PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ನ.೨೪ (ಕ ವಾ) ರಾಜ್ಯಮಟ್ಟದ ಆಕಾಶವಾಣಿ ಕಾರ್ಯಕ್ರಮಗಳ ೨೦೧೫ನೇ ಸಾಲಿನ ಸ್ಪರ್ಧೆಯ  'ರೇಡಿಯೋ ಸರಣಿ' ವಿಭಾಗದಲ್ಲಿ ಕಲಬುರ್ಗಿ ಆಕಾಶವಾಣಿ ಕೇಂದ್ರಕ್ಕೆ ಪ್ರಥಮ ಬಹುಮಾನ ಲಭಿಸಿದೆ.
     ಎಚ್.ಎನ್. ಅನಿಲಕುಮಾರ ಅವರು ನಿರ್ಮಾಣ ಮಾಡಿರುವ 'ರಂಗ ದೀವಟಿಗೆಗಳು' ಎನ್ನುವ ಸರಣಿಗೆ ಈ ಬಹುಮಾನ ಲಭಿಸಿದೆ. ವೃತ್ತಿ ನಾಟಕ ಕಂಪನಿಗಳ ಕುರಿತಾದ ಈ ಸರಣಿಯನ್ನು ರಂಗಕರ್ಮಿ ಹಾಗೂ ರಂಗ ಚಿಂತಕರಾದ ಗವೀಶ ಹಿರೇಮಠ ಅವರು ರಚಿಸಿದ್ದು, ಮಧು ದೇಶಮುಖ ಅವರು ನಿರ್ಮಾಣದಲ್ಲಿ ನೆರವು ನೀಡಿದ್ದಾರೆ. ಪ್ರಭು ನಿಷ್ಠಿ ಹಾಗೂ ಶಿವಲಿಂಗಪ್ಪ ಕೊಟನೂರ್ ಅವರ ತಾಂತ್ರಿಕ ಸಹಯೋಗದಲ್ಲಿ ಈ ಸರಣಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ತೀರಾ ಇತ್ತೀಚಿನವರೆಗೂ ವೃತ್ತಿ ರಂಗಭೂಮಿ ನಾಟಕ ಕಂಪನಿಗಳು ನಾಡಿನಾದ್ಯಂತ ಜನಸಮೂಹದಲ್ಲಿ ಮನರಂಜನೆಯ ಪ್ರಮುಖ ಮೂಲಗಳಾಗಿದ್ದವು. ಆದರೆ ಬದಲಾದ ಸಮಯ ಹಾಗೂ ಮನರಂಜನೆಯ ನೂತನ ತಂತ್ರಜ್ಞಾನದ ಆಗಮನದೊಂದಿಗೆ ಈ ಕಂಪನಿಗಳು ಒಂದರ ಹೊಂದೊಂದರಂತೆ ನೇಪಥ್ಯಕ್ಕೆ ಸರಿದು ಈಗ ಬೆರಳೆಣಿಕೆಯಷ್ಟು ಕಂಪನಿಗಳು ಮಾತ್ರ ಉಳಿದುಕೊಂಡಿವೆ. ಅಂತಹ ಕೆಲವು ವೃತ್ತಿ ನಾಟಕ ಕಂಪನಿಗಳ ಹೋರಾಟದ ಬದುಕಿನ ಪರಿಚಯ ಮಾಡಿಕೊಡುವುದೇ ಈ ಸರಣಿಯ ಉದ್ದೇಶವಾಗಿದೆ. ಸರಣಿಯಲ್ಲಿ ಕಂಪನಿಯ ಇದುವರೆಗಿನ ಪಯಣ, ಅನುಭವಿಸಿದ ಏಳು ಬೀಳುಗಳು, ಕಲಾವಿದರ ಬದುಕಿನ ಸುಖ ದುಖಃಗಳು ಇವೆಲ್ಲವುಗಳನ್ನು ಪರಿಣಾಮಕಾರಿಯಾಗಿ ಅನಾವರಣಗೊಳಿಸಲಾಗಿದೆ.
     ಪ್ರಶಸ್ತಿ ವಿಜೇತರನ್ನು ನಿಲಯದ ಮುಖ್ಯಸ್ಥರಾದ ಅಂಜನಾ ಯಾತನೂರ್ ಹಾಗೂ ಸಹಾಯಕ ಎಂಜಿನೀಯರ್ ಟಿ.ತ್ರಿಪುರ ಸುಂದರಿ ಅವರು ಅಭಿನಂದಿಸಿದ್ದಾರೆ ಕಲಬುರಗಿ ಆಕಾಶವಾಣಿ ಕೇಂದ್ರ ತಿಳಿಸಿದೆ.

Advertisement

0 comments:

Post a Comment

 
Top