PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೨೬ (ಕ ವಾ) ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಬಾರಿಗೆ ಕುವೆಂಪು ಜನ್ಮ ದಿನಾಚರಣೆಯನ್ನು 'ವಿಶ್ವ ಮಾನವ ದಿನ' ವನ್ನಾಗಿ ಡಿ. ೨೯ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ-ಕುಣಿಕೇರಿ ರಸ್ತೆಯಲ್ಲಿರುವ ಕುವೆಂಪು ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
     ಕುವೆಂಪು ಜನ್ಮ ದಿನಾಚರಣೆಯನ್ನು 'ವಿಶ್ವ ಮಾನವ ದಿನ' ವನ್ನಾಗಿ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದರ ಅಂಗವಾಗಿ ಕೊಪ್ಪಳದ ಕುವೆಂಪು ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.  ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುವುದು.  ಕೊಪ್ಪಳ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್, ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್., ಉಪವಿಭಾಗಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅತಿಥಿಗಳಾಗಿ ಭಾಗವಹಿಸುವರು.  ಇದೇ ಸಂದರ್ಭದಲ್ಲಿ ಕುವೆಂಪು ಅವರ ಕುರಿತು ಕುವೆಂಪು ಪ್ರೌಢಶಾಲೆಯ ಇತಿಹಾಸ ಅಧ್ಯಾಪಕಿ ಸುಜಾತ ಚಿಮ್ಮನಪಲ್ಲಿ ವಿಚಾರ ಮಂಡಿಸಲಿದ್ದು, ಭಾಗ್ಯನಗರದ ಶ್ರೀ ಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆಯ ಕಲಾವಿದರು ಕುವೆಂಪು ವಿರಚಿತ ಗೀತಗಾಯನ ನಡೆಸಿಕೊಡುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಅವರು ತಿಳಿಸಿದ್ದಾರೆ.

Advertisement

0 comments:

Post a Comment

 
Top