PLEASE LOGIN TO KANNADANET.COM FOR REGULAR NEWS-UPDATES


ಹೊಸಪೇಟೆ: ಇತ್ತೀಚಿನ ದಶಕಗಳಲ್ಲಿ ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಬೆಳದಿದ್ದು, ಈಗ ಇದು ಭಾರತದ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ ಎಂದು ಹಿರಿಯ ಇತಿಹಾಸ ವಿದ್ವಾಂಸ ಪ್ರೊ.ಜಮುನ ಹೇಳಿದರು.
ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ದೂರಶಿಕ್ಷಣ ನಿರ್ದೇಶನಾಲಯದ ೨೦೧೪-೧೫ನೇ ಸಾಲಿನ ಎಂ.ಎ.ಚರಿತ್ರೆ ಪ್ರಥಮ ಮತ್ತು ಅಂತಿಮ ವರ್ಷದ ಸಂಪರ್ಕ ತರಗತಿಗಳ ಉದ್ಘಾಟಿಸಿ ಮಾತನಾಡಿದ ಅವರು,  ದೇಶದಲ್ಲಿ ಸುಮಾರು ೪೫೦ ಮಿಲಿಯನ್ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ೨೦೨೧ರ ಹೊತ್ತಿಗೆ ಈ ಸಂಖ್ಯೆಯಲ್ಲಿ ಶೇ.೧೫ರಷ್ಟು ಹೆಚ್ಚಾಗಲಿದೆ ಎಂದರು. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಗ್ಲೋಬಲೈಜೇಶನ್‌ನಿಂದ ಶಿಕ್ಷಣ ಕ್ಷೇತ್ರವು ಬದಲಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಶಿಕ್ಷಣಕ್ಷೇತ್ರ ಹಲವಾರು ಸವಾಲು, ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ಆದರೆ ೨೦ನೇ ಶತಮಾನದ ದೊಡ್ಡ ಸವಾಲು ಜಾಗತೀಕರಣವಾಗಿದೆ. ಈ ಯುಗದಲ್ಲಿ ಏಕಾಂಗಿಯಾಗಿರಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ನಾವು ನೋಡುತ್ತಿರುವ ಮಾಹಿತಿ ಕ್ರಾಂತಿಗೆ ಗಡಿ ಎನ್ನುವುದೇ ಇಲ್ಲವಾಗಿದೆ ಎಂದರು. ಇಂದಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸರ್ಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಮೌಲ್ಯಗಳ ವ್ಯತ್ಯಾಸ ಕಂಡುಬರುತ್ತದೆ. ಕೇವಲ ಸರ್ಕಾರಿ ಕಾಲೇಜುಗಳಲ್ಲಿ ಮಾತ್ರ ಸಮಾಜ ವಿಜ್ಞಾನಗಳ ಶಿಕ್ಷಣವನ್ನು ವಿದ್ಯಾರ್ಥಿಗಳು ಅದರಲ್ಲೂ ತಳಸಮುದಾಯ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜ ವಿಜ್ಞಾನಗಳ ಕೋರ್ಸ್‌ಗಳು ಬಂದಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಮಾತನಾಡಿ, ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣವು ಯಾವುದೇ ಲಾಭದ ಉದ್ದೇಶಕ್ಕಾಗಿ ಕೋರ್ಸ್‌ಗಳನ್ನು ನಡೆಸದೆ ಗುಣಮಟ್ಟದ ಶಿಕ್ಷಣ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಲಭಿಸುವಂತೆ ಮಾಡಿದ್ದೇವೆ. ಹಾಗೂ ಕನ್ನಡ ವಿಶ್ವವಿದ್ಯಾಲಯದ ಬೋಧನಾ ಸಾಮಗ್ರಿಗಳು ವಿಶೇಷ ಗುಣಮಟ್ಟವನ್ನು ಹೊಂದಿದ್ದು ಕೇವಲ ಎಂ.ಎ. ತರಗತಿಗಳಿಗೆ ಸೀಮಿತವಾಗದೆ ಕೆಎಎಸ್ ಹಾಗೂ ಐಎಎಸ್ ಅಧ್ಯಯನಕ್ಕೂ  ಪೂರಕವಾಗಿವೆ, ಈ ಪಠ್ಯಗಳ ಸದೋಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದರು.ಸಂಪರ್ಕ ತರಗತಿಗಳ ಸಂಚಾಲಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಡಾ.ವಿರೂಪಾಕ್ಷಿ ಪೂಜಾರಹಳ್ಳಿ ಸ್ವಾಗತಿಸಿದರು. ಡಾ.ಮೋಹನ್‌ಕೃಷ್ಣ ರೈ ಸಭೆಯಲ್ಲಿ ಹಾಜರಿದ್ದರು.  ಸಹಾಯಕ ಕುಲಸಚಿವ ಎಂ.ಎಂ.ಶಿವಪ್ರಕಾಶ ನಿರೂಪಿಸಿ, ವಂದಿಸಿದರು.

Advertisement

0 comments:

Post a Comment

 
Top