PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. ೨೯ (ಕ.ವಾ) ಕೊಪ್ಪಳ ಜಿಲ್ಲೆಯಲ್ಲಿ ಜನವರಿ ೦೧ ರಿಂದ ಗಂಗಾವತಿ ಮತ್ತು ಕಾರಟಗಿಯ ಎಪಿಎಂಸಿ ಆವರಣ ಸೇರಿದಂತೆ ಒಟ್ಟು ಎರಡು ಕಡೆ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಹೇಳಿದರು.
     ಬೆಂಬಲ ಬೆಲೆಯಲ್ಲಿ ಭತ್ತ ಮತ್ತು ಜೋಳ ಖರೀದಿ ಕೇಂದ್ರ ಪ್ರಾರಂಭಿಸುವ ಕುರಿತಂತೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಜರುಗಿದ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕೊಪ್ಪಳ ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ  ಭತ್ತ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಸರ್ಕಾರ ಸೂಚನೆ ನೀಡಿದ್ದು, ಅದರನ್ವಯ ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು.  ಪ್ರತಿ ಕ್ವಿಂಟಾಲ್ ಭತ್ತ (ಸಾಮಾನ್ಯ) ಕ್ಕೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ೧೪೧೦ ರೂ. ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ನೀಡುವ ಪ್ರೋತ್ಸಾಹಧನ ೧೦೦ ರೂ. ಸೇರಿದಂತೆ ಒಟ್ಟು ೧೫೧೦ ರೂ. ಗಳಂತೆ.  ಮತ್ತು ಭತ್ತ (ಗ್ರೇಡ್-ಎ) ಕ್ಕೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ರೂ. ೧೪೫೦ ರಂತೆ ನಿಗದಿಪಡಿಸಿದ್ದು, ಈ ದರದಂತೆ ಖರೀದಿ ಮಾಡಲಾಗುವುದು.   ಸದ್ಯ ಜಿಲ್ಲೆಯಲ್ಲಿ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ.  ಒಂದು ವೇಳೆ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತ ಕಂಡಲ್ಲಿ, ರೈತರು ಬೆಂಬಲ ಬೆಲೆಯಲ್ಲಿ ಭತ್ತವನ್ನು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಬಹುದಾಗಿದೆ.  ಅದೇ ರೀತಿ ಮಾಲ್ದಂಡಿ ಜೋಳಕ್ಕೆ ಪ್ರತಿ ಕ್ವಿಂಟಾಲ್‌ಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ೧೫೯೦ ರೂ. ಹಾಗೂ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ನೀಡುವ ಪ್ರೋತ್ಸಾಹಧನ ೫೧೦ ರೂ. ಸೇರಿದಂತೆ ಒಟ್ಟು ೨೧೦೦ ರೂ. ಗಳಂತೆ, ಬೆಂಬಲ ಬೆಲೆಯಲ್ಲಿ ಮಾಲ್ದಂಡಿ ಜೋಳ ಖರೀದಿ ಮಾಡಲಾಗುವುದು.  ಕೊಪ್ಪಳ ಜಿಲ್ಲೆಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ.
     ರೈತರಿಂದ ಖರೀದಿಸಿದ ಭತ್ತ ದಾಸ್ತಾನು ಮಾಡಲು ಅಗತ್ಯ ಗೋದಾಮು ವ್ಯವಸ್ಥೆ ಕೈಗೊಳ್ಳಬೇಕು.  ಖರೀದಿಸಿದ ಮೊತ್ತವನ್ನು ಸಂಬಂಧಪಟ್ಟ ರೈತರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ನೇರವಾಗಿ ಜಮಾ ಮಾಡಬೇಕು.  ಎಫ್‌ಎಕ್ಯೂ ಗುಣಮಟ್ಟ ಪರಿಶೀಲನೆಗೆ ಕೃಷಿ ಇಲಾಖೆ ವತಿಯಿಂದ ಗ್ರೇಡರ್‌ಗಳನ್ನು ಖರೀದಿ ಕೇಂದ್ರಕ್ಕೆ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಭೆಯಲ್ಲಿ ಉಪಸ್ಥಿತರಿದ್ದ ಜಂಟಿಕೃಷಿ ನಿರ್ದೇಶಕ ಡಾ. ರಾಮದಾಸ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಭತ್ತವನ್ನು ಬೆಳೆಯುವ ವಿಸ್ತೀರ್ಣ ೩೯೯೨೦ ಹೆಕ್ಟೇರ್ ಆಗಿದ್ದು, ಸುಮಾರು ೧. ೭೧ ಲಕ್ಷ ಟನ್ ಭತ್ತದ ಬೆಳೆ ಇಳುವರಿಯಾಗಿರುವ ಸಾಧ್ಯತೆ ಇದೆ.  ಅದೇ ರೀತಿ ಮಾಲ್ದಂಡಿ ಜೋಳ ಜಿಲ್ಲೆಯಲ್ಲಿ ೨೫೬೩೦ ಹೆ. ವಿಸ್ತೀರ್ಣದಲ್ಲಿದ್ದು, ೧೪೧೧೭ ಟನ್ ಜೋಳ ಉತ್ಪಾದನೆಯ ನಿರೀಕ್ಷೆ ಇದೆ ಎಂದರು.
    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು, ಕೃಷಿ ಮಾರುಕಟ್ಟೆ ಇಲಾಖೆ ಸಹಾಯಕ ನಿದೇಶಕ ಹನುಮಂತಪ್ಪ, ಉಗ್ರಾಣ ನಿಗಮದ ವ್ಯವಸ್ಥಾಪಕ ಪ್ರಕಾಶ್, ಸೇರಿದಂತೆ ತಾಲೂಕುಗಳ ತಹಸಿಲ್ದಾರರು, ಸಹಾಯಕ ಕೃಷಿ ಮತ್ತು ತೋಟಗಾರಿಕೆ ನಿರ್ದೇಶಕರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top