ಸೇವೆಯಿಂದ ವಜಾಗೊಂಡ ಗುಜರಾತಿನ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಕವಿತೆ...
ಹೋರಾಟ ಶುರುವಾಗಲಿದೆ..
(ಗುಜರಾತ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂಜೀವ್ ಭಟ್ ೨೦೦೨ರ ಗುಜರಾತ್ ಮಾರಣಹೋಮದಲ್ಲಿ ನರೇಂದ್ರ ಮೋದಿಯ ಪಾತ್ರವಿದೆ ಎಂದು ಆರೋಪಿಸಿದ್ದರು. ಅಷ್ಟೆ ಅಲ್ಲ, ಮುಖ್ಯಮಂತ್ರಿಯವರ ಮನೆಯಲ್ಲಿ ನಡೆದ ಪೊಲೀಸ್ ಉನ್ನತಾಧಿಕಾರಿಗಳ ಸಭೆಯಲ್ಲಿ ಹಿಂದೂಗಳಿಗೆ ತಮ್ಮ ಆಕ್ರೋಶ ತೀರಿಸಿಕೊಳ್ಳಲು ಅನುವು ಮಾಡಿಕೊಡಿ ಎಂದು ಮೋದಿಯೇ ಹೇಳಿದ್ದರೆಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಕೂಡ ಸಲ್ಲಿಸಿದ್ದರು. ಅವರನ್ನು ೨೦೧೨ರಲ್ಲಿ ಸೇವೆಯಿಂದ ಅಮಾನತುಗೊಳಿಸಿದ ಸರ್ಕಾರ ಈಗ ಅವರನ್ನು ಸೇವೆಯಿಂದ ವಜಾಗೊಳಿಸಿದೆ. ಸತ್ಯದ ದನಿಯೆತ್ತಿದವರಿಗೆ ಭವಿಷ್ಯದ ಭಾರತದಲ್ಲಿ ಕಾದಿರುವ ಗತಿ ಎಂತಹದೆಂಬುದನ್ನು ತೀಸ್ತಾ ಮತ್ತು ಸಂಜೀವ್ ಭಟ್ ಅವರಿಗೊದಗಿದ ಪರಿಸ್ಥಿತಿಯೇ ಹೇಳುತ್ತಿರುವಂತಿದೆ. ಇದರ ನಡುವೆ ಫೇಸ್‌ಬುಕ್‌ನಲ್ಲಿ ಸಂಜೀವ್ ಭಟ್ ಬರೆದು ಹಂಚಿಕೊಂಡ ಕವಿತೆಯ ಅನುವಾದ ಇದು:}
‘ನನಗೆ ನನದೇ ತತ್ವವಿದೆ, ಅಧಿಕಾರವಿಲ್ಲ
ನಿನ್ನ ಬಳಿ ಅಧಿಕಾರವಿದೆ ತತ್ವವಿಲ್ಲ
ನೀನು ನೀನೇ
ನಾನು ನಾನೇ
ಇಲ್ಲವೇ ಇಲ್ಲ ರಾಜಿ ಹೊಂದಾಣಿಕೆಯ ಪ್ರಶ್ನೆ
ಹಾಗಾಗಿ ಹೋರಾಟ ಶುರುವಾಗಲಿದೆ..
ನನ್ನ ಬಳಿ ಸತ್ಯವಿದೆ, ಬಲವಿಲ್ಲ
ನಿನ್ನ ಬಳಿ ಬಲವಿದೆ, ಸತ್ಯವಿಲ್ಲ
ನೀನು ನೀನೇ
ನಾನು ನಾನೇ
ಇಲ್ಲವೇ ಇಲ್ಲ ರಾಜಿ ಹೊಂದಾಣಿಕೆಯ ಪ್ರಶ್ನೆ
ಹಾಗಾಗಿ ಹೋರಾಟ ಶುರುವಾಗಲಿದೆ...
ನೀನು ನನ್ನ ತಲೆಬುರುಡೆ ಒಡೆಯಬಹುದು
ಆದರೂ ಹೋರಾಡುತ್ತೇನೆ
ನೀನು ನನ್ನೆಲುವುಗಳ ಪುಡಿಪುಡಿಯಾಗಿಸಬಹುದು
ಆದರೇನು ಹೋರಾಡುತ್ತೇನೆ
ನನ್ನ ಜೀವಂತ ದಹಿಸೀಯೆ ನೀನು
ಆದರೂ ನಾ ಹೋರಾಡುತ್ತೇನೆ
ನರನಾಡಿಗಳಲಿ ಸತ್ಯ ಹರಿಯುತಿರುವಾಗ
ನಾನು ಹೋರಾಡುತ್ತೇನೆ
ಶಕ್ತಿಯ ಪ್ರತಿ ಕಣದಿಂದ
ಉಸಿರಿನ ಕೊನೆಯ ಚಣದವರೆಗು
ನಾನು ಹೋರಾಡುತ್ತೇನೆ
ಸುಳ್ಳುಗಳಿಂದ ಕಟ್ಟಿದ
ನಿನ್ನರಮನೆ ಕುಸಿದು ಬೀಳುವವರೆಗು,
ನಿನ್ನ ಸುಳ್ಳುಗಳಿಂದ ನೀ ಪೂಜಿಸಿದ ದೆವ್ವವು
ನನ್ನ ಸತ್ಯದೇವತೆಯೆದುರು ಮಂಡಿಯೂರುವವರೆಗು
ನಾ ಹೋರಾಡುತ್ತೇನೆ..’
.... ಕನ್ನಡಕ್ಕೆ ಎಚ್.ಎಸ್.ಅನುಪಮಾ
0 comments:
Post a Comment