PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-21- ವಚನಕಾರರಲ್ಲಿಯೇ ವಿಭಿನ್ನ ಹಾಗೂ ವಿಶಿಷ್ಠ ವ್ಯಕ್ತಿತ್ವದ ನೇರ ನಡೆ, ನಿಷ್ಠೂರ ನುಡಿ , ದಿಟ್ಟ ನಿಲುವಿನ ವಚನಕಾರ ಅಂಬಿಗರ ಚೌಡಯ್ಯ ಅರ್ಥವಿಲ್ಲದ ಆಚರಣೆಗಳ ವಿರುದ್ದ ಸಿಡಿದೆದ್ದ ಶರಣರು ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಗುರುವಾರ ಕೊಪ್ಪಳ ತಾಲ್ಲೂಕಿನ ಹಿರೇಸಿಂದೋಗಿಯ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಿಜ್ಞಾನ ವಸತಿ ಕಾಲೇಜಿನಲ್ಲಿ ಹಮ್ಮಿಕೊಂಡ ಅಂಬಿಗರ ಚೌಡಯ್ಯನ ಜಯಂತಿಯಲ್ಲಿ ಮುಖ್ಯ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ, ತಮ್ಮ ನಡೆ ನುಡಿಯಿಂದ ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಅಪರೂಪದ ಶರಣರೆಂದರೆ ಅಂಬಿಗರ ಚೌಡಯ್ಯ. ವೈಚಾರಿಕ ಪ್ರಜ್ಞೆ, ಸ್ವತಂತ್ರ ಮನೋಧರ್ಮ ಬೆಳೆಸಿಕೊಂಡ ಇವರ ವಚನಗಳ ವೈಶಿಷ್ಟವೇ ವಿಭಿನ್ನವಾಗಿದೆ. ವ್ಯವಸ್ಥೆಯ ವಿರುದ್ದ ಬಂಡಾಯವೆದ್ದು ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ಮೋಸ, ಶೋಷಣೆ, ಅಜ್ಞಾನ, ಮೂಡನಂಬಿಕೆಯಂತಹ ಅರ್ಥವಿಲ್ಲದ ಆಚರಣೆಗಳ ವಿರುದ್ದ ಸಿಡಿದೆದ್ದುದರಿಂದಲೇ ಇಂದಿಗೂ ಕೂಡ ಇವರ ವಚನಗಳು ಜನಸಾಮಾನ್ಯರ ನಾಲಿಗೆಯ ಮೇಲೆ ನಲಿದಾಡುತ್ತಿವೆ ಎಂದರು.
ಮಹಾವಿದ್ಯಾಲಯದ ಉಪನ್ಯಾಸಕರಾದ ವಿಜಯಕುಮಾರ್ ಕುಲಕರ್ಣಿಯವರು ಮಾತನಾಡುತ್ತಾ, ಸ್ವಾನುಭವವಿಲ್ಲದಿರುವ ಯಾವುದೇ ಒಂದು ಜ್ಞಾನವು ವ್ಯರ್ಥ ಎಂಬಂತೆ ಮನುಷ್ಯನಿಗೆ ತನ್ನ ಅವಗಾಹನೆಗೆ, ತಿಳುವಳಿಕೆಗೆ ಬರದಿರುವ ಯಾವುದೇ ಉಪದೇಶಗಳು ವ್ಯರ್ಥವಾಗುತ್ತವೆ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳದೆ, ತಾವೇ ಇತರರಿಗೆ ಮಾದರಿಯಾಗುವಂತೆ ಜೀವನವನ್ನು ರೂಪಿಸಿಕೊಳ್ಳಬೇಕೆಂದರು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಅಮೀನಸಾಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ತಿಮ್ಮಣ್ಣ ಗುಳೇದ ಸ್ವಾಗತಿಸಿದರು. ಶೋಭಾ ವಂದಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ನಾಗರೆಡ್ಡಿ ನಿರೂಪಿಸಿದರು. ಲತಾ ಪಾಟೀಲ ವಂದಿಸಿದರು.

Advertisement

0 comments:

Post a Comment

 
Top