PLEASE LOGIN TO KANNADANET.COM FOR REGULAR NEWS-UPDATES

  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಏಪ್ರೀಲ್ ೧೧ ರಿಂದ ಆರಂಭಿಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯದ ಎಲ್ಲಾ ಕುಟುಂಬಗಳಿಂದ ಒಟ್ಟು ೫೫ ಅಂಶಗಳ ಪ್ರಶ್ನಾವಳಿಗೆ ಮಾಹಿತಿಯನ್ನು ಗಣತಿದಾರರು ಸಂಗ್ರಹಿಸಲಿದ್ದು, ನಿಖರ ಹಾಗೂ ನೈಜ ಮಾಹಿತಿಯನ್ನು ಗಣತಿದಾರರಿಗೆ ನೀಡುವ ಮೂಲಕ ಸಹಕರಿಸಬೇಕಾದ ಮಹತ್ವದ ಹೊಣೆಗಾರಿಕೆ ಸಾರ್ವಜನಿಕರ ಮೇಲಿದೆ.
  ಸಮೀಕ್ಷೆ ಪ್ರಶ್ನಾವಳಿಯ ಭಾಗ-೧ ರಲ್ಲಿ ಪ್ರತಿ ಕುಟುಂಬದ ಮುಖ್ಯಸ್ಥ ಹಾಗೂ ಸದಸ್ಯರ ವೈಯಕ್ತಿಕ ವಿವರಗಳನ್ನು  ಹಾಗೂ ಭಾಗ-೨ ರಲ್ಲಿ ಕುಟುಂಬದ ಸಮಗ್ರ ವಿವರಗಳನ್ನು ದಾಖಲಿಸಲಾಗುತ್ತದೆ. 
  ವರ್ತಮಾನದಲ್ಲಿ ಕುಟುಂಬದ ಜವಾಬ್ದಾರಿ ಹೊತ್ತಿರುವ ಮುಖ್ಯಸ್ಥರ ಹಾಗೂ ಆ ಕುಟುಂಬದ ಹೆಸರು ಮುಖ್ಯಸ್ಥರೊಂದಿಗೆ ಸಂಬಂಧ, ಲಿಂಗ, ಧರ್ಮ, ಜಾತಿ ಮತ್ತು ಉಪಜಾತಿ, ಜಾತಿಗೆ ಪರ್ಯಾಯ ಹೆಸರುಗಳಿದ್ದಲ್ಲಿ ಅದನ್ನು ದಾಖಲಿಸಿಕೊಂಡು, ನಂತರ ವಯಸ್ಸು, ಮಾತೃಭಾಷೆ, ಆಧಾರ ಕಾರ್ಡ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಅಂಗವಿಕಲರಿದ್ದಲ್ಲಿ ಅದರ ವಿವರ, ವೈವಾಹಿಕ ಸ್ಥಾನಮಾನ, ವಿವಾಹವಾದ ಸಮಯದ ವಯಸ್ಸು, ಶಾಲೆಗೆ ಸೇರುವ ವಯಸ್ಸು, ಯಾವ ಶಾಲೆ, ವಿದ್ಯಾಭ್ಯಾಸದ ವಿವರ, ಶಾಲೆ ಬಿಟ್ಟಾಗಿನ ತರಗತಿ, ಶಾಲೆ ಬಿಟ್ಟಾಗಿನ ವಯಸ್ಸು, ಶಾಲೆ ಬಿಡಲು ಕಾರಣ, ೧೭ ರಿಂದ ೪೦ ವಯೋಮಿತಿಯಲ್ಲಿರುವವರು ಶಿಕ್ಷಣ ಮುಂದುವರೆಸದಿರಲು ಕಾರಣ, ಅನಕ್ಷರಸ್ಥರಾಗಿದ್ದರೆ ಕಾರಣ, ಕೆಲಸ ಮಾಡುತ್ತಿರುವ ಕುರಿತು ಸರಕಾರಿ ಅಥವಾ ಖಾಸಗೀ ಸೇವೆ, ಸದ್ಯದ ಉದ್ಯೋಗ, ವ್ಯಾಪಾರ, ಕುಟುಂಬದ ಕುಲ ಕಸುಬು, ಅದು ಮುಂದುವರೆದಿದೆಯೇ. ಆ ಕಸುಬಿನಿಂದ ಖಾಯಿಲೆಗಳು ಬಂದಿದ್ದರೆ ಅದರ ವಿವರ. ದಿನಗೂಲಿ ಕೆಲಸಗಾರರ ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿ ಮಾಡುತ್ತಿದ್ದರೆ ವಿವರ. ಬ್ಯಾಂಕ್ ಅಕೌಂಟ್ ಹೊಂದಿದ್ದಾರೆಯೇ, ಇಲ್ಲವೆ?. ಮೀಸಲಾತಿಯಡಿ ಪಡೆದ ಶೈಕ್ಷಣಿಕ ಮತ್ತು ಉದ್ಯೋಗ ಸೌಲಭ್ಯಗಳು ಜಾತಿ ಪ್ರಮಾಣ ಹೊಂದಿದ್ದಾರೆಯೇ, ಅಲೆಮಾರಿ, ಅರೆ ಅಲೆಮಾರಿ ಜನಾಂಗದವರೇ, ಜನಪ್ರತಿನಿಧಿಗಳಾಗಿದ್ದಲ್ಲಿ ವಿವರ. ನಿಗಮ, ಮಂಡಳಿ, ಸಹಕಾರಿ, ಸರಕಾರೇತರ ಸಂಘ ಸಂಸ್ಥೆಗಳಲ್ಲಿ ಸದಸ್ಯ ಅಥವಾ ಪದಾಧಿಕಾರಿಯಾಗಿದ್ದಲ್ಲಿ ಹೀಗೆ, ಕ್ರಮ ಸಂಖ್ಯೆ ೦೧ ರಿಂದ ೩೯ ರವರೆಗೆ ಒಟ್ಟು ೩೯ ಅಂಶಗಳ ವಿವರಗಳನ್ನು ಗಣತಿದಾರರು ಕೇಳುವರು.  ಸಾರ್ವಜನಿಕರು ನೀಡುವ ಉತ್ತರವನ್ನು  ಸಂಬಂಧಿತ ಸಂಕೇತಾಕ್ಷರಗಳ (ಕೋಡ್ ಸಂಖ್ಯೆ) ಮೂಲಕ ಪ್ರಥಮ ಭಾಗದ ಮಾಹಿತಿ ಸಂಗ್ರಹಿಸಲಾಗುತ್ತದೆ. 
  ಕುಟುಂಬವು ಹೊಂದಿರುವ ಜಮೀನು, ಸಾಲ, ಕೃಷಿ ಸಂಬಂಧಿತ ಚಟುವಟಿಕೆಗಳು, ಜಾನುವಾರುಗಳು, ಸ್ಥಿರಾಸ್ಥಿ, ಚರಾಸ್ಥಿ, ಸರಕಾರದಿಂದ ಪಡೆದ ಸೌಲತ್ತುಗಳು, ಪಡಿತರ ಚೀಟಿ ಸಂಖ್ಯೆ, ನೆಲೆಸಿರುವ ಸ್ಥಳ ವಿವರ, ವಾಸದ ಮನೆ, ಮಾಲೀಕತ್ವದ ಸ್ವರೂಪ, ವಾಸದ ಮನೆಯ ಎಂತಹುದು, ಅದರ ಉಪಯೋಗ, ನಿವೇಶನ ಹೊಂದಿರುವ ಕುಡಿಯುವ ನೀರಿನ ಮೂಲ, ಶೌಚಾಲಯದ ವ್ಯವಸ್ಥೆ, ಅಡುಗೆ ಮಾಡಲು ಬಳಸುವ ಇಂಧನ, ದೀಪದ ಮೂಲ, ಹೀಗೆ ೨ನೇ ಭಾಗದಲ್ಲಿ ಕುಟುಂಬಕ್ಕೆ ಸಂಬಂಧಿಸಿದ ಒಟ್ಟು ೧೬ ಪ್ರಶ್ನಾವಳಿಯನ್ನು ಅಂದರೆ, ಸಮೀಕ್ಷೆ ಸಂಗ್ರಹಿಸುವ ನಮೂನೆಯಲ್ಲಿ ಕ್ರಮಸಂಖ್ಯೆ ೪೦ ರಿಂದ ೫೫ ರವರೆಗಿನ ವಿವರಗಳನ್ನು ಕುಟುಂಬದ ಮುಖ್ಯಸ್ಥರು ಒದಗಿಸುವ ದಾಖಲೆ ಹಾಗೂ ಹೇಳಿಕೆಗಳನ್ನು ಆಧರಿಸಿ ಮಾಹಿತಿ ಸಂಗ್ರಹಿಸಲಾಗುತ್ತದೆ.
  ಈ ಸಮೀಕ್ಷೆಯಲ್ಲಿ ವಿವರ ತುಂಬುವುದರಲ್ಲಿ ಇರುವ ಪ್ರಮುಖ ಅಂಶವೆಂದರೆ, ಸಂಕೇತಾಕ್ಷರಗಳ ಬಳಕೆ.  ಕುಟುಂಬದ ಮುಖ್ಯಸ್ಥರ, ಸದಸ್ಯರ ಹೆಸರುಗಳನ್ನು ಮಾತ್ರ ಅಕ್ಷರಗಳಲ್ಲಿ ಬರೆಯಲಾಗುತ್ತದೆ. ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ ಸಂಖ್ಯೆ, ಜಮೀನು ವಿವರ, ಇವುಗಳನ್ನು ಹೊರತುಪಡಿಸಿ ಒಟ್ಟಾರೆ ಉಳಿದ ಎಲ್ಲಾ ವಿವರಗಳಿಗೆ ಆಯಾ ಮಾಹಿತಿಗೆ ಸಂಬಂಧಿಸಿದಂತೆ ಸರಿ ಹೊಂದುವ ಸಂಕೇತಾಕ್ಷರ ಜೊತೆಗೆ ಹೌದು ಅಥವಾ ಇಲ್ಲ ಎನ್ನುವ ರೂಪದಲ್ಲಿ ವಿವರ ದಾಖಲಿಕೆ ಒಂದು ವಿಶೇಷವಾಗಿದೆ.  ಇದರಿಂದ ದತ್ತಾಂಶ ಸಂಗ್ರಹಣೆ ಸುಲಭವಾಗುದರ ಜೊತೆಗೆ ಸಮಯ ಉಳಿಕೆಯಾಗಲಿದೆ.  
  ವೃದ್ಧಾಶ್ರಮ, ಅನಾಥಾಶ್ರಮ, ಭಿಕ್ಷುಕರ ಪುನರ್ವಸತಿ ಕೇಂದ್ರ, ಅಲೆಮಾರಿ ಕುಟುಂಬಗಳನ್ನು ವಸತಿ ರಹಿತ ಕುಟುಂಬಗಳೆಂದು ಪರಿಗಣಿಸಿ, ಸಮೀಕ್ಷೆ ಜರುಗಿಸಬೇಕು ಎಂದು ಈಗಾಗಲೆ ಗಣತಿದಾರರಿಗೆ ಸ್ಪಷ್ಟ ಸೂಚನೆಗಳನ್ನು ನೀಡಲಾಗಿದೆ.
  ಯಾವುದೇ ಗಣತಿದಾರರು ಯಾವುದೇ ಮನೆಯನ್ನು ಸಮೀಕ್ಷೆಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ನೀಡಲಾಗಿದ್ದು, ಏ. ೧೧ ರಿಂದ ೩೦ ರವರೆಗಿನ ಅವಧಿಯಲ್ಲಿ ಒಂದು ವೇಳೆ ಯಾವುದೇ ಕುಟುಂಬ ಅಥವಾ ಮನೆಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಸಂಗ್ರಹಿಸದಿರುವ ಬಗ್ಗೆ ದೂರುಗಳಿದ್ದಲ್ಲಿ, ಕೂಡಲೆ ಸಂಬಂಧಪಟ್ಟವರು ಜಿಲ್ಲಾಧಿಕಾರಿಗಳಿಗೆ ಅಥವಾ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ  ಮಾಹಿತಿ ನೀಡಬಹುದಾಗಿದೆ.  ಸಾರ್ವಜನಿಕರು ಗಣತಿದಾರರಿಗೆ ನೈಜ ಮತ್ತು ನಿಖರ ಮಾಹಿತಿಯನ್ನು ನೀಡಿ ಸರ್ಕಾರದ ಮಹತ್ವಾಕಾಂಕ್ಷಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು.  ರಾಜ್ಯದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಲ್ಲಿ ಈ ಮೂಲಕ ನೆರವಾಗಬೇಕಾಗಿರುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ.

                                                                            - ತುಕಾರಾಂರಾವ್ ಬಿ.ವಿ.
                                                                         ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ.

Advertisement

0 comments:

Post a Comment

 
Top