PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಐತಿಹಾಸಿಕ ವಿಜಯನಗರ ಸಾಮ್ರಾಜ್ಯ ವೈಭವವನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ಏ. ೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ, ಉತ್ಸವದ ಉಪಸಮಿತಿಗಳ ಅಧಿಕಾರಿಗಳು, ಉತ್ಸವದ ಸಿದ್ಧತೆಗಳನ್ನು ತ್ವರಿತಗೊಳಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದರು.
  ಆನೆಗೊಂದಿ ಉತ್ಸವ ಆಚರಣೆ ಸಂಬಂಧ ಗಂಗಾವತಿ ತಾಲೂಕು ಆನೆಗೊಂದಿಯ ಸರ್ಕಾರಿ ಶಾಲಾ ಆವರಣದಲ್ಲಿ ಸೋಮವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಆನೆಗೊಂದಿ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ವೇದಿಕೆ, ಸಾಂಸ್ಕೃತಿಕ, ಮೆರವಣಿಗೆ, ಆಹಾರ, ಭದ್ರತೆ, ಆರೋಗ್ಯ, ಸಾರಿಗೆ, ಮಾಧ್ಯಮ ಸೇರಿದಂತೆ ಒಟು ೧೭ ಉಪಸಮಿತಿಗಳನ್ನು ರಚಿಸಲಾಗಿದೆ.   ಉತ್ಸವಕ್ಕಾಗಿ ಈ ಬಾರಿ ಆನೆಗೊಂದಿ ಹೊರವಲಯದಲ್ಲಿ ಮುಖ್ಯ ವೇದಿಕೆ ಹಾಗೂ ಆನೆಗೊಂದಿ ಗ್ರಾಮದ ಶಾಲಾ ಆವರಣದಲ್ಲಿ ಒಂದು ವೇದಿಕೆ ಹೀಗೆ ಒಟ್ಟು ಎರಡು ವೇದಿಕೆಗಳನ್ನು ನಿರ್ಮಿಸಲಾಗುತ್ತಿದೆ.  ಮುಖ್ಯ ವೇದಿಕೆಯ ಬಳಿ ನೆಲವನ್ನು ಸಮತಟ್ಟುಗೊಳಿಸುವುದು, ವೇದಿಕೆ ಕಟ್ಟೆಯನ್ನು ದುರಸ್ತಿಗೊಳಿಸುವುದು, ಮುಖ್ಯ ವೇದಿಕೆ ಹಿಂಭಾಗದ ಬಂಡೆ-ಕಲ್ಲುಗಳಿಗೆ ದೀಪಾಲಂಕಾರ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ತ್ವರಿತಗೊಳಿಸಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಏ. ೧೧ ರಂದು ಆನೆಗೊಂದಿ ಶ್ರೀ ರಂಗನಾಥ ಸ್ವಾಮಿ ದೇವರ ಜಾತ್ರೋತ್ಸವವೂ ಇದೆ. ಅಂದು ಬೆಳಿಗ್ಗೆ ೯ ಗಂಟೆಗೆ ದುರ್ಗಾದೇವಿ ದೇವಸ್ಥಾನದಿಂದ ಮೆರವಣಿಗೆ ಪ್ರಾರಂಭಿಸಲಾಗುವುದು.   ಆನೆಗೊಂದಿ ಪ್ರವೇಶದ್ವಾರ ಹಾಗೂ ರಂಗನಾಥ  ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪುಷ್ಪಾಲಂಕಾರ ಕೈಗೊಳ್ಳಲು ಸಿದ್ಧತೆ ನಡೆಸುವಂತೆ ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.  ಏ. ೧೨ ರಂದು ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲು ಯುವಜನ ಸೇವಾ ಕ್ರೀಡಾಧಿಕಾರಿಗಳಿಗೆ ಸೂಚನೆ ನೀಡಿದರು. ಎರಡೂ ವೇದಿಕೆಗಳ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರ ಆಯ್ಕೆ ಮತ್ತು ಮೆರವಣಿಗೆಗೆ ಕಲಾ ತಂಡಗಳ ಆಯ್ಕೆಯನ್ನು ಶೀಘ್ರ ಪೂರ್ಣಗೊಳಿಸಬೇಕು.  ಸೆಲೆಬ್ರಿಟಿ ಕಲಾವಿದರ ಆಯ್ಕೆಯನ್ನು ಅಪರ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಸಮಾಲೋಚಿಸಿ ನಿರ್ಧರಿಸುವಂತೆ ಜಿ.ಪಂ. ಉಪಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು. ಉತ್ಸವವನ್ನು ಜನೋತ್ಸವವನ್ನಾಗಿಸುವ ನಿಟ್ಟಿನಲ್ಲಿ, ಕ್ರೀಡಾಕೂಟಗಳು, ರಂಗೋಲಿ ಸ್ಪರ್ಧೆ, ವಿಜೃಂಭಣೆಯ ಸಾಂಸ್ಕೃತಿಕ ಕಲಾತಂಡಗಳ ಮೆರವಣಿಗೆ, ವಸ್ತುಪ್ರದರ್ಶನ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಆರ್. ಜನ್ನು ಅವರು ಹೇಳಿದರು.
  ಆನೆಗೊಂದಿ ಉತ್ಸವ ನಿಮಿತ್ಯ ಏ. ೧೧ ಮತ್ತು ೧೨ ರಂದು ಜಿಲ್ಲೆಯ  ಎಲ್ಲ ತಾಲೂಕು ಕೇಂದ್ರಗಳಿಂದ, ಅಲ್ಲದೆ ಸುತ್ತಮುತ್ತಲ ಗ್ರಾಮಗಳಿಂದ ಆನೆಗೊಂದಿಗೆ ವಿಶೇಷ ಬಸ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಈಕರಸಾಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಹಾವೇರಿ   ಅವರಿಗೆ ಸೂಚನೆ ನೀಡಿದರು.   
  ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ,  ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಗಂಗಾವತಿ ತಹಸಿಲ್ದಾರ್ ವೆಂಕನಗೌಡ ಪಾಟೀಲ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Advertisement

0 comments:

Post a Comment

 
Top