ಕೊಪ್ಪಳ, ಮೇ. ೬. ಯುವ ಸಬಲೀಕರಣ ಇಲಾಖೆಯ ಮೂಲಕ ಜಿಲ್ಲೆಯ ಯುವಜನರ ಮತ್ತು ಯುವ ಸಂಘಗಳ ಸಮಗ್ರ ಅಭಿವೃದ್ಧಿ ಮಾಡಲು ಶ್ರಮಿಸುವದಾಗಿ ಕೊಪ್ಪಳ ಜಿಲ್ಲಾ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಡಾ|| ಶಾರದಾ ಮ. ನಿಂಬರಗಿ ಹೇಳಿದರು.
ಅವರು ತಮ್ಮ ಕಛೇರಿಯಲ್ಲಿ ಇಲಾಖೆಯ ವತಿಯಿಂದ ಯುವ ಸಂಘಗಳಿಗೆ ೧೫ ಸಾವಿರ ಮೌಲ್ಯದ ಹಾರ್ಮೋನಿಯಂ, ತಬಲಾ, ತಪ್ಪಡಿ ಭಜನಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ಇಲಾಖೆಯಲ್ಲಿ ಯುವಜನರಿಗೆ ಬರುವ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡುವದರ ಜೊತೆಗೆ ಜಿಲ್ಲೆಯ ಎಲ್ಲಾ ಯುವ ಸಂಘಗಳನ್ನು ಪುನಃಶ್ಚೇತನಗೊಳಿಸಿ ಕ್ರಿಯಾಶೀಲವಾಗಿ ಕೆಲಸ ಮಾಡಲು ಯೋಜನೆ ರೂಪಿಸಲಾಗುವದು, ಪ್ರತಿ ವಾರಕ್ಕೊಂದು ಯುವ ಸಂಘ ಭೇಟಿ ಮಾಡಿ, ಯುವಜನರು ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುವದು, ಯುವಜನರೊಟ್ಟಿಗೆ ಗ್ರಾಮ ನೈರ್ಮಲ್ಯೀಕರಣ, ಸ್ವಚ್ಛತಾ ಅಭಿಯಾನ, ಜೀತ ಮುಕ್ತಿ, ಬಾಲ್ಯ ವಿವಾಹ ತಡೆಗಟ್ಟುವಿಕೆ, ಮೂಢನಂಬಿಕೆ ವಿರುದ್ಧ ಹೋರಾಡಲು ಶ್ರಮಿಸುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜಗದಯ್ಯ ಸಾಲಿಮಠ, ಯುವ ಮುಖಂಡ ಗವಿಸಿದ್ದಪ್ಪ ಕಿರ್ಕಿಹಳ್ಳಿ, ಇಲಾಖೆಯ ಯತಿರಾಜು, ಕೆ.ಎಂ.ಪಾಟೀಲ, ಸಿ.ಎ.ಪಾಟೀಲ್, ತಿಪ್ಪಣ್ಣ ಮಾಳಿ ಇತರರಿದ್ದರು. ಶ್ರೀ ತಾಯಮ್ಮದೇವಿ ಭಜನಾ ಸಂಘ ಕಾತರಕಿ, ಸ್ವಾಮಿ ವಿವೇಕಾನಂದ ಯುವಕ ಸಂಘ ನವಲಿ, ಅನ್ನದಾನೇಶ್ವರ ಭಜನಾ ಯುವಕ ಸಂಘ ಬೀಳಗಿ ಮತ್ತು ಕರ್ನಾಟಕ ಯುವಕ ಮಂಡಳಿ ಕರಮುಡಿಯವರಿಗೆ ಪ್ರತಿ ತಾಲೂಕಿಗೆ ಒಂದರಂತೆ ಜಿಲ್ಲೆಯ ಒಟ್ಟು ನಾಲ್ಕು ಸಂಘಗಳಿಗೆ ಭಜನಾ ಸಾಮಾಗ್ರಿ ನೀಡಲಾಯಿತು.
0 comments:
Post a Comment