PLEASE LOGIN TO KANNADANET.COM FOR REGULAR NEWS-UPDATES

ಇಲಾಖೆಯಿಂದ ಇಲಾಖೆಗೆ ಅಲೆದಾಟ: ಪರಮವೀರಚಕ್ರ ಪುರಸ್ಕೃತನ ಪುತ್ರಿಯ ಕಣ್ಣೀರ ಕಥೆ...

ಹೊಸದಿಲ್ಲಿ, : 1965ರ ಭಾರತ-ಪಾಕ್ ಯುದ್ಧದ 50ನೆ ವರ್ಷದ ವಿಜಯೋತ್ಸವ ವನ್ನು ದೇಶವು ಇತ್ತೀಚಿಗೆ ಆಚರಿಸಿತು. ಅತ್ತ ಪಾಕಿಸ್ತಾನವೂ ಆ ಯುದ್ಧದಲ್ಲಿ ತಾನೇ ಗೆದ್ದಿದ್ದು ಎಂದು ಹೇಳಿಕೊಂಡು ವಿಜಯೋತ್ಸವ ಆಚರಣೆಯಲ್ಲಿ ಹಿಂದೆ ಬೀಳಲಿಲ್ಲ. ಆದರೆ ಭಾರತವು ತನ್ನ ವೀರ ಸುಪುತ್ರ ಅಬ್ದುಲ್ ಹಮೀದ್‌ರನ್ನು ಸಂಪೂರ್ಣವಾಗಿ ಮರೆತುಬಿಟ್ಟಿದೆಯೇ? ದೇಶಕ್ಕಾಗಿ ಹುತಾತ್ಮರಾದವರ ಕುಟುಂಬಗಳಿಗೆ ಆಗಿರುವ ಅನ್ಯಾಯಗಳು ಮತ್ತು ಅವು ಇಂದಿಗೂ ಪಡು ತ್ತಿರುವ ಬವಣೆಗಳನ್ನು ಕಾಣುವಾಗ ಈ ಪ್ರಶ್ನೆ ಕೇಳಲೇಬೇಕಾಗುತ್ತದೆ.
ಇದು ಅಬ್ದುಲ್ ಹಮೀ ದರ ಕುಟುಂಬದ ಗೋಳಿನ ಕಥೆ.
ಇದಕ್ಕೂ ಮುನ್ನ 1965ರ ಸೆಪ್ಟಂಬರ್,10 ರಂದು ಏನಾಗಿತ್ತು ಎನ್ನುವುದನ್ನು ಒಮ್ಮೆ ಇಣುಕಿ ನೋಡೋಣ. ಅಂದು ಪಾಕ್ ಸೈನ್ಯವು ತನ್ನ ಪ್ಯಾಟನ್ ಟ್ಯಾಂಕ್‌ಗಳ ತುಕುಡಿಯೊಂದಿಗೆ ಖೇಮ್ ಕರಣ್ ವಿಭಾಗದಲ್ಲಿನ ಭಾರತೀಯ ಸೇನಾನೆಲೆಯ ಮೇಲೆ ದಾಳಿ ನಡೆಸಿತ್ತು. ಈ ನೆಲೆ 4 ಗ್ರೆನೇಡಿಯರ್ಸ್‌ಗೆ ಸೇರಿದ್ದಾಗಿತ್ತು. ಟ್ಯಾಂಕ್ ದಾಳಿಗೆ ಮುನ್ನ ತನ್ನ ಗುರಿಯನ್ನು ದುರ್ಬಲಗೊಳಿಸಲು ಮತ್ತು ಭಾರತೀಯ ಪಡೆಗಳನ್ನು ಪ್ರಚೋದಿಸಲು ಪಾಕಿಸ್ತಾನವು ಗುಂಡುಗಳ ದಾಳಿಯನ್ನೂ ನಡೆಸಿತ್ತು. ತನ್ನ ಬಟಾಲಿಯನ್ನಿನ ರಕ್ಷಣಾ ವ್ಯವಸ್ಥೆಗಳತ್ತ ಪಾಕ್ ಟ್ಯಾಂಕ್‌ಗಳ ಸಾಲು ಬರುತ್ತಿರುವುದನ್ನು ಗಮನಿಸಿದ ಹಮೀದ್ ಜೀಪೊಂದರ ಮೇಲೆ ತನ್ನ ಬಂದೂಕನ್ನಿರಿಸಿಕೊಂಡು ಒಂದಾದ ನಂತರ ಒಂದರಂತೆ ಮೂರು ಪಾಕ್ ಟ್ಯಾಂಕ್‌ಗಳನ್ನು ಧ್ವಂಸಗೊಳಿಸಿದರು. ಸತತವಾಗಿ ಟ್ಯಾಂಕುಗಳ ಮೇಲೆ ಗುಂಡಿನ ಮಳೆಗರೆಯುತ್ತಿದ್ದ ಅವರನ್ನು ನಾಲ್ಕನೆಯ ಟ್ಯಾಂಕ್ ಬಲಿ ತೆಗೆದುಕೊಂಡಿತ್ತು. ಹಮೀದ್ ಅವರ ಪುಣ್ಯತಿಥಿಯಂದು ಹಲವಾರು ಗಣ್ಯರು ಅವರ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಿದ್ದರೆ, ಅವರ ಪುತ್ರಿ ನಜ್ಬುನ್ನಿಸಾ ಮಾತ್ರ ಜಿಲ್ಲಾ ಗ್ರಾಮೀಣಾಭಿವೃದ್ಧಿ ಪ್ರಾಧಿಕಾರದಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತನ್ನ ಪತಿ ಶೇಖ್ ಅಲ್ಲಾವುದ್ದೀನ್ ಅವರಿಗೆ ಸಲ್ಲಬೇಕಾಗಿರುವ ಬಾಕಿ ಹಣವನ್ನು ಪಾವತಿಸುವಂತೆ ಅಧಿಕಾರಿಗಳ ಬಳಿ ಗೋಗರೆಯುತ್ತಿದ್ದರು. ತನ್ನ ಕುಟುಂಬದ ದುಸ್ಥಿತಿಯನ್ನು ಪಂಚಾಯತ್ ಸದಸ್ಯ ಬ್ರಿಜ್ ಭೂಷಣ್ ದುಬೆಯವರೆದುರು ಬಿಚ್ಚಿಟ್ಟ ಆಕೆ ತನ್ನ ಕುಟುಂಬವೀಗ ಹಸಿವೆಯಿಂದ ಸಾಯುವ ಸ್ಥಿತಿಯಲ್ಲಿದೆ ಎಂದು ಕಂಬನಿ ಸುರಿಸುತ್ತ ಹೇಳಿದರು.
 ಅಲ್ಲಾವುದ್ದೀನ್ 2014,ಫೆಬ್ರವರಿಯಲ್ಲಿ ಸೇವೆಯಿಂದ ನಿವೃತ್ತರಾಗಿದ್ದು, ಅವರ ರಜಾ ಭತ್ತೆ,ಗ್ರಾಚ್ಯುಯಿಟಿ,ಆರನೆ ವೇತನ ಆಯೋಗದ ವೇತನ ಏರಿಕೆಯ ಬಾಕಿ ಇವುಗಳು ಇನ್ನೂ ಅವರ ಕೈ ಸೇರಿಲ್ಲ. ಇದಕ್ಕಾಗಿ ನಜ್ಬುನ್ನಿಸಾ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವಾರು ಅಧಿಕಾರಿಗಳನ್ನು ಹಲವಾರು ಬಾರಿ ಭೇಟಿಯಾಗಿದ್ದಾರೆ. ಸರಕಾರಿ ಕಚೇರಿಗಳಿಗೆ ಅಲೆದೂ ಅಲೆದೂ ಸುಸ್ತಾದಾಗ ಆಕೆಯ ತಾಯಿ ರಸೂಲನ್ ಬೀಬಿ ಅವರು ಪತ್ರದಲ್ಲಿ ಕುಟುಂಬದ ಗೋಳಿನ ಕಥೆಯನ್ನು ಮನಮಿಡಿಯುವಂತೆ ಬರೆದು ಮುಖ್ಯಮಂತ್ರಿಗಳಿಗೆ ಕಳುಹಿಸಿದ್ದರು. ಈ ಬಗ್ಗೆ ಗಮನ ಹರಿಸುವಂತೆ ಮುಖ್ಯಮಂತ್ರಿಗಳು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆಯನ್ನೂ ನೀಡಿದ್ದರು. ಆದರೆ ನಜ್ಬುನ್ನಿಸಾರ ಸಂಕಷ್ಟಗಳು ಮಾತ್ರ ಕೊನೆಯಾಗಿಲ್ಲ. ಲಂಚ ನೀಡಲು ತನ್ನ ಬಳಿ ಹಣ ಇಲ್ಲವೆನ್ನುವುದು ಇದಕ್ಕೆ ಕಾರಣವಾಗಿರಬಹುದು ಎನ್ನುತ್ತಾರೆ ಅವರು.
ಸರಕಾರದಿಂದ ಹಣ ಬಾಕಿಯಿರುವುದರಿಂದ ಮನೆಯಲ್ಲಿ ಕೂಳು ಬೇಯಿಸಲೂ ಆಗುತ್ತಿಲ್ಲ ಎಂದು ನಜ್ಬುನ್ನಿಸಾ ಹೇಳಿದರು.

ತನ್ಮಧ್ಯೆ,ನಜ್ಬುನ್ನಿಸಾರ ಸಂಕಷ್ಟಗಳನ್ನು ಮುಖ್ಯಮಂತ್ರಿ,ಮುಖ್ಯ ಕಾರ್ಯದರ್ಶಿ ಮತ್ತು ಆಯುಕ್ತರ ಗಮನಕ್ಕೆ ತರುವುದಾಗಿ ದುಬೆ ಹೇಳಿದ್ದಾರೆ. 10 ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ತಮಗೆ ನ್ಯಾಯಯುತವಾಗಿ ಬರಬೇಕಾಗಿರುವ ಬಾಕಿ ಪಾವತಿಗಾಗಿ ಈ ಹುತಾತ್ಮರ ಕುಟುಂಬ ಇನ್ನೆಷ್ಟು ಸಮಯ ಕಂಬದಿಂದ ಕಂಬಕ್ಕೆ ಅಲೆದಾಡಬೇಕು ಮತ್ತು ಎಚ್ಚರಿಕೆಯ ಗಂಟೆ ಮೊಳಗಿದ್ದರೂ ಸರಕಾರಕ್ಕೆ ಈ ಸಮಸ್ಯೆಯನ್ನು ಬಗೆಹರಿಸಲು ಇನ್ನೆಷ್ಟು ಸಮಯ ಬೇಕು ಎನ್ನುವುದು ಈಗ ಇರುವ ಏಕೈಕ ಪ್ರಶ್ನೆ. ಇದಕ್ಕೆ ಉತ್ತರಿಸಬೇಕಾದವರನ್ನು ನಿದ್ರೆಯಿಂದ ಎಬ್ಬಿಸುವವರಾದರೂ ಯಾರು?

--vbnewsonline


Advertisement

0 comments:

Post a Comment

 
Top