PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಆ.೨೦ (ಕ ವಾ) ಪುಟ್ಟ ಮಕ್ಕಳು ಎನಿಸಿಕೊಳ್ಳುವವರು ನಾಳೆ ನಮ್ಮ ಜನಾಂಗವನ್ನು ಮುನ್ನಡೆಸಿಕೊಂಡು ಹೋಗುವ ಹೊಣೆಗಾರಿಕೆ ಹೊತ್ತಿರುತ್ತಾರೆ. ಅಂತಹ ಮಕ್ಕಳ ಜೀವ, ಜೀವನ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ|| ಎಸ್.ಬಿ. ದಾನರೆಡ್ಡಿ ಅಭಿಪ್ರಾಯಪಟ್ಟರು.  ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮತ್ತಿತರ ಇಲಾಖೆಗಳ ಸಂಯುಕ್ತಾಶ್ರದಲ್ಲಿ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  ಮಕ್ಕಳನ್ನು ಅವರು ತಾಯಿಯ ಗರ್ಭದಲ್ಲಿ ಅಂಕುರಿಸುವ ಕ್ಷಣದಿಂದ ಮೊದಲ್ಗೊಂಡು ಕುಮಾರಾವಸ್ಥೆ ಪೂರ್ಣಗೊಳ್ಳುವವರೆಗೂ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮವಾದ ಮಿಷನ್ ಇಂದ್ರಧನುಷ್ ಯೋಜನೆ ಪರಿಣಾಮಕಾರಿಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ತಾಯಿ ಮಗು ಆರೋಗ್ಯ ಸಂರಕ್ಷಣೆ ಹಾಗೂ ಮಿಷನ್ ಇಂದ್ರಧನುಷ್ ಯೋಜನೆಗಳನ್ನು ತಮ್ಮ ಇಲಾಖೆ ಅತ್ಯಂತ ಕಾಳಜಿಯಿಂದ ಹಾಗೂ ಪರಿಣಾಮಕಾರಿಯಾಗಿ ಕೈಗೊಂಡಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ವಾರ್ತಾ ಸೇವಾ ಅಧಿಕಾರಿ  ಡಾ||ಟಿ.ಸಿ.ಪೂರ್ಣಿಮಾ ಮಾತನಾಡಿ, ಸಾಮಾನ್ಯ ಜನರ ಆರೋಗ್ಯ ಸುಧಾರಣಾ ನಿಟ್ಟಿನಲ್ಲಿ ಭಾರತ ಸರ್ಕಾರ ರೂಪಿಸಿರುವ ಜನಪರ ಕಾರ್ಯಕ್ರಮಗಳ ಪ್ರಯೋಜನವನ್ನು ಪಡೆದುಕೊಳ್ಳಲು ಜನರೇ ಮುಂದಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಸಂತಪ್ರೇಮಾ, ಶಾಲೆಗಳಲ್ಲೂ ಮಕ್ಕಳ ಹಿತರಕ್ಷಣೆ ಇವತ್ತಿನ ತುರ್ತು ಅಗತ್ಯವಾಗಿದೆ. ಶಿಕ್ಷಕರು ಶಾಲೆಯ ಪ್ರತಿಷ್ಠೆಗಿಂತ ಮಕ್ಕಳ ಬದುಕಿನ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು.
        ಸಮಾರಂಭದಲ್ಲಿ ಡಾ||ಬಸಂತ್ ಕುಮಾರ್ ಪಾಟೀಲ್, ಡಾ||ವಾಚಾದಿಮಠ, ಪತ್ರಕರ್ತ ರಾಜಾಸಾಬ ಮುಲ್ಲಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಹೆಣ್ಣು ಮಕ್ಕಳನ್ನು ವಿವಿಧ ಹಂತಗಳಲ್ಲಿ ಸಂರಕ್ಷಿಸಬೇಕಾದ ಅಗತ್ಯತೆ ಕುರಿತು ವಿವರಿಸಿದರು.  ಕಾರ್ಯಕ್ರಮವನ್ನು ತಾಲೂಕ ಪಂಚಾಯತಿ ಸದಸ್ಯೆ ಮುದ್ದಮ್ಮ ರಂಗಪ್ಪ ಕರಡಿ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಫಕೀರವ್ವ ಜಂತ್ಲಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು, ಎಸ್.ಎಸ್.ಪಿಯು ವಿದ್ಯಾ ಸಂಸ್ಥೆಯ ಅಧ್ಯಕ್ಷ ಭುಜಂಗಸ್ವಾಮಿ, ಕಾರ್ಯದರ್ಶಿ ರೇವಣ ಸಿದ್ದೇಶ್ವರ ಸ್ವಾಮಿ, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಟಿ. ಕೃಷ್ಣಮೂರ್ತಿ, ಆರ್‌ಸಿಎಚ್  ರಮೇಶ್ ಮೂಲಿಮನಿ, ಪಿಡಿಒ ನಿಂಗನಗೌಡ ತೊಂಡೀಹಾಳ್, ಎಂ.ಎಸ್. ಹೊಟ್ಟಿನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಡೆದ ಬೃಹತ್ ರ್‍ಯಾಲಿಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ ಕುಳಗಿ ಹಸಿರು ನಿಶಾನೆ ತೋರಿದರು. ಬಳಿಕ ರ್‍ಯಾಲಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜನಜಾಗೃತಿ ಮೂಡಿಸಿತು.

Advertisement

0 comments:

Post a Comment

 
Top