PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಜೂ.೩೦ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ರೋಗಗಳು ಹಾಗೂ ರೋಗವಾಹಕಗಳ ನಿಯಂತ್ರಣ ಸಾಧ್ಯ. ಸಂಬಂಧಪಟ್ಟ ಇಲಾಖೆಗಳು ಹಾಗೂ ಸಾರ್ವಜನಿಕರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್.ಜನ್ನು ತಿಳಿಸಿದರು. ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ  ಏರ್ಪಡಿಸಲಾಗಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಜೂನ್-೨೦೧೫ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಸಿ ಅವರು ಮಾತನಾಡಿದರು.
     ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಸೊಳ್ಳೆಗಳ ಸಂತತಿ ಹೆಚ್ಚಲು ವಾತಾವರಣ ಇದೀಗ ಪೂರಕವಾಗಿದೆ. ರೋಗವಾಹಕಗಳಾಗಿರುವ ಸೊಳ್ಳೆಗಳಿಂದಾಗಿ ಮಾರಣಾಂತಿಕ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ, ಮೆದುಳುಜ್ವರ, ಆನೆಕಾಲು ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯವಶ್ಯಕವಾಗಿದೆ.   ರೋಗವಾಹಕಗಳ ತಡೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲದೇ ಮುಖ್ಯವಾಗಿ ಶಾಲಾ, ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ನೀರಿನ ಮೂಲಗಳ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.  ಗ್ರಾಮೀಣ ಪ್ರದೇಶಗಳಲ್ಲಿ ನೀರು ನಿಲ್ಲುವಂತಹ ಸ್ಥಳಗಳನ್ನು ಗುರುತಿಸಿ, ತೆಗ್ಗುಗಳನ್ನು ಮುಚ್ಚಲು ಅಗತ್ಯ ಕ್ರಮ ವಹಿಸಬೇಕು.  ಪರಿಸರ ನೈರ್ಮಲ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳು, ನಗರ, ಸ್ಥಳೀಯ ಸಂಸ್ಥೆಗಳು ಮುತುವರ್ಜಿ ವಹಿಸಬೇಕು.  ಸಾರ್ವಜನಿಕರೂ ಸಹ ಇದರಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
     ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ||ಎಂ.ಎಂ.ಕಟ್ಟಿಮನಿ ಮಾತನಾಡಿ, ೨೦೧೫ ರಲ್ಲಿ ಜಿಲ್ಲಾದ್ಯಂತ ಒಟ್ಟು ೧೫ -ಡೆಂಗ್ಯೂ ಪ್ರಕರಣಗಳು, ೧೪೩- ಮಲೇರಿಯಾ ಪ್ರಕರಣಗಳು, ೧೨- ಚಿಕುಂಗುನ್ಯಾ  ಪ್ರಕರಣಗಳು ಹರಡಿರುವುದು ಪರೀಕ್ಷಾ ನಂತರ ಖಚಿತಪಟ್ಟಿವೆ.  ಇವೆಲ್ಲವೂ ರೋಗವಾಹಕಗಳಿಂದ ಉಂಟಾಗಿದ್ದು, ಆದರೆ ಇದುವರೆಗೂ ಯಾವುದೇ ಸಾವು ಸಂಭವಿಸಿಲ್ಲ.  ತೆರೆದ ನೀರಿನ ತೊಟ್ಟಿಗಳು, ಒಡೆದ ಟೈರ್‌ಗಳು, ಹೂವಿನ ಕುಂಡಗಳು, ತೆಂಗಿನ ಕಾಯಿ ಚಿಪ್ಪುಗಳು, ಅನುಪಯುಕ್ತ ವಸ್ತುಗಳು, ಬಳಸದೇ ಇರುವ ಬಾವಿಗಳು, ಕಾಲುವೆ ಇತ್ಯಾದಿಗಳು ಸೊಳ್ಳೆಗಳ ಉತ್ಪತ್ತಿಗೆ ಮೂಲ ಕಾರಣವಾಗಿವೆ. ಆದ್ದರಿಂದ ಸಾರ್ವಜನಿಕರು ಎಲ್ಲ ಬಗೆಯ ನೀರಿನ ತೊಟ್ಟಿ, ಡ್ರಂ, ಬ್ಯಾರೆಲ್, ಏರ್‌ಕೂಲರ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮತ್ತು ಸ್ವಚ್ಛ ಮಾಡಿ ಒಣಗಿಸಿ, ಪುನಃ ನೀರು ತುಂಬಿ ತೊಟ್ಟಿಗಳಲ್ಲಿ ಸೊಳ್ಳೆಗಳು ನುಸುಳದಂತೆ ಮುಚ್ಚಳಿಕೆಯನ್ನು ಭದ್ರವಾಗಿ ಮುಚ್ಚಬೇಕು. ಮನೆಯ ಸುತ್ತ ಬಯಲಿನಲ್ಲಿ ಮತ್ತು ಮಾಳಿಗೆಯ ಮೇಲೆ ಟೈರ್, ಟ್ಯೂಬ್, ಒಡೆದ ಬಕೆಟ್, ಎಳೆನೀರು ಚಿಪ್ಪು, ಮರದ ಪೊಟರೆ, ಹೂವಿನ ಕುಂಡ, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಕುಡಿಯುವ ನೀರಿನ ಅಭಾವವಿದ್ದ ಸಂದರ್ಭದಲ್ಲಿ ಶೇಖರಿಸಲ್ಪಟ್ಟ ನೀರನ್ನು ಸರಿಯಾಗಿ ಸೋಸಿ, ಸ್ವಚ್ಛಗೊಳಿಸಿ ಶೇಖರಿಸಿಟ್ಟು ಬಳಸಬೇಕು. ನೂತನ ಕಟ್ಟಡ ಕಟ್ಟುವವರು ನೀರಿನ ತೊಟ್ಟಿಯನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ಜ್ವರ ಇರಲಿ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಆರೋಗ್ಯ ಸಿಬ್ಬಂದಿ ಮನೆಯ ಹತ್ತಿರ ಬಂದಾಗ ಜ್ವರ ಪೀಡಿತರ ರಕ್ತ ಲೇಪನ ನೀಡಿ ಸಹಕರಿಸಬೇಕು, ಬೆಳಿಗ್ಗೆ ಮತ್ತು ಸಂಜೆ ವೇಳೆ, ಸೊಳ್ಳೆಗಳ ಚಟುವಟಿಕೆ ಹೆಚ್ಚಾಗಿರುವುದರಿಂದ ಆ ಸಮಯದಲ್ಲಿ ಆದಷ್ಟು ಮೈತುಂಬ ಬಟ್ಟೆ ಧರಿಸಬೇಕು. ಮಲಗುವಾಗ ಸೊಳ್ಳೆ ಪರದೆಗಳನ್ನು ತಪ್ಪದೇ ಉಪಯೋಗಿಸಬೇಕು. ಅಲ್ಲದೇ ರೋಗವಾಹಕಗಳಿಂದ ಸಾರ್ವಜನಿಕರನ್ನು ರಕ್ಷಿಸಲು, ಅರಿವು ಮೂಡಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. 
     ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀಕಾಂತ ಬಾಸೂರು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಲೋಕೇಶ್, ಕೊಪ್ಪಳ ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

0 comments:

Post a Comment

 
Top