PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಮಾ.  : ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಹೇಳಿದರು
  ಬಾಬು ಜಗಜೀವನರಾಮ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.
  ಬಾಬು ಜಗಜೀವನರಾಮ್ ಅವರ ಜನ್ಮದಿನಾಚರಣೆಯನ್ನು ಏಪ್ರಿಲ್ ೦೫ ರಂದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನಾಚರಣೆಯನ್ನು ಏ. ೧೪ ರಂದು ಅತ್ಯಂತ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು.  ಅಲ್ಲದೆ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರ ಜಯಂತಿ ಕಾರ್ಯಕ್ರಮವನ್ನು ಏ. ೦೫ ರಂದೇ ಜಗಜೀವನರಾಜ್ ಜಯಂತಿಯೊಂದಿಗೆ ಆಚರಿಸಲಾಗುವುದು.  ಆಯಾ ದಿನಗಳಂದು ಬೆಳಿಗ್ಗೆ ಮಹನೀಯರ ಭಾವಚಿತ್ರಗಳ ಸಹಿತ, ಡೊಳ್ಳು ಕುಣಿತ, ಜಾಂಜ್ ಮೇಳ ಮುಂತಾದ ಜಾನಪದ ತಂಡಗಳೊಂದಿಗೆ ಕೊಪ್ಪಳ ತಹಸಿಲ್ದಾರರ ಕಚೇರಿಯಿಂದ ಮೆರವಣಿಗೆ ಹೊರಡಿಸಲಾಗುವುದು. ನಂತರ ಸಾಹಿತ್ಯ ಭವನದಲ್ಲಿ ಸಮಾರಂಭ ಏರ್ಪಡಿಸಲಾಗುವುದು. ಜಿಲ್ಲೆಯ ಸಂಸದರು, ಎಲ್ಲ ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಾಗುವುದು.  ಜಗಜೀವನರಾಮ್ ಜಯಂತಿ ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸ ನೀಡಲು ಹಂಪಿ ಕನ್ನಡ ವಿ.ವಿ.ಯ ಬಿ.ಎಂ. ಪುಟ್ಟಯ್ಯ, ಜಿ.ಬಿ. ನಂದನ್ ಅಥವಾ ಲಿಂಗಯ್ಯ  ಅವರ ಪೈಕಿ ಒಬ್ಬರನ್ನು ಲಭ್ಯತೆಯ ಆಧಾರದಲ್ಲಿ ಆಹ್ವಾನಿಸಲಾಗುವುದು.  ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಇಬ್ಬರೂ ಮಹನೀಯರ ಜನ್ಮದಿನಾಚರಣೆಗಳನ್ನು ಕಟ್ಟುನಿಟ್ಟಾಗಿ ಆಚರಿಸುವಂತೆ ಸೂಚಿಸಲಾಗುವುದು.  ಅದೇ ರೀತಿ ಎಲ್ಲ ಗ್ರಾ.ಪಂ. ಮಟ್ಟದ ಜನಪ್ರತಿನಿಧಿಗಳು ಜಿಲ್ಲಾ ಹಾಗೂ ತಾಲೂಕು ಸಮಾರಂಭಗಳಲ್ಲಿ ಭಾಗವಹಿಸಲು ವ್ಯವಸ್ಥೆಗೊಳಿಸಲಾಗುವುದು.  ಮಹನೀಯರುಗಳ ಜನ್ಮದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಯಶಸ್ವಿಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು. ಸಮಾಜದ ಮುಖಂಡರು ಸಹಕರಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಕರೆ ನೀಡಿದರು. 
  ಜಯಂತಿಯ ಅಂಗವಾಗಿ ನಗರದ ಪ್ರಮುಖ ವೃತ್ತಗಳಿಗೆ ದೀಪಾಲಂಕಾರ ಕೈಗೊಳ್ಳಬೇಕು.  ಮೆರವಣಿಗೆ ಸಂದರ್ಭದಲ್ಲಿ ಹಾಗೂ ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಕೈಗೊಳ್ಳಬೇಕು.  ಕಾರ್ಯಕ್ರಮಗಳ ಯಶಸ್ವಿಗೆ ವಹಿಸಲಾಗಿರುವ ಜವಾಬ್ದಾರಿಯನ್ನು ಆಯಾ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಮಾತನಾಡಿ, ಬಾಬು ಜಗಜೀವನರಾಮ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆಗೆ ಜಿಲ್ಲಾ ಮಟ್ಟಕ್ಕೆ ತಲಾ ೨೫ ಸಾವಿರ ಹಾಗೂ ತಾಲೂಕು ಮಟ್ಟಕ್ಕೆ  ೫ ಸಾವಿರ ರೂ. ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದರು.
  ಕೊಪ್ಪಳ ನಗರದಲ್ಲಿ ಬಾಬು ಜಗಜೀವನರಾಮ್ ಭವನ ನಿರ್ಮಾಣಕ್ಕಾಗಿ ಇದ್ದಂತಹ ನಿವೇಶನದ ಸಮಸ್ಯೆ ಇದೀಗ ಬಗೆಹರಿದಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶುಭಾ ಅವರು ಸಭೆಗೆ ಮಾಹಿತಿ ನೀಡಿದರು.   
  ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ದೇವನೂರ ಮಹಾದೇವ ಹಾಗೂ ಸಿದ್ದಲಿಂಗಯ್ಯ ಅವರನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.
       ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿ, ಉತ್ತಮ ಸಾಧನೆ ಮಾಡಿರುವ ದಲಿತ ಸಮುದಾಯದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಸಂದರ್ಭದಲ್ಲಿ ಸನ್ಮಾನಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
  ಸಭೆಯಲ್ಲಿ  ನಗರಸಭೆ ಸದಸ್ಯ ಮುತ್ತುರಾಜ್ ಕುಷ್ಟಗಿ,  ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಗಣ್ಯರಾದ ಶಿವನಾಂದ ಹೊದ್ಲೂರ, ವಿಠ್ಠಪ್ಪ ಗೋರಂಟ್ಲಿ, ವಿವಿಧ ದಲಿತ ಸಂಘಟನೆ ಪದಾಧಿಕಾರಿಗಳಾದ ಡಾ. ಜ್ಞಾನಸುಂದರ್, ಹಾಲೇಶ್ ಕಂದಾರಿ, ಗವಿಸಿದ್ದಪ್ಪ ಕಂದಾರಿ, ಸಿದ್ದಪ್ಪ ಹೊಸಮನಿ, ಹನುಮೇಶ್ ಕಡೇಮನಿ, ಗಾಳೆಪ್ಪ ಪೂಜಾರ್, ಪ್ರಭು ಬೋಚನಹಳ್ಳಿ, ಚನ್ನಬಸಪ್ಪ ಹೊಳೆಯಪ್ಪನವರ್, ಓಬಳೇಶ, ಲಕ್ಷ್ಮಣ ಮಾದಿನೂರ, ದುರ್ಗಪ್ಪ ಅಲ್ಲಾನಗರ, ರಮೇಶ್ ಚೌಡ್ಕಿ ಸೇರಿದಂತೆ ಹಲವಾರು ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. 

Advertisement

0 comments:

Post a Comment

 
Top