ದೇಶದ ಮಕ್ಕಳನ್ನು ಕಾಡುವ ೭ ಪ್ರಾಣಘಾತುಕ ರೋಗಗಳ ನಿರ್ಮೂಲನೆಗೆ ೦೨ ವರ್ಷದೊಳಗಿನ ಮಕ್ಕಳಿಗೆ ಮೇ. ೦೮ ರಿಂದ ೧೬ ರವರೆಗೆ ಎರಡನೆ ಹಂತದ ’ಮಿಷನ್ ಇಂದ್ರಧನುಷ್’ ವಿಶೇಷ ಲಸಿಕಾ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ೦೨ ವರ್ಷದೊಳಗಿನ ೪೮೪೭ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಹೇಳಿದ್ದಾರೆ.
ಭಾರತ ದೇಶವನ್ನು ಈಗಾಗಲೆ ಪೋಲಿಯೋ ಮುಕ್ತ ರಾಷ್ಟ್ರವನ್ನಾಗಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಗಳ ನಡುವೆಯೂ, ಹುಟ್ಟಿನಿಂದ ಮೊದಲ ವರ್ಷದಲ್ಲಿ ಪಡೆಯಬೇಕಾದ ಸಂಪೂರ್ಣ ಲಸಿಕೆಗಳನ್ನು ಶೇ. ೬೫ ರಷ್ಟು ಮಕ್ಕಳು ಮಾತ್ರ ಪಡೆಯುತ್ತಿದ್ದಾರೆ. ಲಸಿಕೆಗಳನ್ನು ಪಡೆಯದ ಹಾಗೂ ಪೂರ್ಣಗೊಳಿಸದೇ ಬಿಟ್ಟುಹೋದ ಮಕ್ಕಳಲ್ಲಿ ಶೇ. ೫೦ ರಷ್ಟು ಮಕ್ಕಳನ್ನು ಹೊಂದಿರುವ ದೇಶದ ೨೦೧ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯೂ ಒಂದು. ಜಿಲ್ಲೆಯಲ್ಲಿ ಶೇ. ೬೫ ರಿಂದ ೭೦ ರಷ್ಟು ಮಕ್ಕಳು ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ. ಲಸಿಕೆ ವಂಚಿತರಾದ ೦-೨ ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರನ್ನು ಗುರಿಯಾಗಿಸಿಕೊಂಡು, ಅವರಿಗೆ ಸಂಪೂರ್ಣ ಲಸಿಕೆ ಪಡೆಯದ ಮಕ್ಕಳಿಗೆ ಲಸಿಕೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಇಂದ್ರಧನುಷ್ ಅಭಿಯಾನವನ್ನು ಕಳೆದ ತಿಂಗಳು ಪ್ರಾರಂಭಿಸಿತ್ತು. ಮಕ್ಕಳ ಪ್ರಾಣಕ್ಕೆ ಸಂಚಕಾರ ತರುವ ಗಂಟಲು ಮಾರಿ, ಪೋಲಿಯೋ, ಮೆದುಳು ಜ್ವರ, ನಾಯಿಕೆಮ್ಮು, ದಡಾರ ಮತ್ತು ಟೆಟ್ಯಾನಸ್ ಮತ್ತು ಹೆಪಟೈಟಸ್ ರೋಗಗಳನ್ನು ತಡೆಗಟ್ಟಲು ಇದೀಗ ಎರಡನೆ ಹಂತದ ಮಿಷನ್ ಇಂದ್ರಧನುಷ್ ವಿಶೇಷ ಲಸಿಕಾ ಕಾರ್ಯಕ್ರಮವನ್ನು ಮೇ. ೦೮ ರಿಂದ ೧೬ ರವರೆಗೆ ಒಂಭತ್ತು ದಿನಗಳ ಕಾಲ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ೩೪೫ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪೋಲಿಯೋ ಹೈರಿಸ್ಕ್ ಪ್ರದೇಶ, ಸಣ್ಣ-ಪುಟ್ಟ ಗ್ರಾಮಗಳನ್ನೂ ಸಹ ತಲುಪುವಂತೆ ಮಾಡುವ ನಿಟ್ಟಿನಲ್ಲಿ ದ್ವಿ-ಚಕ್ರ ವಾಹನಗಳನ್ನು ಸಹ ಬಳಸಿ, ನಿಗದಿತ ಗುರಿ ತಲುಪುವ ಉದ್ದೇಶ ಹೊಂದಲಾಗಿದೆ. ಈ ವಿಶೇಷ ಲಸಿಕಾ ಕಾರ್ಯಕ್ರಮದಡಿ ೦೨ ವರ್ಷದೊಳಗಿನ ಮಕ್ಕಳಿಗೆ ಮಾರಕ ರೋಗಗಳನ್ನು ತಡೆಗಟ್ಟಬಹುದಾದ ಲಸಿಕೆಯನ್ನು ಹಾಕಲಾಗುವುದು. ಜಿಲ್ಲೆಯಲ್ಲಿ ೮೦೭ ಗರ್ಭಿಣಿ ಮಹಿಳೆಯರು ಹಾಗೂ ೦-೨ ವರ್ಷದ ೪೮೪೭ ಮಕ್ಕಳಿಗೆ ಅಭಿಯಾನದ ಲಾಭ ಕಲ್ಪಿಸಲು ಗುರಿ ಹೊಂದಲಾಗಿದೆ. ಇದಕ್ಕಾಗಿ ಒಟ್ಟು ೩೪೫ ಲಸಿಕಾ ಕೇಂದ್ರಗಳಿದ್ದು, ೬೧- ಸಂಚಾರಿ ತಂಡಗಳನ್ನು ರಚಿಸಲಾಗಿದೆ. ಎಲ್ಲ ಅರ್ಹ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುವಂತಾಗಲು ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment