PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೦೫ (ಕ ವಾ)  ಕೊಪ್ಪಳ ತಾಲೂಕು ಹುಲಿಗಿಯಲ್ಲಿನ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕದ ಮಾದರಿಯು ಇತ್ತೀಚೆಗೆ ಮೈಸೂರಿನಲ್ಲಿ ಕಳೆದ ಜ. ೦೩ ರಿಂದ ಪ್ರಾರಂಭವಾಗಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.
     ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದ ಆವರಣದಲ್ಲಿ ಜ. ೦೩ ರಿಂದ ೦೭ ರವರೆಗೆ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ ಜರುಗುತ್ತಿದ್ದು, ಸಮಾವೇಶದ ಅಂಗವಾಗಿ ಇಲ್ಲಿ ಏರ್ಪಡಿಸಲಾಗಿರುವ ವಸ್ತುಪ್ರದರ್ಶನ ಮೇಳದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಪಾಲ್ಗೊಂಡಿವೆ.  ಕೊಪ್ಪಳ ಜಿಲ್ಲಾ ಪಂಚಾಯತಿ ವತಿಯಿಂದ ಸ್ವಚ್ಛ ಭಾರತ ಮಿಷನ್ ಅಡಿ ಹುಲಿಗಿ ಬಳಿ ಸ್ಥಾಪಿಸಲಾಗಿರುವ ೬ ಗ್ರಾಮ ಪಂಚಾಯತಿಗಳನ್ನೊಳಗೊಂಡ ಬಹು ಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕದ ಮಾದರಿಯನ್ನು, ಮೈಸೂರಿನ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದ ವಸ್ತು ಪ್ರದರ್ಶನ ಮೇಳದಲ್ಲಿ ಪ್ರದರ್ಶಿಸಲಾಗಿದ್ದು, ಬಹು ಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕದ ಮಾದರಿಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.  ಗದಗ, ಕೊಪ್ಪಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಗಳಿಗೆ, ವಸ್ತು ಪ್ರದರ್ಶನ ಮೇಳದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು, ದೇಶೀಯ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದನ್ನು ಪ್ರದರ್ಶಿಸಲು ಈ ವಸ್ತು ಪ್ರದರ್ಶನದಲ್ಲಿ ಒಳ್ಳೆಯ ಅವಕಾಶ ಕೊಪ್ಪಳ ಜಿಲ್ಲಾ ಪಂಚಾಯತಿಗೆ ಒದಗಿ ಬಂದಿದೆ.  ಕೊಪ್ಪಳ ಜಿಲ್ಲೆಯ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕದ ಮಾದರಿ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top