ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಸಿದ್ಧತೆ ಕುರಿತಂತೆ ಬುಧವಾರದಂದು ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಮೇ. ೧೫ ರಂದು ಅಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಜೂ. ೦೨ ರಂದು ಮತದಾನ ನಡೆಯಲಿದೆ. ಮೇ. ೧೦ ರಿಂದ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣೆ ಸಂಬಂಧ ಈಗಾಗಲೆ ಪ್ರತಿ ತಾಲೂಕಿಗೂ ತಲಾ ಒಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು. ಅಧಿಕಾರಿಗಳು ದಕ್ಷತೆಯಿಂದ, ಪ್ರಾಮಾಣಿಕತೆಯಿಂದ ತಮಗೆ ಒಪ್ಪಿಸಿದ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕರೆ ನೀಡಿದರು.
ಗ್ರಾಮ ಪಂಚಾಯತಿ ಚುನಾವಣೆ ಸಂಬಂಧ ಈಗಾಗಲೆ ನೇಮಕಗೊಂಡಿರುವ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಿದ ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು, ಗ್ರಾ.ಪಂ. ಚುನಾವಣೆಗಳು ಪಕ್ಷ ರಹಿತವಾಗಿ ಜರುಗಲಿದ್ದು, ಅಧಿಕಾರಿಗಳು, ಆಯಾ ಗ್ರಾ.ಪಂ. ಕ್ಷೇತ್ರದಲ್ಲಿ ನಾಮಪತ್ರಗಳ ಸ್ವೀಕೃತಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಾಮಪತ್ರಗಳನ್ನು ಮೇ. ೧೫ ರಿಂದ ೨೨ ರವರೆಗೆ ಪ್ರತಿದಿನ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಸ್ವೀಕರಿಸಬೇಕು. ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿಗಳಿಗೆ ಸೂಕ್ತ ತಿಳುವಳಿಕೆ ನೀಡಬಹುದಾಗಿದ್ದು, ಅತ್ಯಂತ ಎಚ್ಚರಿಕೆಯಿಂದ ಈ ಪ್ರಕ್ರಿಯೆ ನಡೆಸಬೇಕು. ಚುನಾವಣೆಗೆ ಠೇವಣಿ ಮೊತ್ತವನ್ನು ನಿಗದಿಪಡಿಸಲಾಗಿದ್ದು ಸಾಮಾನ್ಯ ಅಭ್ಯರ್ಥಿಗೆ ರೂ. ೨೦೦ ಹಾಗೂ ಪ.ಜಾತಿ/ಪ.ಪಂಗಡ/ಹಿಂದುಳಿದ ವರ್ಗ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. ೧೦೦ ನಿಗದಿಪಡಿಸಲಾಗಿದೆ. ಉಮೇದುವಾರಿಕೆ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ ೦೪ ನಾಮಪತ್ರಗಳನ್ನು ಸಲ್ಲಿಸಬಹುದಾಗಿದ್ದು, ಅಫಿಡೆವಿಟ್ ಅನ್ನು ಬಿಳಿ ಹಾಳೆಯಲ್ಲಿ ನಿಗದಿತ ನಮೂನೆಯಲ್ಲಿ ಕುಟುಂಬ ಸದಸ್ಯರ ಚರ ಮತ್ತು ಸ್ಥಿರಾಸ್ತಿ ವಿವರ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಶುಲ್ಕವಿಲ್ಲ. ಚುನಾವಣಾಧಿಕಾರಿ, ಸಹಾಯಕ ಚುನಾವಣಾ ಅಧಿಕಾರಿಗಳು, ಹೊಣೆಗಾರಿಕೆಯನ್ನು ಅರಿತು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಚುನಾವಣೆಗೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳಿಗೆ ಈಗಾಗಲೆ ಚುನಾವಣಾ ಕೈಪಿಡಿಯನ್ನು ವಿತರಿಸಲಾಗಿದ್ದು, ಎಲ್ಲ ವಿವರಗಳು ಕೈಪಿಡಿಯಲ್ಲಿ ಲಭ್ಯವಿದೆ. ಆದಾಗ್ಯೂ ಯಾವುದೇ ಗೊಂದಲ ಅಥವಾ ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ ತಹಸಿಲ್ದಾರರು, ಅಪರ ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದಾಗಿದೆ. ಚುನಾವಣಾ ಕರ್ತವ್ಯದಲ್ಲಿ ಅಧಿಕಾರಿ, ಸಿಬ್ಬಂದಿಗಳು ನಿರ್ಲಕ್ಷ್ಯ ತೋರುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಕೊಪ್ಪಳ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಮಾತನಾಡಿ, ಈ ಹಿಂದೆ ಜರುಗಿರುವ ಗ್ರಾಮ ಪಂಚಾಯತಿಗಳ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉಂಟಾದ ಲೋಪ-ದೋಷಗಳು ಈ ಬಾರಿ ಮರುಕಳಿಸದಂತೆ, ಎಚ್ಚರಿಕೆ ವಹಿಸಿ, ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಗ್ರಾಮ ಪಂಚಾಯತಿ ಚುನಾವಣೆಯನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರವೂ ಅಗತ್ಯವಿದೆ ಎಂದರು.
ತರಬೇತಿಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಾಗಿ ನೇಮಕಗೊಂಡಿರುವ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾ ಅಧಿಕಾರಿಗಳು ಅಲ್ಲದೆ ತಾಲೂಕು ತಹಸಿಲ್ದಾರರು, ತಾಲೂಕುಗಳ ನೋಡಲ್ ಅಧಿಕಾರಿಗಳು ಪಾಲ್ಗೊಂಡಿದ್ದರು.
0 comments:
Post a Comment