PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ದಿ ೧೨-೦೪-೨೦೧೫ ರ ರಾತ್ರಿ ಸುರಿದ ಭಾರಿ ಆಣೆಕಲ್ಲು ಮಳೆಯಿಂದ ಗಂಗಾವತಿ ತಾಲೂಕಿನ ಆರು ಹೋಬಳಿಗೆ ಸೇರಿದ ಭೂಮಿಯಲ್ಲಿ ಕಟಾವಿಗೆ ಬಂದ ಬತ್ತದ ಬೆಳೆ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ಎಕರೆಗೆ ರೂ. ೩೫ ರಿಂದ ೪೦ ಸಾವಿರ ನಷ್ಟಕ್ಕೊಳಗಾಗಿದ್ದಾರೆ. ಬೆಳೆ ನಷ್ಟವನ್ನು ಕೇಂದ್ರ ಸರಕಾರ ಅರ್ಧ ರಾಜ್ಯ ಸರಕಾರ ಅರ್ಧ ಕೂಡಿಸಿ ಸಂಪೂರ್ಣ ಪರಿಹಾರವನ್ನು ರೈತರಿಗೆ ನೀಡಬೇಕೆಂದು ಸಿಪಿಐಎಂಎಲ್ ಪಕ್ಷ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಒತ್ತಾಯಿಸಿದೆ
ಹಿಂಗಾರು ಬೆಳೆಗೆ ರೈತರು ಸಹಕಾರಿ ಮತ್ತು ಸರಕಾರಿ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಮಾಡಿದ ಬೆಳೆ ಸಾಲವನ್ನು ಪೂರ್ತಿಯಾಗಿ ಮನ್ನಾಮಾಡಬೇಕು. ರೈತರು ಈಗಾಗಲೇ ಪೂರ್ತಿಯಾಗಿ ಬಂಡವಾಳ ಹೂಡಿ ಫಸಲು ಕೋಯ್ಯುವ ಹಂತದಲ್ಲಿರುವ ಕಾರಣ ಎಕರೆಗೆ ೪೦ ಸಾವಿರ ಬೆಳೆ ಪರಿಹಾರ ನಿಗದಿಪಡಿಸಿ ಕೇಂದ್ರ ಸರಕಾರ ಇಪ್ಪತ್ತು ಸಾವಿರ, ರಾಜ್ಯ ಸರಕಾರ ಇಪ್ಪತ್ತು ಸಾವಿರ ಪರಿಹಾರವನ್ನಾಗಿ ನೀಡಿ ರೈತರಿಗೆ ಮತ್ತೆ ಬದುಕಿ ಕೃಷಿ ಮಾಡಲು ಅನುಕೂಲ ಮಾಡಿಕೊಡಬೇಕಾಗಿ ಸಿಪಿಐಎಂಎಲ್ ಪಕ್ಷ ಒತ್ತಾಯಿಸಿದೆ.
ಗಂಗಾವತಿ ತಾಲೂಕಿನಲ್ಲಿ ಭಾಗಶಃ ೬೦% ರಷ್ಟು ಗುತ್ತಿಗೆ ರೈತರು ಭೂಮಿಯನ್ನು ಸಾಗು ಮಾಡುತ್ತಿದ್ದಾರೆ. ಸರಕಾರ ಗುತ್ತಿಗೆ ರೈತರ ಬಗ್ಗೆ ಮಾಹಿತಿ ಪಡೆದು ಪರಿಹಾರವನ್ನು ಗುತ್ತಿಗೆ ರೈತರಿಗೆ ನೇರವಾಗಿ ನೀಡಬೇಕು. ಸ್ವಂತ ಮಾಲೀಕತ್ವದ ಭೂಮಿಯನ್ನು ಸ್ವತಃ ಸಾಗು ಮಾಡುವವರಿಗೆ ಮಾತ್ರ ಪರಿಹಾರ ನೀಡಬೇಕು. ಭೂಮಾಲೀಕರ ಮತ್ತು ವ್ಯಾಪಾರಸ್ಥರ ಒಡೆತನದಲ್ಲಿರುವ ಭೂಮಿಯನ್ನು ಬಡ ರೈತರು, ದಲಿತರು, ಸಾಗುವಳಿಯನ್ನು ಮಾಡುತ್ತಿದ್ದಾರೆ. ಗುತ್ತಿಗೆ ರೈತರನ್ನು ಗುರ್ತಿಸಿ ಅಥವಾ ಸರ್ವೆ ಮಾಡಿ ಸರಕಾರ ಪರಿಹಾರವನ್ನು ನೇರವಾಗಿ ಗುತ್ತಿಗೆ ರೈತರಿಗೆ ನೀಡಬೇಕು. ಇಲ್ಲದಿದ್ದಲ್ಲಿ ಸಿಪಿಐಎಂಎಲ್ ಪಕ್ಷದ ಅಂಗಸಂಘಟನೆಯಾದ ಅಖಿಲ ಭಾರತ ಕೃಷಿ ಕಾರ್ಮಿಕ ಸಂಘ ಉಗ್ರ ಹೋರಾಟ ಮಾಡುತ್ತದೆ ಎಂದು ಅಯ್ಯಾಲಾ ಜಿಲ್ಲಾಧ್ಯಕ್ಷ ಎಂ.ಏಸಪ್ಪ ಮತ್ತು ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಭಾರದ್ವಾಜ್   ಸರಕಾರವನ್ನು ಎಚ್ಚರಿಸಿದ್ದಾರೆ.

Advertisement

0 comments:

Post a Comment

 
Top