PLEASE LOGIN TO KANNADANET.COM FOR REGULAR NEWS-UPDATES




ಯಲಬುರ್ಗಾ (ಹಿರೇವಂಕಲಕುಂಟಾ) ಮಾ. ೨೫. ಜಿಲ್ಲಾ ಪಂಚಾಯತ, ಗಾಣದಾಳ ಗ್ರಾಮ ಪಂಚಾಯತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ, ಜಿಲ್ಲಾ ಯುವ ಸಂಘಗಳ ಒಕ್ಕೂಟ ಮತ್ತು ಗಾಣದಾಳ ಮಹರ್ಷಿ ವಾಲ್ಮೀಕಿ ಯುವಕ ಸಂಘಗಳ ಆಶ್ರಯದಲ್ಲಿ ಹಿರೇವಂಕಲಕುಂಟಾ ಹೋಬಳಿಯ ಗಾಣದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಗ್ರಾಮೀಣ ಕ್ರೀಡೋತ್ಸವ ಯಶಸ್ವಿಯಾಯಿತು.
ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಗಾಣದಾಳ ಗ್ರಾ. ಪಂ. ಸದಸ್ಯ ಕುಂಟೆಪ್ಪ ವಾಲಿಕಾರ, ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹ ನೀಡುವ ಗ್ರಾಮೀಣ ಕ್ರೀಡೋತ್ಸವ ಗ್ರಾಮದ ಜನರಲ್ಲಿ ಸಾಮರಸ್ಯ ಮೂಡಿಸುತ್ತವೆ, ಯುವಜನತೆ ಟಿವಿಯಿಂದಾಗಿ ದುಷ್ಚಟಗಳಿಗೆ ಬಲಿಯಾಗಿ ದಿಕ್ಕು ತಪ್ಪುತ್ತಿದ್ದಾರೆ, ಅದರ ಬದಲಿಗೆ ಯುವಜನರು ಸತ್ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆವಹಿಸಿದ್ದ ಶಾಲೆಯ ಮುಖ್ಯ ಗುರುಗಳಾದ ವಿ. ಎಲ್. ಜಾಲಾಪೂರ ಮಾತನಾಡಿ, ಗುಂಡು ಎತ್ತುವದು, ಹಗ್ಗ ಜಗ್ಗಾಟ, ಕಬಡ್ಡಿಯಂಥಹ ದೇಸಿ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕು, ಯುವಜನರಿಗೆ ಅಂಥಹ ತರಬೇತಿಗಳ ಅಗತ್ಯವಿದೆ ಎಂದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗೊಂಡಬಾಳ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಜನರು ಸಂಸ್ಕಾರವಂತರಾಗಬೇಕು ಅಂದಾಗ ಮಾತ್ರ ಅತ್ಯಾಚಾರದಂಥಹ ಪ್ರಕರಣಗಳು ನಿಲ್ಲುತ್ತವೆ, ನಮ್ಮ ಸಂಸ್ಕೃತಿಯೇ ನಮ್ಮನ್ನು ಕಾಪಾಡುವದು, ಆದ್ದರಿಂದ ನಮ್ಮ ರಾಮಾಯಣ ಮಹಾಭಾರತಗಳನ್ನು ನೋಡಿಯಾದರೂ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು. 
ವೇದಿಕೆಯಲ್ಲಿ ಪತ್ರಕರ್ತರಾದ ರವಿಕುಮಾರ ನಾಯಕ, ಪವನಕುಮಾರ ದೇಶಪಾಂಡೆ, ಗ್ರಾಮ ಪಂಚಾಯತ ಸದಸ್ಯರಾದ ಗಿರಿಯಪ್ಪ ನಾಗರಾಳ, ಹನುಮಗೌಡ ಮಾಲಿಪಾಟೀಲ, ಮುಖಂಡರಾದ ತಿಮ್ಮಣ್ಣ ಶಿಲ್ಪಿ, ಮರಿಯಪ್ಪ ಹರಿಜನ, ರಾಮಣ್ಣ ವಡ್ಡರ, ಪಿಡಿಓ ಶರಣಗೌಡ ಕುದರಿಮೋತಿ, ಸರಕಾರಿ ಪ್ರೌಢ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ಹನುಮಂತಪ್ಪ ಗದ್ದಿ, ಸರಕಾರಿ ಪ್ರಾಥಮಿಕ ಶಾಲೆ ಎಸ್.ಡಿ.ಎಂ.ಸಿ ಅಧ್ಯಕ್ಷ ದುರುಗಪ್ಪ ಪ್ಯಾಟಿಹಳ್ಳಿ, ಮಂಜುನಾಥ ಪೋ.ಪಾಟೀಲ ಇತರರಿದ್ದರು. ಸಂಘದ ಅಧ್ಯಕ್ಷ ವೀರಭದ್ರ ನಾಯಕ ಸ್ವಾಗತಿಸಿದರು, ತಿಮ್ಮನಗೌಡ ಪೋ.ಪಾ ನಿರೂಪಿಸಿದರು, ಹನುಮೇಶ ಹುಲಸನಹಟ್ಟಿ ವಂದಿಸಿದರು.
ಬಹುಮಾನ ವಿಜೇತರು : ಟಗ್ ಆಫ್ ವಾರ್ (ಗುಂಪು) ಪ್ರಥಮ ಹೊನ್ನಪ್ಪ ಹುಲಗಿ ಮತ್ತು ತಂಡ, ದ್ವಿತಿಯ ಮದ್ದಾನಪ್ಪ ಪೋ.ಪಾಟೀಲ ಮತ್ತು ತಂಡ, ಸಾಮೂಹಿಕ ರಸ್ತೆ ಓಟ ಪ್ರಥಮ ಯಮನೂರಪ್ಪ ಸಣ್ಣೇಗೌಡ್ರ, ದ್ವಿತಿಯ ಯಮನೂರಪ್ಪ ಚಿಗರಿ, ತೃತೀಯ ಬಸವರಾಜ ಮಾಲಿಗೌಡ್ರ, ಮ್ಯುಜಿಕಲ್ ಚೇರ್ ಪ್ರಥಮ ಸುರೇಶ ಲೋಕಪ್ಪ ಬಾಣಕಾರ, ದ್ವಿತಿಯ ಶರಣಪ್ಪ ಚಿಗರಿ, ತೃತೀಯ ಛತ್ರಪ್ಪ ಇಂಗಳದಾಳ, ಸ್ಲೋ ಸೈಕಲ್ ರೇಸ್ ಸ್ಪರ್ಧೆ ಪ್ರಥಮ ಹನುಮೇಶ ಹರಿಜನ, ದ್ವಿತಿಯ ಯಂಕೋಬ ಡೊಳ್ಳಿನ, ಮತ್ತು ತೃತೀಯ ತಿಪ್ಪನಗೌಡ ಮಾಲಿಪಾಟೀಲ ಹಾಗೂ ಭಾರ ಎತ್ತುವ ಸ್ಪರ್ಧೆಯಲ್ಲಿ ಹನುಮಂತಪ್ಪ ಬೊಮ್ಮನಾಳ ಪ್ರಥಮ, ಯಂಕಪ್ಪ ತಳವಾರ ದ್ವಿತಿಯ ಹಾಗೂ ರವಿ ಇಟ್ಲಾಪೂರ ತೃತೀಯ ಬಹುಮಾನ ಗಳಿಸಿದ್ದಾರೆ ಎಂದು ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಟಿ. ರಾಮಕೃಷ್ಣಯ್ಯ ತಿಳಿಸಿದ್ದಾರೆ.

Advertisement

0 comments:

Post a Comment

 
Top