PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ-29- ನಗರದ ಹಿರಿಯ ಸಾಹಿತಿ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಕೃಷಿ ಮಾಡದ ಕ್ಷೇತ್ರಗಳೇ ಇಲ್ಲ. ಒಂದರ್ಥದಲ್ಲಿ ಅವರು ಆಲ್‌ರೌಂಡರ್ ಎಂದು ರಾಜಶೇಖರ ಅಂಗಡಿ ಹೇಳಿದರು.
         ಇಲ್ಲಿನ ಈಶ್ವರ ದೇವಸ್ಥಾನದಲ್ಲಿ ಭಾನುವಾರ ವಿಠ್ಠಪ್ಪ ಗೋರಂಟ್ಲಿಯವರ ಸಾಧನೆ, ಸಿಂಹಾವಲೋಕನ ಸಮಾರಂಭ ಕುರಿತು ನಡೆದ ಮೊದಲ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
         ವಿಠ್ಠಪ್ಪನವರು ಸರಸ್ವತಿ ಪುತ್ರ. ಶೈಕ್ಷಣಿಕವಾಗಿ ವ್ಯಾಸಂಗ ಮಾಡದಿದ್ದರೂ ಕಲಿಯಬೇಕು ಎನ್ನುವ ಆಸಕ್ತಿಯಿಂದಲೇ ಸಾಹಿತ್ಯ, ಬರವಣಿಗೆಯನ್ನು ಸಿದ್ಧಿಸಿಗೊಂಡವರು. ನಾಡಿನ ಅನೇಕ ಖ್ಯಾತನಾಮರ ಕೃತಿಗಳನ್ನ ಓದಿಕೊಂಡವರು. ಸಮಾಜಪರ, ಜನಪರ, ಕಾರ್ಮಿಕಪರ ಹೋರಾಟದಲ್ಲೂ ಅವರದ್ದು ಸಿದ್ಧಹಸ್ತ. ರಂಗಭೂಮಿ, ಸಿನಿಮಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದವರು. ಅಧ್ಯಾತ್ಮ,  ಮಾಧ್ಯಮಕ್ಷೇತ್ರದ, ನೇಕಾರಿಕೆ, ಸಹಕಾರಿರಂಗ ಹೀಗೆ ಅನೇಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಸ್ಮರಣಾರ್ಹ ಎಂದು ಅವರು ಅಭಿಪ್ರಾಯಪಟ್ಟರು.
           ಯುವಸಾಹಿತಿ ಪ್ರಮೋದ ತುರ್ವಿಹಾಳ ಮಾತನಾಡಿ, ಜಿಲ್ಲೆಯ ಮಟ್ಟಿಗೆ ವಿಠ್ಠಪ್ಪನವರು ದೊಡ್ಡ ಆಸ್ತಿಯೇ ಸರಿ. ಅವರ ಜೀವನದ ಇದುವರೆಗಿನ ನಡೆ ಎಂಥವರಿಗೂ ಸೂರ್ತಿ ನೀಡಬಲ್ಲುದು. ಹಾಗಾಗಿ ಅವರ ಕುರಿತು ವಿಚಾರ ಸಂಕಿರಣ, ಅವರ ಕೃತಿಗಳ ಮೆಲುಕು ಹಾಕುವಿಕೆ, ಕಥೆಗಳ ರಂಗಪ್ರಯೋಗ ಒಟ್ಟಾರೆ ಅವರ ಸಾಧನೆಯ ಸ್ಮರಣೆ ಇಡೀ ದಿನ ನಡೆದರೆ ಪ್ರಯೋಜನ ಹಾಗೂ ಅರ್ಥಪೂರ್ಣ ಎಂದು ಹೇಳಿದರು.
            ಸಭೆಯನ್ನು ಸಂಘಟಿಸಿದ್ದ ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಅವರು, ಸಭೆಯ ಔಚಿತ್ಯವನ್ನು ವಿವರಿಸಿ, ಒಬ್ಬ ಸಾಧಕನ ವಿವರಣೆ ಅಭಿನಂದನಾ ಗ್ರಂಥದ ಹೆಸರಿನ ಮೇಲೆ ಪುಸ್ತಕರೂಪದಲ್ಲಿ ಬಂದಿರುವುದು ಹೊಸತೇನಲ್ಲ, ಆದರೆ ಗೋರಂಟ್ಲಿಯವರ ಬಹುಮುಖದ ವ್ಯಕ್ತಿತ್ವ ಕೇವಲ ಪುಸ್ತಕಕ್ಕೆ ಸೀಮಿತವಾಗದೇ, ಅವರ ಬರವಣಿಗೆಯು ರಂಗಪ್ರಯೋಗಗಳ ಮೂಲಕ ಇಂದಿನ ಯುವಜನತೆಯನ್ನು ತಲುಪುವ  ಅಗತ್ಯವಿದೆ ಎಂದು ತಿಳಿಸಿದರು.
            ವಿಠ್ಠಪ್ಪ ಗೋರಂಟ್ಲಿಯವರು ಮಾತನಾಡಿ, ಹಿತೈಷಿಗಳು, ಅಭಿಮಾನಿಗಳು ಈ ಕುರಿತು ಪ್ರಸ್ತಾಪಿಸಿದಾಗ ಸಹಜವಾಗಿ ಒಂದೆಡೆ ಖುಷಿ, ಮತ್ತೊಂದೆಡೆ ಭಯವೂ ಉಂಟಾಯಿತು. ನನ್ನ ಮೇಲಿನ ಅವರ ಅಭಿಮಾನ ಕಂಡು ಖುಷಿಯಾದರೆ, ಕಾರ್ಯಕ್ರಮಕ್ಕಾಗಿ ತಗುಲುವ ಖರ್ಚು-ವೆಚ್ಚದ ಬಗ್ಗೆ ಭಯವಾಯಿತು. ಆ ಬಗ್ಗೆ ಯೋಚಿಸದಿರುವಂತೆ ಸಲಹೆ ನೀಡಿದ್ದರಿಂದ ನಿರಮ್ಮಳವಾಗಿದ್ದೇನೆ. ಏನೇ ಮಾಡಿದರೂ ಅದು ಮತ್ತೊಬ್ಬರಿಗೆ ಕಿಂಚಿತ್ತಾದರೂ ಪ್ರಯೋಜನಕಾರಿಯಾಗಬೇಕು. ಆ ನಿಟ್ಟಿನಲ್ಲಿ ಕಾರ್ಯತತ್ಪರವಾಗುವಂತೆ ಸಲಹೆ ನೀಡಿದರು.
            ಈ ಸಂದರ್ಭದಲ್ಲಿ ಸಮಾನಮನಸ್ಕರಾದ ಡಿ.ಎಚ್.ಪೂಜಾರ, ಯಮನೂರಪ್ಪ, ಗಾಳೆಪ್ಪ, ಹನುಮಂತ ಪೂಜಾರ, ಅಮರದೀಪ್, ಬಸವರಾಜ ಕರುಗಲ್ ಇತರರು ಇದ್ದರು.

Advertisement

0 comments:

Post a Comment

 
Top