ಹೊಸಪೇಟೆ : ದಲಿತ ಮತ್ತು ರೈತ ಚಳುವಳಿಯಂತೆ ಮಹಿಳೆಯರಿಂದ ಉಗ್ರ ಆಂದೋಲನವಾದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಮುಕ್ತಿ ದೊರೆಯಬಹುದು ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಮಹಾಸ್ವಾಮಿಗಳು ಹೇಳಿದರು
ಅವರು ಕನ್ನಡ ವಿವಿ ಮಹಿಳಾ ಅಧ್ಯಯನ ಕೇಂದ್ರದಿಂದ ಮಹಿಳೆಯರ ಮೇಲಿನ ದೌರ್ಜನ್ಯ ತಡೆ: ಸಮಸ್ಯೆ ಹಾಗೂ ಸವಾಲುಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಧರ್ಮಗಳಲ್ಲಿನ ತಾತ್ವಿಕ ವಿಚಾರಗಳಿಗೆ ಮನ್ನಣೆ ನೀಡಿದಂತೆ ದೈನಂದಿನ ಆಚಾರ ವಿಚಾರಗಳಲ್ಲಿ ಮಹಿಳೆಯನ್ನು ಗೌರವಿಸುತ್ತಿಲ್ಲ. ರಾಜ್ಯದ ೧೨೫೦ ಮಠಗಳು ಪುರುಷ ಪ್ರದಾನ ಮಠಗಳಾಗಿವೆ. ಮಹಿಳೆಯರಿಗೆ ಇಂದಿಗೂ ಗುರುಸ್ಥಾನವನ್ನು ನೀಡಿಲ್ಲ. ಮಡಿವಂತಿಕೆಯ ಮನಸ್ಥಿತಿಯ ಜನರಿಂದ ಮಹಿಳೆಯರನ್ನು ಕುಟುಂಬದ ವ್ಯವಹಾರಗಳಿಗೆ ಮಾತ್ರ ಸೀಮಿತವಾಗುವಂತೆ ನಿರ್ಭಂಧಿಸುತ್ತಿರುವುದು ಇಂದಿಗೂ ನಡೆದಿದೆ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ನಾಣ್ಣುಡಿಗಿಂತ ಕೆಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂದರೆ ಒಳಿತು. ಸಮಾಜದಲ್ಲಿ ಪುರುಷ ಅಥವಾ ಮಹಿಳಾ ಪ್ರದಾನ ಸಮಾಜ ಎನ್ನುವುದಕ್ಕಿಂತ ಮನುಷ್ಯತ್ವ ಪ್ರದಾನ ಸಮಾಜ ನಿರ್ಮಾಣವಾಗಬೇಕಿದೆ ಎಂದರು.
ಮಾಜಿ ಸಚಿವೆ ರಾಣಿ ಸತೀಶ ಮಾತನಾಡಿ, ಸ್ವಾತಂತ್ರ್ಯ ಎನ್ನುವುದು ಸ್ವೇಚ್ಛಾಚಾರವಾಗಬಾರದು. ಸ್ತ್ರೀಯರಲ್ಲೂ ಅಗೋಚರ ಶಕ್ತಿ ಇರುತ್ತದೆ. ವಿಕೃತ ಮನಸ್ಸಿನವರಿಂದ ಜರುಗುವ ಅನಾಹುತಗಳಿಗೆ ಪಾಲಕ, ಪೋಷಕರೆ ಹೊಣೆಗಾರರಾಗುತ್ತಾರೆ. ಮಕ್ಕಳನ್ನು ಸರಿಯಾದ ಹಾದಿಯಲ್ಲಿ ಸುಸಂಸ್ಕೃತರನ್ನಾಗಿ ಬೆಳೆಸುವ ಹೊಣೆ ಎಲ್ಲಾ ಪಾಲಕ, ಪೋಷಕರ ಮೇಲಿರುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.೩೩ ರಷ್ಟು ಮೀಸಲಾತಿ ದೊರೆತಿದೆ. ದೇಶದಲ್ಲಿ ೧೦ ಲಕ್ಷ ಮಹಿಳೆಯರು ಮೀಸಲಾತಿ ಸೌಲಭ್ಯ ಪಡೆದು ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಂಸತ್ತು ಮತ್ತು ವಿದಾನಸಭೆ ಸ್ಥಾನಗಳಲ್ಲಿ ಮಹಿಳೆರಿಗೆ ಶೇ.೩೩ರಷ್ಟು ಮೀಸಲಾತಿ ಹಂತ ಹಂತವಾಗಿ ದೊರೆಯುವಂತೆ ಆಡಳಿತ ಸರ್ಕಾರ ಮುತುವರ್ಜಿ ವಹಿಸಿ ಮಹಿಳೆಯರಿಗೆ ನ್ಯಾಯದೊರೆಕಿಸಿಕೊಡಬೇಕು ಎಂದರು.
ಮಾಜಿ ಸಂಸದೆ ತೇಜಶ್ವಿನಿ ಗೌಡ ಮಾತನಾಡಿ, ಸ್ಥಾಪಿತ ಹಿತಾಶಕ್ತಿಗಳಿಂದ ರಾಜಕೀಯ, ಧಾರ್ಮಿಕ, ಔದ್ಯೋಗಿಕ ಕ್ಷೇತ್ರಗಳಲ್ಲಿ ಮಹಿಳೆ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ. ಮಹಿಳೆಯರು ತಮ್ಮಲ್ಲಿ ಸಾಮರ್ಥ್ಯವಿಲ್ಲವೆಂದು ಕೊರಗುವುದು ಸಲ್ಲದು. ಎಲ್ಲಾ ರಂಗಗಳಲ್ಲೂ ಮಹಿಳೆಯು ತನ್ನದೆ ಚಾಪು ಮೂಡಿಸಿದ್ದಾಳೆ. ಹೋರಾಟ, ಪ್ರತಿಭಟನೆಯ ಮನೋಭಾವ ಬೆಳೆಸಿಕೊಂಡು ಹಕ್ಕುಗಳಿಗಾಗಿ ಹೋರಾಡಬೇಕು. ಸಮಾಜಕ್ಕೆ ತಿಳಿ ಹೇಳಬೇಕಿದ್ದ ಸುಶಿಕ್ಷಿತ ಮತ್ತು ಕಲಿತವರಿಂದಲೇ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿರುವುದು ಖಂಡನೀಯ ಎಂದರು.
ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಪಿತೃ ಪ್ರದಾನ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ನ್ಯಾಯ ದೊರೆಯದಿರುವುದು ಖೇಧಕರ. ದೌರ್ಜನ್ಯ ಮತ್ತು ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಶೀಘ್ರ ನ್ಯಾಯದೊರೆಯಬೇಕಾದರೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಅಮೂಲಾಗ್ರ ಬದಲಾವಣೆ ತರಬೇಕಿದೆ ಎಂದರು.
ಮಹಿಳಾ ಅಧ್ಯಾಯನಾಂಗದ ಮುಖ್ಯಸ್ಥ ಡಾ.ಶಿವಾನಂದ ಎಲ್.ವಿರಕ್ತಮಠ ಪ್ರಾಸ್ತಾವಿಕ ಮಾತನಾಡಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಹಿಳಾ ಅಧ್ಯಯನ ಕೇಂದ್ರ ನಿರ್ದೇಶಕಿ ಡಾ.ಎಂ.ಜಿ.ಶೋಭಾದೇವಿ ವಂದಿಸಿದರು. ನಂತರ ರಾಜಕೀಯ,ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ, ಲೈಂಗಿಕ, ಕೌಟುಂಬಿಕ ಹಾಗೂ ಸಾರ್ವಜನಿಕ ನೆಲೆಯ ದೌರ್ಜನ್ಯ ಕುರಿತು ವಿಚಾರ ಗೋಷ್ಠಿಗಳು ಜರುಗಿದವು. ಗೊಷ್ಠಿಯಲ್ಲಿ ವಿದ್ವಾಂಸರು, ಚಿಂತಕರು ಪಾಲ್ಗೊಂಡಿದ್ದರು.
0 comments:
Post a Comment