PLEASE LOGIN TO KANNADANET.COM FOR REGULAR NEWS-UPDATES

ಜನವರಿ -೩೦ಇಡೀ ವಿಶ್ವವೇ ಈ ಯುಗದ ಮಹಾಪುರುಷನೆಂದು ಕೊಂಡಾಡುತ್ತಿರುವ ಮಹಾತ್ಮ ಗಾಂಧೀಜಿಯು ಕೊಲೆಯಾದ ಕರಾಳ ದಿನವಾದ ೩೦ ಅನ್ನು ಸರ್ವೋದಯ ದಿನವೆಂದು ಆಚರಣೆ ಮಾಡಲಾಗುತ್ತಿದೆ. ಆ ದಿನವನ್ನು ಹುತಾತ್ಮರ ದಿನ, ಕುಷ್ಟರೋಗ ನಿವಾರಣಾ ದಿನವೆಂಬುದಾಗಿಯೂ ಆಚರಿಸಲಾಗುವುದು.ಭಾರತ ದೇಶದ ಸ್ವಾತಂತ್ರ್ಯ ಮತ್ತು ಘನತೆಗಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಗೌರವ ಸಲ್ಲಿಸುವದಕ್ಕಾಗಿ ಮಹಾತ್ಮ ಗಾಂಧೀಜಿಯವರ ಪುಣ್ಯ ತಿಥಿಯಾದ ಜನವರಿ ೩೦ ರಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಬೆಳಿಗ್ಗೆ ೧೧ ಗಂಟೆಗೆ ಸರಿಯಾಗಿ ನಾಡಿನಾದ್ಯಂತ ಪ್ರಮುಖ ಸ್ಥಳಗಳಲ್ಲಿ ಸೈರನ್ಸ್ ಕುಗಲಾಗುವುದು. ಮುಖ್ಯ ವಾಹನಗಳು, ಕಾರ್ಖಾನೆಗಳು, ಸ್ಥಬ್ಧವಾಗುತ್ತವೆ. ೨ ನಿಮಿಷಗಳವರೆಗೆ ಶ್ರದ್ಧಾಂಜಲಿಯ ಮೌನ ಆಚರಿಸಲಾಗುವುದು. ಶಾಲಾ ಕಾಲೇಜುಗಳಲ್ಲೂ ಹೀಗೆ ಮಾಡಲಾಗುವುದು.ಉದಾಹರಣೆಗೆ ಸ್ವಾತಂತ್ರ್ಯ ಪೂರ್ವದಲ್ಲಿ ಏಸೂರು ಕೊಟ್ಟರೂ ಈಸೂರು ಕೊಡೆವು ಎಂದು ದಿಟ್ಟ ಹೋರಾಟ ನಡೆಸಿ ಅಮರವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಶಾಶ್ವತ ಕೀರ್ತಿ ಸಂಪಾದಿಸಿ ಶಿವಮೊಗ್ಗ ಜಿಲ್ಲೆಯ ಈಸೂರು ಸಹೋದರರ ಸ್ಮರಣೆ ಗಮನಾರ್ಹವಾದುದು. ತಾತ್ಯಾಟೋಪಿ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರುರಾಣಿ ಚೆನ್ನಮ್ಮ, ಒನಕೆ ಓಬವ್ವ, ಲಾಲಾ ಲಜಪತರಾಯ್, ಸುಭಾಸ್‌ಚಂದ್ರ ಬೋಸ್, ಭಗತ್‌ಸಿಂಗ್, ರಾಜಗುರು ಸುಖದೇವ್, ವಾಸುದೇವ ಬಲವಂತ ಪಡಕೆ, ವೀರಪಾಂಡ್ಯ ಕಟ್ಟ ಬೊಮ್ಮನ್, ಚಂದ್ರಶೇಖರ ಅಜಾದ್, ಗಾಂಧೀಜಿ, ಇಂದಿರಾಗಾಂಧಿ- ಹೀಗೆ ಇತಿಹಾಸದಲ್ಲಿ ದಾಖಲಾಗಿರುವ ಸಹಸ್ರಾರು, ದಾಖಲಾಗಿರುವ ಲಕ್ಷಾಂತರ ಮಹಾತ್ಮರು ಈ ನಾಡಿನ ಒಳಿತಿಗಾಗಿ ಘನತೆ ಗೌರವಕ್ಕಾಗಿ, ಕೀರ್ತಿ ಪ್ರತಿಷ್ಠೆಗಾಗಿ, ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾಗಿದ್ದು, ಅವರಿಗೆ ಕೃತಜ್ಞತೆ ಹಾಗೂ ಗೌರವವನ್ನು ಸಲ್ಲಿಸಬೇಕಾದುದು ನಮ್ಮ ಆದ್ಯ ಕರ್ತವ್ಯವಾಗಿದೆ.೧೯೪೮ ರ ಜನವರಿ ೩೦ ನೇ ಶುಕ್ರವಾರ ಸಂಜೆ ದೆಹಲಿಯಲ್ಲಿನ ಬಿರ್ಲಾ ಭವನದ ಪ್ರಾರ್ಥನಾ ಸಭೆಗೆ ಹೋಗುತ್ತಿದ್ದ ಗಾಂಧೀಜಿಯವರ ಎದೆಗೆ ಅವರು ಮುಸಲ್ಮಾನರ ಪಕ್ಷಪಾತಿ ಎಂದು ಭಾವಿಸಿದ್ದ ನಾಥೂರಾಂ ವಿನಾಯಕ ಗೋಡ್ಸೆ ಎಂಬಾತ ಮೂರು ಸಲ ಗುಂಡು ಹೊಡೆದು ಕೊಲೆ ಮಾಡಿದ. ಗಾಂಧೀ `ಹೇ ರಾಮ್' ಎನ್ನುತ್ತಾ ಇಹಲೋಕ ತ್ಯಜಿಸಿದರು.ಗಾಂಧೀಜಿ ಭಾರತಕ್ಕೆ ಬಯಸಿದ ಸ್ವರಾಜ್ಯ, ಸ್ವಾತಂತ್ರ್ಯ ಕೇವಲ ರಾಜಕೀಯ ಸ್ವರೂಪದ್ದಲ್ಲ. ಅದೊಂದು ಹೊಸ ಸಮಾಜಕ್ಕೆ ನೂತನ ನಾಗರಿಕತೆಗೆ, ವಿನೂತನ ಸಂಸ್ಕೃತಿಗೆ ಹಾದಿಯಾಗಬೇಕಾಗಿತ್ತು. ಅದನ್ನು ಅವರು `ರಾಮರಾಜ್ಯ' ಅರ್ಥಾತ್ `ದೇವರ ರಾಜ್ಯ' ಎಂದು ಕರೆದರು. ಅಲ್ಲಿ ಸರ್ವರ ಉದಯವಾಗುತ್ತದೆ. ಜಾತಿ,ಮತ,ಪಂಥ, ವರ್ಣ,ವರ್ಗ, ಭಾವನೆಗಳಿರವು. ಸರ್ವರೂ ಸಮಾನತೆಯಿಂದಿದ್ದು ಕಷ್ಟಪಟ್ಟು ದುಡಿಮೆ ಮಾಡಿ ಜೀವಿಸುವರು. ಬುದ್ಧಿಯ ಕೆಲಸ ಶರೀರ ಶ್ರಮ ಇವುಗಳಲ್ಲಿ ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಅಲ್ಲಿ ಮಾದಕ ಪದಾರ್ಥಗಳ ಸೇವನೆ ಇರುವುದಿಲ್ಲ. ಮಹಿಳೆಯರ ಬಗ್ಗೆ ಪೂಜ್ಯ ಭಾವನೆಯಿರುತ್ತದೆ. ಪ್ರತಿಯೊಬ್ಬನೂ ಲೋಕಕಲ್ಯಾಣಕ್ಕಾಗಿ ತನ್ನ ಪ್ರಾಣ ಕೊಡಲೂ ಸಿದ್ಧನಿರುತ್ತಾರೆ. ಇಂತಹ ಸ್ಥಿತಿಯನ್ನು ಸರ್ವೋದಯ ಎನ್ನುತ್ತೇವೆ. ಈ ಬಗೆಯ ಮೌಲ್ಯಗಳನ್ನಾಧರಿಸಿ ರೂಪಗೊಂಡ ಸಮಾಜವನ್ನು ಸರ್ವೋದಯ ಸಮಾಜ ಎನ್ನುತ್ತೇವೆ.ಗಾಂಧೀಜಿಯವರಿಗೆ  ಇಡೀ ಭೂಭಾಗವೇ ಅವರ ಸಮಾಜ. ಇಡೀ ಮಾನವ ಕುಲವೇ ಅದರ ಕುಟುಂಬ. ಮಾನವ ಕಲ್ಯಾಣಕ್ಕೆ ಅಹರ್ನಿಶಿ ದುಡಿಯಬೇಕೆಂಬುದೇ ಅವರ ಅತಿಯಾದ ಅಭಿಲಾಷೆ. ಮನುಕುಲದ ಕಷ್ಟ ಕಾರ್ಪಣ್ಯಗಳು ಬೇಗ ಪರಿಹರಿಸಲ್ಪಡಬೇಕು ಎಂಬುದೇ ಅವರ ಹಂಬಲ.ಸಾಹಿತ್ಯ ಕ್ಷೇತ್ರದಲ್ಲಿ ಸರ್ವೋದಯ ಎಂಬ ಪದವನ್ನು ಪ್ರಥಮವಾಗಿ ಬಳಸಿದವರು ಜೈನ ಧರ್ಮದ ಆಚಾರ್ಯ ಸುಮನ್ರಭದ್ರರವರಾಗಿದ್ದು ಅವರು ತಮ್ಮ ಆತ್ಮಕಥೆಯಲ್ಲಿ ಈ ಪದವನ್ನು ಬಳಸಿರುವರು. ನಂತರ ಗಾಂಧೀಜಿಯವರು ಅವರ ಜೀವನ ಪಥವನ್ನು ಬದಲಾಯಿಸಿದ, ಹೆಚ್ಚಿನ ಪ್ರಭಾವ ಬೀರಿದ ಕೃತಿ ರಸ್ಕಿನ್ ರವರ     `ಆನ್ ಟು ದಿಸ್ ಲಾಸ್ಟ್' ಅನ್ನು ಗುಜರಾತಿ ಭಾಷೆಗೆ ಅನುವಾದ ಮಾಡಿ ಕೊಟ್ಟಿರುವ ಹೆಸರು ಸರ್ವೋದಯ.ಈ ಕೃತಿಯಲ್ಲಿನ ಪ್ರಮುಖ ಅಂಶಗಳು ಈ ಕೆಳಕಂಡಂತಿವೆ:೧.    ವ್ಯಕ್ತಿಯ ಒಳಿತು ಸರ್ವರ ಒಳಿತಿನಲ್ಲಿ ಅಡಕವಾಗಿರುತ್ತದೆ.೨.    ವಕೀಲನ ಕಾಯಕಕ್ಕಿರುವ ಬೆಲೆಗೂ ಕ್ಷೌರಿಕನ ಕಾಯಕಕ್ಕಿರುವ ಬೆಲೆಗೂ ಗೌರವ ದೃಷ್ಟಿಯಲ್ಲಿ ಅಂತರವಿಲ್ಲ. ಎಕೆಂದರೆ ತಮ್ಮ ಶ್ರಮದಿಂದ ಹೊಟ್ಟೆ ಹೊರೆಯಲು ಸಂಪಾದನೆ ಮಾಡುವ ಹಕ್ಕು ಸರ್ವರಿಗೂ ಸಮಾನ.೩.    ಭೂಮಿಯನ್ನು ಉಳುವವರು, ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿರುವವರು, ಇಂತಹ ಶ್ರಮಜೀವಿಗಳದೇ ಅರ್ಹವಾದ ಸಾರ್ಥಕ ಜೀವನ.ಸರ್ವೋದಯವೆಂದರೆ ಈ ಜಗತ್ತಿನ ಸಮಸ್ತರ ಉದಯ. ಇವರೆಲ್ಲರ ಸಮರ್ಪಕ ಉದ್ಧಾರವೇ ಸರ್ವೋದಯದ ಗುರಿ. ಮಾನವರೆಲ್ಲರೂ ಒಂದೇ. ಈ ಭೂಮಿಯ ಮೇಲೆ ಜನಿಸಿದ ಎಲ್ಲರಿಗೂ ಇಲ್ಲಿ ಜೀವಿಸಲು ಹಕ್ಕಿದೆ. ಅವರೆಲ್ಲರಿಗೂ ಇಲ್ಲಿ ಬದುಕಲು ಅವಕಾಶ ಮಾಡಿಕೋಡಬೇಕು ಎಂಬುದೇ ಸರ್ವೋದಯದ ಧೋರಣೆ. ನಮ್ಮ ಭಾರತ ದೇಶಕ್ಕೆ ಸಂಬಂಧಿಸಿದಂತೆ ಈ ಸರ್ವೋದಯ ತತ್ವ, ಆಚರಣೆ ಹೆಚ್ಚಿನ ಪ್ರಭಾವ ಬೀರಿದೆ. ಅನೇಕರು ಮನೋಭಾವವನ್ನು ಜೀವನದ ಧೋರಣೆಯನ್ನು ಬದಲಿಸಿದೆ. ಸರ್ವೋದಯದಲ್ಲಿ ಆಳು-ಅರಸ, ಹಿಂದೂ-ಮುಸಲ್ಮಾನ, ಸ್ಪೃಶ್ಯ-ಅಸ್ಪೃಶ್ಯ, ಬಿಳಿಯ-ಕರಿಯ, ಮೇಲು-ಕೀಳು, ಶ್ರೇಷ್ಠ-ಕನಿಷ್ಠ ಎಂಬ ತಾರತಮ್ಯವಿರುವುದಿಲ್ಲ. ಇಲ್ಲಿ ಎಲ್ಲರೂ ಸಮಾನರು; ಎಲ್ಲಿರಗೂ ಸಮಾನ ಅವಕಾಶಗಳಿರುತ್ತವೆ. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯಗಳನ್ನು ನೀಡಿ ಗ್ರಾಮೀಣ ಜನರ ಪ್ರಗತಿ, ಅಧಿಕಾರ ವಿಕೇಂದ್ರೀಕರಣ, ಜನರು ತಮ್ಮ ಜವಾಬ್ದಾರಿ ಅರಿತು ಹೊಣೆಗಾರಿಕೆಯಿಂದ ಸರ್ಕಾರದ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ತಯಾರು ಮಾಡುವುದು ಮೊದಲಾದವು ಸರ್ವೋದಯದ ಗುರಿಗಳಾಗಿರುವುವು.ಸರ್ವೋದಯ ಅನುಷ್ಟಾನದಲ್ಲಿ ಗಾಂಧೀಜಿ ಭಾರತವನ್ನೇ ಆಯ್ಕೆ ಮಾಡಿಕೊಂಡಿದ್ದರು. ಎಕೆಂದರೆ ಶತಮಾನಗಳಿಂದಲೂ ಕಟ್ಟು ನಿಟ್ಟಾದ ಆತ್ಮಸಂಯಮದ ಶಿಕ್ಷಣ ಹಾಗೂ ವ್ರತಾಚರಣೆಯನ್ನು ಆದರ್ಶವಾಗಿ ಬೆಳೆಸಿಕೊಂಡು ಬಂದಿರುವ ಜಾಗವೇ ಸರ್ವೋದಯ ಅನುಷ್ಠಾನ ಯೋಗ್ಯ ಭೂಮಿಯೆಂಬುದನ್ನು ಅವರು ಮನಗಂಡಿದ್ದರು. ಸರ್ವೋದಯದ ಆಚರಣೆಯಲ್ಲಿ ಹಣವಿರುವವನು ಹಣವಿಲ್ಲದವನಿಗೆ, ಬಲಶಾಲಿಯಾದವನು ಅಶಕ್ತನಿಗೆ, ವಿದ್ಯಾವಂತನು ಅವಿದ್ಯಾವಂತನಿಗೆ ಸಹಾಯ ಮಾಡುವುದು ಇದೇ ಮೊದಲಾದವು ಅಡಗಿವೆ.ಸರ್ವೋದಯ ಕಾರ್ಯಕ್ರಮಕ್ಕಾಗಿ ನಮ್ಮ ರಾಷ್ಟ್ರದಲ್ಲಿ ಮಹಾತ್ಮ ಗಾಂಧೀಜಿ, ಆಚಾರ್ಯ ವಿನೋಬಾಜಿ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಮೊದಲಾದವರು ಅಹರ್ನಿಶಿ ದುಡಿದಿದ್ದಾರೆ. ೧೯೫೧ ನೇ ಎಪ್ರಿಲ್ ಮಾಹೆ ಹದಿನೆಂಟನೇ ದಿನಾಂಕದಂದು ಆಂಧ್ರ ಪ್ರದೇಶದಲ್ಲಿ ಭೂದಾನ ಚಳುವಳಿಯ ಮೂಲಕ ಸರ್ವೋದಯ ಹೆಚ್ಚಿನ ರೀತಿಯಲ್ಲಿ ಜನಪ್ರಿಯಗೊಂಡಿತು. ಅದರ ಪರಿಣಾಮವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಭೂದಾನಯಜ್ಞ ಪ್ರಾರಂಭವಾಯಿತು. ಭೂದಾನಯಜ್ಞವು ಒಂದು ವಿಶಿಷ್ಟ ಕಾರ್ಯಕ್ರಮ. ಅದು ಭೂಮಾಲಿಕರು ಮತ್ತು ಭೂರಹಿತರು ನಡುವಿನ ಅಪಾರ ಕಂದಕವನ್ನು ಮುಚ್ಚುತ್ತದೆ. ನೂರಾರು ಎಕರೆ ಭೂಮಿಯ ಒಡೆತನ ಇರುವ ಆಗರ್ಭ ಶ್ರೀಮಂತ ಒಂದು ಕಡೆ, ತನ್ನದೂ ಎನ್ನುವ ಒಂದು ಗುಂಟೆ ಭೂಮಿಯನ್ನು ಇಲ್ಲದ ನಿರ್ಗತಿಕ, ಭೂ ರಹಿತ ವ್ಯಕ್ತಿ ಮತ್ತೊಂದು ಕಡೆ, ಒಂದೇ ಸಮಾಜದ ಒಳಗಡೆಯ ಈ ತಾರತಮ್ಯ ಸ್ಥಿತಿಯನ್ನು ಹೋಗಲಾಡಿಸುತ್ತದೆ. ಶ್ರೀಮಂತನಿಗೆ ನಾನು ಭೂಮಿಯನ್ನು ದಾನವಾಗಿ ನೀಡಿದೆ ಎಂಬ ಹೆಗ್ಗಳಿಕೆಯನ್ನು ತಂದುಕೊಡುತ್ತದೆ. ಬಡವನಿಗೆ ನಾನು ತನ್ನ ಜೀವಮಾನದಲ್ಲಿಯೇ ಇಂತಿಷ್ಟು ಭೂಮಿಯ ಮಾಲೀಕನಾದೆ ಎಂಬ ಅಪಾರ ಸಂತೋಷವನ್ನು ಒದಗಿಸುತ್ತದೆ.ಭೂದಾನಯಜ್ಞ ಕಾರ್ಯಕ್ರಮದಲ್ಲಿ ಮಾಡುವುದಾರೂ ಇಷ್ಟೆ. ಜನರ ಮನ ಒಲಿಸಿ ಹೆಚ್ಚು ಭೂಮಿ ಇರುವವರಿಂದ ಒಂದಷ್ಟು ಭೂಮಿಯನ್ನು ಉಚಿತವಾಗಿ ಪಡೆದು ಅದೇ ಗ್ರಾಮದ ಭೂಮಿ ಇಲ್ಲದವರಿಗೆ ಹಂಚುವುದು. ಹೀಗೆ ಹಂಚುವಾಗ ಹೆಚ್ಚುವರಿ ಭೂಮಿಯಲ್ಲಿ ಮೂರನೇ ಒಂದು ಭಾಗವನ್ನು ಹರಿಜನರಿಗೆ ಹಂಚಬೇಕು. ಭೂಮಿಯನ್ನು ದಾನವಾಗಿ ಪಡೆದವನು ಎರಡು ವರ್ಷಗಳಲ್ಲಿ ಅದನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳದಿದ್ದರೆ, ಉತ್ತು ಬಿತ್ತಿ ಬೆಳೆ ಬೆಳೆಯದೇ ಹೋದರೆ ಆ ಭೂಮಿಯನ್ನು ಹಿಂದಕ್ಕೆ ಪಡೆದು ಬೇರೆ ಭೂಹೀನರಿಗೆ ನೀಡುವುದು.ಅದರಂತೆ ಕರ್ನಾಟಕ ರಾಜ್ಯ ಒಂದರಲ್ಲೇ ಇಪ್ಪತ್ತೊಂದು ಸಾವಿರ ಎಕರೆ ಭೂಮಿ ಸಂಗ್ರಹವಾಯಿತು. ಆಗರ್ಭಶ್ರೀಮಂತರು, ದೊಡ್ಡ ಪ್ರಮಾಣದ ಭೂ ಒಡೆಯರೇ ಅಲ್ಲದೇ ಸುಮಾರು ಮಟ್ಟದ ಭೂಮಾಲೀಕರೂ ಸಹ ಪ್ರಭಾವಿತರಾಗಿ ತಮ್ಮಲ್ಲಿನ ಒಟ್ಟು ಭೂಮಿಯ ಒಂದಷ್ಟು ಭಾಗವನ್ನು ದಾನವಾಗಿ ಸ್ವಯಂಸ್ಫೂರ್ತಿಯಿಂದ ನೀಡಿದರು.ಆ ಮುಂದಿನ ವರ್ಷಗಳಲ್ಲಿ ಭೂ ಸುಧಾರಣಾ ಕಾಯ್ದೆಗಳನ್ನು ರಾಜ್ಯ ಸರ್ಕಾರಗಳು ಜಾರಿಗೆ ತರಲು ಬೇಕಾದ ಮನೋಭೂಮಿಕೆಗಳನ್ನು ಸಿದ್ಧಪಡಿಸುವುದರಲ್ಲಿ ಭೂದಾನ ಚಳುವಳಿ ಮಹತ್ತರ ಪಾತ್ರ ವಹಿಸಿದೆ.ಗ್ರಾಮೀಣ ಜನರಲ್ಲಿ ಸಮುದಾಯ ಪ್ರಜ್ಞೆಯನ್ನು ಬೆಳೆಸಬೇಕು. ಗ್ರಾಮೀಣ ಪ್ರದೇಶದ ನೆಲ ಜಲ ಸಂಪನ್ಮೂಲಗಳು ಗ್ರಾಮದ ಸ್ವತ್ತಾಗಬೇಕೆಂಬುದು ವಿನೋಬಾ, ಜೆ.ಪಿ. ಮೊದಲಾದ ಸರ್ವೋದಯ ನಾಯಕರ ಆಶಯವಾಗಿತ್ತು. ಗ್ರಾಮರಾಜ್ಯ ಸ್ಥಾಪನೆಯಾಗಬೇಕು. ಗ್ರಾಮವು ಜನರು ನೆಮ್ಮದಿಯ ಜೀವನವನ್ನು ನಿರ್ವಹಿಸಲು ಯೋಗ್ಯವಾದ ತಾಣವಾಗಬೇಕು. ಗ್ರಾಮದ ಜನರು ಅಲ್ಲಿಯೇ  ನೆಲೆನಿಂತು ನೆಮ್ಮದಿಯಿಂದ ಬದುಕುವಂತಾಗಬೇಕೇ  ಹೊರತು, ಹೊಟ್ಟೆ ಪಾಡಿಗಾಗಿ ನಗರಗಳಿಗೆ ವಲಸೆ ಹೋಗುವಂತೆ ಪರಿಸ್ಥಿತಿ ಇರಬಾರದು ಎಂಬುದು ಅವರ ನಿರೀಕ್ಷೆ. ವಿನೋಭಾರವರ ನಾಯಕತ್ವದಲ್ಲಿ ಸಂವಿದಾನ, ಭೂದಾನ, ಗ್ರಾಮದಾನಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು, ಆಂಧ್ರದ ಶ್ರೀ ಮಂತ ರಾಮಚಂದ್ರ ರೆಡ್ಡಿಯವರಿಂದ ನೂರು ಎಕರೆ ಜಮೀನು ಪಡೆದಿದ್ದು,  ಶ್ರೀಮಂತರ ಮನಒಲಿಸಿ ಬಡವರಿಗೆ ನೆರವಾಗಿದ್ದು, ನಕ್ಸಲೀಯರ ಚಟುವಟಿಕೆಗಳನ್ನು ಅಂಹಿಸಾತ್ಮಕವಾಗಿ ಕಡಿಮೆ ಮಾಡಿದ್ದು ಜಯಪ್ರಕಾಶ ನಾರಾಯಣ್‌ರವರಿಗೆ ಚಂಬಲ್ ಕಣಿವೆಯ ದರೋಡೆಕೋರರು ಶಸ್ತ್ರಾಸ್ತ್ರಗಳನ್ನೊಪ್ಪಿಸಿ ಶರಣಾಗಿದ್ದು ವಿಶೇಷವಾದ, ಅಪರೂಪದ ಸಾಧನೆಗಳಾಗಿರುವುವು.ಗಾಂಧೀಜಿಯವರಿಗೆ ಗೌರವ ಸೂಚಿಸುವುದೆಂದರೆ ಅವರಿಗೆ ಪ್ರಿಯವಾದ ಕಾರ್ಯಗಳಲ್ಲಿ ಭಾಗವಹಿಸುವುದು. ಆಸಕ್ತಿಯಿಂದ ನಿರ್ವಹಿಸುವುದೇ ಆಗಿದೆ. ಈ ನಾಡಿನ ಎಲ್ಲ ಅಶಕ್ತರ, ದೀನದಲಿತರ, ಉತ್ತಮ ಸ್ಥಾನಮಾನವಿಲ್ಲದವರ, ನಿರ್ಗತಿಕರ, ರೋಗಿಗಳ ಯೋಗಕ್ಷೇಮದ ಬಗ್ಗೆ ಕೈಲಾದ ಸೇವೆ ಮಾಡುವುದು ಅವರಿಗೆ ತುಂಬಾ ಪ್ರಿಯವಾದ ಕಾರ್ಯವಾಗಿತ್ತು. ಅವರು ಕುಷ್ಠರೋಗದ ಕಠೋರತೆ, ಅದರಿಂದ ನರಳುವ ರೋಗಿಗಳ ಆರೈಕೆ ಮಾಡಲು ಜನ ಸಿದ್ಧರಿಲ್ಲದಿರುವುದನ್ನು ಮನಗಂಡು ಸ್ವಲ್ಪವೂ ಬೇಸರಿಸದೆ ತಾವೇ ಕೈಯಾರ ಕುಷ್ಠರೋಗಿಗಳ ಆರೈಕೆ ಮಾಡುತ್ತಿದ್ದರು. ಆ ನೆನಪಿಗಾಗಿಯೇ ಎಂಬಂತೆ ಜನವರಿ ೩೦ ರಂದು ಕುಷ್ಟರೋಗ ನಿವಾರಣಾ ದಿನ ಎಂಬುದಾಗಿಯೂ ಆಚರಿಸಲಾಗುತ್ತಿದೆ. ಸ್ವಚ್ಛತೆ ಮತ್ತು ನೈರ್ಮಲ್ಯಗಳ ಕಡೆ ಗಮನಕೊಟ್ಟರೆ ಕುಷ್ಠರೋಗವನ್ನು ಗಣನೀಯ ಪ್ರಮಾಣದಲ್ಲಿ ತಡೆಯವುದು ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಆ ದಿನ ಕುಷ್ಠರೋಗಿಗಳನ್ನು ಭೇಟಿ ಮಾಡಿ ಅವರ ಯೋಗಕ್ಷೇಮವನ್ನು ವಿಚಾರಿಸುವುದು, ಆಸ್ಪತ್ರೆಗಳಲ್ಲಿ ಹಣ್ಣು ಹಂಪಲುಗಳನ್ನು ಉಚಿತವಾಗಿ ಹಂಚುವುದು. ಅವರಿಗೆ ಸಂಬಂಧಿಸಿದ ಆಸ್ಪತ್ರೆಗಳ ಸುಧಾರಣೆಗಾಗಿ ಕ್ರಮಕೈಗೊಳ್ಳುವುದನ್ನು ಮಾಡಲಾಗುತ್ತಿದೆ. ಕುಷ್ಠರೋಗವು  ಅಂಟು ರೋಗವಲ್ಲ. ಅದನ್ನು ಎಳೆಯದರಲ್ಲಿಯೇ ಗೊತ್ತು ಮಾಡಿಕೊಂಡು ಅಗತ್ಯವಾದ ಲಭ್ಯವಿರುವ ಚಿಕಿತ್ಸೆಯನ್ನು ಪಡೆಯಲು ಅಗತ್ಯ ಜಾಗೃತಿಯನ್ನು ಉಂಟು ಮಾಡಲಾಗುತ್ತಿದೆ.
ಶ್ರೀ ವೀರಭದ್ರಯ್ಯ ಹಿರೇಮಠಸಮೂಹ ಸಂಪನ್ಮೂಲ ವ್ಯಕ್ತಿಕೊಪ್ಪಳ. (ಉತ್ತರ)ಮೊ. ನಂ. ೯೬೧೧೭೭೨೧೦೫

Advertisement

0 comments:

Post a Comment

 
Top