ಕೊಪ್ಪಳ ಮಾ. ೨೬ : ಬೇಸಿಗೆ ಜೋಳದ ಬೆಳೆಯಲ್ಲಿ ರೋಗ ನಿರ್ವಹಣೆ ಹಾಗೂ ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ರೈತರಿಗೆ ಸಲಹೆಗಳನ್ನು ನೀಡಿದೆ.
ಜನವರಿ ತಿಂಗಳ ಮಧ್ಯದಿಂದ ಜೂನ್ ಕೊನೆವರೆಗೂ ಜೋಳ ಬೆಳೆಗೆ ಸುಳಿ ನೊಣದ ಬಾಧೆ ಕಡಿಮೆ ಇರುತ್ತದೆ. ಬಿತ್ತನೆ ತಡವಾದಲ್ಲಿ ಎಕರೆಗೆ ಒಂದು ಕಿ. ಗ್ರಾಂ ಹೆಚ್ಚು ಬೀಜವನ್ನು ಬಿತ್ತನೆಗೆ ಬಳಸಬೇಕು. ಸುಳಿ ಬಿದ್ದ ಸಸಿಗಳನ್ನು ಕಿತ್ತು ಎಕರೆವಾರು ಸಸಿಗಳ ಸಂಖ್ಯೆ ಕಾಪಾಡಬೇಕು. ಪ್ರತಿ ಕಿ. ಗ್ರಾಂ ಬೀಜಕ್ಕೆ ೫ ಮಿ. ಲೀ ಕ್ಲೋರ್‌ಪೈರಿಫಾಸ್ ೨೦ ಇಸಿ ನೀರಿನೊಂದಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡಿ ನೆರಳಿನಲ್ಲಿ ಒಣಗಿಸಿ ಬಿತ್ತಬೇಕು. ಅಥವಾ ಜುಲೈನಿಂದ ಫೆಬ್ರುವರಿವರೆಗೆ ಬಿತ್ತಿದ ಬೆಳೆಗೆ ಹೆಕ್ಟೇರಿಗೆ ೩೦ ಕಿ.ಗ್ರಾಂ ಶೇ. ೩ ರ ಕಾರ್ಬೋ ಫ್ಯುರಾನ್ ಅಥವಾ ೪೦ ಕಿ. ಗ್ರಾಂ ಶೇ. ೧೦ ರ ಫೋರೇಟ್ ಹರಳನ್ನು ಬಿತ್ತನೆಗೆ ಮೊದಲು ಸಾಲುಗಳಲ್ಲಿ ಹಾಕಿ ಬಿತ್ತನೆ ಮಾಡಬೇಕು. ಸುಳಿ ತಿಗಣೆಗಳ ನಿಯಂತ್ರಣಕ್ಕಾಗಿ ಪ್ರತಿ ಕಿ ಗ್ರಾಂ ಬೀಜಕ್ಕೆ ೨ ಗ್ರಾಂ ಇಮಿಡಾಕ್ಲೋಪ್ರಿಡ್ ೭೦ ಡಬ್ಲುಎಸ್ ದಿಂದ ಬೀಜೋಪಚಾರ ಮಾಡಬೇಕು. ಅಥವಾ ಬಿತ್ತನೆ ಮಾಡಿದ ೨೫ ದಿನಗಳ ನಂತರ ೨ ಮಿ. ಲೀ ಸೈಪರಮೆತ್ರಿನ್ ೧೦ ಇಸಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಹೆಕ್ಟೇರಿಗೆ ೩೭೫ ಲೀ. ಸಿಂಪರಣಾ ದ್ರಾವಣ ಬೇಕಾಗುತ್ತದೆ.
ಕಾಂಡಕೊರೆಯುವ ಹುಳುಗಳು ಕಂಡುಬಂದರೆ ಪ್ರತೀ ಹೆಕ್ಟೇರಿಗೆ ೭.೫ ಕಿ. ಗ್ರಾಂ ನಂತೆ ಕಾರ್ಬೋಫ್ಯುರಾನ್ ಶೇ. ೩ ರ ಹರಳು ಅಥವಾ ಕಾರ್ಬರಿಲ್ ಶೇ. ೪ ಹರಳು ಅಥವಾ ಲಿಂಡೇನ್ ಶೇ. ೧ರ ಹರಳನ್ನು ಸುಳಿಯಲ್ಲಿ ಹಾಕಬೇಕು. ಕಳಿತ ಪಾಷಾಣವನ್ನು ಹೆಕ್ಟೇರಿಗೆ ೫೦ ಕಿ. ಗ್ರಾಂ ದಷ್ಟು ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಸೈನಿಕ (ಲದ್ದಿ ಹುಳು) ಹುಳುಗಳಿಗೆ ಎರಚಬೇಕು. ಪಾಷಾಣ ತಯಾರಿಸುವ ವಿಧಾನ: ೪ ಕಿ. ಗ್ರಾಂ ಬೆಲ್ಲ ೨೫೦ ಮಿ.ಲೀ ಮೊನೋಕ್ರೋಟೊಫಾಸ್ ೩೬ ಎಸ್ ಎಲ್ ೫-೮ ಲೀಟರ್ ನೀರು ಹಾಗೂ ೫೦ ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನೊಂದಿಗೆ ಬೆರೆಸಿ. ನಂತರ ೪೮ ಗಂಟೆಗಳ ಕಾಲ ಗೋಣಿ ಚೀಲಗಳಲ್ಲಿ ಕಳಿಯಲು ಇಡಬೇಕು. ಹೇನುಗಳಿಗಾಗಿ ಪ್ರತಿ ಲೀಟರ್ ನೀರಿಗೆ ಶೇ. ೫ರ ಹುಲುಗಲ ಅಥವಾ ಕರಿಲಕ್ಕಿ ಸೊಪ್ಪಿನ ಕಷಾಯ ಅಥವಾ ಬೇವಿನ ಎಲೆ ಕಷಾಯ ದ್ರಾವಣವನ್ನು ಸಿಂಪಡಿಸಬೇಕು. ಹೆಕ್ಟೇರಿಗೆ ೩೫೦ ಲೀ ಸಿಂಪರಣಾ ದ್ರಾವಣ ಬಳಸಬೇಕು. ಜೇಡರ ನುಸಿಗಾಗಿ ೨.೫ ಮಿ. ಲೀ ಡೈಕೊಫಾಲ್ ೧೮.೫ ಇಸಿ. ಅಥವಾ ೩ ಮಿ. ಲೀ ಫಾರ್ಮೊಥಿಯಾನ್ ೨೫ ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಕ್ವಿನಾಲ್‌ಫಾಸ್ ಶೇ. ೧.೫ ರ ಪುಡಿಯನ್ನು ಮಿಡತೆ ಮರಿಗಳು ಕಂಡ ತಕ್ಷಣ ಹೆಕ್ಟೇರಿಗೆ ೨೫-೩೦ ಕಿ. ಗ್ರಾಂ ಧೂಳೀಕರಿಸಬೇಕು. ೨ ಗ್ರಾಂ ಕಾರ್ಬಾರಿಲ್ ಶೇ. ೫೦ ಅಥವಾ ೨ ಮಿ. ಲೀ ಮೆಲಾಥಿಯಾನ್ ೫೦ ಇಸಿ. ರಷ್ಟು ತೆನೆಗಳು ಹೊರ ಬಂದಾಗ ಸಿಂಪಡಿಸಬೇಕು. ಹೆಕ್ಟರಿಗೆ ೬೭೦ ಲೀ. ಸಿಂಪರಣಾ ದ್ರಾವಣ ಬಳಸಿ ಇದೇ ಸಿಂಪರಣೆಯನ್ನು ಮತ್ತೇ ೪-೬ ದಿನಗಳಲ್ಲಿ ಕೈಗೊಳ್ಳಬೇಕು. ಅಥವಾ ತೆನೆಗಳ ಮೇಲೆ ಹೆಕ್ಟೇರಿಗೆ ೨೦ ಕಿ. ಗ್ರಾಂ ಮೆಲಾಥಿಯಾನ್ ಶೇ. ೫ರ ಪುಡಿ ಅಥವಾ ೨೦ ಕಿ. ಗ್ರಾಂ ಕಾರ್ಬಾರಿಲ್ ಶೇ. ೧೦ ರ ಪುಡಿ ಅಥವಾ ಫೋಸಲೋನ್ ಶೇ. ೪ರ ಪುಡಿಯನ್ನು ತೆನೆ ತಿಗಣೆ ಹಾಗೂ ಬೆಂಕಿಹುಳು ಕಾಣಿಸಿಕೊಂಡಾಗ ಧೂಳೀಕರಿಸಬೇಕು. ಪುಡಿಯನ್ನು ಮತ್ತೊಮ್ಮೆ ೪-೬ ದಿನಗಳ ಅಂತರದಲ್ಲಿ ಧೂಳೀಕರಿಸಬೇಕು.
ಕಾಡಿಗೆ ರೋಗಕ್ಕೆ ಒಂದು ಕಿ. ಗ್ರಾಂ ಬೀಜಕ್ಕೆ ೨ ಗ್ರಾಂ. ಗಂಧಕ ಅಥವಾ ಕ್ಯಾಪ್ಟನ್ ೮೦ ಡಬ್ಯೂಪಿ ಅಥವಾ ಥೈರಾಮ್ ೭೫ ಡಬ್ಯೂಪಿ ಲೇಪನ ಮಾಡಿ ಬಿತ್ತನೆ ಮಾಡಬೇಕು. ಕೊಯ್ಲುಮಾಡುವ ಮೊದಲು ಕಾಡಿಗೆ ರೋಗ ಪೀಡಿತ ತೆನೆಗಳನ್ನು ಗುರುತಿಸಿ ಆಯ್ದು ಸುಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು. ಕೆಳಗಿನ ಎಲೆಗಳಲ್ಲಿ ತುಕ್ಕು ರೋಗ ಕಂಡ ಕೂಡಲೇ ಮ್ಯಾಂಕೊಜೆಬ್ ೭೫ ಡಬ್ಯೂಪಿ ೨ ಗ್ರಾಂ ೧ ಲೀಟರ್ ನೀರಿನಲ್ಲಿ ಬೆರೆಸಿ ಒಂದು ವಾರದ ಅಂತರದಲ್ಲಿ ಮೂರು ಸಲ ಸಿಂಪರಣೆ ಮಾಡುವುದರಿಂದ ರೋಗ ಹರಡುವುದನ್ನು ತಡೆಯಬಹುದು. ೩ ಗ್ರಾಂ ಮೆಟಲಾಕ್ಸಿಲ್ ಎಮ್‌ಝಡ್ ೭೨ ಡಬ್ಲ್ಯುಪಿ ಶಿಲೀಂದ್ರನಾಶಕವನ್ನು ೧ ಕಿ. ಗ್ರಾಂ ಬೀಜಕ್ಕೆ ಲೇಪಿಸಿ ಬಿತ್ತುವುದರಿಂದ ಕೇದಿಗೆ ರೋಗವು ನಿಯಂತ್ರಣವಾಗುವುದು.
ರೋಗ ನಿರೋಧಕ ತಳಿ ಡಿಎಸ್‌ವಿ-೪ ನ್ನು ಉಪಯೋಗಿಸುವುದರಿಂದ ಕಾಳಿನ ಕಪ್ಪು ಬೂಷ್ಟಿನ ರೋಗ ಮತ್ತು ಕಪ್ಪು ಕಾಂಡಕೊಳೆ ನಿಯಂತ್ರಿಸಬಹುದು. ಪ್ರತಿ ಕಿ. ಗ್ರಾಂ ಬೀಜಕ್ಕೆ ೪ ಗ್ರಾಂ ಟ್ರೈಕೋಡರ್ಮದಿಂದ ಬೀಜೋಪಚಾರ ಮಾಡಬೇಕು ಈ ಉಪಚಾರವನ್ನು ಮಾಡಿದಲ್ಲಿ ಶಿಫಾರಸು ಮಾಡಿದ ಕೊಟ್ಟಿಗೆ ಗೊಬ್ಬರವನ್ನು ಹಾಕುವದು ಅವಶ್ಯ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಷಯತಜ್ಞ ರೋಹಿತ್ ಕೆ. ಎ (೯೮೪೫೧೯೪೩೨೮), ಎಮ್. ಬಿ ಪಾಟೀಲ (೯೪೪೮೬೯೦೬೮೪) ಮತ್ತು ಸುಧಾಕರ್ ಟಿ (೯೯೧೬೧೮೦೭೫೬) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment