ್ರೀ ಗವಿಸಿದ್ಧನ ಸನ್ನಿಧಿಯ ಈ ನಾಡಿನಲ್ಲಿ ವರ್ಷಪೂರ್ತಿ ಉತ್ತಮ ಮಳೆ, ಉತ್ತಮ ಬೆಳೆ ಬಂದು ರೈತಾಪಿ ವರ್ಗಕ್ಕೆ ಸುಖ, ಶಾಂತಿ, ಸಮೃದ್ಧಿ ಸದಾ ದೊರೆಯಲೆಂಬ ಆಶಯಕ್ಕಾಗಿ 'ಬಸವ ಪಟ ಆರೋಹಣ' ಕಾರ್ಯಕ್ರಮವು ಜರುಗುತ್ತದೆ. ಶ್ರೀಮಠದ ಜಾತ್ರಾ ಪರಂಪರೆಯಲ್ಲಿ ಬಸವ ಪಟ ಆರೋಹಣ ಕಾರ್ಯಕ್ರಮದ ಮೂಲಕವೇ ಜಾತ್ರೆಗೆ ವಿದ್ಯುಕ್ತವಾಗಿ ಚಾಲನೆ ಸಿಕ್ಕಂತಾಗುತ್ತದೆ.

೨)    ಪಂಚ ಕಳಸೋತ್ಸವ : ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ೪ ದಿನ 'ಬಸವ ಪಟ ಆರೋಹಣ' ಎಂಬ ಧಾರ್ಮಿಕ ಕಾರ್ಯಕ್ರಮ ಜರುಗಿದ ಬೆನ್ನಲ್ಲೇ ಪಂಚ ಕಳಸೋತ್ಸವ ಕಾರ್ಯಕ್ರಮ ಜರುಗುತ್ತದೆ.  ಸಾಮಾನ್ಯವಾಗಿ ಎಲ್ಲ ಮಠಮಾನ್ಯಗಳಿಗೆ ಒಂದೇ ಕಳಸವಿರುತ್ತದೆ. ಆದರೆ ಕೊಪ್ಪಳದ ಶ್ರೀ ಗವಿಮಠದ ಕರ್ತೃ ಶ್ರೀ ಗವಿಸಿದ್ಧೇಶ್ವರ ಗದ್ದುಗೆಯ ಮೇಲೆ ಐದು ಕಳಸಗಳು ಶೋಭಾಯಮಾನವಾಗಿರುತ್ತವೆ. ರಥೋತ್ಸವದ ದಿನಗಳು ಸಮೀಪಿಸುತ್ತಿರುವಾಗ ಈ ಐದು ಕಳಸಗಳನ್ನು ಒಂದು ವಾರದ ಮೊದಲೇ ಕೆಳಗೆ ಇಳಿಸಿಕೊಂಡು, ಆಯಾ ಓಣಿಯ ದೈವದವರು ಕೊಂಡೊಯ್ಯುತ್ತಾರೆ. ನಂತರ ಅವುಗಳನ್ನು ಸ್ವಚ್ಚಗೊಳಿಸಿ, ಶೃಂಗಾರಗೊಳಿಸಿ ಶ್ರೀ ಗವಿಮಠಕ್ಕೆ ತರುತ್ತಾರೆ.  ಒಂದನೆಯದು ಕೊಪ್ಪಳದ ಬನ್ನಿಕಟ್ಟಿ ಭಾಗದ್ದು. ಶ್ರೀ ಗೌರಿಶಂಕರ ದೇವಸ್ಥಾನದಿಂದ ಶ್ರೀಮಠಕ್ಕೆ ಬರುವದು. ಎರಡನೆಯದು ವಿ.ಕೆ. ಸಜ್ಜನರು ಮಾಡಿಸಿದ ಕಳಸ. ಅವರ ಮನೆಯಿಂದ ಶೀ ಗವಿಮಠಕ್ಕೆ ಬರುವದು. ಮೂರನೆಯದು ಪಲ್ಲೇದವರ ಓಣಿಯ ಶ್ರೀ ಬಸವೇಶ್ವರ ದೇವಸ್ಥಾನದ ದೈವದವರಿಂದ ಶ್ರೀಮಠಕ್ಕೆ ಬರುವದು. ನಾಲ್ಕನೆಯದು ಕೋಟೆ ರಸ್ತೆಯ ಶ್ರೀ ಮಹೇಶ್ವರ ದೇವಸ್ಥಾನದ ದೈವದವರಿಂದ ಮಠಕ್ಕೆ ಬರುವದು. ಐದನೆಯದು ಶ್ರೀ ಪ್ಯಾಟಿ ಈಶ್ವರ ದೇವಸ್ಥಾನದ ದೈವದವರಿಂದ ಮಠಕ್ಕೆ ಬರುವದು. ಇವುಗಳನ್ನು ಬನದ ಹುಣ್ಣಿಮೆಯ ದಿವಸವೇ ಆಯಾ ಓಣಿಯ ದೈವದವರು ಐದು ಕಳಸಗಳನ್ನು ಭಾಜಾ-ಭಜಂತ್ರಿ, ಭಜನೆ, ಡೊಳ್ಳು ಕುಣಿತದೊಂದಿಗೆ ಗವಿಮಠಕ್ಕೆ ತಂದು, ಗೋಪುರಕ್ಕೇರಿಸಿ, ಪೂಜೆ ಮಾಡಿಸಿ, ಪ್ರಸಾದ ಪಡೆದು ಮರಳುತ್ತಾರೆ. ಇದು ಪ್ರತಿವರ್ಷದ ಸಂಪ್ರದಾಯ. ರಾತ್ರಿ ಈ ಕಾರ್ಯಕ್ರಮ ಜರುಗಿದ ನಂತರ ಗವಿಮಠಕ್ಕೆ ಆಗಮಿಸಿದ ಜಂಗಮಯೋಗಿಗಳಿಗೆ ಪ್ರಸಾದ , ದಕ್ಷಿಣೆ, ತಾಂಬೂಲಾದಿಗಳನ್ನು ನೀಡಿ ಜಂಗಮಾರಾಧನೆ ಮಾಡಲಾಗುತ್ತದೆ.

೩)    ಕಳಸೋತ್ಸವ : ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ಪ್ರತಿವರ್ಷದ ಸಂಪ್ರದಾಯದಂತೆ ಬನದ ಹುಣ್ಣಿಮೆಯಂದು ಸಾಯಂಕಾಲ ೬ ಗಂಟೆಗೆ ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ. ಶ್ರೀ ವೀರನಗೌಡರು ಲಿಂಗನಗೌಡ ಪಾಟೀಲ ಮತ್ತು ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಪಾಟೀಲರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ರಥದ ಮೇಲಿನ ಕಳಸವು ಭಾಜಾ-ಭಜಂತ್ರಿ, ಭಜನೆ, ಡೊಳ್ಳು-ಕುಣಿತ, ನಂದಿಕೋಲಿನೊಂದಿಗೆ ಸಾವಿರ ಸಾವಿರ ಭಕ್ತರಾದಿಯಾಗಿ ಕೊಪ್ಪಳದ ಶ್ರೀಮಠಕ್ಕೆ ಬರುತ್ತದೆ. ಈ ಮೆರವಣಿಗೆಯಲ್ಲಿ ಹಲಗೇರಿ ಗ್ರಾಮದ ಸದ್ಭಕ್ತರು ಹಾಗೂ ಗೌಡರ ಮನೆತನದವರು ಭಾಗವಹಿಸುತ್ತಾರೆ. ಮಾರ್ಗ ಮಧ್ಯದಲ್ಲಿ ಜಂಗಮೋತ್ಸವದ ಮೆರವಣಿಗೆಯನ್ನು ಕೂಡಿಕೊಂಡು ಹೊರಟು, ನಂತರ ರಾತ್ರಿ ಹೊತ್ತು ಗವಿಮಠ ತಲುಪವದು. ಜಂಗಮೋತ್ಸವ ಮತ್ತು ಕಳಸೋತ್ಸವ ಭಕ್ತಿ-ಭಾವಗಳ ಸಮ್ಮಿಲನವಾಗಿರುತ್ತದೆ. ಹಿರಿ-ಕಿರಿಯರೆನ್ನದೇ ಊರ ಬಹುದೊಡ್ಡ ಹಬ್ಬವಾಗಿ, ಆರಾಧ್ಯದೈವ ಶ್ರೀ ಗವಿಸಿದ್ಧೇಶ್ವರನ ಜೈಕಾರದ, ಭಕ್ತಿಪೂರ್ವಕ ಘೋಷಣೆಗಳು ಮುಗಿಲು ಮುಟ್ಟುತ್ತಿರುತ್ತವೆ. ಮಾರ್ಗದ ಎಡ-ಬಲಕ್ಕೂ ದೈವಾರಾಧನೆಗೆ ಸಾಕ್ಷಿಯಾಗಿ ಜನಜಾತ್ರೆಯೇ ನೆರೆದಿರುತ್ತದೆ. ಸದ್ಭಕ್ತರು ಮಹಾರಥೋತ್ಸವದ ಕಳಸ ಹಾಗೂ ಶ್ರೀ ಗವಿಮಠದ ಗೋಪುರಕ್ಕೆ ಏರಿಸಿದ ಐದು ಕಳಸಗಳನ್ನು ನೋಡಿ ಪುಳಕಿತರಾಗುತ್ತಾರೆ. ಇದೇ ದಿವಸ ಮುದ್ದಾಬಳ್ಳಿಯ ಭೋಜಗೌಡ ಪಾಟೀಲರ ಇವರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯು ಮೆರವಣಿಗೆಯಿಂದ ಹೊರಟು ಶ್ರೀಮಠಕ್ಕೆ ಬರುತ್ತದೆ. ನಂತರ ಶ್ರೀ ಗವಿಸಿದ್ಧೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಪ್ರಸಾದ ಪಡೆದು ತಮ್ಮ ಗ್ರಾಮಕ್ಕೆ ತೆರಳುತ್ತಾರೆ.
೪)    ಪಲ್ಲಕ್ಕಿ ಮಹೋತ್ಸವ:  ಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರೆಯ ಮುನ್ನಾ ಪ್ರತಿವರ್ಷದ ಸಂಪ್ರದಾಯದಂತೆ ಬನದ ಹುಣ್ಣಿಮೆಯಂದು ಸಾಯಂಕಾಲ ೬ ಗಂಟೆಗೆ ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ. ಶ್ರೀ ವೀರನಗೌಡರು ಲಿಂಗನಗೌಡ ಪಾಟೀಲ ಮತ್ತು ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಪಾಟೀಲರ ಮನೆಯಿಂದ ಶ್ರೀ ಗವಿಸಿದ್ಧೇಶ್ವರ ರಥದ ಮೇಲಿನ ಕಳಸವು  ಗವಿಮಠಕ್ಕೆ ಬಂದ  ಈ ಸು ದಿನವೇ ಪಲ್ಲಕ್ಕಿ ಮಹೋತ್ಸವ ಜರುಗುತ್ತದೆ. ಶ್ರೀ ಗವಿಮಠದ ೧೧ ಪೀಠಾಧೀಶರಾಗಿದ್ದ ಜ|| ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಶ್ರೀ ಗವಿಮಠಕ್ಕೇ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಢರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಶ್ರೇ ಗವಿಮಠಕ್ಕೆ ಬರುವ ಪೂರ್ವದಲ್ಲಿ ಗೌಡರ ಧರ್ಮಪತ್ನಿಯವರಿಗೆ ತಮ್ಮ ಶಿಖೆ ಅಂದರೆ (ಜಡೆ)ಯನ್ನೇ ತೆಗೆದುಕೊಟ್ಟರು ಆಂದಿನಿಂದ ಆ ಮನೆತನಕ್ಕೆ ಜಡೇಗೌಡ್ರ ಎಂಬ ಹೆಸರು ಬಂದಿತು. ಈ ಕಾರಣಕ್ಕಾಗಿ ಶ್ರೀ ಮಠದಲ್ಲಿ ಪೂಜೆಗೊಂಡ ಗವಿಸಿದ್ದೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮೂಹರ್ತಗೊಳಿಸಿ ಪೂಜಾದಿಗಳನ್ನು ಸಲ್ಲಿಸಿದ ತರುವಾಯ ಬಾಜಾ ಬಜಂತ್ರಿಯೊಂದಿಗೆ ಪಲ್ಲಕ್ಕಿಯನ್ನು ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮುಖಾಂತರ ಶ್ರೀ ಗವಿಮಠಕ್ಕೆ ತರುವದು ಸತ್‌ಸಂಪ್ರದಾಯ. ಜಡೇಗೌಡರ ಮನೆಯಲ್ಲಿಯೇ ಪೂಜಾದಿಗಳನ್ನು ತೀರಿಸಿಕೊಂಡು ಬಂದ ಗವಿಸಿದ್ದೇಶ್ವರನನ್ನು ಪುನಃ ಆ ಮನೆಯಿಂದಲೇ ಆಮಂತ್ರಿಸುವ ಹಾಗೂ ಕರೆತರುವ ಹಿನ್ನಲೆಯು ಇದರಲ್ಲಿ ಅಳವಟ್ಟಿದೆ.
೫)    ಉಡಿ ತುಂಬುವ ಕಾರ್ಯಕ್ರಮ : ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜಾತ್ರೆಯ ಮುನ್ನ ಬರುವ ಮಂಗಳವಾರ ಇಲ್ಲವೇ ಶುಕ್ರವಾರದ ದಿನ ಪ್ರತಿವರ್ಷ ಶೀ ಅನ್ನಪೂರ್ಣೇಶ್ವರಿ ದೇವಿಗೆ ಉಡಿತುಂಬುವ ಕಾರ್ಯಕ್ರಮವು ಸಾಯಂಕಾಲ ಜರುಗುತ್ತದೆ. ಈ ಕಾರ್ಯಕ್ರಮದಲ್ಲಿ ಇರಕಲ್‌ಗಡಾ ಗ್ರ್ರಾಮದ ಜೈ ಸಂತೋಷಿಮಾತಾ ಮಂದಿರದ ಪೂಜ್ಯ ಶ್ರೀಮತಿ ರತ್ನಮ್ಮ ತಾಯಿಯವರು ಸುಮಾರು ೨೦-೨೫ ವರ್ಷಗಳಿಂದಲೂ ತಮ್ಮ ಅಸಂಖ್ಯಾತ ಭಕ್ತರು ಹಾಗೂ ಅನುಯಾಯಿಗಳೊಂದಿಗೆ ಮಠಕ್ಕೆ ಆಗಮಿಸಿ ಗವಿಮಠದ ಬೆಟ್ಟದ ಮೇಲಿರುವ ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಉಡಿತುಂಬುವ ಕಾರ್ಯದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾರೆ. ಶ್ರೀ ಅನ್ನಪೂರ್ಣೆಶ್ವರಿ ದೇವಿಗೆ ಬಾಳೆಕಂಬ, ತೆಂಗಿನ ಗರಿ, ಕಬ್ಬಿನ ಹಂದರ ಹಾಕಿರುತ್ತಾರೆ. ಹೋಳಿಗೆ ಸಜ್ಜಕದ ನೈವೇದ್ಯವಾಗುತ್ತದೆ. ಆಗಮಿಸಿದ ಎಲ್ಲ ತಾಯಂದಿರಿಗೂ ಮಂಗಳಕರವಾದ ಬಾಗೀನ ಕೊಡುವ ಮೂಲಕ ಉಡಿತುಂಬುವ ಕಾಯಕವನ್ನು ಪೂಜ್ಯ ಶ್ರೀಮತಿ ರತ್ನಮ್ಮ ತಾಯಿಯವರು ನಡೆಸಿಕೊಡುವರು. ಅಷ್ಟೊತ್ತಿಗೆ ಸ್ವಾಮಿಗಳವರ ಪಾದೋದಕ ಬರುತ್ತದೆ. ಅದನ್ನು ಸಿಂಪಡಿಸಿದ ನಂತರ ಅನ್ನ ಸಂತರ್ಪಣೆ ನಡೆಯುತ್ತದೆ. ಕೊಪ್ಪಳ ಹಾಗೂ ಸುತ್ತಲಿನ ಸಹಸ್ರಾರು ಮಹಿಳೆಯರು ಇದರಲ್ಲಿ ಭಾಗವಹಿಸುತ್ತಾರೆ. ಜೈಸಂತೋಷಿಮಾತೆಯ ಪರಮ ಭಕರಾಗಿರುವ ಶ್ರೀಮತಿ ರತ್ನಮ್ಮನವರು ಪ್ರತಿವರ್ಷ ಕೊಪ್ಪಳದಿಂದ ೧೨ ಕೀ.ಮೀ ಅಂತರವಿರುವ ಇgಕಲ್‌ಗಡದಿಂದ ಬೆಳಗಿನ ಜಾವ ೬ ಗಂಟೆಯಿಂದ ಮಡಿ-ಉಡಿಯಿಂದ ಜಯಘೋಷಗಳೊಂದಿಗೆ ಶ್ರೀಮಠಕ್ಕೆ ಆಗಮಿಸಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವದು ಭಕ್ತಿಯ ಪ್ರತೀಕವಾಗಿದೆ.  ಶ್ರೀ ಅನ್ನಪೂರ್ಣೇಶ್ವರಿಗೆ ಹಾಗೂ ಎಲ್ಲ ತಾಯಂದಿರಿಗೂ ಉಡಿತುಂಬುವ ಮೂಲಕ ಜಾತ್ರೆಯ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ, ಮಂಗಳಕರವಾಗಿ ಸಾಗಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಇದರ ಜೊತೆಗೆ ತಮ್ಮ ತಮ್ಮ ಇಷ್ಟಾರ್ಥಗಳ ಶೀಘ್ರ ಈಡೇರಿಕೆಯಾಗಿ, ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪವನ್ನು ತಂದುಕೊಂಡು ಅಂದು ಎಲ್ಲ ತಾಯಂದಿರು ಅನ್ನಪೂರ್ಣೇಶ್ವರಿ ದೇವಿಗೆ  ಉಡಿತುಂಬುವ ಈ ಮೂಲಕ  ಹರಕೆ ಮಾಡಿಕೊಳ್ಳುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹೇಶ್ವರ ದೇವಸ್ಥಾನದ ಅಕ್ಕನ ಬಳಗದವರು, ಪ್ಯಾಟಿ ಈಶ್ವರ ದೇವಸ್ಥಾನದ ಅಕ್ಕನ ಬಳಗದವರು, ಮೊದಲಾದ ಮಹಿಳಾ ಬಳಗದವರು ಭಾಗವಹಿಸುತ್ತಾರೆ.


೬)    ಲಘು ರಥೋತ್ಸವ : ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವದ ಹಿಂದಿನ ದಿನ ಲಘು   ರಥವನ್ನು ಎಳೆಯುವದು ಒಂದು ಸಂಪ್ರದಾಯ. ಇದಕ್ಕೆ 'ಉಚ್ಛಾಯ' ಎಂತಲೂ ಕರೆಯುತ್ತಾರೆ. ಅಂದು ಸಾಯಂಕಾಲ ಲಘು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದ ಭಕ್ತಿ-ಭಾವಗಳೊಂದಿಗೆ ಲಘು ರಥೋತ್ಸವ ಜರುಗುವುದು ವಾಡಿಕೆ. ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗು ತಂದು ಕೊಡುತ್ತವೆ. ಮುಂದಿನ ಮಹಾರಥೋತ್ಸವ ಸಾಂಗತ್ಯವಾಗಿ, ನಿರ್ವಿಘ್ನವಾಗಿ, ಧಾರ್ಮಿಕ ಸದಾಶಯಗಳಂತೆ ಯಶಸ್ವಿಯಾಗಲಿ ಎಂಬ ಉದ್ದೇಶದಿಂದ ಈ ಲಘು ರಥೊತ್ಸವ ನೆರವೇರಿಸಲಾಗುತ್ತದೆ.

೭)     ಮಹಾರಥೋತ್ಸವ : ಶ್ರೀ ಗವಿಮಠದ ೧೧ ನೇ ಪೀಠಾಧಿಪತಿಗಳಾದ ಪವಾಡಪುರುಷರು, ಮಹಾತಪಸ್ವಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕರ್ತೃಗದ್ದುಗೆಯೇ ಗವಿಮಠದ ಕೇಂದ್ರಸ್ಥಾನ. ಇವರ ಮೂಲ ಹೆಸರು ಗುಡದಯ್ಯ. ಕೊಪ್ಪಳಕ್ಕೆ ಸಮೀಪದ ಮಂಗಳಾಪುರ ಗ್ರಾಮದಲ್ಲಿ ಹುಟ್ಟಿ, ವಯಸ್ಸಿಗೆ ಸಹಜವಲ್ಲದ ಚಟುವಟಿಕೆಗಳಿಂದ ಎಲ್ಲರಲ್ಲಿ ಬೆರಗು ಹುಟ್ಟಿಸಿದ್ದರು. ಬಾಲ್ಯದಲ್ಲಿ ಸದಾ ಏಕಾಂತವಾಗಿ ಅಡವಿ, ಗುಡ್ಡದಲ್ಲೆಲ್ಲಾ ಅಲೆಯುತ್ತಾ, ದನ ಕಾಯುತ್ತಾ, ಪವಾಡಗಳನ್ನು ತೋರಿಸಿದ್ದ ಇತಿಹಾಸವಿದೆ. ದನ ಕಾಯುತ್ತಿರುವಾಗ ಯಾವನೋ ಒಬ್ಬ ಆಕಳಕ್ಕೆ ಕಲ್ಲು ಒಗೆದಾಗ ಆಕಳು ಸತ್ತು ಹೋಗಿ, ಗುಡದಯ್ಯನು ಬಂದು ತನ್ನ ಕರಸ್ಪರ್ಶದಿಂದ ಸತ್ತ ಆಕಳಿಗೆ ಜೀವದಾನ ಮಾಡಿದನೆಂದು, ಬದುಕಿದ ಆಕಳ ಯಜಮಾನರಾದ ಕೊಪ್ಪಳದ ಬಸವನಗೌಡರು ಆ ಹುಡುಗನನ್ನು ನೋಡಬೇಕೆಂದು ತಮ್ಮ ಮನೆಗೆ ಕರೆದುಕೊಂಡು ಬಂದರಂತೆ. ಈ ಸುದ್ಧಿಯು ಅಂದಿನ ಗವಿಮಠದ ೧೦ನೇ ಪೀಠಾಧಿಪತಿಗಳಾಗಿದ್ದ ಚನ್ನಬಸವ ಮಹಾಸ್ವಾಮಿಗಳ ಕಿವಿಗೆ ಬಿದ್ದು ಆ ಬಾಲಲೀಲಾ ಪವಾಡ ಪುರುಷನನ್ನು ಬಸವನಗೌಡರಿಂದ ಗವಿಮಠಕ್ಕೆ ಕರೆಸಿಕೊಂಡು ಆ ಹುಡುಗ (ಗುಡದಯ್ಯ) ನಲ್ಲಿದ್ದ ಅಲೌಕಿಕ ಶಕ್ತಿಯನ್ನು, ತೇಜಸ್ಸನ್ನು ಗುರುತಿಸಿ ಗವಿಮಠದ ಪೀಠಾಧಿಪತಿಗಳನ್ನಾಗಿ ನೇಮಿಸಿಕೊಳ್ಳಲು ಬಸವನಗೌಡರಲ್ಲಿ ಹಾಗೂ ಗುಡದಯ್ಯನ ತಂದೆ-ತಾಯಿಗಳಲ್ಲಿ ವಿನಂತಿಸಿದಾಗ ಬಾಲಕ ಗುಡದಯ್ಯನನ್ನು ಲೋಕಕಲ್ಯಾಣಕ್ಕಾಗಿ ಗವಿಮಠಕ್ಕೆ ಕೊಟ್ಟರೆಂದು ಇತಿಹಾಸ ಸಾರುತ್ತದೆ. ಇಂತಹ ಬಾಲಲೀಲಾ ಯೋಗಿ ಗವಿಮಠದ ಪೀಠಾಧಿಕಾರವನ್ನು ಹೊಂದಿ ಭಕ್ತರ ಕಾಮಧೇನುವಾಗಿ ನೊಂದವರ, ಬೆಂದವರ, ಮಕ್ಕಳ, ಮುಗ್ಧರ, ವೃದ್ಧರ, ಬಾಲೆಯರ, ಶೀಲೆಯರ, ಮೂಕರ, ಕಿವುಡರ, ರೋಗಿಗಳೆಲ್ಲರ ಇಷ್ಟಾರ್ಥಗಳನ್ನು ಈಡೇರಿಸುವ ದಯಾನಿಧಿಯಾಗಿ ಕೊಪ್ಪಳದ ಆರಾಧ್ಯದೈವವಾಗಿ, ಆಗಾಗ ಲೋಕ ಬೆರಗಾಗುವಂತಹ ಪವಾಡಗಳನ್ನು ಜರುಗಿಸಿದ್ದು ಇತಿಹಾಸವಾಗಿದೆ. ಹೈದರಾಬಾದ್ ನವಾಬನ ಕುಷ್ಟರೋಗ ಕಳೆದದ್ದು, ಅಮವಾಸ್ಯೆಯ ದಿನ ಚಂದ್ರನನ್ನು ತೋರಿಸಿದ್ದು, ಸತ್ತ ಆಕಳ ಬದುಕಿಸಿದ್ದು ಹೀಗೆ ಅನೇಕ ಪವಾಡಗಳನ್ನು ತೋರಿಸಿ ಜನಮಾನಸದಲ್ಲಿ ಶ್ರೀ ಗವಿಸಿದ್ಧೇಶ್ವರರಾಗಿ ಶಾಶ್ವತವಾಗಿದ್ದಾರೆ. ಇವರ ಗುರುಗಳಾದ ಶ್ರೀಮಠದ ೧೦ನೇ ಪೀಠಾಧಿಪತಿಗಳು ಪೂಜ್ಯ ಚನ್ನಬಸವಮಹಾಸ್ವಾಮಿಗಳು ತಾವು ಲಿಂಗೈಕ್ಯರಾಗಲು ಕಟ್ಟಿಸಿದ್ದ ಗದ್ದುಗೆಯಲ್ಲಿ ಅವರಿಗಿಂತ ಮೊದಲು ತಾವೇ ಕುಳಿತು ಜೀವಂತ ಸಮಾಧಿಯಾಗಿರುವುದು ಈ ಜಾಗೃತ ಸ್ಥಳದ ಮಹಿಮಾ ವೈಶಿಷ್ಟ್ಯವಾಗಿದೆ. ಈ ಸ್ಮರಣೆಗಾಗಿ ಶ್ರೀ ಗವಿಮಠಕ್ಕೆ ಪ್ರತಿವರ್ಷ ಪುಷ್ಯ ಬಹುಳ ಬಿದಿಗೆಯಂದು ಶ್ರೀ ಗವಿಸಿದ್ಧೇಶ್ವರನ ಮಹಾರಥವನ್ನು ಎಳೆಯುವದರ ಮೂಲಕ ಇಲ್ಲಿನ ಜನರು ಜಾತ್ರೆಯನ್ನು ಇಡೀ ಊರಿನ ಬಹು ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ. ಮಹಾರಥೋತ್ಸವದಲ್ಲಿ ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಭಕ್ತರ ಜಯಘೋಷಗಳು ಮುಗಿಲು ಮುಟ್ಟುತ್ತಿರುತ್ತವೆ. ೫-೬ ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಸುತ್ತಮುತ್ತಲ ಹಳ್ಳಿಗಳಿಂದ, ನಗರ ಪ್ರದೇಶಗಳಿಂದ ಎತ್ತಿನ ಬಂಡಿ, ಟ್ರ್ಯಾಕ್ಟರ್, ಲಾರಿ, ಬಸ್ಸು, ಕಾರು ಮೊದಲಾದ ವಾಹನಗಳನ್ನು ಮಾಡಿಕೊಂಡು ಆಗಮಿಸುತ್ತಾರೆ. ಜಾತ್ರಾ ನಿಮಿತ್ಯವಾಗಿ ಕೊಪ್ಪಳದ ಬಹುತೇಕ ಮನೆಗಳು ಬಂಧು-ಬಳಗದವರಿಂದ ತುಂಬಿ ಹೋಗಿರುತ್ತದೆ. ಸಂಭ್ರಮ-ಸಡಗರ, ಭಕ್ತಿ-ಭಾವಗಳ ಧನ್ಯತಾಭಾವದಿಂದ ಈ ಮಹಾಜಾತ್ರೆಯಲ್ಲಿ ಪಾಲ್ಗೊಂಡು ಸಕಲರೂ ಶ್ರೀ ಗವಿಸಿದ್ಧೇಶ್ವರ ಕೃಪೆಗೆ  ಪಾತ್ರರಾಗುತ್ತಾರೆ. ತಮ್ಮ ಹರಕೆಗಳನ್ನು ಸಲ್ಲಿಸಿ ತೃಪ್ತಭಾವ ಹೊಂದುತ್ತಾರೆ.

೮)    ಶರಣರ ದೀರ್ಘದಂಡ ನಮಸ್ಕಾರ : ಸಂಸ್ಥಾನ ಶ್ರೀಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಮಹಾರಥೋತ್ಸವ ಜರುಗಿದ ಎರಡನೆಯ ದಿನ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರವು ಕಾರ್ಯಕ್ರಮವೂ ಒಂದು ವಿಶಿಷ್ಟವಾದುದು. ಇದು ಕೂಡಾ ಶ್ರೀಗವಿಮಠದ ಪರಂಪರಾಗತ ಸಂಪ್ರದಾಯ. ಬಳಗಾನೂರಿನ ಪೂಜ್ಯ ಶ್ರೀ ಶಿವಶಾಂತವೀರ ಶರಣರು ಶ್ರೀಮಠದ ದ್ವಾರಬಾಗಿಲಿನಿಂದ ಹಿಡಿದು ಶ್ರೀ ಗವಿಮಠದ ಬೆಟ್ಟದ ಮೇಲಿನ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ಹೂವಿನ ಹಾಸಿಗೆಯ ಮೇಲೆ ಭಕ್ತಿಯ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಶರಣರ ಹಿಂದೆ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತುಕೊಂಡ ಅಪಾರ ಭಕ್ತ ಸಮೂಹವೇ ದೀರ್ಘದಂಡ ನಮಸ್ಕಾರ ಹಾಕುತ್ತದೆ. ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರು ತಮ್ಮ ಗುರುಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳಿಂದ ಚಿನ್ಮಯಾನುಗ್ರಹ ದೀಕ್ಷೆ ಪಡೆದ ನಂತರ ಅಂದಿನಿಂದ ನಿರಂತರವಾಗಿ ಸುಮಾರು ೫೦ ವರ್ಷಗಳಿಂದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು. ಅವರ ಲಿಂಗೈಕ್ಯದ ನಂತರ ಬಳಗಾನೂರಿನ ಶರಣಾದ ಶ್ರೀ ಶಿವಶಾಂತವೀರ ಶರಣರು ತಮ್ಮ ಗುರು ಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮವನ್ನು ನೋಡಲು ಜಾತ್ರೆಯಷ್ಟೇ ಜನರು ಆಗಮಿಸಿ ಶರಣರ ದರ್ಶನಾಶಿರ್ವಾದ ಪಡೆಯುತ್ತಾರೆ. ಹೊಂಬಳ, ಚಿಕ್ಕೇನಕೊಪ್ಪ, ಸೂಡಿ ಗ್ರಾಮದ ಸದ್ಭಕ್ತರ ಭಜನಾ ಮಂಡಳಿಯವರ ಭಕ್ತಿಗೀತೆಗಳು, ಜಯಘೋಷಗಳು, ಭಕ್ತಿಭಾವದ ಘೋಷಣೆಗಳು, ಭಕ್ತರೆಲ್ಲರ ಎದೆಯಲ್ಲಿ 'ಗವಿಸಿದ್ಧ, ಗವಿಸಿದ್ಧ' ಎಂಬ ವಾಣಿ ಪ್ರತಿಧ್ವನಿಸಿರುತ್ತಿದೆ.


೯)    ಸಿದ್ಧೇಶ್ವರ ಮೂರ್ತಿ ಶ್ರೀ ಗವಿಮಠಕ್ಕೆ ಬರುವ ಕಾರ್ಯಕ್ರಮ : ಜಾತ್ರೆಯ ಎರಡನೆಯ ದಿನದ ಮತ್ತೊಂದು ವಿಶೇಷ ಕಾರ್ಯಕ್ರಮ ಎಂದರೆ ಶ್ರೀ ಸಿದ್ಧೇಶ್ವರ ಮೂರ್ತಿಯ ಮೆರವಣಿಗೆ ಭಕ್ತಿ ಭಾವಗಳೊಂದಿಗೆ ಶ್ರೀ ಗವಿಮಠಕ್ಕೆ ಬರುವ ಕಾರ್ಯಕ್ರಮವಾಗಿದೆ.  ಪಲ್ಲಕ್ಕಿಮಹೋತ್ಸವ, ಕಳಸೋತ್ಸವದ ಮೆರವಣಿಗೆಗಳಂತೆ ಈ ಮೆರವಣಿಗೆಯೂ ಸಾವಿರ ಸಾವಿರ ಭಕ್ತರ ನೇತೃತ್ವದಲ್ಲಿ ಬರುತ್ತದೆ. ಜನ ಬಳಕೆಯಲ್ಲಿ ಇದನ್ನು ಸಿದ್ಧೇಶ್ವರ ಮೂರ್ತಿ ಎನ್ನಲಾಗುತ್ತದೆ. ಅಂದು ಸಾಯಂಕಲ ಭಕ್ತರು ಶ್ರೀ ಸಿದ್ಧೇಶ್ವರ ಮೂರ್ತಿಯನ್ನು ದಶಮಿದಿಂಡಿನ ಮಂಟಪದಲ್ಲಿ ಕೂಡಿಸಿಕೊಂಡು ಶ್ರೀ ಗವಿಮಠದಿಂದ ಪೂಜೆ ಸಲ್ಲಿಸಿಕೊಂಡೇ ನಂದಿನಗರಕ್ಕೆ ಕರೆತಂದಿರುತ್ತಾರೆ. ಅಲ್ಲಿ ಭಕ್ತರು ಸಿದ್ಧೇಶ್ವರ ಮೂರ್ತಿಗೆ ಹೂವಿನ ಹಾರ ಹಾಕಿ, ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ-ಭಾವ ಮೆರೆಯುತ್ತಾರೆ. ನಂತರ ಈ ಮೆರವಣಿಗೆ ಕವಲೂರು ಓಣಿ, ಕಿತ್ತೂರು ಚನ್ನಮ್ಮ ಸರ್ಕಲ್, ಜವಾಹರ ರಸ್ತೆ, ಗಡಿಯಾರ ಕಂಭ, ಶಾರದಾ ಚಿತ್ರಮಂದಿರದ ಮಾರ್ಗವಾಗಿ ರಾತ್ರಿ ಶ್ರೀ ಗವಿಮಠದ ಬೆಟ್ಟದ ಮೂಲಕ ಹಾದು, ಶ್ರೀಗವಿಮಠ ಪ್ರವೇಶಿಸಿ ಪೂಜ್ಯ ಶ್ರೀಗಳು ಆಸೀನರಾಗುವ ಸ್ಥಳದ ಮುಂಭಾಗದಲ್ಲಿ ಶ್ರೀ ಸಿದ್ಧೇಶ್ವರ ಮೂರ್ತಿಯ ತೊಟ್ಟಿಲನ್ನು ಕಟ್ಟಲಾಗುತ್ತದೆ. ಜಾತ್ರೆಗೆ ಬಂದ ಹರಕೆ ಹೊತ್ತ ಭಕ್ತರು ಶ್ರೀ ಸಿದ್ಧೇಶ್ವರ ಮೂರ್ತಿಯ ತೊಟ್ಟಿಲನ್ನು ತೂಗಿ ಧನ್ಯರಾಗುತ್ತಾರೆ.

೧೦)    ಮದ್ದು ಸುಡುವ ಕಾರ್ಯಕ್ರಮ : ಇದು ಕೂಡಾ ಶ್ರೀ ಗವಿಮಠದ ಜಾತ್ರೆಯ ೨ ನೇ ದಿನದ ಮತ್ತೊಂದು ಅದ್ದೂರಿ ಕಾರ್ಯಕ್ರಮ. ಇದೊಂದು ಸಂಪ್ರದಾಯವು ಹೌದು. ರಾತ್ರಿ ೧೧ ರ ಸುಮಾರಿಗೆ ಶ್ರೀ ಸಿದ್ಧೇಶ್ವರಮೂರ್ತಿ ಶ್ರೀ ಗವಿಮಠವನ್ನು ತಲುಪುತ್ತಿದ್ದಂತೆ ಆಕಾಶದ ತುಂಬೆಲ್ಲ ಬೆಳಕಿನ ರಾಶಿಯೇ ಹರಿದಾಡುತ್ತದೆ. ಶ್ರೀ ಗವಿಮಠದ ಹೊರಾಂಗಣದಲ್ಲಿ ಜರುಗುವ ಈ ಘನ ಕಾರ್ಯಕ್ರಮಕ್ಕೂ ಲಕ್ಷ ಲಕ್ಷ ಭಕ್ತರು ಸಾಕ್ಷಿಯಾಗಿರುತ್ತಾರೆ. ಬೆಟ್ಟದ ಸಾಲುಗಳ ತುಂಬೆಲ್ಲ, ಮೈದಾನದ ಸುತ್ತಲೂ, ಶಾಲಾ, ಕಾಲೇಜು, ಮನೆಗಳ ಮೇಲೆ ನಿಂತುಕೊಂಡು ಬೆಳಕಿನ ಪುಂಜಗಳು ನಕ್ಕು ನಲಿಯುವ ದೃಶ್ಯವನ್ನು ಸಾಕ್ಷೀಕರಿಸಿಕೊಂಡು, ಆ ಮೂಲಕ ಭಕ್ತರು ಮುಗಿಲು ಮುಟ್ಟುವ ಘೋಷಗಳೊಂದಿಗೆ ಜಯಕಾರ ಹಾಕುವ, ಕೊನೆಯಲ್ಲಿ ಶ್ರೀ ಗವಿಸಿದ್ಧೇಶ್ವರರನ್ನು ಮನದಾಳದಿಂದ ಕೊಂಡಾಡುವ ಭಕ್ತವಾಣಿ ಮೊಳಗಲಾರಂಭಿಸುತ್ತದೆ. ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವವು ನಿರ್ವಿಘ್ನವಾಗಿ, ಸಾಂಗತ್ಯವಾಗಿ, ಯಶಸ್ವಿಯಾಗಿ ಜರುಗಿದ ಸಂಕೇತವಾಗಿಯೂ ಮತ್ತು ಧಾರ್ಮಿಕ ``ಈ ಜಾತ್ರೆಯ ವಿಜಯೋತ್ಸವದ ಸಂಕೇತವಾಗಿಯೂ ಈ ದಿನ ರಾತ್ರಿ ಬಣ ಬಣ್ಣಗಳ, ಅಲಂಕಾರಿಕ, ಆಕರ್ಷಕವಾದ ಮದ್ದುಗಳನ್ನು ಸುಡುತ್ತಾರೆ. ಹೊಸತಾಗಿ ಮದುವೆಯಾದವರು, ತೇರನ್ನು ದಂಪತಿಗಳ ಸಮೇತ ನೋಡಿದವರು ಮದ್ದುಸುಡುವ ಸಂಭ್ರಮವನ್ನು ಸವಿಯುತ್ತಾರೆ ಇದಕ್ಕೆ  ಧಾರ್ಮಿಕವಾಗಿ 'ಕಡಬಿನ ಕಾಳಗ'ವೆಂತಲೂ ಕರೆಯುತ್ತಾರೆ.

ಕೊಪ್ಪಳ ಸಂಸ್ಥಾನ ಶ್ರೀ ಗವಿಮಠದ ಸೇವೆಗಳು
ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು, ಶ್ರೀ.ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳು ಹಾಗೂ  ಶ್ರೀ.ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಮಹತ್ ಕಾರ್ಯಗಳು.
೧)    ದಾಸೋಹ : ( ಅನ್ನ, ಅರಿವು, ಆಧ್ಯಾತ್ಮ, ಆರೋಗ್ಯ )
ಅನ್ನ : ಅನ್ನದಾಸೋಹವು ಶ್ರೀ ಗವಿಮಠದ ಮಹಾ ವೈಶಿಷ್ಟ್ಯತೆಗಳಲ್ಲೊಂದು. ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ೧೯೨೨ ರ ಡಿಸೆಂಬರ ತಿಂಗಳಲ್ಲಿ ಪಟ್ಟಕ್ಕೆ ಕುಳಿತರು. ಇವರ ಮೂಲ ಹೆಸರು ಸೂಡಿಯ ಜುಕ್ತಿಹೀರೇಮಠದ ಗುರುನಂಜಯ್ಯ (ಶ್ರೀಕಂಠ). ಗದಗ ಜಿಲ್ಲೆಯ  ರೋಣ ತಾಲೂಕಿನ ಸೂಡಿ ಗ್ರಾಮದ ಜುಕ್ತಿಹೀರೇಮಠದ ಬಸವಲಿಂಗಯ್ಯ ಹಾಗು ಶಾಂತಮ್ಮನವರ ಪುತ್ರರು. ಇವರ ವಿದ್ಯಾಬ್ಯಾಸ ಅಬ್ಬಿಗೇರಿ, ಸೊಲ್ಲಾಪುರ, ಕಾಶಿಗಳಲ್ಲಾಯಿತು. ಸೊಲ್ಲಾಪುರದ ವಾರದ ಮಲ್ಲಪ್ಪನವರು ನಡೆಸುತ್ತಿದ್ದ ಸಂಸ್ಕೃತ ಪಾಠ ಶಾಲೆಯಲ್ಲಿ ಓದುತ್ತಿದ್ದಾಗ ಅಲ್ಲಿಯ ನಾಲ್ವತ್ತವಾಡ ಶ್ರೀ ವೀರೇಶ್ವರ ಶರಣರ ಕ್ರಿಯಾಮೂರ್ತಿಗಳಾಗಿ ಬಿನ್ನಹಕ್ಕೆ ಹೋಗಿಬರುತ್ತಿದ್ದರು. ಅವರೊಡನೆ ವಯೋಮಾನದಲ್ಲಿ ಕಿರಿಯರಾಗಿದ್ದರೂ ಆಧ್ಯಾತ್ಮಿಕ ಸಂಬಂಧ ಹೊಂದಿದ್ದರು. ಸುತ್ತಲಿನ ಹಳ್ಳಿಗಳ ಬಡ ವಿದ್ಯಾರ್ಥಿಗಳನ್ನು ಶ್ರೀಗವಿಮಠಕ್ಕೆ ಕರೆತಂದು ಶಿಕ್ಷಣದ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದ್ದರು. ೧೯೫೧ ರಲ್ಲಿ ಶ್ರೀಗವಿಸಿದ್ಧೇಶ್ವರ ಮಿಡ್ಲ ಸ್ಕೂಲ್ ಸ್ಥಾಪಿಸಿದರು. ಇದಾದನಂತರ ೧೯೬೩ ಶ್ರೀಗವಿಸಿದ್ಧೇಶ್ವರ ವಿದ್ಯಾವರ್ದಕ ಸಂಸ್ಥೆಯನ್ನು ಆರಂಭಿಸಿದರು. ಶ್ರೀಮಠದ ಭೂ ಆಸ್ತಿಯನ್ನೆಲ್ಲ ಶಿಕ್ಷಣ ಸಂಸ್ಥೆಗೆ ದಾನ ನೀಡಿ ಶಿಕ್ಷಣ ಬಿತ್ತರಿಸುವ ಜ್ಞಾನ ದಾಸೋಹದ ಜೊತೆಗೆ ಅನ್ನದಾಸೋಹವನ್ನು ನಿರಂತರವಾಗಿ ಶ್ರೀಗವಿಮಠದಲ್ಲಿ ಇಟ್ಟಿದ್ದರು. ಈ ಕಾರಣಕ್ಕಾಗಿ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳನ್ನು ಶ್ರೀ ಗವಿಮಠದ ದಾಸೋಹ ಪರಂಪರೆಯ ಪಿತಾಮಹರೆನ್ನಬಹುದು. ಇವರು ೦೧-೦೭-೧೯೬೭ ರಂದು ಲಿಂಗೈಕ್ಯರಾದರು. 
ಶ್ರೀ.ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳು ದಿನಾಂಕ ೧೭-೦೫-೧೯೩೧ ರಲ್ಲಿ ಸೂಡಿ ಗ್ರಾಮದಲ್ಲಿ ಜನಿಸಿದರು. ತಂದೆ ಜುಗುತ್ತಯ್ಯ ಜುಕ್ತಿಹಿರೇಮಠ, ತಾಯಿ ಬಸಮ್ಮ. ಸಾಕಿ ಬೆಳೆಸಿದ ತಾಯಿ ಶಾವಮ್ಮ. ಇವರು ದಿನಾಂಕ: ೨೭-೦೪-೧೯೬೬ ರಂದು ಗವಿಮಠದ ೧೭ ನೇ ಪೀಠಾಧಿಪತಿಗಳಾದರು. ಇವರ ಮೂಲ ಹೆಸರು ಉಮಾಪತಿದೇವರು. ಇವರ ಗುರುಗಳು ಮತ್ತು ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳು ಆದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಇವರಿಗೆ  ಶಿವಶಾಂತವೀರ ಮಹಾಸ್ವಾಮಿಗಳೆಂದು ಕರೆದರು. ಸನ್ಯಾಸ ಮಾರ್ಗವು ಎಂತಹ ಕಠಿಣ ಮಾರ್ಗ ಎಂಬುದನ್ನು ತಿಳಿದುಕೊಂಡೇ ನಡುಗುತ್ತಲೇ ಸನ್ಯಾಸ ಸ್ವೀಕರಿಸಿದ್ದರಿಂದ ಅವರು ಯಶಸ್ವಿ ವಿರಕ್ತ  ಸ್ವಾಮಿಗಳಾಗಿ ನಿರ್ಮಲ ಚರಿತ್ರೆ ಕಟ್ಟಿಕೊಂಡಿದ್ದರು. ಆ ಮೂಲಕ ನಾಡಿನಲ್ಲಿಯೇ ಗವಿಮಠಕ್ಕೆ ಕೀರ್ತಿ ತಂದಿದ್ದಾರೆ. ಇವರ ಕಾಲದಲ್ಲಿ ಮಹಾದ್ವಾರ ನಿರ್ಮಾಣ, ತೇರು ನಿರ್ಮಾಣ, ಶ್ರೀಗವಿಸಿದ್ಧೇಶ್ವರ ಕಲ್ಯಾಣ ಮಂಟಪ, ಪಕ್ಕದಲ್ಲಿ ಅತಿಥಿಗಳಿಗಾಗಿ ವಸತಿಗೃಹಗಳ ನಿರ್ಮಾಣ, ಹೊಸದಾಗಿ ಟ್ರಸ್ಟ ಆಫೀಸ್, ಆಯುರ್ವೇದ ಮೆಡಿಕಲ್ ಕಾಲೇಜು ಇವರ ಕಾಲಕ್ಕೆ ಆರಂಭಗೊಂಡಿತ್ತು. ಶಿಕ್ಷಕರಾಗಿ ಕೆಲಸ ಮಾಡಿದ್ದರಿಂದಲೇ ಅವರು ಗುರು ಮರಿಶಾಂತರು ಹೊತ್ತಿಸಿದ ಅಕ್ಷರ ಜ್ಯೋತಿಯನ್ನು ಈ ಪ್ರದೇಶದ ಎಲ್ಲ್ಲೆಡೆಗೆ ಬೆಳಗಿದರು. ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಮುಂದಾದರು. ಇವರ ಚರಿತ್ರೆ ತೆರೆದ ಪುಟ. ಲಿಂಗಪೂಜೆ, ಜಪ-ತಪ, ಶಿವಯೋಗ, ಪವಾಡ ಸದೃಶ್ಯ ಘಟನೆಗಳಿಗೆ ಗವಿಮಠವು ಸಾಕ್ಷಿಯಾಗಲು ಶಿವಶಾಂತವೀರ ಮಹಾಸ್ವಾಮಿಗಳ ಪಾತ್ರ ದೊಡ್ಡದು. ತಮ್ಮ ಅನಾರೋಗ್ಯದ ನಿಮಿತ್ಯ ದಿನಾಂಕ. ೧೩-೧೨-೨೦೦೨ ದಂದು ಶ್ರೀ.ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳನ್ನು ೧೮ ನೇ ಪೀಠಾಧಿಪತಿಗಳೆಂದು ಪಟ್ಟ ಕಟ್ಟಿದರು. ದಿ. ೨೬-೦೩-೨೦೦೩ ರಂದು ಲಿಂಗೈಕ್ಯರದರು. ತಮ್ಮ ಗುರುಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಪ್ರಾರಂಭಿಸಿದ ಅನ್ನ, ಅರಿವು, ಆಧ್ಯಾತ್ಮ, ಆರೋಗ್ಯ ಈ ಎಲ್ಲ ರೀತಿಯ ದಾಸೋಹ ಪರಂಪರೆಗಳ ಸಂಕಲ್ಪಗಳನ್ನು ನಿರಂತರವಾಗಿ ಮುಂದುವರೆಸಿ ಗವಿಮಠದ ಸರ್ವತೋಮುಖ ಅಭಿವೃದ್ಧಿಗೆ ಮುಂದಾದರು. ಅಂತೆಯೇ ಜನಮಾನಸದಲ್ಲಿ 'ನಡೆದಾಡುವ ಗವಿಸಿದ್ಧೇಶ್ವರ'ರೆಂದು  ಶಾಶ್ವತವಾಗಿದ್ದರು.
ಶ್ರೀ ಮ.ನಿ.ಪ್ರ.ಜ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನೀಲಯ್ಯ ಹಾಗೂ ಈರಮ್ಮ ದಂಪತಿಗಳ  ಪುತ್ರರಾಗಿ ದಿನಾಂಕ. ೦೧-೦೬-೧೯೭೭ ಜನಿಸಿದರು. ಇವರು ದಿನಾಂಕ : ೧೩-೧೨-೨೦೦೨ ರಂದು ಶ್ರೀ ಗವಿಮಠದ ೧೮ ನೇ ಪೀಠಾಧಿಪತಿಗಳಾದರು. ವಿದ್ಯಾವಂತರು, ವಿದ್ಯಾಪ್ರೇಮಿಗಳು ಆಗಿದ್ದಾರೆ. ಗುಲಬುರ್ಗ ಜಿಲ್ಲೆಯ ಹಾಗರಗುಂಡಿ ಗ್ರಾಮದವರು. ಇವರ ಮೂಲ ಹೆಸರು ಪರ್ವತಯ್ಯ ಎನ್. ಹಿರೇಮಠ . ದೂರ ದೃಷ್ಟಿಯುಳ್ಳ ಇವರು ವಿದ್ವತ್ತು ಹಾಗೂ ವಾಕ್ ಚಾತುರ್‍ಯಕ್ಕೆ ಹೆಸರಾದವರು. ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ೧೯೯೮ ಸಾಲಿನಲ್ಲಿ ಕಲಾ ವಿಭಾಗಲ್ಲಿ ೬ ನೇ ರ್‍ಯಾಂಕ್ ಪಡೆದ ಪ್ರತಿಭಾವಂತರು. ಚಿಂತನಶೀಲತೆ, ಸೃಜನಶೀಲತೆ, ಶಿಕ್ಷಣದ ಕುರಿತು ಚಿಂತನೆ ಹಾಗೂ ಪ್ರಗತಿಪರ ಧೋರಣೆಯುಳ್ಳವರು. ತಮ್ಮ ಗುರುಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಆಶಯಗಳನ್ನು ಈಡೇರಿಸುವ ಪವಿತ್ರ ಕಾರ್ಯಗಳಿಗೆ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಎಲ್ಲ ಗುರುವರ್ಯರ ಸಂಕಲ್ಪಗಳನ್ನು ಮುಂದುವರೆಸಿ ಮಹತ್ ಸಾಧನೆಗಳ ಮೂಲಕ ಅಲ್ಪ ಅವಧಿಯಲ್ಲಿಯೇ ಅಪಾರ ಸಾಧನೆ ಮಾಡಿದ್ದಾರೆ. ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ಟಸ್ಟ್ ಅಡಿಯಲ್ಲಿ  ಹಲವು ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗಾಗಿ ೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯ ಸ್ಥಾಪಿಸಿ ಜ್ಞಾನ ದಾಸೋಹದ ಜೊತೆಗೆ ಅನ್ನ ದಾಸೋಹದ ಸೇವೆ ಒದಗಿಸಿರುವದು ಶ್ಲಾಘನೀಯ. ಶ್ರೀ ಗವಿಮಠಕ್ಕೆ ಆಗಮಿಸುವ ಭಕ್ತರಿಗಾಗಿ ಶಾಶ್ವತವಾಗಿ ಶ್ರೀಗವಿಮಠದಲ್ಲಿಯೇ ಏಕಕಾಲಕ್ಕೆ ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಲು ಅಚ್ಚುಕಟ್ಟಾದ ನಿತ್ಯ ದಾಸೋಹದ ಭವನ ನಿರ್ಮಿಸುವ ಯೋಜನೆಯಲ್ಲಿದ್ದಾರೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಶ್ರೀ ಗವಿಮಠದ ಕಲ್ಯಾಣ ಮಂಟಪದ ಮುಂಭಾಗದ ಭವನದಲ್ಲಿ ಭಕ್ತರಿಗೆ ನಿತ್ಯ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಿದ್ದಾರೆ. ಇನ್ನು ಜಾತ್ರೆಯ ನಿಮಿತ್ಯವಾಗಿ ರಥೋತ್ಸವದ ದಿನದಿಂದ ಹಿಡಿದು ಅಮವಾಸ್ಯೆಯವರೆಗೆ ನಿರಂತರವಾಗಿ ಜರುಗುವ ಮಹಾದಾಸೋಹ ಪವಾಡ ಸಾದೃಶ್ಯವಾಗಿದೆ. ದಿನಾಲೂ ಮುಂಜಾನೆಯಿಂದ ರಾತ್ರಿಯವರೆಗೆ ಲಕ್ಷಾಂತರ ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ಅಂತೆಯೇ ಶ್ರೀ ಗವಿಮಠ 'ಉತ್ತರ ಕರ್ನಾಟಕದ ಸಿದ್ಧಗಂಗೆ' ಎಂದು ಹೆಸರಾಗಿದೆ.
೨) ಅರಿವು : ಶಿಕ್ಷಣದ ಪರಿಭಾಷೆಯಲ್ಲಿ ಜ್ಞಾನವೆಂದರೆ ಅರಿವು ಬಿತ್ತುವದು ಎಂದರ್ಥ. ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಮೊಟ್ಟಮೊದಲು ೧೯೫೧ ರಲ್ಲಿ ಶ್ರೀಗವಿಸಿದ್ಧೇಶ್ವರ ಶಾಲೆ ಸ್ಥಾಪಿಸಿದರು. ಅಂದಿನಿಂದ ಇಂದಿಗೂ ನಿರಂತರವಾಗಿ ಜ್ಞಾನದ (ಅರಿವು) ದಾಸೋಹ ಪ್ರಸಾರವಾಗುತ್ತಿದೆ. ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ದಕ ಟ್ಟಸ್ಟ್ ಅಡಿಯಲ್ಲಿ ಹಲವು ಶಾಲಾ-ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಹಿಂದುಳಿದ ಹೈ.ಕ. ಭಾಗದಲ್ಲಿ ಶಿಕ್ಷಣ ಪ್ರಸಾರ ಮಾಡುವಂತಹ  ಘನ ಕಾರ್ಯವನ್ನು ಹಿಂದಿನ ಪೂಜ್ಯರು ಮಾಡಿದ್ದರು. ಇಂದು ಶ್ರೀ.ಮ.ನಿ.ಪ್ರ.ಜ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪ್ರಾಥಮಿಕ ಶಾಲೆಯಿಂದ ಹಿಡಿದು ಪದವಿಪೂರ್ವ, ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಎಸ್ಸಿ , ಬಿ.ಸಿ.ಎ, ಬಿ.ಬಿ.ಎಂ, ಡಿ.ಇಡಿ, ಬಿ.ಇಡಿ, ಎಂ.ಎ, ಎಂ.ಕಾಂ, ಎಂ.ಎಸ್ಸಿ., ಆಯುರ್ವೇದ ಮೆಡಿಕಲ್ ಕಾಲೇಜು, ಹೀಗೆ ಎಲ್ಲ ಬಗೆಯ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ತ್ವರಿತ ಅವಧಿಯಲ್ಲೇ ಬಲಾಢ್ಯಗೊಳಿಸಿದ್ದಾರೆ. ಶಿಕ್ಷಣ ಸಂಸ್ಥೆಗಳ ಕಟ್ಟಡಗಳಿಗೆ ಆಧುನಿಕ ಸಂವೇದನೆಗಳನ್ನು ಕೊಟ್ಟು ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಆಸರೆಯಾಗಿದ್ದಾರೆ. 
೩) ಆಧ್ಯಾತ್ಮ : ಶ್ರೀ ಗವಿಮಠದಲ್ಲಿ  ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳ ಹಾಗೂ ಶ್ರೀ.ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳ ಕಾಲದಲ್ಲಿ ಪ್ರತಿ ಸೋಮವಾರ ನಿರಂತರವಾಗಿ  ಶಿವಾನುಭವ  ಕಾರ್ಯಕ್ರಮವು ಜರುಗುತ್ತಿತ್ತು. ಇವುಗಳ ಜೊತೆಗೆ ಪ್ರವಚನ, ಅರಿವು ಆಚಾರ, ಸದ್ಭಾವ ಯಾತ್ರೆ ಮೊದಲಾದವುಗಳು ಪೂಜ್ಯರ ಸಮ್ಮುಖದಲ್ಲಿ ಜರುಗುತ್ತಿದ್ದವು.  ಇದೇ ಹಾದಿಯಲ್ಲಿ ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಸಾಗುತ್ತಿದ್ದಾರೆ. ಇವರು ಶ್ರೀಗವಿಮಠದಲ್ಲಿ 'ಬೆಳಕಿನಡೆಗೆ' ಎನ್ನುವ ಮಾಸಿಕ ಕಾರ್ಯಕ್ರಮ, ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಾಸನದ 'ಜೀವನ ದರ್ಶನ' ಕಾರ್ಯಕ್ರಮ, ಜಾತ್ರೆಯ ಸಂದರ್ಭದಲ್ಲಿ ಧಾರ್ಮಿಕ ಚಿಂತನ-ಮಂಥನ ಗೋಷ್ಠಿಗಳನ್ನು ನಡೆಸಿ ಭಕ್ತರಲ್ಲಿ ಆಧ್ಯಾತ್ಮದ ಭಾವವನ್ನು ಮೂಡಿಸುತ್ತಿದ್ದಾರೆ. ಅಲ್ಲದೆ ಇತ್ತೀಚಿಗೆ ಪೂಜ್ಯರು ಭಕ್ತರಿಗಾಗಿ ಕುಕುನೂರು,ಬಾಣಾಪುರ,ತಾವರಗೇರಿ, ಸಿಂಧನೂರು,ಕುಷ್ಟಗಿ ಮೊದಲಾದ ಕಡೆ  ಪ್ರವಚನ ನೀಡಿದ್ದಾರೆ. ಭಕ್ತಜನರಲ್ಲಿ ನೈತಿಕತೆ ಮೂಡಿಸಿ, ಸದಾ ಸನ್ಮಾರ್ಗದಲ್ಲಿ ನಡೆಸುವ ಹಾಗೂ ಧರ್ಮದ ಹಾದಿಯಲ್ಲೇ ಸಾಗಿಸುವ ಉದ್ದೇಶಕ್ಕಾಗಿ  ಶ್ರೀ ಗವಿಮಠದಲ್ಲಿ  ಆಧ್ಯಾತ್ಮ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುತ್ತಲಿವೆ.
೪) ಆರೋಗ್ಯ : ಶ್ರೀ ಗವಿಮಠದ ೧೧ ನೇ ಪೀಠಾಧಿಪತಿಗಳಾದ ಕರ್ತೃ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ತಮ್ಮ ಪವಾಡದಿಂದ ಹೈದರಾಬಾದನ ಮೀರಾಲಂನ ಕುಷ್ಟರೋಗ ಕಳೆದಿದ್ದರು. ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಹಾಗೂ  ಶ್ರೀ ಗವಿಮಠದ ೧೭ ನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳು ಆಯುರ್ವೇದ ಚಿಕಿತ್ಸಾ ಪರಿಣಿತಿಯನ್ನು ಪಡೆದವರಾಗಿದ್ದರು. ಅಂತೆಯೇ ಗವಿಮಠಕ್ಕೆ ಆಗಮಿಸುವ ಭಕ್ತರ ರೋಗಗಳನ್ನು ಗುಣಪಡಿಸುತ್ತಿದ್ದರು. ಈ ಎಲ್ಲ ಪೂಜ್ಯರ ಆಶಯಗಳೆಂದರೆ ಶ್ರೀ ಗವಿಸಿದ್ಧನ ಸನ್ನಿಧಿಯಲ್ಲಿನ ಎಲ್ಲ ವರ್ಗದ ಭಕ್ತರ ಆರೋಗ್ಯದ ಹಿತರಕ್ಷಣೆ ಮಾಡುವದೇ ಅವರ ಸಂಕಲ್ಪವಾಗಿತ್ತು. ಇಂದು ಶ್ರೀ ಗವಿಮಠದ ಪ್ರಸ್ತುತ ೧೮ ನೇ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಜ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಆ ಗುರುವರ್ಯರ ಸಂಕಲ್ಪಗಳನ್ನು ಮುಂದುವರೆಸಿದ್ದಾರೆ. ಇವರು ಸಹ ಆಯುರ್ವೇದ ಚಿಕಿತ್ಸಾ ಪರಿಣಿತಿಯನ್ನು ಬಲ್ಲವರು. ಗವಿಮಠಕ್ಕೆ ಆಗಮಿಸುವ ಭಕ್ತರ ರೋಗ-ರುಜಿನಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ನೀಡಿ ರೋಗ - ರುಜಿನಗಳನ್ನು ನಿವಾರಿಸುತ್ತಾರೆ. ಅದಕ್ಕಾಗಿಯೇ ಒಂದು ಪ್ರತ್ಯೇಕ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯನ್ನು  ಸ್ಥಾಪಿಸಿದ್ದಾರೆ.
೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯ : ಶ್ರೀ ಮ.ನಿ.ಪ್ರ.ಜ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ೨೦೦೨ರಲ್ಲಿ ಅಧಿಕಾರಕ್ಕೆ ಬಂದನಂತರ ನಾಡಿನ ಹಿರಿಯ ಶಿಕ್ಷಣ ಸಂಸ್ಥೆಗಳನ್ನು, ಪೂಜ್ಯ ಸ್ವಾಮಿಗಳವರನ್ನು ಸಂದರ್ಶಿಸಿ ಒಳ್ಳೆಯದನ್ನು ಕೊಪ್ಪಳಕ್ಕೆ ತರಬೇಕೆಂಬ ಧೃಡ ಸಂಕಲ್ಪದ ಫಲವೇ ೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯ. ಶ್ರೀ ಮ.ನಿ.ಪ್ರ.ಜ. ಡಾ. ಶಿವಕುಮಾರ ಮಹಾಸ್ವಾಮಿಗಳು ಸಿದ್ಧಗಂಗಾಮಠ ತುಮಕೂರು ಇವರ ಅಮೃತ ಹಸ್ತದಿಂದ ಶಂಕು ಸ್ಥಾಪನೆ ನೆರವೇರಿಸಿ ಮರುವರ್ಷವೇ ಕಟ್ಟಡದ ಮೊದಲ ಹಂತದ ಪ್ರವೇಶವನ್ನು ಅವರಿಂದ ನೆರವೇರಿಸಿ ಅದರ ಮರುವರ್ಷವೇ ಮತ್ತೊಂದು ಮಹಡಿಯ ಉದ್ಘಾಟನೆ ಮಾಡಿಸಿದರು. ಬಡ ವಿದ್ಯಾರ್ಥಿಗಳಿಗಾಗಿ ಅಂದಾಜು ೬ ಕೋಟಿ ರೂಪಾಯಿ ವೆಚ್ಚದ ೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯವನ್ನು ಶ್ರೀ ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಕ್ರಿ.ಶ. ೨೦೦೬ ರಲ್ಲಿ ಸ್ಥಾಪಿಸಿರುವದು ಶ್ಲಾಘನೀಯ. ಈ ಭಾಗದ ಯಾವೊಬ್ಬ ಮಗುವೂ ತಂದೆ-ತಾಯಿಗಳು ಬಡವರಿದ್ದ ಕಾರಣಕ್ಕೆ ಶಾಲೆ ಕಲಿಯುವದನ್ನು ಬಿಟ್ಟೆನು ಎಂದಾಗಬಾರದೆನ್ನುವ ಉದ್ಧೇಶಕ್ಕಾಗಿ ಅಂತಹ ಎಲ್ಲ ಬಡ ಮಕ್ಕಳಿಗಾಗಿ ಗವಿಮಠ ತವರು ಮನೆಯಾಗಿ ಆಶ್ರಯ ಕಲ್ಪಿಸಬೇಕೆಂಬ ಕನಸು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳದಾಗಿತ್ತು. ಆ ಕಾರಣಕ್ಕಾಗಿ ೨೦೦೦ ವಿದ್ಯಾರ್ಥಿಗಳ ಉಚಿತ ವಸತಿ ಮತ್ತು ಪ್ರಸಾದ ನಿಲಯವನ್ನು ಕಟ್ಟಿಸಿ ಶುಚಿ-ರುಚಿಯಾದ ಅಚ್ಚುಕಟ್ಟಾದ ಪ್ರಸಾದ ದೊರೆಯುವಂತಹ ವ್ಯವಸ್ಥೆ ಮಾಡಿದ್ದಾರೆ. ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಇಲ್ಲಿ ಆಶ್ರಯ ಕೊಡಲಾಗಿದೆ. ಈ ಭಾಗದ ಬಡಮಕ್ಕಳ ಹಣೆಬರಹವನ್ನೇ ಬದಲಿಸಿ ಮಕ್ಕಳ ಭವಿಷ್ಯ ಕಟ್ಟುವ ಮಹಾನ್ ಕಾರ್ಯಕ್ಕಾಗಿ ಪೂಜ್ಯರು ಈ ಉಚಿತ ವಸತಿ ಮತ್ತು ಪ್ರಸಾದ ನಿಲಯ ಆರಂಭಿಸಿದ್ದಾರೆ. ಇದರಲ್ಲಿ ಭೋಜನ ಶಾಲೆ, ಅಡುಗೆಮನೆ, ಅಭ್ಯಾಸಕೋಣೆ, ಸಂದರ್ಶಕರ ಹಾಲ್, ವಿಶಾಲ ಡಾರ್ಮಿಟರಿ, ಗ್ರಂಥಾಲಯ, ಅಚ್ಚುಕಟ್ಟಾದ ವಿದ್ಯಾರ್ಥಿಗಳ ಕೊಠಡಿಗಳು ಸೇರಿವೆ. ತ್ವರಿತವಾಗಿ ಅಡುಗೆ ತಯಾರಿಸುವ ಅತ್ಯಾಧುನಿಕ ಬೈಲರ್‌ಗಳು, ಸ್ಟೀಮ್‌ಗಳು, ಕೊಳಗಗಳು, ಪಾತ್ರೆಗಳು, ತಟ್ಟೆಗಳು ಜೊತೆಗೆ ಅಡುಗೆ ತಯಾರಕರು, ಸಹಾಯಕರು, ಮೇಲ್ವಿಚಾರಕರು ಎಂಬ ೨೫ ಜನ ಸಿಬ್ಭಂದಿ ವರ್ಗದವರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂತೆಯೇ ಶ್ರೀ ಗವಿಮಠ 'ಉತ್ತರ ಕರ್ನಾಟಕದ ಸಿದ್ಧಗಂಗೆ' ಎಂದು ಹೆಸರಾಗಿದೆ.
        
ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಸ್ಥಾಪನೆ : ೧೯೯೩ರಲ್ಲಿ ಶ್ರೀ.ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳವರ ಷಷ್ಟ್ಯಬ್ದಿಪೂರ್ತಿ ಸಮಾರಂಭವನ್ನು ನಡೆಸಲು ಭಕ್ತರು ಹಾಗೂ ಶ್ರೀ ಗವಿಸಿದ್ಧೇಶ್ವರ ಕೃಪಾ ಫೋಷಿತ ವಿದ್ಯಾರ್ಥಿಬಳಗದವರು ಕೇಳಿಕೊಂಡಾಗ ಪೂಜ್ಯರು ಕೊಪ್ಪಳ ಗವಿಮಠವು ಆಯುರ್ವೇದದ ಚಿಕಿತ್ಸೆಗೆ ಪ್ರಸಿದ್ಧವಾಗಿದೆ.  ಕರ್ತೃ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ಹೈದರಾಬಾದನ ಮೀರಾಲಂನ ಕುಷ್ಟರೋಗ ಕಳೆದದ್ದರಿಂದ ೧೮೦೧ ರಲ್ಲಿ ಹಿರೇಬಗನಾಳ ಜಹಗೀರ ಗ್ರಾಮವಾಗಿ ಬಂದಿದೆ. ನಮ್ಮ ಗುರುಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳು ಆಯುರ್ವೇದದಲ್ಲಿ ಪರಿಣಿತಿಯನ್ನು ಪಡೆದವರಾಗಿದ್ದರು. ನಾವು ಕೂಡಾ ಅವರ ಗರಡಿಯಲ್ಲಿ ಬೆಳೆದವರಾದ್ದರಿಂದ ನಮಗೂ ಆಯುರ್ವೇದದ ಚಿಕಿತ್ಸೆಯಲ್ಲಿ ಆಸಕ್ತಿ ಇದೆ. ಆಯುರ್ವೇದದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆ ಮಾಡುವದಾದರೆ ನಾವು ಒಪ್ಪುತ್ತೇವೆ ಎಂದು ಅಪ್ಪಣೆ ಮಾಡಿದ್ದರಿಂದ ಅವರ  ಷಷ್ಟ್ಯಬ್ದಪೂರ್ತಿ ಸಮಾರಂಭದ ವರ್ಷದಿಂದಲೇ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದರು. ಮುಂದೆ ಸುಸಜ್ಜಿತವಾಗಿ  ಕಾರ್ಯೋನ್ಮುಖವಾಗಿ ೧೯೯೬ ರಲ್ಲಿ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆರಂಭಗೊಂಡಿದೆ. ಉತ್ತಮ ಪ್ರಾಧ್ಯಾಪಕ ಹಾಗೂ ಸಿಬ್ಭಂದಿಯವರನ್ನು ಪಡೆದಿದೆ. ಆಯುರ್ವೇದಿಯ ಗಿಡಮೂಲಿಕೆಗಳ ಉದ್ಯಾನವನ್ನು ಈಗಿನ ಪೀಠಾಧಿಪತಿಗಳಾದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಸ್ಥಾಪಿಸಿದ್ದಾರೆ. ಈ ಆಯುರ್ವೆದ ಕಾಲೇಜು ಮತ್ತು ಆಸ್ಪತ್ರೆ ಈ ಭಾಗದ ಬಹು ದೊಡ್ಡ ಆಯುರ್ವೇದ ಕೇಂದ್ರವಾಗಿ ಹೊರ ಹೊಮ್ಮಿದೆ. ಶ್ರೀ ಗವಿಮಠದ ೧೬ ನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮಿಗಳ ಆಯುರ್ವೇದ ಚಿಕಿತ್ಸೆಯ ಆಸಕ್ತಿ ಮತ್ತು ಪಾಂಡಿತ್ಯ ಹಾಗೂ ಶ್ರೀ ಗವಿಮಠದ ೧೭ ನೇ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳ ಆಯುರ್ವೇದ ಚಿಕಿತ್ಸೆಯ ಸಾಫಲ್ಯತೆಯ ಕನಸು, ಶ್ರೀ ಮ.ನಿ.ಪ್ರ.ಜ. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಸತತ ಪರಿಶ್ರಮ ಮತ್ತು ತಪಶಕ್ತಿಯಿಂದ ಖ್ಯಾತಿ ಪಡೆದು ಕರ್ನಾಟಕದಲ್ಲಿಯೇ ಪ್ರಸಿದ್ದವಾಗಿದೆ.
ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಸೇವಾ ಸಾಧನೆಗಳು : ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯಕ್ಕೆ ಉತ್ತಮ ಗುಣಮಟ್ಟದ ಶಿಕ್ಷಣ, ಆಧುನಿಕ ಸಂವೇಧನೆಯ ಕಟ್ಟಡಗಳು, ನೂತನ ತಂತ್ರಜ್ಞಾನಗಳಿಂದ ಬಲಾಡ್ಯಗೊಳಿಸಿವದು, ಬಡರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸುವದು ಇವೆಲ್ಲವುಗಳು ಶ್ರೀ ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಬೃಹತ್ ಸಂಕಲ್ಪಗಳಾಗಿವೆ. ಅಂತೆಯೇ ಆಗಾಗ ಇಲ್ಲಿ ಬಡರೋಗಿಗಳಿಗೆ ಉಚಿತ ಚಿಕಿತ್ಸೆಯ ಹಾಗೂ ಶಸ್ತ್ರಚಿಕಿತ್ಸೆಯ ಶಿಬಿರಗಳು, ನೇತ್ರದಾನ ಶಿಬಿರಗಳು, ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಯುತ್ತವೆ. ಶ್ರೀ ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಗುರುಗಳಾದ ಶ್ರೀ ಮ.ನಿ.ಪ್ರ.ಜ.ಲಿಂ. ಶಿವಶಾಂತವೀರ ಮಹಾಸ್ವಾಮಿಗಳ ಪುಣ್ಯತಿಥಿಯ ಅಂಗವಾಗಿ, ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಕೊಪ್ಪಳ ಅಲ್ಲದೇ ಸುತ್ತ ಮುತ್ತಲಿನ ಹಳ್ಳಿಗಳಲ್ಲಿಯೂ ನಿತ್ಯನಿರಂತರವಾಗಿ ಹತ್ತಾರು ಶಿಬಿರಗಳು ಯಶಸ್ವಿಯಾಗಿ ಜರುಗುತ್ತವೆ. ಚರ್ಮರೋಗ, ಮೂಲವ್ಯಾಧಿ, ಚಿಕ್ಕಮಕ್ಕಳರೋಗ, ಸ್ತ್ರೀರೋಗ, ನರರೋಗ, ಹೃದಯ ಕಾಯಿಲೆ, ಶ್ವಾಸಕೋಶ ತೊಂದರೆ, ಕಣ್ಣು, ಕಿವಿ, ಗಂಟಲು, ಮೂತ್ರರೋಗ, ಮಾನಸಿಕ ರೋಗ ಹೀಗೆ ಹತ್ತಾರು ರೋಗಗಳಿಗೆ ಉಚಿತ ಚಿಕಿತ್ಸೆ ನಡೆಯುತ್ತವೆ. ಅಲ್ಲಿ ಆಯ್ಕೆಯಾದ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುವ ಶಿಬಿರಗಳು ಜರುಗುತ್ತವೆ. ಈ ಶಿಬಿರಗಳಲ್ಲಿ ನಾಡಿನ ಹೆಸರಾಂತ ವೈದ್ಯರುಗಳಾದ ಡಾ. ಎಸ್.ಪಿ. ಬಳಿಗಾರ, ಡಾ. ಸದಾಶಿವಯ್ಯ ಸೊಪ್ಪಿಮಠ, ಡಾ. ಸೋಮಶೇಖರ ಗಡ್ಡಿ, ಡಾ. ಷಣ್ಮುಖ ಹಿರೇಮಠ, ಡಾ. ಉಮೇಶ ನಾಗಲೋಟಿಮಠ, ಡಾ. ಉಮೇಶ ರಾಜೂರ, ಡಾ. ಉಮೇಶ ಆಲೂರ, ಡಾ. ಶ್ರೀನಿವಾಸ ಎಚ್, ಡಾ. ಅಜಯ ಕುಮಾರ ಹೊಸಪೇಟೆ, ಡಾ. ಬಸವರಾಜ ಕ್ಯಾವಟರ್, ಡಾ. ಪ್ರಶಾಂತ ದೇಸಾಯಿ ಅಲ್ಲದೇ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ವೈದ್ಯರು ಸೇವೆ ಸಲ್ಲಿಸುತ್ತಾರೆ. ಕೊಪ್ಪಳ ಗವಿಮಠವು ಈಗ ಶ್ರೀ ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಜನಪರ, ಜನಮುಖಿ, ಸಮಾಜಮುಖಿ ಚಿಂತನೆ ಹಾಗೂ ಕಾರ್ಯಗಳು ಜರುಗಿ, ಮಾನವೀಯ ನೆಲೆಗಟ್ಟಿನ ಮೂಲಕ ಅನ್ನ, ಅರಿವು, ಆಧ್ಯಾತ್ಮ ದಾಸೋಹದ ಜೊತೆಗೆ ಆರೋಗ್ಯಭಾಗ್ಯದ ಸೇವೆ ಒದಗಿಸುತ್ತಿರುವದು ಪೂಜ್ಯರ ಅಂತ:ಕರಣಕ್ಕೆ ಹಿಡಿದ ಕನ್ನಡಿಯಾಗಿದೆ.

ನಿತ್ಯ ದಾಸೋಹ : ಅನ್ನ, ಅರಿವು, ಆಧ್ಯಾತ್ಮ ಈ ತ್ರಿವಿಧ ದಾಸೋಹವು ಶ್ರೀ ಗವಿಮಠದ ಮಹಾ ವೈಶಿಷ್ಟ್ಯತೆಗಳಲ್ಲೊಂದು. ಶ್ರೀ ಗವಿಮಠಕ್ಕೆ ಆಗಮಿಸುವ ಭಕ್ತರಿಗಾಗಿ ಶ್ರೀ ಮಠದಲ್ಲಿಯೇ ಏಕಕಾಲಕ್ಕೆ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಲು ಅಚ್ಚುಕಟ್ಟಾದ ನಿತ್ಯ ದಾಸೋಹದ ಭವನ ನಿರ್ಮಿಸುವ ಯೋಜನೆಯಲ್ಲಿದ್ದಾರೆ. ಈಗಾಗಲೇ ನಿರ್ಮಾಣ ಕಾರ್ಯ ಆರಂಭವಾಗಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಶ್ರೀಗವಿಮಠದ ಕಲ್ಯಾಣ ಮಂಟಪದ ಮುಂಭಾಗದ ಭವನದಲ್ಲಿ ಭಕ್ತರಿಗೆ  ಶುಚಿ-ರುಚಿಯಾದ ಮತ್ತು ಗುಣಮಟ್ಟದ ನಿತ್ಯ ಅನ್ನ ದಾಸೋಹದ ವ್ಯವಸ್ಥೆ ಕಲ್ಪಿಸಿದ್ದಾರೆ. ನಿತ್ಯ ದಾಸೋಹದಲ್ಲಿ ಶ್ರೀ ಗವಿಮಠಕ್ಕೆ ಬರುವ ಭಕ್ತರಿಗೆ ಮುಂಜಾನೆ ಜೋಳದ ಪ್ರಸಾದ (ರಬ್ಬುಳಗೆ), ಮಧ್ಯಾಹ್ನ ಹಾಗೂ ರಾತ್ರಿ ಬಿಸಿಯಾದ ಅನ್ನ ಸಾಂಬರ್, ಬಾಜಿ ಸಹ ನೀಡಲಾಗುತ್ತದೆ. ದಿನಾಲೂ  ಶ್ರೀಗವಿಸಿದ್ಧನ ದರ್ಶನಕ್ಕೆ ಬರುವ ಸಹಸ್ರ ಸಹಸ್ರ ಭಕ್ತರು ನಿತ್ಯದಾಸೋಹದಲ್ಲಿ ಸಿಹಿ ಹಾಗೂ ಅನ್ನ ಪ್ರಸಾದದ ಸವಿಯನ್ನು ಸವಿಯುತ್ತಾರೆ. ಅಮವಾಸ್ಯೆ ಹಾಗೂ ಹುಣ್ಣಿಮೆಯ ದಿವಸಗಳಲ್ಲಿ ಹತ್ತಾರು ಸಾವಿರ ಭಕ್ತರು ನಿತ್ಯದಾಸೋಹದಲ್ಲಿ ಪ್ರಸಾದದ ಸವಿಯನ್ನು ಸವಿಯುತ್ತಾರೆ. ನಿತ್ಯದಾಸೋಹದ ಸಮಿತಿಯಲ್ಲಿ ಮೇಲ್ವಿಚಾರಕರು, ಪ್ರಸಾದ ತಯಾರಕರು, ಅಡುಗೆ ಸಹಾಯಕರು ಇರುತ್ತಾರೆ. ತ್ವರಿತವಾಗಿ ಅಡುಗೆ ತಯಾರಿಸುವ ಅತ್ಯಾಧುನಿಕ ಬೈಲರ್‌ಗಳು, ಸ್ಟೀಮ್‌ಗಳು, ಕೊಳಗಗಳು,  ಪಾತ್ರೆಗಳು, ತಟ್ಟೆಗಳು ಇವೆ. ಅಲ್ಲದೇ  ಹತ್ತಾರು ಜನ  ಕೆಲಸಗಾರರು ನಿತ್ಯದಾಸೋಹದ  ಸಮಿತಿಯಲ್ಲಿರುತ್ತಾರೆ.

ಮಹಾದಾಸೋಹ : ಶ್ರೀ.ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ಅತ್ಯಂತ ಹಿರಿದಾದ ಸಂಕಲ್ಪಗಳಲ್ಲೊಂದಾಗಿದೆ. ಜಾತ್ರೆಯ ನಿಮಿತ್ಯವಾಗಿ ರಥೋತ್ಸವದ ದಿನದಿಂದ ಹಿಡಿದು ಅಮವಾಸ್ಯೆಯವರೆಗೆ ನಿರಂತರವಾಗಿ ಗವಿಮಠಕ್ಕೆ ಬರುವ ಭಕ್ತರಿಗಾಗಿ ಮಹಾದಾಸೋಹವನ್ನು ಜಾರಿಗೊಳಿಸಿದ್ದಾರೆ. ಇದು ಪೂಜ್ಯರ ಅತ್ಯಂತ ಹಿರಿದಾದ ಸಂಕಲ್ಪಗಳಲ್ಲೊಂದಾಗಿ ಪವಾಡ ಸಾದೃಶ್ಯವಾಗಿದೆ.  ಈ ಮೊದಲು ಜಾತ್ರೆಯಲ್ಲಿ ಮಹಾದಾಸೋಹದ ವ್ಯವಸ್ಥೆ ಇದ್ದಿಲ್ಲ. ದಿನಾಲೂ ಮುಂಜಾನೆಯಿಂದ ರಾತ್ರಿಯವರೆಗೆ ಲಕ್ಷಾಂತರ ಭಕ್ತರು ಮಹಾದಾಸೋಹದಲ್ಲಿ ಪ್ರಸಾದ ಸ್ವೀಕರಿಸುತ್ತಾರೆ. ಮಹಾರಥೋತ್ಸವದಂದೇ ಕನಿಷ್ಟ ೪-೫ ಲಕ್ಷಕ್ಕಿಂತ ಹೆಚ್ಚು ಭಕ್ತರು ಪ್ರಸಾದ ಸವಿಯುತ್ತಾರೆ. ಮಹಾರಥೋತ್ಸವದ ನಂತರ ೨ ನೆ  ದಿನದಲ್ಲಿ ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ ಕಾರ್ಯಕ್ರಮ ಮತ್ತು ಮದ್ದು ಸುಡುವ ಕಾರ್ಯಕ್ರಮಕ್ಕೆ ಬಂದಂತಹ ೩ ಲಕ್ಷಕ್ಕೂ ಅಧಿಕ ಭಕ್ತರು ಆ ದಿನ ಪ್ರಸಾದ ಸ್ವೀಕರಿಸುತ್ತಾರೆ. ಇದೇ ರೀತಿ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮುಗಿಯುವ ಮೊದಲ ೪-೫ ದಿವಸಗಳಲ್ಲಿ  ೩ ಲಕ್ಷಕ್ಕಿಂತ ಹೆಚ್ಚು ಭಕ್ತರು ಪ್ರಸಾದ ಸವಿಯುತ್ತಾರೆ. ಭಕ್ತರಿಗಾಗಿ ರೊಟ್ಟಿ, ಚಪಾತಿ, ಬಗೆಬಗೆಯ ಸಿಹಿತಿನಿಸುಗಳು, ಅನ್ನ, ಸಾಂಬಾರ, ಬಾಜಿ ಸಹ ಈ ಮಹಾದಾಸೋಹದಲ್ಲಿ ದೊರೆಯುತ್ತವೆ. ಉಳಿದ ದಿವಸಗಳಲ್ಲಿ ದಿನಾಲು ಕನಿಷ್ಟ ೧ ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಪ್ರಸಾದ ಸವಿಯುತ್ತಾರೆ. ಅಮವಾಸ್ಯೆ ದಿನ ಮತ್ತೊಂದು ಜಾತ್ರೆಯಷ್ಟು ಜನ ಪ್ರಸಾದ ಸವಿಯುತ್ತಾರೆ. ಅಚ್ಚುಕಟ್ಟಾಗಿ ಮಹಾದಾಸೋಹ ಸಮಿತಿ ಕಾರ್ಯ ನಿರ್ವಹಿಸುತ್ತದೆ. ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳೇ ಸ್ವತಃ ಪ್ರಸಾದ ನೀಡುವುದರ ಮೂಲಕ ಉತ್ಸುಕತೆ ತೋರುತ್ತಾರೆ. ಅಂತೆಯೇ ಶ್ರೀ ಗವಿಮಠ 'ಉತ್ತರ ಕರ್ನಾಟಕದ ಸಿದ್ಧಗಂಗೆ' ಎಂದು ಹೆಸರಾಗಿದೆ.
 
ಪುಸ್ತಕ ಜೋಳಿಗೆ :  ಬರೀ ಹೊಟ್ಟೆ ತುಂಬಿದರೆ ಸಾಲದು . ತಲೆಯು ವಿಚಾರಗಳಿಂದ ತುಂಬಿರಬೇಕು. ಪುಸ್ತಕ ಜ್ಞಾನ ಮತ್ತು ಲೋಕಜ್ಞಾನಗಳು ಮಿಳಿತವಾಗಬೇಕು. ಮಸ್ತಕದ ತುಂಬಾ ಪುಸ್ತಕದ ಜ್ಞಾನ ಅವಶ್ಯ. ಈ ನಿಟ್ಟಿನಲ್ಲಿ ಪುಸ್ತಕ ಓದುವ ಹವ್ಯಾಸ ಪ್ರತಿಯೊಬ್ಬರಲ್ಲಿ ಇರಬೇಕು. ಪುಸ್ತಕ ಕೊಂಡು ಓದಲು ಆಗದವರು ಈ ಸಂಗ್ರಹಿತ ಪುಸ್ತಕಗಳನ್ನು ಓದುವ ಮೂಲಕ ಜ್ಞಾನವಂತರಾಗಬೇಕೆಂಬುದು ಇದರ ಪುಸ್ತಕ ಜೋಳಿಗೆ ಕಾರ್ಯಕ್ರಮದ ಉದ್ಧೇಶ. ಶ್ರೀ.ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಿನಾಂಕ ೨೫-೦೭-೨೦೦೩ ರಂದು ಶ್ರೀಗವಿಮಠದ ಕಲ್ಯಾಣ ಮಂಟಪದಲ್ಲಿ ಪ್ರಥಮ ಬಾರಿಗೆ ಪೂರ್ವಭಾವಿ ಸಭೆ ನಡೆಸಿ ಪುಸ್ತಕ ಜೋಳಿಗೆ ಕಾರ್ಯಕ್ರಮದ ರೂಪರೇಷೆ ಹಾಕಿದರು. ದಿನಾಂಕ ೨೭-೦೭-೨೦೦೩ ರಂದು ಜಿಲ್ಲಾಧಿಕಾರಿಗಳ ನಿವಾಸದ ಮುಂದಿನ (ಈಗೀನ ಕಾವ್ಯಾನಂದ ಪಾರ್ಕ್) ಬಯಲಿನಲ್ಲಿ   ಕಾರ್ಯಕ್ರಮ ಉದ್ಘಾಟನೆಯಾಯಿತು. ಶ್ರೀ ಮ.ನಿ.ಪ್ರ.ಜ. ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಅಂದು ಜಿಲ್ಲಾಧಿಕಾರಿಯಾಗಿದ್ದ ನಾಗಾಂಬಿಕಾದೇವಿ, ವಿಶ್ರಾಂತ ಶಿಕ್ಷಕ ಟಿ.ವಿ. ಮಾಗಳದ, ಅನೇಕ ಸಾಹಿತಿಗಳು ಭಾಗವಹಿಸಿ ಮಾತನಾಡಿದ್ದರು. ನಂತರ ಸಂಸ್ಥೆಯ ಶಿಕ್ಷಕ/ಶಿಕ್ಷಕೇತರ/ವಿದ್ಯಾರ್ಥಿಗಳು/ಪುರಪ್ರಮುಖರು/ ಯುವಕರು  ಹೀಗೆ ಹತ್ತಾರು ತಂಡಗಳನ್ನು ರಚಿಸಿ ಮನೆಮನೆಗೆ ತೆರಳಿ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪಟ್ಟಕ್ಕೆ ಬಂದ ನಂತರ ಪ್ರಥಮ ಬಾರಿಗೆ ಪುಸ್ತಕ ಜೋಳಿಗೆ ಕಾರ್ಯಕ್ರಮವನ್ನು ಏರ್ಪಡಿಸಿ ಸ್ವತಃ ಮನೆ-ಮನೆಗೆ ತೆರಳಿ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಒಟ್ಟು ೫೦೦೦ ಕ್ಕೂ ಅಧಿಕ ಪುಸ್ತಕಗಳು  ಸಂಗ್ರಹಿತವಾಗಿವೆ. ಈ ಪುಸ್ತಕಗಳನ್ನು ಶ್ರೀ ಗವಿಮಠದ ಆವರಣದಲ್ಲಿರುವ ೨೦೦೦ ವಿದ್ಯಾರ್ಥಿಗಳ ಉಚಿತ ಪ್ರಸಾದ ನಿಲಯದಲ್ಲಿ ಸಂಗ್ರಹಿಸಿಡಲಾಗಿದೆ.
ಬೆಳಕಿನಡೆಗೆ ಮಾಸಿಕ : ಪ್ರತಿ ಅಮವಾಸ್ಯೆಯ ದಿನ ಭಕ್ತರ ಸಂಕಲ್ಪ ಸಿದ್ಧಿಯ ಹರಕೆ ರಥ ಸಾಗಿದ ನಂತರ ಸಾಯಂಕಾಲ ಶ್ರೀಮಠದ ಕೆರೆಯ ದಡದಲ್ಲಿ 'ಬೆಳಕಿನಡೆಗೆ' ಎಂಬ ಮಾಸಿಕ ಕಾರ್ಯಕ್ರಮವನ್ನು ಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಏರ್ಪಡಿಸಿರುತ್ತಾರೆ. ಶ್ರೀ ಗವಿಮಠದ ಕರ್ತೃ ಗವಿಸಿದ್ಧೇಶ್ವರ ಅಮವಾಸ್ಯೆಯ ದಿನ ಚಂದಿರನನ್ನು ತೋರಿಸಿದ್ದರು. ಇಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪ್ರತಿ ಅಮವಾಸ್ಯೆಯ ದಿನ 'ಬೆಳಕಿನಡೆಗೆ' ಎಂಬ ಮಾಸಿಕ ವೈಚಾರಿಕ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜನರಲ್ಲಿ ವೈಚಾರಿಕತೆಯ ದರ್ಶನ ಮಾಡಿಸುತ್ತಿದ್ದಾರೆ. ದಿನಾಂಕ ೧೬-೧೧-೨೦೦೯ ರ ಸೋಮವಾರ ಛಟ್ಟಿ ಅಮವಾಸ್ಯೆಯ ದಿನದಂದು ಆರಂಭವಾದ ಪ್ರಥಮ ಬೆಳಕಿನಡೆಗೆ ಮಾಸಿಕ ಕಾರ್ಯಕ್ರಮಕ್ಕೆ ನಾಡಿನ ಜಾನಪದ ವಿದ್ವಾಂಸರಾದ ಗೊ.ರು. ಚೆನ್ನಬಸಪ್ಪ ಭಾಗವಹಿಸಿ ಉಪನ್ಯಾಸ ನೀಡಿದ್ದರು. ಅಂದಿನಿಂದ ಇಂದಿನವರೆಗೆ ೫೦ ಮಾಸಿಕ ಕಾರ್ಯಕ್ರಮಗಳು ಜರುಗಿವೆ. ಡಾ. ಪಂಚಾಕ್ಷರಿ ಹಿರೇಮಠ, ಡಾ. ಹಿ.ಚೀ. ಬೋರಲಿಂಗಯ್ಯ, ಡಾ. ರಂಗರಾಜವನದುರ್ಗ, ಡಾ. ಬಿ.ಎಂ.ಪುಟ್ಟಯ್ಯ, ಶ್ರೀ ಬಸವರಾಜ ಸ್ವಾಮಿ, ಡಾ. ಮೀನಾಕ್ಷಿ ಬಾಳೆಕುಂದ್ರೆ, ಶ್ರೀ ಚಕ್ರವರ್ತಿ ಸೂಲಿಬೆಲೆ, ಶ್ರೀ ಕೆ. ಶರಣಪ್ಪ, ಶ್ರೀ ಅಶೋಕ ಬಾದರದಿನ್ನಿ,ಆಶೋಕ ಬರಗುಂಡಿ, ಎಚ್.ಎಸ್ ಪಾಟೀಲ, ದಿವಂಗತ ಡಿ.ಕೆ ರವಿ, ಮೊದಲಾದವರು ಭಾಗವಹಿಸಿ  ಉಪನ್ಯಾಸ ನೀಡಿದ್ದಾರೆ. ಇದುವರೆಗೂ ೭೭ ಮಾಸಿಕ ಕಾರ್ಯಕ್ರಮಗಳು ಜರುಗಿದ್ದು ನಾಡಿನ ಪ್ರಸಿದ್ದ ಚಿಂತಕರಿಂದ ಉಪನ್ಯಾಸ  ಹಾಗೂ ಸಂಗೀತಗೋಷ್ಠಿ ನಡೆಯುತ್ತವೆ. ಪ್ರತಿ ತಿಂಗಳು ಶ್ರೀಮಠದ ಭಕ್ತರು ಈ ಕಾರ್ಯಕ್ರಮಕ್ಕೆ ಭಕ್ತಿಸೇವೆಯ ಆಯೋಜನೆ ವಹಿಸಿರುತ್ತಾರೆ.
ಜೀವನ ದರ್ಶನ ಕಾರ್ಯಕ್ರಮ : ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ 'ತಿಂಗಳ ಮಾಲಿಕೆ'ಯಡಿ ಪ್ರತಿ ತಿಂಗಳ 'ಜೀವನ ದರ್ಶನ' ಎಂಬ ವಿನೂತನ ಕಾರ್ಯಕ್ರಮ ಏರ್ಪಡಿಸಿದ್ದಾರೆ. ನಾಡಿನ ಪ್ರಸಿದ್ಧ ಚಿಂತಕರಿಂದ ಉಪನ್ಯಾಸ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಾಸವನ್ನು ಮೂಡಿಸುವದು ಜೀವನ ದರ್ಶನ ಕಾರ್ಯಕ್ರಮದ ಉದ್ಧೇಶವಾಗಿದೆ. ಪ್ರಥಮ ಬಾರಿಗೆ ದಿನಾಂಕ ೦೨-೦೮-೨೦೧೩ ರಂದು ಆರಂಭವಾದ ಈ ಕಾರ್ಯಕ್ರಮದಲ್ಲಿ ನಾಡಿನ ತತ್ವಾದಾರಿತ ರಾಜಕಾರಣಿ ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಬಸವರಾಜ ಪಾಟೀಲ ಸೇಡಂ, ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್, ಶ್ರೀ ನಿರ್ಭಯಾನಂಧ ಸ್ವಾಮಿಗಳು,ಸ್ವದೇಶಿ ಆಂಧೋಲನದ ಶಂಕರಗೌಡರ್, ನಿವೃತ್ತ ಪೋಲಿಸ್ ಅಧಿಕಾರಿ ಶಂಕರ ಬಿದರಿ, ರಾಜಕಾರಾಣಿ ಡಿ.ಎಚ್.ಶಂಕರಮೂರ್ತಿ ಭಾಗವಹಿಸಿ ಉಪನ್ಯಾಸ ನೀಡಿದ್ದಾರೆ. ಅಲ್ಲದೇ ಸಂಸ್ಥೆಯ ಆಯಾ ಕಾಲೇಜುಗಳಲ್ಲಿ ಪ್ರತಿ ತಿಂಗಳು ಪ್ರತ್ಯೇಕ ವಿಭಾಗವಾರು ವಿಷಯಾಧಾರಿತ ಉಪನ್ಯಾಸಗಳು ಜರುಗಿಸುವಂತೆ ಪೂಜ್ಯರು ಅಪ್ಪಣೆ ನೀಡಿದ್ದಾರೆ. ಇದರಿಂದಾಗಿ ವಿಭಾಗವಾರು ವಿಷಯಾಧಾರಿತ ಉಪನ್ಯಾಸಗಳು ಸಂಪನ್ಮೂಲ ವ್ಯಕ್ತಿಗಳಿಂದ ಜರುಗಿ ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾಗುತ್ತದೆ.

ಜಾತ್ರೆಯ ಧಾರ್ಮಿಕ ಚಿಂತನ ಮಂಥನ ಗೋಷ್ಠಿಗಳು : ಜಾತ್ರೆಯ ನಿಮಿತ್ಯ ರಥೋತ್ಸವದಿಂದ ಹಿಡಿದು ೩ ದಿವಸಗಳವರೆಗೆ ಶ್ರೀ ಗವಿಮಠದ ಬೆಟ್ಟದ ಮೇಲಿರುವ ಕೈಲಾಸಮಂಟಪದಲ್ಲಿನ ಹಸಿರು ವೇದಿಕೆಯಲ್ಲಿ ಧಾರ್ಮಿಕ ಚಿಂತನ ಮಂಥನ ಗೋಷ್ಠಿಗಳು ಜರುಗುತ್ತವೆ. ಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನಾಡಿನ ಖ್ಯಾತ ಹರ-ಗುರು-ಚರಮೂರ್ತಿಗಳನ್ನು ಆಹ್ವಾನಿಸಿ ಅವರಿಂದ ಅನುಭವಾಮೃತವನ್ನು ಭಕ್ತರಿಗೆ ಉಣಿಸುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದ ಸಾಧಕರು, ಪಂಡಿತರು, ಕವಿಗಳು, ಅಂತಾರಾಷ್ಟೀಯ ಸಂಗೀತ ಕಲಾವಿದರು ಇಲ್ಲಿ ಭಾಗವಹಿಸಿ ತಮ್ಮ ಅಮೂಲ್ಯವಾದ ಅನುಭವವದ ಸಾರವನ್ನು ಭಕ್ತರಿಗೆ ಸವಿಯಿಸುತ್ತಾರೆ. ಹೀಗಾಗಿ ಕೊಪ್ಪಳದ ಶ್ರೀ ಗವಿಮಠದ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಷ್ಟೇ ಅಲ್ಲ. ಭಕ್ತರ ಪಾಲಿಗೆ ವೈಚಾರಿಕ ಹಾಗೂ ಸಾಂಸ್ಕೃತಿಕ ಯಾತ್ರೆಯೂ ಹೌದು.
ರಚನೆ :  ಡಾ. ಪ್ರಕಾಶ ಬಳ್ಳಾರಿ
ಉಪನ್ಯಾಸಕರು, ಶ್ರೀ ಗವಿಸಿದ್ಧೇಶ್ವರ ಕಾಲೇಜು, ಕೊಪ್ಪಳ
೯೪೮೧೪೪೦೦೮೫



              ಆಕರ ಗ್ರಂಥಗಳು 
ಗವಿದೀಪ್ತಿ  : ಶ್ರೀ ಗವಿಸಿದ್ಧೇಶ್ವರ ಕೃಪಾಪೋಷಿತ ವಿದ್ಯಾರ್ಥಿ ಬಳಗ
ಶಾಂತಪ್ರಭೆ  : ಶ್ರೀ ಗವಿಸಿದ್ಧೇಶ್ವರ ಕೃಪಾಪೋಷಿತ ವಿದ್ಯಾರ್ಥಿ ಬಳಗ
ಗವಿಶ್ರೀ ಸಂಪದ  : ಶ್ರೀ ಗವಿಮಠ ಕೊಪ್ಪಳ
ಕೊಪ್ಪಳ ಶ್ರೀ ಗವಿಮಠ  : ಎಚ್.ಎಸ್. ಪಾಟೀಲ,
ಕೊಪ್ಪಳ ಶ್ರೀಗವಿಸಿದ್ಧೇಶ್ವರರು  : ಎಚ್.ಎಸ್. ಪಾಟೀಲ,
ಕೊಪ್ಪಳದ ಶ್ರೀ ಗವಿಮಠದ ಲಿಂ. ಜಗದ್ಗುರು ಶಿವಶಾಂತವೀರ ಮಹಾಸ್ವಾಮಿಗಳು : ಎಚ್.ಎಸ್. ಪಾಟೀಲ
ಅಪರೂಪದ ಅನುಭಾವಿ ಶ್ರೀಚನ್ನವೀರ ಶರಣರು : ಡಾ. ಆರ್. ಶಾಲಿನಿ
ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು : ಎಸ್. ಎಂ. ಕಂಬಾಳಿಮಠ
ಶ್ರೀ ಚನ್ನವೀರ ಶರಣರು : ಶ್ರೀಶರಣರ ಸುಹಾಸಿನಿ ಬಳಗ, ಹೊಸಪೇಟೆ
ಶ್ರೀ ಮ.ನಿ.ಪ್ರ.ಜ. ಶಿವಶಾಂತವೀರ ಶಿವಯೋಗಿಗಳವರು : ಶ್ರೀಮತಿ ಸರ್ವಮಂಗಳಾಜಿ. ಪಾಟೀಲ
ಕೊಪ್ಪಳದ ಶ್ರೀಗವಿಮಠದ ಲಿಂ. ಜಗದ್ಗುರು ಶಿವಶಾಂತವೀರ ಮಹಾಸ್ವಾಮಿಗಳು : ಎಚ್.ಎಸ್. ಪಾಟೀಲ
'ತಳಮಳ' ಪತ್ರಿಕೆಯ ಜಾತ್ರಾ ಲೇಖನಗಳು.


Advertisement

0 comments:

Post a Comment

 
Top