PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜ.೨೦ (ಕ ವಾ) ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದಿಂದ ವಿವಿಧ ಧಾರ್ಮಿಕ ಸ್ಥಳಗಳಿಗೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದ್ದು, ಸಾರ್ವಜನಿಕರು ಈ ವಿಶೇಷ ಸಾರಿಗೆ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿದ್ದಾರೆ.
     ರಾಯಚೂರು ಜಿಲ್ಲೆಯ ಸಿಂಧನೂರ ತಾಲೂಕಿನ ಶ್ರೀ ಅಂಬಾಮಠದಲ್ಲಿ ಜ.೨೩ ರಿಂದ ಜ.೨೭ ರವರೆಗೆ ಜರುಗುವ ಶ್ರೀ ಅಂಬಾದೇವಿ ಜಾತ್ರೆಯ ನಿಮಿತ್ಯ ಕೊಪ್ಪಳ ಹಾಗೂ ಗಂಗಾವತಿ ಬಸ್ ನಿಲ್ದಾಣದಿಂದ. ಜ.೨೪ ರಂದು ಬನದ ಹುಣ್ಣಿಮೆಯ ನಿಮಿತ್ಯ ಶ್ರೀಕ್ಷೇತ್ರ ಹುಲಿಗಿಗೆ ಕೊಪ್ಪಳ ಹಾಗೂ ಗಂಗಾವತಿ ಬಸ್ ನಿಲ್ದಾಣಗಳಿಂದ ಹಾಗೂ ಜ.೨೬ ರಂದು ಕೊಪ್ಪಳದಲ್ಲಿ ಜರುಗಲಿರುವ ಶ್ರೀ ಗವಿಸಿದ್ಧೇಶ್ವರ ಜಾತ್ರೆಯ ನಿಮಿತ್ಯ ಭಕ್ತಾದಿಗಳ ಅನುಕೂಲಕ್ಕಾಗಿ ಗಂಗಾವತಿ, ಕುಕನೂರ, ಯಲಬುರ್ಗಾ, ಕುಷ್ಟಗಿ ಬಸ್ ನಿಲ್ದಾಣಗಳಿಂದ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಿಲ್ಲೆಯ ಸಾರ್ವಜನಿಕರು ಈ ವಿಶೇಷ ವಾಹನಗಳ ಕಾರ್ಯಾಚರಣೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಜಿ.ಪಂ ಮತ್ತು ತಾ.ಪಂ ಸಾರ್ವತ್ರಿಕ ಚುನಾವಣೆ : ಮಾದರಿ ನೀತಿ ಸಂಹಿತೆ ಜಾರಿ.
ಕೊಪ್ಪಳ, ಜ.೨೦ (ಕರ್ನಾಟಕ ವಾರ್ತೆ): ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತಿ ಹಾಗೂ ತಾಲೂಕಾ ಪಂಚಾಯತಿ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮಾರ್ಗದರ್ಶನಕ್ಕಾಗಿ ಅನುಸರಿಸರಿಸಬೇಕಾದ ಮಾದರಿ ಸದಾಚಾರ ಸಂಹಿತೆಯ ವಿವರವನ್ನು ಪ್ರಕಟಿಸಿದೆ.
       ಇದರನ್ವಯ ಚುನಾವಣೆ ಘೋಷಣೆಯಾದ ಜ.೧೮ ರಿಂದ ಚುನಾವಣಾ ಪ್ರಕ್ರಿಯೆಯು ಮುಕ್ತಾಯಗೊಳ್ಳುವ ಫೆ.೨೪ ರವರೆಗೆ ಸದಾಚಾರ ಸಂಹಿತೆಯು ಜಾರಿಯಲ್ಲಿರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಿರುವ ಆದರೆ ಚುನಾವಣೆ ನಡೆಯದೇ ಇರುವ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಗೆ ನೀತಿ ಸಂಹಿತೆ ಅನ್ವಯವಾಗುತ್ತದೆ.  ಉಳಿದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ನೀತಿ ಸಂಹಿತೆಯು ಅನ್ವಯವಾಗುವುದಿಲ್ಲ. ಚುನಾವಣೆ ಪೂರ್ವದಲ್ಲಿ ಪ್ರಾರಂಭಿಸಿರುವ ಕಾಮಗಾರಿಗಳನ್ನು ಮುಂದುವರೆಸಲು ಹಾಗೂ ಬಿಲ್ಲುಗಳ ಹಣ ಪಾವತಿ ಮಾಡಲು ನೀತಿ ಸಂಹಿತೆಯು ಅಡ್ಡಿ ಇರುವುದಿಲ್ಲ. ಆದರೆ ಹೊಸ ಕಾಮಗಾರಿಗಳನ್ನು ಪ್ರಾರಂಭಿಸುವಂತಿಲ್ಲ. ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಜನಪ್ರತಿನಿಧಿಗಳ ಅಧ್ಯಕ್ಷತೆಯಲ್ಲಿ ಯಾವುದೇ ಪರಿಶೀಲನಾ ಸಭೆ ನಡೆಸುವಂತಿಲ್ಲ. ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರನ್ನು ಅಥವಾ ಕುಡಿಯುವ ನೀರಿನ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ ಅನುಷ್ಠಾನಗೊಳಿಸಲು ನೀತಿ ಸಂಹಿತೆ ಅಡ್ಡಿ ಇರುವುದಿಲ್ಲ. ಆದರೆ ಅಂತಹ ಯೋಜನೆಯ ಅನುಷ್ಠಾನವನ್ನು ಸಾರ್ವಜನಿಕ ಸಮಾರಂಭ ಅಥವಾ ರಾಜಕೀಯ ನಾಯಕರುಗಳ ಉಪಸ್ಥಿತಿಯಲ್ಲಿ ನಡೆಸುವುದು ನಿಷೇಧಿಸಲಾಗಿದೆ.
     ನೆರೆ ಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ನೆರೆ ಪೀಡಿತ ಹಾಗೂ ಪ್ರಕೃತಿ ವಿಕೋಪ ಪೀಡಿತ ಜನ ಸಮುದಾಯಕ್ಕೆ ನೀಡಲಾಗುವ ಯಾವುದೇ ಪರಿಹಾರ ಅಥವಾ ಸೌಲಭ್ಯಗಳಿಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ.
     ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದು ಯಾವುದೇ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ಅಡ್ಡಿ ಇಲ್ಲ. ಆದರೆ ನೀತಿ ಸಂಹಿತೆಗೆ ಭಾದಕವಾಗುವ ರೀತಿಯಲ್ಲಿ ಮತದಾರರ ಮೇಲೆ ಪರಿಣಾಮ ಬೀರುವಂತಹ ಯಾವುದೇ ಘೋಷಣೆ, ಹೇಳಿಕೆ ಅಥವಾ ಆಶ್ವಾಸನೆ ಇತ್ಯಾದಿಗಳನ್ನು ಮಾಡುವಂತಿಲ್ಲ. ನೇಮಕಾತಿ ನಿಯಮಗಳನ್ವಯ ಯಾವುದೇ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಂಡಿದ್ದರೆ ಅದನ್ನು ನಿಲ್ಲಿಸುವ ಅಗತ್ಯವಿರುವುದಿಲ್ಲ. ಆದರೆ ಯಾವುದೇ ನೇಮಕಾತಿಯನ್ನು ಪ್ರಾರಂಭಿಸಲು ಅಧಿಸೂಚಿಸುವುದಾಗಲೀ ಅಥವಾ ಜಾರಿಯಲ್ಲಿರುವ ನೇಮಕಾತಿ ಪ್ರಕ್ರಿಯೆ ಅಂತಿಮಗೊಳಿಸಿ ನೇಮಕಾತಿ ಪಟ್ಟಿಯನ್ನು ಪ್ರಕಟಗೊಳಿಸಬಾರದು. ಯಾವುದೇ ತಾತ್ಕಾಲಿಕ ಹುದ್ದೆಗಳಿಗೆ ನೇಮಕಾತಿ ಮಾಡಲು ಅವಕಾಶವಿರುವುದಿಲ್ಲ. ಆದರೆ ಯಾವುದಾದರೂ ತುರ್ತು ಸೇವೆಗೆ ನೇಮಕಾತಿ ಅವಶ್ಯವಿದ್ದಲ್ಲಿ ಆಯೋಗದ ಅನುಮೋದನೆ ಪಡೆದು ನೇಮಕಾತಿ ಮಾಡಬಹುದು. ಯಾವುದೇ ಇಲಾಖೆಯಲ್ಲಿ ಸಾಮಾನ್ಯ ಮುಂಬಡ್ತಿಯನ್ನು ನೀಡುವುದು ಅತೀ ಅವಶ್ಯವಿದ್ದಲ್ಲಿ ಆಯೋಗದ ಅನುಮತಿ ಪಡೆದು ಮಾಡಬಹುದಾಗಿದೆ.
     ಸರ್ಕಾರಿ ನೌಕರರನ್ನು ಆಯೋಗದ ಅನುಮತಿ ಇಲ್ಲದೇ ವರ್ಗಾವಣೆ ಮಾಡುವಂತಿಲ್ಲ. ಆದರೆ ಒಂದು ವೇಳೆ ಹುದ್ದೆಗಳು ಖಾಲಿ ಇದ್ದಲ್ಲಿ ಹಾಗೂ ಯಾವುದೇ ಸರ್ಕಾರಿ ನೌಕರರು ಸ್ಥಳ ನಿಯುಕ್ತಿಗಾಗಿ ಕಾಯುತ್ತಿದ್ದಲ್ಲಿ ಅಂತಹ ನೌಕರರನ್ನು ಖಾಲಿ ಇರುವ ಹುದ್ದೆಗಳಿಗೆ ಆಯೋಗದ ಅನುಮತಿಯೊಂದಿಗೆ ಮಾಡಬಹುದಾಗಿದೆ. ಆದರೆ ಒಂದು ನೇಮಕಾತಿಗಾಗಿ ಹಲವು ಬದಲಾವಣೆಯನ್ನು ಮಾಡುವುದನ್ನು ನಿಷೇಧಿಸಲಾಗಿದೆ.
     ಪಡಿತರ ಚೀಟಿ ವಿತರಣೆ ಅಥವಾ ಇತರೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಂತಹ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಭೆಗಳನ್ನು ಸಚಿವರು, ಶಾಸಕರು, ಅಧಿಕಾರಿಗಳು ನಡೆಸುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ.  ಮಂತ್ರಿಗಳು ಮತ್ತು ಶಾಸಕರು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಮತದಾರರನ್ನು ಪ್ರಭಾವಿಸುವಂತಹ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಮಂತ್ರಿಗಳು, ಶಾಸಕರು ಇನ್ನಾವುದೇ ಅಧಿಕಾರೇತರ ಸದಸ್ಯರು, ನಿಗಮ ಮತ್ತು ಮಂಡಳಿ ಅಧ್ಯಕ್ಷರುಗಳಿಗೆ ಒದಗಿಸಿರುವ ಸರ್ಕಾರಿ ವಾಹನಗಳನ್ನು ಚುನಾವಣೆ ಸಂಬಂಧದ ಸಭೆ, ಸಮಾರಂಭ, ಪ್ರಚಾರಕ್ಕಾಗಿ ಬಳಸಿಕೊಂಡಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ವಿಧಾನ ಮಂಡಲ ಮತ್ತು ಸಂಸತ್ ಸದಸ್ಯರುಗಳಿಗೆ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲೂಕಾ ಮಟ್ಟದಲ್ಲಿ ಅವರ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಲಾಗಿರುವ ಸರ್ಕಾರಿ ವಾಹನವನ್ನು ಜಿಲ್ಲಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ. ಆದರೆ ಚುನಾವಣಾ ಪ್ರಚಾರ ಅಥವಾ ಚುನಾವಣಾ ಸಂಬಂಧದ ಕಾರ್ಯಗಳಿಗೆ ಬಳಸಿದಲ್ಲಿ ಅದನ್ನು ತಕ್ಷಣ ವಶಕ್ಕೆ ಪಡೆದುಕೊಳ್ಳಬಹುದು.
     ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಒದಗಿಸಲಾಗಿರುವ ಸರ್ಕಾರಿ ವಾಹನಗಳನ್ನು ಚುನಾವಣಾ ಪ್ರಾರಂಭದಿಂದ ಮುಕ್ತಾಯದವರೆಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ವಶದಲ್ಲಿ ಇರತಕ್ಕದ್ದು. ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಸರ್ಕಾರಿ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಸರ್ಕಾರಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ರಾಜಕೀಯ ಮುಖಂಡರ ಭಾವಚಿತ್ರಗಳನ್ನೊಳಗೊಂಡ ಭಿತ್ತಿಪತ್ರ, ಬ್ಯಾನರ್, ಕಟೌಟ್, ಬೋರ್ಡ್ ಇತ್ಯಾದಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವಂತಿಲ್ಲ. ನೀತಿ ಸಂಹಿತೆ ಜಾರಿ ಇರುವ ಸಂದರ್ಭದಲ್ಲಿ ಅವುಗಳನ್ನು ಸಂಬಂಧಪಟ್ಟ ಪ್ರಾಧಿಕಾರಿಗಳು ತೆರವುಗೊಳಿಸಬೇಕು. ಸದಾಚಾರ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಸರ್ಕಾರಿ ವಾಹನಗಳ ಮೇಲೆ ರಾಜಕೀಯ ಮುಖಂಡರ, ನಾಯಕರ ಭಾವಚಿತ್ರಗಳನ್ನು, ಭಿತ್ತಿಪತ್ರಗಳನ್ನು, ಪೋಸ್ಟರ್‌ಗಳನ್ನು, ಕಟೌಟ್‌ಗಳನ್ನು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.  ಅಲ್ಲದೆ ನೀತಿ ಸಂಹಿತೆಯ ಕಟ್ಟುನಿಟ್ಟಾದ ಪಾಲನೆಗಾಗಿ ಅವಶ್ಯವೆನಿಸಿದಲ್ಲಿ ರಾಜ್ಯ ಚುನಾವಣಾ ಆಯೊಗವು ಆದೇಶಗಳನ್ನು, ನಿರ್ದೇಶಗಳನ್ನು ಮತ್ತು ಸೂಚನೆಗಳನ್ನು ಹೊರಡಿಸುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿಗಳಾದ ಆರ್.ಚಂದ್ರಶೇಖರ ಅವರು ಹೊರಡಿಸಿರುವ ಮಾದರಿ ಸದಾಚಾರ ಸಂಹಿತೆಯ ವಿವರಗಳಲ್ಲಿ ತಿಳಿಸಲಾಗಿದೆ.  
ಯಲಬುರ್ಗಾ ವಸತಿ ಯೋಜನೆ ಅರ್ಜಿಗಳಿಗೆ ಆಕ್ಷೇಪಣೆ ಆಹ್ವಾನ.
ಕೊಪ್ಪಳ ಜ. ೨೦ (ಕರ್ನಾಟಕ ವಾರ್ತೆ): ಯಲಬುರ್ಗಾ ಪಟ್ಟಣ ಪಂಚಾಯತಿಯು, ವಾಜಪೇಯಿ ನಗರ ನಿವೇಶನ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಜನರಿಗೆ ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಪ್ರಕಟಿಸಿದ್ದು, ಈ ಕುರಿತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ.
     ೨೦೧೦-೧೧ ನೇ ಸಾಲಿನ ವಾಜಪೇಯಿ ನಗರ ನಿವೇಶನ ಯೋಜನೆಯಡಿ ಯಲಬುರ್ಗಾ ಪಟ್ಟಣ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವಸತಿ ಸೌಕರ್ಯಕ್ಕಾಗಿ ೧೫೦ ಗುರಿ ನಿಗದಿಪಡಿಸಲಾಗಿತ್ತು.  ಆದರೆ ಒಟ್ಟು ೨೨೪ ಅರ್ಜಿಗಳು ಸ್ವೀಕೃತವಾಗಿರುತ್ತವೆ.  ಅರ್ಜಿ ಸಲ್ಲಿಸಿದವರ ಪಟ್ಟಿಯನ್ನು ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಪ್ರಕಟಿಸಲಾಗಿದ್ದು, ಅರ್ಜಿ ಸಲ್ಲಿಸಿದವರ ಕುರಿತು ಆಕ್ಷೇಪಣೆಗಳಿದ್ದಲ್ಲಿ ಲಿಖಿತ ರೂಪದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಏಳು ದಿನಗಳ ಒಳಗಾಗಿ ಸಲ್ಲಿಸಬಹುದಾಗಿದೆ ಎಂದು ಮುಖ್ಯಾಧಿಕಾರಿ ನಾಗೇಶ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top