ಕೊಪ್ಪಳ, ಆ.೦೧ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಕೊಪ್ಪಳ ಜಿಲ್ಲೆಯ ವಿದ್ಯುತ್ ಮಗ್ಗ ನೇಕಾರರು, ವಾರ್ಪಿಂಗ್ ಹಾಗೂ ವೈಂಡಿಂಗ್ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಪ್ರಸಕ್ತ ಸಾಲಿನ ಪುರಸ್ಕೃತ ಗುಂಪು ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಲು ಹಾಗೂ ನೇಕಾರರ ಮಕ್ಕಳಿಗೆ ಶಿಕ್ಷಾ ಸಹಯೋಗ ಯೋಜನೆಯಡಿ ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಗುಂಪು ವಿಮಾ ಯೋಜನೆಯಲ್ಲಿ ಪಾಲ್ಗೊಳ್ಳಲಿಚ್ಛಿಸುವ ಕೊಪ್ಪಳ ಜಿಲ್ಲೆಯಲ್ಲಿ ವಾಸವಾಗಿರುವ ವಿದ್ಯುತ್ ಮಗ್ಗ ನೇಕಾರರು, ವೈಂಡಿಂಗ್ ಮತ್ತು ವಾರ್ಪಿಂಗ್ ಉದ್ಯೋಗದಲ್ಲಿ ತೊಡಗಿರುವ ೧೮ ರಿಂದ ೫೮ ವರ್ಷದೊಳಗಿನ ಕಾರ್ಮಿಕರು ತಮ್ಮ ವಯಸ್ಸಿನ ದೃಢೀಕರಣ ಪತ್ರ, ವಂತಿಕೆ ಹಣ ರೂ.೮೦, ಮತ್ತು ಅರ್ಜಿ ಫಾರ್ಮ್ ತುಂಬಿ ಆಗಸ್ಟ್ ೧೦ ರೊಳಗಾಗಿ ಉಪನಿರ್ದೇಶಕರ ಕಛೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಕೊಪ್ಪಳ ಇವರಿಗೆ ಅಥವಾ ಸ್ಥಳಿಯ ವಿದ್ಯುತ್ ಮಗ್ಗ ನೇಕಾರ ಸಹಕಾರಿ ಸಂಘಕ್ಕೆ ಸಲ್ಲಿಸಬಹುದು. ಯೋಜನೆಯಡಿ ಭಾಗವಹಿಸಿದ ವಿಮಾದಾರರು ಸ್ವಾಭಾವಿಕವಾಗಿ ಸಾವನ್ನಪ್ಪಿದಲ್ಲಿ ರೂ.೬೦,೦೦೦/-, ಅಪಘಾತದಿಂದ ಸಾವನ್ನಪ್ಪಿದಲ್ಲಿ ಅಥವಾ ಖಾಯಂ ಅಂಗವಿಕಲರಾದಲ್ಲಿ ರೂ.೧,೫೦,೦೦೦/-, ಭಾಗಶಃ ಅಂಗವಿಕಲರಾದಲ್ಲಿ ರೂ.೭೫,೦೦೦/- ಪರಿಹಾರ ಪಡೆಯಬಹುದಾಗಿದೆ.
ಯೋಜನೆಯಡಿ ಹೆಚ್ಚುವರಿಯಾಗಿ, ವಿಮಾದಾರರ ೦೯ ರಿಂದ ೧೨ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ಇಬ್ಬರು ಮಕ್ಕಳಿಗೆ ವಾರ್ಷಿಕವಾಗಿ ತಲಾ ರೂ.೧೨೦೦/- ವಿದ್ಯಾರ್ಥಿ ವೇತನ ನೀಡಲಾಗುವುದು. ವಿಮಾ ಯೋಜನೆಯಲ್ಲಿ ಹೊಸದಾಗಿ ಭಾಗವಹಿಸಲು ಅರ್ಜಿ ಸಲ್ಲಿಸುವವರು ಮತ್ತು ಈಗಾಗಲೇ ಯೋಜನೆಯಲ್ಲಿ ಭಾಗವಹಿಸಿದ ವಿಮಾದಾರರು ತಮ್ಮ ಅರ್ಜಿಯೊಂದಿಗೆ ಮಕ್ಕಳ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೫೩೯-೨೩೦೦೬೯ ನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಪ್ಪಳದ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವರ ಪ್ರವಾಸ ಕಾರ್ಯಕ್ರಮ.
ಕೊಪ್ಪಳ ಆ. ೦೧ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರು ಆ. ೦೩ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಚಿವರು ಅಂದು ಬೆಳಿಗ್ಗೆ ಗದುಗಿನಿಂದ ಹೊರಟು ೧೧ ಗಂಟೆಗೆ ಯಲಬುರ್ಗಾ ತಾಲೂಕು ತಳಕಲ್ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ನಂತರ ೧೧-೩೦ ಕ್ಕೆ ವೀರಾಪುರ ಗ್ರಾಮದಲ್ಲಿ ಕರ್ನಾಟಕ ನೀರಾವರಿ ಇಲಾಖೆ ವತಿಯಿಂದ ಹಿರೇಹಳ್ಳ ನೀರಾವರಿ ಯೋಜನೆ ಪುನರ್ವಸತಿ ಗ್ರಾಮಗಳ ಮತ್ತು ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ ೫ ಗಂಟೆಗೆ ಕೊಪ್ಪಳ ನಗರಕ್ಕೆ ಆಗಮಿಸಿ, ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಶುದ್ಧ ಕುಡಿಯುವ ನೀರಿನ ಕುರಿತ ಪ್ರಗತಿ ಪರಿಶೀಲನಾ ಸಭೆ ನಡೆಸುವರು. ಸಚಿವರು ಅದೇ ದಿನ ೮-೨೫ ಗಂಟೆಗೆ ಹಂಪಿ ಎಕ್ಸ್‌ಪ್ರೆಸ್ ರೈಲು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ಗುಳೆ ತಡೆಗೆ ಸಹಾಯವಾಣಿ ಸದುಪಯೋಗಕ್ಕೆ ಮನವಿ.
ಕೊಪ್ಪಳ, ಆ.೦೧ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಗ್ರಾಮೀಣ ಜನತೆ ಗುಳೆ ಹೋಗುವುದನ್ನು ತಡೆಯಲು ಹಾಗೂ ಪ್ರಸಕ್ತ ಸಾಲಿನಲ್ಲಿ ಕೂಲಿಕಾರರಿಗೆ ಕೆಲಸ ಒದಗಿಸಲು ಸಹಾಯವಾಣಿ ಆರಂಭಿಸಲಾಗಿದ್ದು, ಸಾರ್ವಜನಿಕರು ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಮನವಿ ಮಾಡಿಕೊಂಡಿದ್ದಾರೆ.
ಪ್ರಸಕ್ತ ಸಾಲಿನ ಪ್ರಾರಂಭದಲ್ಲಿ ಮಳೆ ಅಭಾವ ಕಂಡು ಬಂದಿರುವುದರಿಂದ ಜಿಲ್ಲೆಯಲ್ಲಿ ಬರಗಾಲ ಪರಿಸ್ಥಿತಿ ನಿರ್ಮಾಣವಾಗುವ ಸಂಭವವಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಕೂಲಿಕಾರರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ ೧೦೦ ದಿನಗಳ ಉದ್ಯೋಗ ನೀಡುವುದು ಹಾಗೂ ಗ್ರಾಮೀಣ ಬಡ ಜನರು ಗುಳೆ ಹೋಗುವದನ್ನು ತಡೆಗಟ್ಟುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಯೋಜನೆಯಡಿ ಪ್ರತಿ ಕುಟುಂಬಕ್ಕೆ ಸುಲಭವಾಗಿ ಕೆಲಸ ಸಿಗುವಂತೆ ಮಾಡಲು ಹಾಗೂ ಗ್ರಾಮೀಣ ಮಟ್ಟದಲ್ಲಿ ಆಂದೋಲನ ರೂಪದಲ್ಲಿ ಅನುಷ್ಠಾನಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಜಮೀನಿನಲ್ಲಿ ಗಿಡ, ತೋಟಗಾರಿಕೆ, ಭೂಮಿಯ ಫಲವತ್ತತೆ, ಕೆರೆ ಕುಂಟೆ, ನೀರು ಸಂಗ್ರಹ ತೊಟ್ಟಿಗಳನ್ನು ನಿರ್ಮಿಸಿಕೊಳ್ಳಲು ಯೋಜನೆಯಡಿ ಎಲ್ಲರಿಗೂ ಕೂಡಾ ೧೦೦ ದಿನ ಪೂರ್ತಿ ಕೆಲಸ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಅದರಂತೆ ವೈಯಕ್ತಿಕ ಶೌಚಾಲಯದ ಸುತ್ತ ತೆಂಗಿನಮರ, ನಿಂಬೆ ಗಿಡ, ಇತರೆ ಗಿಡಗಳನ್ನು ನೆಟ್ಟು ಒಳ್ಳೆಯ ಪರಿಸರವನ್ನು ನಿರ್ಮಾಣ ಮಾಡಿಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ಜಿಲ್ಲಾ ಕಛೇರಿಯ ಸಹಾಯವಾಣಿ ಸಂಖ್ಯೆ: ೦೮೫೩೯-೨೨೦೧೭೪ ನ್ನು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫.೩೦ ರವರೆಗೆ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಕೊಪ್ಪಳ, ಮೊಬೈಲ್ ಸಂಖ್ಯೆ: ೯೪೮೦೮೭೧೦೦೦ ಗೆ ಮೆಸೇಜ್ ಮೂಲಕ ತಮ್ಮ ಗ್ರಾಮದ ಬಗ್ಗೆ ನಮೂದಿಸಿ, ಕಳುಹಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.
0 comments:
Post a Comment