ಬೆಂಗಳೂರು, ಮಾರ್ಚ್ 25, : 2012 ಹಾಗೂ 2013 ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ, ಮೊಹರೆ ಹಣಮಂತರಾಯ, ಅಭಿವೃದ್ಧಿ ಹಾಗೂ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಮಾರ್ಚ್ 27 ರ ಶುಕ್ರವಾರ ಸಂಜೆ 6-00 ಗಂಟೆಗೆ ಬೆಂಗಳೂರು ವಾರ್ತಾ ಸೌಧದ ಸುಲೋಚನಾ ಸಭಾಂಗಣದಲ್ಲಿ ಪ್ರದಾನ ಮಾಡುವ ಸಮಾರಂಭ ನಡೆಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಮೂಲ ಸೌಲಭ್ಯ ಅಭಿವೃದ್ಧಿ, ಹಜ್ ಹಾಗೂ ವಾರ್ತಾ ಖಾತೆ ರಾಜ್ಯ ಸಚಿವ ಆರ್. ರೋಷನ್ ಬೇಗ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕಸಭಾ ಸದಸ್ಯ ಪಿ. ಸಿ. ಮೋಹನ್, ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಹಾಗೂ 2012, 2013 ನೇ ಸಾಲಿನ ಪತ್ರಿಕೋದ್ಯಮ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಅರಳಿ ನಾಗರಾಜ್ ಮತ್ತು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಎ. ಪೊನ್ನಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
2012 ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯು ಎನ್. ಅರ್ಜುನದೇವ ಅವರಿಗೆ 2013 ನೇ ಸಾಲಿನ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯು ಪಿ. ಎಸ್. ಈಶ್ವರ ಭಟ್ (ಈಶ್ವರ ದೈತೋಟ) ಅವರಿಗೆ ಪ್ರದಾನವಾಗಲಿದೆ. 2012 ನೇ ಸಾಲಿನ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ರಾಘವೇಂದ್ರ ಅರವಿಂದರಾವ್ ಜೋಷಿ, 2013 ನೇ ಸಾಲಿನ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಕೆ.ಬಿ. ಗಣಪತಿ, 2012 ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಅಂಶಿ ಪ್ರಸನ್ನಕುಮಾರ್, 2013 ನೇ ಸಾಲಿನ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಸದಾನಂದ ಪೆರ್ಲ ಅವರಿಗೆ ಪ್ರದಾನ ಮಾಡಲಾಗುವುದು. 2012 ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ಡಾ: ನರೇಂದ್ರ ರೈ, ದೇರ್ಲ ಹಾಗೂ 2013 ನೇ ಸಾಲಿನ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಯನ್ನು ದೀಪಕ್ ಸಾಗರ ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿ ವಿಜೇತರಿಗೆ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು.
0 comments:
Post a Comment