ದಿನನಿತ್ಯದ ಜಂಜಾಟದಿಂದ ಹೊರಬಂದು ಮಾನಸಿಕ ನೆಮ್ಮದಿ ಪಡೆಯಲು ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಟಿ. ಜನಾರ್ಧನ ಹುಲಿಗಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ’ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಾನಸಿಕ ನೆಮ್ಮದಿ ಪಡೆಯಲು ಮತ್ತು ಕ್ರಿಯಾಶೀಲತೆ ವೃದ್ಧಿಸಿಕೊಳ್ಳಲು ಪ್ರತಿಯೊಬ್ಬರೂ ಸಾಂಸ್ಕೃತಿಕ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಮನುಷ್ಯನನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ, ಸಂಗೀತ, ಸಾಹಿತ್ಯ, ಲಲಿತಕಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಕಲೆಗಳ ಪ್ರೋತ್ಸಾಹಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿ.ಪಂ. ಸದಸ್ಯ ಜನಾರ್ಧನ ಹುಲಿಗಿ ಹೇಳಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮರಿಯಮ್ಮನಹಳ್ಳಿಯ ಮಂಜವ್ವ ಜೋಗತಿ ಮಾತನಾಡಿ, ಕಲೆಗಳಿಗೆ ಸರ್ಕಾರ ಇತ್ತೀಚೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇಲಾಖೆಯ ಯೋಜನೆಗಳನ್ನು ಕಲಾವಿದರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಾ.ಪಂ. ಸದಸ್ಯೆ ರಾಧಿಕ, ಹುಲಿಗೆಮ್ಮ ದೇವಸ್ಥಾನ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್. ಚಂದ್ರಮೌಳಿ, ಸದಸ್ಯ ಈರಣ್ಣ ಗಿಣಿಗೇರಿ, ಗ್ರಾ.ಪಂ. ಅಧ್ಯಕ್ಷ ಯಮನೂರಪ್ಪ, ಕಲಾವಿದರುಗಳಾದ ಕೊಟ್ರಯ್ಯ, ಸುಭಾಸ್ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ವಿ. ಜಡಿಯವರ್ ನಿರೂಪಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಂಜವ್ವ ಜೋಗತಿ ತಂಡದವರು ಪ್ರದರ್ಶಿಸಿದ ಜೋಗತಿ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ತಳಕಲ್‌ನ ನೃತ್ಯ ಕಲಾ ತಂಡದವರಿಂದ ಸಮೂಹ ನೃತ್ಯ, ಕೊಪ್ಪಳದ ರಿದಂ ಡ್ಯಾನ್ಸ್ ಅಕಾಡೆಮಿ ಕಲಾವಿದರು ಭರತ ನಾಟ್ಯ ಹಾಗೂ ಶಿವತಾಂಡವ ನೃತ್ಯ ಪ್ರಸ್ತುತಪಡಿಸಿದರು. ಗಂಗಾವತಿಯ ಸಂಜಯ್ ಹಂದ್ರಾಳ ಇವರಿಂದ ಸುಗಮ ಸಂಗೀತ, ಕುಷ್ಟಗಿಯ ವಾ.ಹ. ಯಕ್ಕರನಾಳ ಅವರಿಂದ ಜಾನಪದ ಗೀತೆಗಳು. ಹುಲಿಹೈದರ್‌ನ ಆಂಜನೇಯ ಗದ್ದಿಯವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕುಷ್ಟಗಿಯ ಎಸ್.ಎಸ್. ಹಿರೇಮಠರಿಂದ ತಬಲಾ ಸೋಲೋ, ತಾವರಗೇರಾದ ಶಿವರಾಜ ಶಾಸ್ತ್ರಿ ರಾಂಪೂರರಿಂದ ಕಥಾ ಕೀರ್ತನ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿತು. ಹುಲಿಗಿಯ ಶ್ರೀ ಭುವನೇಶ್ವರಿ ಕನ್ನಡ ಕಲಾ ಸಂಘದವರು ಪ್ರದರ್ಶಿಸಿದ ’ವೀರ ಎಚ್ಚಮ್ಮ ನಾಯಕ’ ನಾಟಕ ಪ್ರದರ್ಶನ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

0 comments:
Post a Comment