ಹೊಸಪೇಟೆ: ಚಿತ್ತವಾಡ್ಗಿ ಐಎಸ್‌ಆರ್ ಕಾರ್ಖಾನೆಗೆ ರೈತರು ಪ್ರಸಕ್ತ ಸಾಲಿನಲ್ಲಿ ೧,೬೯೩೫೫ ಮೆಟ್ರಿಕ್ ಟನ್ ಕಬ್ಬು ಸಾಗಾಣಿಕೆ ನಡೆಸಿದ್ದು ಈ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕೆಂದು ಆಗ್ರಹಿಸಿ ಹೊಸಪೇಟೆ ರೈತ ಸಂಘದಿಂದ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟನೆಯನ್ನು ಮಂಗಳವಾರ ನಡೆಸಿತು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘದ ಅಧ್ಯಕ್ಷ ಗೋಸಲ ಭರಮಪ್ಪ ಮಾತನಾಡಿ, ಚಿತ್ತವಾಡ್ಗಿ ಐಎಸ್‌ಆರ್ ಕಾರ್ಖಾನೆಯ ಆಡಳಿತ ಮಂಡಳಿಯ ಟನ್ ಕಬ್ಬಿಗೆ ೨ಸಾವಿರದ ೨೯೦ರೂ. ನಿಗದಿ ಪಡಿಸಿ ಖರೀದಿಸಿತು. ಇದರ ಒಟ್ಟು ಮೌಲ್ಯ ೩೮ಕೋಟಿ ರೂ. ಆಗುತ್ತದೆ. ಕಳೆದ ಜನವರಿ ೩೦ರೊಳಗೆ ಕೇವಲ ೧೭ ಕೋಟಿ ರೂ. ಮಾತ್ರ ಕಬ್ಬು ಬೆಳೆದ ರೈತರಿಗೆ ಪಾವತಿಸಿದ್ದು, ಉಳಿದ ೨೧ಕೋ ಟಿ ರೂ. ಬಾಕಿಯನ್ನು ಪಾವತಿಸದೇ ಸತಾಯಿಸುತ್ತಿದ್ದು, ರೈತರ ಸಾಲ ಮಾಡಿ ಕಬ್ಬು ಬೆಳೆದು ಕಾರ್ಖಾನೆಗೆ ಕಬ್ಬು ಪೂರೈಸಿ ಕೈ ಕೈ ಹೊಸಕಿಕೊಳ್ಳವಂತೆ ಆಗಿದೆ. ಕಾರ್ಖಾನೆಯು ಈ ಮೊಂಡಾಟ ಬಿಟ್ಟು ಕೂಡಲೇ ಹಣ ಪಾವತಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಪ್ರವೀಣ ಕುಮಾರ ಮಾಲಪಾಟಿ, ಡಿವೈಎಸ್‌ಪಿ ಡಿ.ಡಿ.ಮಾಳಗಿ ಆಗಮಿಸಿ ರೈತರು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯವರ ಜೊತೆ ಚರ್ಚಿಸಿದರು. ರೈತರು ಬರವಣಿಗೆಯ ಮೂಲಕ ಕಾರ್ಖಾನೆಯ ಆಡಳಿತ ಮಂಡಳಿಯು ಕಬ್ಬಿನ ಹಣವನ್ನು ಪಾವತಿ ಮಾಡುತ್ತೇವೆ ಎಂದು ಬರೆದುಕೊಡಬೇಕೆಂದು ಪಟ್ಟು ಹಿಡಿದರು. ಕಾರ್ಖಾನೆ ಆಡಳಿತ ಮಂಡಳಿಯು ಕಾರ್ಖಾನೆಯ ಮಾಲೀಕರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಪ್ರಕಟಿಸುವುದಾಗಿ ಹೇಳಿದರು. ರೈತರು ಮುಂದಿನ ಹೋರಾಟ ರೂಪಿಸಲು ತೀರ್ಮಾನಿಸಿ ಮುಷ್ಕರ ಹಿಂತೆಗೆದುಕೊಂಡರು.
ಈ ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ಮಾಜಿ ಅಧ್ಯಕ್ಷ ಕಿಚಡಿ ಲಕ್ಷ್ಮಣ, ತಾರಿಹಳ್ಳಿ ಹುಲುಗಜ್ಜಪ್ಪ, ರೈತ ಮುಖಂಡರಾದ ಜಿ.ಕೆ. ಹನುಮಂತಪ್ಪ, ಬೆಳಗೋಡ್ ರುದ್ರಪ್ಪ, ಬಿ.ನಾಗರಾಜ ಮತ್ತಿತರರು ವಹಿಸಿದ್ದರು. ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿದ್ದರು.
0 comments:
Post a Comment