ಕೊಪ್ಪಳ, ಜು.೦೮ - ಕರ್ನಾಟಕ ಸರ್ಕಾರವು ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕಾ ಉದ್ಯಮಗಳನ್ನು ಪ್ರೋತ್ಸಾಹಿಸಲು ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಮೊದಲನೇ ಪೀಳಿಗೆ ಉದ್ದಿಮೆದಾರರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ಪಡೆದ ಅವಧಿ ಸಾಲಗಳ ಮೇಲೆ ಸಾಲಿಯಾನ ಶೇಕಡಾ ೬ ರ ಬಡ್ಡಿ ಸಬ್ಸಿಡಿಯನ್ನು ಪಾವತಿಸುವ ಯೋಜನೆಯೊಂದನ್ನು ಜಾರಿಗೊಳಿಸಿದೆ. ಈ ಯೋಜನೆಯನ್ನು ಕೊಪ್ಪಳ ಸೇರಿದಂತೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಎಲ್ಲಾ ಜಿಲ್ಲಾ ಶಾಖೆಗಳ ಮೂಲಕ ಜಾರಿಗೊಳಿಸಲಾಗಿದೆ. ಮೊದಲನೆ ಪೀಳಿಗೆ ಉದ್ದಿಮೆದಾರರು ಮಾತ್ರ ತಮ್ಮ ಏಕಸ್ವಾಮ್ಯತ್ವ ಅಥವಾ ಪಾಲುದಾರಿಕಾ ಸಂಸ್ಥೆ ಅತವಾ ಕಂಪನಿಗಳಿಗೆ (ಕಂಪನಿಗಳ ಕಾಯ್ದೆಯಡಿ ಸ್ಥಾಪಿಸಲ್ಪಟ್ಟ) ಈ ಅವಕಾಶವನ್ನು ಪಡೆಯಬಹುದಾಗಿದೆ. ಯೋಜನಾ ವೆಚ್ಚವು ೧೦೦ ಲಕ್ಷ ಗಳಿಗೆ ಮೀರದಂತೆ ಇರುವ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳು ಪಡೆದ ಅವಧಿ ಸಾಲಗಳಿಗೆ ಈ ಸಬ್ಸಿಡಿ ಸೌಲಭ್ಯ ದೊರೆಯಲಿದೆ. ಇಂತಹ ಕೈಗಾರಿಕೋದ್ಯಮಗಳು ಪಾಲುದಾರಿಕಾ ಸಂಸ್ಥೆ ಅಥವಾ ಕಂಪನಿಗಳಾಗಿದ್ದಲ್ಲಿ ಎಲ್ಲಾ ಪಾಲುದಾರರು ಈಗಾಗಲೇ ಆಸ್ತಿತ್ವದಲ್ಲಿರುವ ಯಾವುದೇ ಉದ್ಯಮದಲ್ಲಿ ತಮ್ಮ ಪಾಲನ್ನು ಹೊಂದಿರಬಾರದು. ಎಮ್.ಎಸ್.ಎಮ್.ಇ.ಡಿ ಕಾಯ್ದೆಯಡಿಯಲ್ಲಿ ಬರುವ ಎಲ್ಲಾ ಉತ್ಪಾದನಾ ಚಟುವಟಿಕೆಗಳು ಹಾಗೂ ಸೇವಾ ಚಟುವಟಿಕೆಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಈ ಯೋಜನೆಯ ಅವಕಾಶ ಪಡೆಯಲು ಇಚ್ಚಿಸುವ ಮೊದಲನೇ ಪೀಳಿಗೆಯ ಉದ್ದಿಮೆದಾರರು ಸರ್ಕಾರದಿಂದ ಈಗಾಗಲೇ ಜಾರಿಯಲ್ಲಿರುವ ಯಾವುದೇ ಯೋಜನೆಗಳಲ್ಲಿ ಸಾಲವನ್ನು ಪಡೆದಿದ್ದರೆ ಈ ಯೋಜನೆಯಲ್ಲಿ ಸಿಗುವ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ. ಅಲ್ಲದೆ ಈ ಯೋಜನೆಯು ಹತ್ತು ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ. ಆದ್ದರಿಂದ ಜಿಲ್ಲೆಯ ಮೊದಲನೆ ಪೀಳಿಗೆಯ ಉದ್ದಿಮೆದಾರರು ಈ ಸೌಲಭ್ಯದ ಸದುದ್ದೇಶವನ್ನು ಪಡೆಯುವಂತೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಕೊಪ್ಪಳದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಮನವಿ ಮಾಡಿಕೊಂಡಿದ್ದಾರೆ.
Subscribe to:
Post Comments (Atom)
0 comments:
Post a Comment