PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಹೊಂಗಿರಣ ಸಮಾಜ ಸೇವಾ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕೋರ್ಟ್ ಆವರಣದಲ್ಲಿರುವ ಸಾಕ್ಷಿದಾರರ ಮೊಗಸಾಲೆಯಲ್ಲಿ  ಮಂಗಳಮುಖಿಯರಿಗಾಗಿ ವಿಶೇಷ ಕಾನೂನು ಅರಿವು-ನೆರವು ಕಾರ್ಯಕ್ರಮ ಆಯೋಜಿಸಲಾಯಿತು.
  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ದಶರಥ ಅವರು, ಕಾನೂನಿನಲ್ಲಿ ಮಂಗಳಮುಖಿಯರಿಗೆ ಹಲವಾರು ಹಕ್ಕುಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವತ್ತ ಸಾಗಬೇಕಿದೆ. ಇತರರಿಗೆ ಇರುವಂತೆ ಮಂಗಳಮುಖಿಯರಿಗೂ ಕೂಡ ಹಲವಾರು ಹಕ್ಕುಗಳಿದ್ದು, ಸಾಧನೆಯ ಮೂಲಕ ಅವರು ಸಮಾಜದ ಮುಖ್ಯ ವಾಹಿನಿಗೆ ಬರಬೇಕಿದೆ ಎಂದು ತಿಳಿಸಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತ ಪ್ರೇಮಾ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಮಂಗಳಮುಖಿಯರು ಕೂಡಾ ಇತರರಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅದರಂತೆ ರಾಜಕೀಯವಾಗಿ, ಸಾಮಾಜಿಕವಾಗಿ ಪ್ರಬಲರಾಗುವತ್ತ ಧಾವಿಸಬೇಕಿದೆ. ಈ ದಿಸೆಯಲ್ಲಿ ಮಂಗಳಮುಖಿಯರು ಕೂಡಾ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ನೈಪುಣ್ಯತೆ ಸಾಧಿಸಿ, ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಕರೆ ನೀಡಿದರು. 
  ಬೆಂಗಳೂರಿನ ಮಂಗಳಮುಖಿಯರ ಸಲಹೆಗಾರರಾದ ನಿಶಾ ಗೂಳೂರು (ಸಂಗಮ ಪಹೆಚಾನ್) ಮಾತನಾಡಿ, ಸಮಾಜದಲ್ಲಿ ಮಂಗಳಮುಖಿ ಸಮುದಾಯದವರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಹಾಗೂ ಅವರಿಗಾಗಿ ಸರಕಾರದ ಮಟ್ಟದಲ್ಲಿ ಇರುವ ಸೌಲಭ್ಯಗಳ ಕುರಿತು ಮಾತನಾಡಿದರು. ಸ್ನೇಹಾ ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಡಾ|| ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ ಎಸ್.ಎನ್.ದೇಸಾಯಿ ಮಂಗಳಮುಖಿಯರ ಹಕ್ಕುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. 
  ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಂಗಳಮುಖಿಯರ ಅಭಿವೃದ್ಧಿ ನಿಗಮದ ಅಭಿವೃದ್ಧಿ ನಿರೀಕ್ಷಕಿ ಸುಧಾ ಎಂ.ಚಿದ್ರಿ, ಹೊಂಗಿರಣ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ರಮೇಶ ರಾಠೋಡ, ಹಿರಿಯ ನ್ಯಾಯವಾದಿ ಸತ್ಯನಾರಾಯಣ ಹಾಗೂ ಇತರರು ಇದ್ದರು.

Advertisement

0 comments:

Post a Comment

 
Top