PLEASE LOGIN TO KANNADANET.COM FOR REGULAR NEWS-UPDATES

 : ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ೨೦೧೪-೧೫ ನೇ ಸಾಲಿನ ಕಲಬುರಗಿ ವಿಭಾಗದ ಕನ್ನಡ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಮಾ.೧೫ ರಂದು ಬೆ. ೧೦-೩೦ ಗಂಟೆಗೆ ಕಲಬುರಗಿಯ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯಲಿದೆ.
  ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ, ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ   ಖಮರುಲ್ ಇಸ್ಲಾಂ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ|| ಶರಣಪ್ರಕಾಶ್ ಪಾಟೀಲ, ಕಲಬುರಗಿ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 
  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ|| ಎಲ್.ಹನುಮಂತಯ್ಯ ಪ್ರಾಸ್ತಾವಿಕವಾಗಿ ಮಾತನಾಡಲಿದ್ದು, ಸಾಹಿತಿ ಕುಂ. ವೀರಭದ್ರಪ್ಪ ಹಿತನುಡಿಗಳನ್ನಾಡುವರು.  
  ೨೦೧೪-೧೫ನೇ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿಯನ್ನು ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಿ ಗೌರವಿಸಲಾಗುತ್ತದೆ. ಅಲ್ಲದೇ ತಾಲೂಕಾ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೂ ನೀಡಲಾಗುತ್ತದೆ. ರಾಜ್ಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೬೮೪ ಎಸ್.ಎಸ್.ಎಲ್.ಸಿ ಮತ್ತು ೫೬೫ ಪಿ.ಯು.ಸಿ ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು ೧೨೪೯ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಗುತ್ತದೆ.  ಕಲಬುರಗಿ ವಿಭಾಗದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೧೧೪ ವಿದ್ಯಾರ್ಥಿಗಳು ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ೧೦೦ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೨೧೪ ವಿದ್ಯಾರ್ಥಿಗಳನ್ನು ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವಿಸಿ, ಪುರಸ್ಕರಿಸಲಾಗುತ್ತದೆ. ಪ್ರಶಸ್ತಿ ಪಡೆಯಲಿರುವ ಕಲಬುರಗಿ ವಿಭಾಗದ ಜಿಲ್ಲಾ ವಾರು ವಿದ್ಯಾರ್ಥಿಗಳ ಸಂಖ್ಯಾ ವಿವರ ಇಲ್ಲಿದೆ.  ಕೊಪ್ಪಳ-೨೭ (ಎಸ್.ಎಸ್.ಎಲ್.ಸಿ -೧೪, ಪಿ.ಯು.ಸಿ-೧೩), ಯಾದಗಿರಿ-೨೦ (ಎಸ್.ಎಸ್.ಎಲ್.ಸಿ-೧೦, ಪಿ.ಯು.ಸಿ-೧೦), ಕಲಬುರಗಿ-೪೮ (ಎಸ್.ಎಸ್.ಎಲ್.ಸಿ-೨೬, ಪಿ.ಯು.ಸಿ-೨೨), ರಾಯಚೂರು-೩೫ (ಎಸ್.ಎಸ್.ಎಲ್.ಸಿ -೧೮, ಪಿ.ಯು.ಸಿ-೧೭), ಬೀದರ್-೩೭ (ಎಸ್.ಎಸ್.ಎಲ್.ಸಿ -೨೦, ಪಿ.ಯು.ಸಿ-೧೭), ಬಳ್ಳಾರಿ-೪೭ (ಎಸ್.ಎಸ್.ಎಲ್.ಸಿ -೨೬, ಪಿ.ಯು.ಸಿ-೨೧) ವಿದ್ಯಾರ್ಥಿಗಳು ಪ್ರಶಸ್ತಿ ಪಡೆಯಲಿದ್ದಾರೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ೧೫,೦೦೦ ರೂ., ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ಬಹುಮಾನ ೮,೦೦೦ ರೂ, ದ್ವಿತೀಯ- ೭,೦೦೦ ರೂ, ತೃತೀಯ-೬,೦೦೦ ರೂಗಳನ್ನು ನೀಡಲಾಗುತ್ತದೆ.  ಜೊತೆಗೆ ಸ್ಮರಣಿಕೆ, ಪ್ರಮಾಣ ಪತ್ರ, ಕನ್ನಡ-ಕನ್ನಡ ನಿಘಂಟು, ಕನ್ನಡ-ಇಂಗ್ಲೀಷ್ ನಿಘಂಟು, ಕೈಗಡಿಯಾರ, ಶಾಲಾಬ್ಯಾಗು ಹಾಗೂ ಪೆನ್ನು ಸೆಟ್ ನೀಡಿ ಪುರಸ್ಕರಿಸಲಾಗುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top