PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-16- ಕೊಪ್ಪಳ ಇತಿಹಾಸ ಪ್ರಸಿದ್ದವಾದ   ಧಾರ್ಮಿಕ,  ಐತಿಹಾಸಿಕ, ಸಾಂಸ್ಕೃತಿಕ ನಗರ.  ಬೌದ್ಧ , ಜೈನ ಧರ್ಮಗಳ ಕೇಂದ್ರವಾಗಿ ಮನುಕುಲದ ಹಿತ  ಚಿಂತನೆ  ನಡೆಸಿದ  ಪುಣ್ಯ ಪುರುಷರ, ಪವಾಡ ಪುರುಷರ, ತಪಸ್ವಿಗಳ ನೆಲೆವೀಡು. ಕರ್ನಾಟಕದ  ತುಂಬೆಲ್ಲಾ  ಹೆಸರು ಪಡೆದಿದೆ. ಬಸವಾದಿ ಶರಣರಿಗಿಂತಲೂ  ಪೂರ್ವದಲ್ಲಿ  ಸ್ಥಾಪಿತವಾದ  ಶ್ರೀ ಗವಿಮಠ ಇಂದಿನ ವೀರಶೈವ ಶರಣ ಸಂಸ್ಕೃತಿ  ಸಮುದಾಯದ  ಮೂರ್ತ ರೂಪದ ದೊಡ್ಡ ಸಂಕೇತವಾಗಿದೆ.  ಕಾಶಿಯ ಜಂಗಮವಾಡಿಯಿಂದ ಸಂಚರಿಸುತ್ತಾ ಬಂದ ಶ್ರೀ ರುದ್ರಮುನಿ ಸ್ವಾಮಿಗಳು  ಇಲ್ಲಿ ನೆಲೆಸಿ ಗುರು ಪರಂಪರೆಗೆ ಕಾರಣರಾದರು. ಇಂದು ಗವಿಮಠದ ಖ್ಯಾತಿ ಇರುವದು ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕರ್ತೃಗದ್ದುಗೆಗೆ. ಶ್ರೀಗವಿಮಠದ ೧೧ ನೇ ಪೀಠಾಧಿಪತಿಗಳು ಪವಾಡಪುರುಷರು, ತಪಸ್ವಿಗಳು ಆದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಕರ್ತೃಗದ್ದುಗೆಯೇ ಗವಿಮಠದ ಕೇಂದ್ರಸ್ಥಾನ. ಇವರ ಮೂಲ ಹೆಸರು ಗುಡದಯ್ಯ. ಕೊಪ್ಪಳಕ್ಕೆ ಸಮೀಪದ ಮಂಗಳಾಪುರ ಗ್ರಾಮದಲ್ಲಿ ಹುಟ್ಟಿ ವಯಸ್ಸಿಗೆ ಸಹಜವಲ್ಲದ ಚಟುವಟಿಕೆಗಳಿಂದ ಎಲ್ಲರಲ್ಲಿ ಬೆರಗು ಹುಟ್ಟಿಸಿದ್ದರು. ಬಾಲ್ಯದಲ್ಲಿ ಸದಾ ಏಕಾಂತವಾಗಿ ಅಡವಿ, ಗುಡ್ಡ ಅಲೆಯುತ್ತಾ, ದನಕಾಯುತ್ತಾ, ಪವಾಡಗಳನ್ನು ತೋರಿಸಿದ್ದ ಇತಿಹಾಸವಿದೆ. ದನ ಕಾಯುತ್ತಿರುವಾಗ ಯಾವನೋ ಒಬ್ಬ ಆಕಳಕ್ಕೆ ಕಲ್ಲು ಒಗೆದಾಗ ಆ ಆಕಳು ಸತ್ತು ಹೋಗಿದ್ದಾಗ ಗುಡದಯ್ಯನು ಬಂದು ತನ್ನ ಕರ ಸ್ಪರ್ಶದಿಂದ ಸತ್ತ ಆಕಳಿಗೆ ಜೀವದಾನ ಮಾಡಿದನೆಂದು, ಬದುಕಿದ ಆಕಳದ ಯಜಮಾನರಾದ ಕೊಪ್ಪಳದ ಬಸವನಗೌಡರು ಆ ಹುಡುಗನನ್ನು ನೋಡಬೇಕೆಂದು ತಮ್ಮ ಮನೆಗೆ ಕರೆದುಕೊಂಡು ಬಂದರಂತೆ. ಈ ಸುದ್ಧಿಯು ಅಂದಿನ ಗವಿಮಠದ ೧೦ನೇ ಪೀಠಾಧಿಪತಿಗಳಾಗಿದ್ದ ಚನ್ನಬಸವ ಮಹಾಸ್ವಾಮಿಗಳ ಕಿವಿಗೆ ಬಿದ್ದು ಆ ಬಾಲಲೀಲಾ ಪವಾಡ ಪುರುಷನನ್ನು ಬಸವನಗೌಡರಿಂದ ಗವಿಮಠಕ್ಕೆ ಕರೆಸಿಕೊಂಡು ಆ ಹುಡುಗ (ಗುಡದಯ್ಯ) ನಲ್ಲಿದ್ದ ಅಲೌಕಿಕ ಶಕ್ತಿಯನ್ನು, ತೇಜಸ್ಸನ್ನು ಗುರುತಿಸಿ ಗವಿಮಠದ ಪೀಠಾಧಿಪತಿಗಳನ್ನಾಗಿ ನೇಮಿಸಿಕೊಳ್ಳಲು ಚನ್ನಬಸವ ಮಹಾಸ್ವಾಮಿಗಳು ಬಸವನಗೌಡರಲ್ಲಿ ಹಾಗೂ ಗುಡದಯ್ಯನ ತಂದೆ-ತಾಯಿಗಳಲ್ಲಿ ವಿನಂತಿಸಿದಾಗ ಆ ಹುಡುಗ ಗುಡದಯ್ಯನನ್ನು ಲೋಕಕಲ್ಯಾಣಕ್ಕಾಗಿ ಗವಿಮಠಕ್ಕೆ  ಕೊಟ್ಟರೆಂದು ಇತಿಹಾಸ ಸಾರುತ್ತದೆ. ಇಂತಹ ಬಾಲ ಲೀಲಾಯೋಗಿ ಗವಿಮಠದ ಪೀಠಾಧಿಕಾರವನ್ನು ಹೊಂದಿ ಭಕ್ತರ ಕಾಮಧೇನುವಾಗಿ ನೊಂದವರ, ಬೆಂದವರ, ಮಕ್ಕಳ, ಮುಗ್ದರ, ಮುದುಕರ, ಬಾಲೆಯರ, ಶೀಲೆಯರ, ಮೂಕರ, ಕಿವುಡರ, ರೋಗಿಗಳೆಲ್ಲರ ಇಷ್ಟಾರ್ಥಗಳನ್ನು ಈಡೇರಿಸುವ ದಯಾನಿಧಿಯಾಗಿ ಕೊಪ್ಪಳದ ಆರಾಧ್ಯದೈವವಾಗಿ ಆಗಾಗ ಲೋಕ ಬೆರಗಾಗುವಂತಹ ಪವಾಡಗಳನ್ನು ಜರುಗಿಸಿದ್ದು ಇತಿಹಾಸ. ಹೈದರಾಬಾದ್ ನವಾಬನ ಕುಷ್ಟರೋಗ ಕಳೆದದ್ದು, ಅಮವಾಸ್ಯೆಯ ದಿನ ಚಂದ್ರನನ್ನು ತೋರಿಸಿದ್ದು, ಸತ್ತ ಆಕಳ ಬದುಕಿಸಿದ್ದು ಹೀಗೆ ಅನೇಕ ಪವಾಡಗಳನ್ನು ತೋರಿಸಿ ಜನಮಾನಸದಲ್ಲಿ ಶ್ರೀಗವಿಸಿದ್ಧೇಶ್ವರರಾಗಿ ಶಾಶ್ವತವಾಗಿದ್ದಾರೆ.  ಇವರ ಗುರುಗಳಾದ ಶ್ರೀಗವಿಮಠದ ೧೦ನೇ ಪೀಠಾಧಿಪತಿಗಳು ಪೂಜ್ಯ ಚನ್ನಬಸವಮಹಾಸ್ವಾಮಿಗಳು ತಾವು ಲಿಂಗೈಕ್ಯರಾಗಲು ಕಟ್ಟಿಸಿದ್ದ ಗದ್ದುಗೆಯಲ್ಲಿ ಅವರಿಗಿಂತ ಮೊದಲು ತಾವೇ ಕುಳಿತು ಜೀವಂತ ಸಮಾಧಿಯಾಗಿರುವುದು ಈ ಜಾಗೃತ ಸ್ಥಳದ ಮಹಿಮಾ ವೈಶಿಷ್ಟ್ಯವಾಗಿದೆ. ಈ ಸ್ಮರಣೆಗಾಗಿ ಶ್ರೀ ಗವಿಮಠಕ್ಕೆ ಪ್ರತಿವರ್ಷ ಪುಷ್ಯ ಬಹುಳ ಬಿದಿಗೆಯಂದು ಶ್ರೀ ಗವಿಸಿದ್ಧೇಶ್ವರನ ಮಹಾರಥವನ್ನು ಎಳೆಯುವದರ ಮೂಲಕ ಇಲ್ಲಿನ ಜನರು ಜಾತ್ರೆಯನ್ನು ಇಡೀ ಊರಿನ ಬಹು ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ. ಮಹಾರಥೋತ್ಸವದಲ್ಲಿ ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಭಕ್ತರ ಜಯಘೋಷಗಳು ಮುಗಿಲ ಮುಟ್ಟುತ್ತಿರುತ್ತವೆ. ೩ ಲಕ್ಷಕ್ಕಿಂತಲೂ ಹೆಚ್ಚು ಭಕ್ತರು ಸುತ್ತಮುತ್ತಲ ಹಳ್ಳಿಗಳಿಂದ, ನಗರ ಪ್ರದೇಶಗಳಿಂದ ಎತ್ತಿನ ಬಂಡಿ, ಟ್ರ್ಯಾಕ್ಟರ್, ಲಾರಿ, ಬಸ್ಸು, ಕಾರು ಮೊದಲಾದ ವಾಹಗಳನ್ನು ಮಾಡಿಕೊಂಡು ಆಗಮಿಸುತ್ತಾರೆ. ಜಾತ್ರಾ ನಿಮಿತ್ಯವಾಗಿ ಕೊಪ್ಪಳದ ಬಹುತೇಕ ಮನೆಗಳು ಬಂಧು-ಬಳಗದವರಿಂದ ತುಂಬಿ ಹೋಗಿರುತ್ತದೆ. ಸಂಭ್ರಮ-ಸಡಗರ, ಭಕ್ತಿ-ಭಾವಗಳ ಧನ್ಯತಾ ಭಾವದಿಂದ ಈ ಮಹಾಜಾತ್ರೆಯಲ್ಲಿ ಪಾಲ್ಗೊಂಡು ಸಕಲರೂ ಶ್ರೀ ಗವಿಸಿದ್ಧೇಶ್ವರ ಕೃಪೆಗೆ  ಪಾತ್ರರಾಗುತ್ತಾರೆ. ತಮ್ಮ ಹರಕೆಗಳನ್ನು ಸಲ್ಲಿಸಿ ತೃಪ್ತ ಭಾವ ಹೊಂದುತ್ತಾರೆ.ತೇರಿನ ಮರುದಿನ ಸಂಜೆ ಚಿಕೇನಕೊಪ್ಪದ  ಶ್ರೀಶಿವಶಾಂತವೀರ ಶರಣರು  ಬಳಗಾನೂರು ಇವರು  ಶ್ರೀಮಠದ ಲಿಂ. ಮರಿಶಾಂತ ವೀರ  ಮಹಾಸ್ವಾಮಿಗಳ  ಗದ್ದುಗೆಯ  ತನಕ ಹೂವಿನ ಹಾಸಿಗೆಯ ಮೇಲೆ ದೀರ್ಘದಂಡ ನಮಸ್ಕಾರ ಹಾಕುವ ಕಾರ್ಯಕ್ರಮ ಇರುತ್ತದೆ.  ಶರಣರ  ಈ ದೀರ್ಘದಂಡ  ನಮಸ್ಕಾರದಲ್ಲಿ ಜಾತ್ರೆಯಷ್ಟೇ ಜನ  ಸೇರಿರುತ್ತಾರೆ.  ಅಂದೇ ರಾತ್ರಿ ಕಡುಬಿನ ಕಾಳಗದಂದು ಮದ್ದು ಸುಡುವ  ಕಾರ್ಯಕ್ರಮ, ಸಿದ್ಧೇಶ್ವರನ ಮೂರ್ತಿ ಶ್ರೀಗವಿಮಠಕ್ಕೆ ಬರುವ ಕಾರ್ಯಕ್ರಮ ನಡೆಯುತ್ತದೆ.  ಶ್ರೀಗವಿಮಠದ  ಕೈಲಾಸ  ಮಂಟಪದಲ್ಲಿ  ಪ್ರತಿವರ್ಷ  ಸಂಗೀತ, ಸಭೆ, ಗೋಷ್ಠಿಗಳು ನಡೆಯುತ್ತವೆ.  ನಾಡಿನ ಹರ-ಗುರು-ಚರ-ಮೂರ್ತಿಗಳು ಭಾಗವಹಿಸಿ ಧಾರ್ಮಿಕ ವಿಷಯಗಳ  ಚಿಂತನ-ಮಂಥನ ನಡೆಸುತ್ತಾರೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯಮಟ್ಟದ ಸಂಗೀತ ಕಲಾವಿದರುಗಳಿಂದ ಸಂಗೀತ ಕಾರ್ಯಕ್ರಮಗಳು, ಜಾತ್ರಾ ಅಂಗವಾಗಿ ಕುಸ್ತಿ, ಮುಂಗೈಕುಸ್ತಿ, ಸ್ಥಿರಮಲ್ಲಗಂಭ, ರೋಪ್‌ಮಲ್ಲಗಂ ಮೊದಲಾದ ಸ್ಪರ್ಧೆಗಳು ನಡೆಯುತ್ತವೆ. ಪ್ರತಿವರ್ಷ ಶ್ರೀಶಿವಕುಮಾರ ಕಲಾತಂಡ ಸಾಣೇಹಳ್ಳಿ ಇವರಿಂದ ನಾಟಕಗಳು ಜರುಗುತ್ತವೆ.  ಇಂತಹ   ನಮ್ಮೂರ ಜಾತ್ರೆ ಬರೀ ಧಾರ್ಮಿಕ ಜಾತ್ರೆಯಲ್ಲ ಅದೊಂದು ವೈಚಾರಿಕ ಯಾತ್ರೆಯು ಹೌದು. ಇಂತಹ ನಮ್ಮುರ ಜಾತ್ರೆಯನ್ನು ಕಣ್ಣಿಂದ ನೋಡುವದೇ ಒಂದು ಹಬ್ಬ.


                  ಶ್ರೀಮಠಕ್ಕೆ ಕಳಸವಾದ ಪೂಜ್ಯ ಶ್ರೀಗಳು
ಶ್ರೀ ಮಠದ ೧೬ನೇ ಜಗದ್ಗುರುಗಳಾದ  ಶ್ರೀ ಮರಿಶಾಂತವೀರ  ಮಹಾಸ್ವಾಮಿಗಳು ಗವಿಮಠದ ಮುಂದುವರಿದ  ಕೀರ್ತಿಗೆ ಕಾರಣೀಭೂತರಾಗಿದ್ದಾರೆ.  ಪೂಜಾನಿಷ್ಠರೂ, ತಪಸ್ವಿಗಳೂ, ಶಿಕ್ಷಣ ಪ್ರೇಮಿಗಳು, ವಿದ್ಯಾರ್ಥಿ ಪ್ರೇಮಿಗಳು, ದಾಸೋಹ ಮೂರ್ತಿಗಳು  ಆಗಿದ್ದರು.  ಇವರ ಕಾಲಕ್ಕೆ  ಶಾಲಾ ಕಾಲೇಜುಗಳು ಮಠದಿಂದ  ಪ್ರಾರಾಂಭವಾದವು.  ಮಠದಲ್ಲಿಯೇ  ಸಂಸ್ಕೃತ ಪಾಠ ಶಾಲೆ, ಆಯುರ್ವೇದ ವಿದ್ಯಾಲಯ ಮಾಡಬೇಕೆಂಬ  ಕನಸನ್ನು ಕಂಡಿದ್ದರು.  ಗುಣಮಟ್ಟದ  ಪ್ರಸಾದ  ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು.  ಪರ ಊರಿನಿಂದ  ಬರುವ ಭಕ್ತರಿಗೂ  ಕೂಡ  ದಾಸೋಹದ ವ್ಯವಸ್ಥೆಯನ್ನು ಮಾಡಿದ್ದರು.
ಶ್ರೀ ಮಠಕ್ಕೆ ೧೭ನೇ ಪೀಠಾಧಿಪತಿಗಳು  ಹಾಗೂ ನಡೆದಾಡುವ ಗವಿಸಿದ್ಧೇಶ್ವರನೆಂದು  ಪ್ರಸಿದ್ಧಿಯನ್ನು  ಪಡೆದಿದ್ದವರು  ಶ್ರೀ ಶಿವಶಾಂತ ವೀರ ಮಹಾಸ್ವಾಮಿಗಳು. ಹೆಚ್ಚು ಮಾತನಾಡದೇ, ಭಕ್ತರಲ್ಲಿ ಪ್ರೀತಿ ಬಿಡಲಾರದೇ   ಭಕ್ತ ಕೋಟೆಯ ಹೃದಯದಲ್ಲಿ  ಶಾಶ್ವತ ಸ್ಥಾನ ಪಡೆದ ಲಿಂ. ಶ್ರೀ ಶಿವಶಾಂತವೀರ  ಶಿವಯೋಗಿಗಳಿಗೆ ಸನ್ಯಾಸ ಮಾರ್ಗವು ಎಂತಹ ಕಠಿಣ ಮಾರ್ಗವೆಂದು ತಿಳಿದುಕೊಂಡು ನಡುಗುತ್ತಲೇ ಸ್ವೀಕರಿಸಿದ್ದರಿಂದ  ಅವರು  ಯಶಸ್ವಿ ವಿರಕ್ತರಾಗಿ, ತಪೋನಿಷ್ಟರಾಗಿ  ನಿರ್ಮಲ ಚರಿತ್ರೆಯನ್ನು  ಕಟ್ಟಿಕೊಂಡಿದ್ದರು.  ಆ ಮೂಲಕವಾಗಿ  ನಾಡಿನಲ್ಲಿಯೇ ಶ್ರೀಗವಿಮಠಕ್ಕೆ  ಕೀರ್ತಿಯನ್ನು  ಗೌರವವನ್ನು ತಂದಿದ್ದಾರೆ.  ಶಿಕ್ಷಕರಾಗಿ ಕೆಲಸ ಮಾಡಿದ್ದರಿಂದಲೇ  ಅವರು  ಗುರು ಮರಿಶಾಂತರು ಹೊತ್ತಿಸಿದ  ಅಕ್ಷರದ  ಜ್ಯೋತಿಯನ್ನು ಈ  ಪ್ರದೇಶದೆಲ್ಲೆಡೆಗೂ ಬೆಳೆಗಿದರು.  ಎಲ್ಲ  ಶಿಕ್ಷಣ ಸಂಸ್ಥೆ  ಕಟ್ಟಿ  ಬೆಳೆಸಲು  ಮುಂದಾದರು.  ಭಕ್ತರನ್ನು  ಗೌರವದಿಂದಲೇ ಕಂಡರು.  ಇವರ ಚರಿತ್ರೆ  ತೆರೆದ  ಪುಟ.  ಲಿಂಗ ಪೂಜೆ, ಜಪ-ತಪ, ಶಿವಯೋಗ,  ಪವಾಡ ಸಾದೃಶ ಘಟನೆಗಳಿಗೆ  ಗವಿಮಠವು  ಸಾಕ್ಷಿಯಾಗಲು  ಶ್ರೀ ಶಿವಶಾಂತವೀರ ಶಿವಯೋಗಿಗಳ ಪಾತ್ರ  ದೊಡ್ಡದು.  ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ  ಹಾದಿಯಲ್ಲಿಯೇ ಸಾಗಿದ್ದಾರೆ. ಶ್ರೀಗವಿಮಠದ  ಅಭ್ಯುದಯಕ್ಕೆ  ಸಾಕಷ್ಟು  ಶ್ರಮಿಸಿದ್ದಾರೆ.  ಇವರು ಲಿಂಗೈಕ್ಯರಾಗಿ ಹಲವು ವರ್ಷಗಳಾದರೂ  ಅವರ  ನೆನಪು, ಆಶೀರ್ವಾದ  ಭಕ್ತ ಕುಲಕ್ಕೆ  ಸದಾ ಕಾಲಕ್ಕೆ   ಇರುತ್ತದೆ. 
ಶ್ರೀಮಠಕ್ಕೆ  ೧೮ನೇ ಪೀಠಾಧಿಪತಿಗಳಾದ  ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಪಟ್ಟಕ್ಕೆ ಕುಳಿತುಕೊಂಡ ಕೆಲವೇ ವರ್ಷಗಳಲ್ಲಿ ಅಪಾರ  ಸಾಧನೆ ಮಾಡಿದ್ದಾರೆ.  ಅವರ ಮಹತ್ ಸಾಧನೆಗಳಲ್ಲಿ ಪ್ರಮುಖವಾದದ್ದು  ವಿದ್ಯಾರ್ಥಿ ಪ್ರಸಾದನಿಲಯ  ವ್ಯವಸ್ಥೆಯನ್ನು ಸರಿಪಡಿಸಿದ್ದು. ಇದನ್ನು ನೋಡಿದರೆ ಆಗಿನ  ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ  ಕಾಲದಲ್ಲಿ  ಇದ್ದಂತಹ  ವಿದ್ಯಾರ್ಥಿ ಪ್ರಸಾದ ನಿಲಯವನ್ನು ನೆನಪಿಗೆ ತರುತ್ತದೆ  ಎಂದು  ಹಿರಿಯರು  ಅಭಿಪ್ರಾಯ ಪಡುತ್ತಾರೆ.  ಶ್ರೀ ಗವಿಮಠದ  ಪ್ರಸಾದನಿಲಯವು  ವಿದ್ಯಾರ್ಥಿಗಳಿಗೆ  ಕಾಮಧೇನುವಾಗಿದೆ.  ಶ್ರೀ ಗವಿಸಿದ್ಧೇಶ್ವರ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ  ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ  ಕಟ್ಟಡಗಳನ್ನು  ಈಗಿನ  ಕಾಲಕ್ಕೆ  ತಕ್ಕಂತೆ ಸುಂದರಗೊಳಿಸುವುದರ  ಜೊತೆಗೆ ಹಸಿರಿನಿಂದ  ಕಂಗೊಳಿಸುತ್ತಿರುವ  ಹೂತೋಟಗಳನ್ನು  ನಿರ್ಮಿಸಿ ಕಾಲೇಜಿನ ಸುಂದರತೆಗೆ  ಕಾರಣವಾಗಿದ್ದಾರೆ.  ಇವರ  ಗುರುಗಳಾದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಕನಸಿನ ಕೂಸು ಆಯುರ್ವೇದ ಮಹಾವಿದ್ಯಾಲಯವನ್ನು  ಹಾಗೂ  ಪಿ.ಜಿ. ಕೋರ್ಸನ್ನು  ತಂದು  ಇಂದು ನೀರಿಕ್ಷೆಗೂ ಮೀರಿ ಕಡಿಮೆ  ಅವಧಿಯಲ್ಲಿ ಭಾರಿ  ಪ್ರಮಾಣದಲ್ಲಿ  ಬೆಳೆಸಿದ್ದಾರೆ.  ಇದನ್ನು  ಈ ಭಾಗದಲ್ಲಿ  ದೊಡ್ಡ  ವೈದ್ಯಕೀಯ ಮಹಾವಿದ್ಯಾಲಯವನ್ನಾಗಿ  ಮಾಡಿದ್ದಾರೆ.  ಇದರ ಜೊತೆಗೆ ಬಿ.ಎಡ್, ಬಿ.ಬಿ.ಎಂ., ಬಿ.ಸಿ.ಎ. ಟಿ.ಸಿ.ಎಚ್. (ಡಿ.ಎಡ್) ಕಾಲೇಜುಗಳನ್ನು ಮತ್ತು ಆಂಗ್ಲ ಮಾಧ್ಯಮ ಶಾಲೆ ಮೊದಲಾದವುಗಳನ್ನು  ಸ್ಥಾಪನೆ ಮಾಡಿ  ಈ ಭಾಗದ  ವಿದ್ಯಾರ್ಥಿಗಳಿಗೆ  ಶಿಕ್ಷಣದಾತರಾಗಿದ್ದಾರೆ. ಸಂಸ್ಥೆಯ ಕಾಲೇಜುಗಳಲ್ಲಿ ಅತ್ಯಾಧುನಿಕ ಸುಸಜ್ಜಿಯ ಗ್ರಂಥಾಲಯ ನಿರ್ಮಿಸಿ ವಿದ್ಯಾರ್ಥಿಗಳಿಗೆ ಜ್ಞಾನದ ಹಸಿವು ನೀಗಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಪುಸ್ತಕಜೋಳಿಗೆ ಕಾರ್ಯಕ್ರಮ ಹಮ್ಮಿಕೊಂಡು ಹಲವಾರು  ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ.  ಇದು ಶ್ರೀಗಳ ಶಿಕ್ಷಣ ಪ್ರೇಮವನ್ನು ತೋರಿಸುತ್ತದೆ.  ಇದಲ್ಲದೆ ಪ್ರತಿ ಅಮವಾಸ್ಯೆಯ ದಿನದಂದು  ಬೆಳಕಿನೆಡೆ ಎಂಬ ಮಾಸಿಕ ಕಾರ್ಯಕ್ರಮಗಳನ್ನು  ಹಮ್ಮಿಕೊಂಡು ಜನರಲ್ಲಿ ವೈಚಾರಿಕತೆಯನ್ನು  ಮೂಡಿಸುತ್ತಿದ್ದಾರೆ.  ಅಲ್ಲದೇ ಮಠದ  ಕಟ್ಟಡಗಳ  ಜೀರ್ಣೋದ್ಧಾರ, ಗಾರ್ಡನ್, ಪಾರ್ಕಿಂಗ್ ಹೀಗೆ ಮಠದ ಸರ್ವತೋಮುಖ ಅಭಿವೃದ್ಧಿಗೆ  ಆ ಮೂಲಕ ಶೈಕ್ಷಣಿಕ, ಸಾಮಾಜಿಕ, ಆಧ್ಯಾತ್ಮಿಕ ರಂಗದಲ್ಲಿ  ತಮ್ಮನ್ನು ತಾವು  ಸಂಪೂರ್ಣವಾಗಿ ತೊಡಗಿಸಿಕೊಂಡು ಅನ್ನ,ಅರಿವು,ಆಧ್ಯಾತ್ಮ, ಆರೋಗ್ಯ ಇವುಗಳತ್ತ ಚಿತ್ತವಿಟ್ಟು ಅಭಿವೃದ್ಧಿಯತ್ತ ಸಾಗುತ್ತಿದ್ದಾರೆ.  ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗಾಗಿ  ೨೦೦೦   ಮಕ್ಕಳಿಗೆ  ಉಚಿತ  ವಸತಿ ನಿಲಯ  ಮತ್ತು ಪ್ರಸಾದ  ವ್ಯವಸ್ಥೆಯನ್ನು ಸಿಗುವಂತೆ ಮಾಡಿದ್ದಾರೆ.  ಇದರಿಂದ  ಬಡ ಮಕ್ಕಳ ಆಶಾಕಿರಣದಂತೆ ವಿದ್ಯಾರ್ಜನೆಯ ಜ್ಯೋತಿ ಎಲ್ಲೆಡೆ ಪಸರಿಸುತ್ತದೆ. ಹೀಗಾಗಿ ಉತ್ತರ ಕನಾಟಕದ ಸಿದ್ಧಗಂಗೆ ಎಂದು ಶ್ರೀಗವಿಮಠ ಹೆಸರಾಗಿದೆ. 
       





Advertisement

0 comments:

Post a Comment

 
Top