PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ, ಮಾ. ೧೫: ಅಸಂಘಟಿತರಾಗಿರುವ ಸಾಂಸ್ಕೃತಿಕ ಕಲಾವಿದರ ಒಕ್ಕೂಟ ರಚನೆ ಅಗತ್ಯವಾಗಿದೆ ಎಂದು ಹಿರಿಯ ಸಾಹಿತಿ ಎಚ್. ಎಸ್. ಪಾಟೀಲ ಅವರು ಹೇಳಿದರು.
ನಗರದ ಸಾಹಿತ್ಯಭವದ ಹತ್ತಿರ ಇರುವ ಸಿರಿಗನ್ನಡ ಪುಸ್ತಕ ಮಳಿಗೆ ಆವರಣದಲ್ಲಿ ಇಂದು ಏರ್ಪಡಿಸಲಾಗಿದ್ದ ಜಿಲ್ಲೆಯ ಎಲ್ಲ ಪ್ರಕಾರದ ಕಲಾವಿದರ ಒಕ್ಕೂಟ ರಚನಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಕಲಾವಿದರನ್ನು ಒಂದೇ ವೇದಿಕೆಗೆ ತರುವುದರ ಮೂಲಕ ಸರಕಾರದ ಸಹಾಯ, ಸೌಲಭ್ಯ ಪಡೆದುಕೊಳ್ಳುವ ಮೂಲಕ ಕಲಾವಿದರ ಬಾಳು ಹಸನಾಗಿಸುವುದರ ಜೊತೆಗೆ ಕಲೆಯ ಬೆಳವಣಿಗೆಗೆ ಒಕ್ಕೂಟ ರಚನೆ ಅನುಕೂಲವಾಗಲಿದೆ. ಅದರಲ್ಲಿ ಎಲ್ಲ ಕಲಾವಿದರು ಸಕ್ರೀಯವಾಗಿ ತೊಡಗಿಸಿಕೊಳ್ಳುವ ಮೂಲಕ ಸಂಘಟನಾತ್ಮಕವಾಗಿ ಕಲೆ ಬೆಳವಣಿಗೆ ಹಾಗೂ ಉಳಿವಿಗಾಗಿ ಶ್ರಮಿಸುವ ಅಗತ್ಯವಿದೆ ಎಂದು ಎಚ್. ಎಸ್. ಪಾಟೀಲ ಅವರು ಅಭಿಪ್ರಾಯಪಟ್ಟರು.
ಪ್ರಾರಂಭದಲ್ಲಿ ಕರ್ನಾಟಕ ಜಾನಪದ ಪರಿತ್ ಜಿಲ್ಲಾ ಅಧ್ಯಕ್ಷ ಬಸವರಾಜ ಆಕಳವಾಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಸ್ಕೃತಿಕ ಕಲಾವಿದರ ಒಕ್ಕೂಟ ರಚನೆ ಕುರಿತ ಅಗತ್ಯತೆ ಹಾಗೂ ಆ ಕುರಿತು ರೂಪ-ರೇಷೆಗಳನ್ನು ವಿವರಿಸಿದರು.
ಸಭೆಯಲ್ಲಿ ಡಾ. ಸತ್ಯನಾರಾಯಣರಾವ್, ರೇವಣಪ್ಪ ಹಿರೇಕುರುಬರ, ಶಂಕ್ರಪ್ಪ ಹೊರಪೇಟಿ, ಶರಣಪ್ಪ ದಾನಕೈ, ಸಿದ್ಲಿಂಗಯ್ಯಸ್ವಾಮಿ ಅಳವಂಡಿ, ಸುಭಾಷ್ ಕಲಾಲ, ರಂಗನಾಥ ಕೋಳೂರ ಮುಂತಾದವರು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಜನಪದ ಕಲಾವಿದರು, ಬೀದಿನಾಟಕ ಕಲಾವಿದರು, ಬಯಲಾಟ ಕಲಾವಿದರು, ಸುಗಮ ಸಂಗೀತ, ರಂಗಭೂಮಿ, ಕರಡಿ ಮಜಲು, ಭಜನಾ ತಂಡಗಳ ಕಲಾವಿದರು ಭಾಗವಹಿಸಿದ್ದರು. ಪತ್ರಕರ್ತ ಹಾಗೂ ಜನಪದ ಕಲಾವಿದ ವೈ. ಬಿ. ಜೂಡಿ ಅವರು ಸ್ವಾಗತಿಸಿದರು. ವೀರಯ್ಯ ಅಳವಂಡಿ ವಂದಿಸಿದರು.

Advertisement

0 comments:

Post a Comment

 
Top