PLEASE LOGIN TO KANNADANET.COM FOR REGULAR NEWS-UPDATES

ರಾಜ್ಯದಲ್ಲಿ ಐಐಟಿ ಕೇಂದ್ರವನ್ನು ಸ್ಥಾಪಿಸಬೇಕೆನ್ನುವ ನಮ್ಮ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿ, ರಾಜ್ಯಕ್ಕೆ ಒಂದು ಐಐಟಿ ಕೇಂದ್ರವನ್ನು ಮಂಜೂರು ಮಾಡಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯನ್ನು ಕೊಪ್ಪಳ ಜಿಲ್ಲೆಯಲ್ಲಿಯೇ ಸ್ಥಾಪಿಸುವಂತೆ ಕಳೆದ ವರ್ಷ ದಿನಾಂಕ: ೧೪.೦೭.೨೦೧೪ ರಂದು ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾನವ ಸಂಪನ್ಮೂಲ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ದಿನಾಂಕ: ೨೮.೦೭.೨೦೧೪ ರಂದು ಮುಖ್ಯಮಂತ್ರಿಗಳು ಈ ಕುರಿತು ಸೂಕ್ತ ಕ್ರಮಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ಆದರೆ, ಈಗ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆಯಲ್ಲಿ ಸ್ಥಾಪಿಸುವ ಹುನ್ನಾರ ನಡೆಸಿರುವುದು ಸೂಕ್ತವಲ್ಲ.
       ಡಾ: ಡಿ.ಎಂ. ನಂಜುಂಡಪ್ಪ ವರದಿಯ ಆಧಾರದಲ್ಲಿ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲಿ ಐಐಟಿ ಕೇಂದ್ರವನ್ನು ಸ್ಥಾಪಿಸುವುದು ಸೂಕ್ತವಿದ್ದು, ಈ ಭಾಗಕ್ಕೆ ಆದ್ಯತೆ ನೀಡಲಿ. ಇತರ ಜಿಲ್ಲೆಗಿಂತಲೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರೋತ್ಸಾಹದಿಂದ ರಾಷ್ಟ್ರ ಹಾಗೂ ಹೊರರಾಷ್ಟ್ರಗಳ ಉಕ್ಕು, ಸಿಮೆಂಟ್ ಸೇರಿದಂತೆ ಅನೇಕ ಬೃಹತ್ ಕೈಗಾರಿಕಾ ಉದ್ಯಮಗಳನ್ನು ಅತೀ ಹೆಚ್ಚು ಕೊಪ್ಪಳ ಜಿಲ್ಲೆಯಲ್ಲಿ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದ್ದು, ರಾಜ್ಯದಲ್ಲಿ ಪರಿಣಿತ ಹಾಗೂ ಅನುಭವಿಕ ಕುಶಲಕರ್ಮಿಗಳು ಇಲ್ಲದಿರುವುದರಿಂದ ಉತ್ತರ ಭಾರತದ ರಾಜ್ಯಗಳ ಕಾರ್ಮಿಕರನ್ನು ಅವಲಂಬಿಸುವಂತಾಗಿದ್ದು ಕೊಪ್ಪಳ ಜಿಲ್ಲೆಯಲ್ಲಿಯೇ ಐಐಟಿ ಕೇಂದ್ರವನ್ನು ಸ್ಥಾಪಿಸುವುದು ಸೂಕ್ತವಿರುತ್ತದೆ.

ಕೇಂದ್ರದ ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನಕ್ಕೆ ಅವಶ್ಯವಿರುವ ಕನಿಷ್ಠ ೫೦೦ ಎಕರೆ ಭೂಮಿಯನ್ನು ಗುರುತಿಸಿ, ಇನ್ನಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಮಾನ್ಯ ಮುಖ್ಯಮಂತ್ರಿಗಳು ಇಚ್ಚಾಶಕ್ತಿಯನ್ನು ವ್ಯಕ್ತಪಡಿಸಲಿ. ಕೊಪ್ಪಳ ಜಿಲ್ಲೆಯಲ್ಲಿ ಐಐಟಿ ಕೇಂದ್ರ ಸ್ಥಾಪನೆಗೆ ರಾಜ್ಯದ ಎಲ್ಲಾ ಸಂಸದರ ಸಹಕಾರದ ಭರವಸೆಯನ್ನು ಹೊಂದಲಾಗಿದೆ.

ಜಿಲ್ಲೆಯಲ್ಲಿ ಐಐಟಿ ಕೇಂದ್ರ ಸ್ಥಾಪನೆಗೆ ಸಾಕಷ್ಟು ಸೂಕ್ತವಾದ ಭೂಮಿ ಲಭ್ಯತೆಯಿದ್ದು, ಒಂದು ಸರ್ಕಾರಿ ಏರ್‌ಸ್ಟ್ರಿಪ್, ಬಲ್ಡೋಟಾ ಸಮೂಹದ ಎಂಎಸ್‌ಪಿಎಲ್ ಏರ್‌ಡ್ರೋಮ್, ರೈಲ್ವೆ ಸೌಲಭ್ಯ ಹಾಗೂ ಎರಡು ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿರುವ ಜಿಲ್ಲೆಯು ಕೈಗಾರಿಗಾ ಕ್ಷೇತ್ರದಲ್ಲಿ ಕ್ಷಿಪ್ರವೇಗದೊಂದಿಗೆ ಅಭಿವೃದ್ಧಿ ಹೊಂದುತ್ತಿದ್ದು, ಜಿಲ್ಲೆಯಲ್ಲಿ ಐಐಟಿ ವಿಷಯಕ್ಕೆ ಸಂಬಂಧಿಸಿದಂತೆ ತರಬೇತಿ ನೀಡಲು ಮಧ್ಯಮ ಮತ್ತು ಬೃಹತ್ ಉದ್ಯಮಗಳು ಹೆಚ್ಚಿನ ಅನುಕೂಲವನ್ನು ಕಲ್ಪಿಸುವ ಅವಕಾಶಗಳಿರುವುದರಿಂದ, ಕೊಪ್ಪಳ ಜಿಲ್ಲೆಯಲ್ಲಿ ಒಂದು ಐಐಟಿ ಕೇಂದ್ರವನ್ನು ಸ್ಥಾಪಿಸುವಂತೆ ರಾಜ್ಯ ಸರಕಾರವು ತಕ್ಷಣ ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸ್ಪಂದಿಸಲಿ.  ಐಐಟಿ ಕೇಂದ್ರ ಕೊಪ್ಪಳ ಜಿಲ್ಲೆಯಲ್ಲಾಗಲಿ ಎಂದು  ಮಾಜಿ ಲೋಕಸಭಾ ಸದಸ್ಯ ಶಿವರಾಮಗೌಡ ಆಗ್ರಹಿಸಿದ್ದಾರೆ

Advertisement

0 comments:

Post a Comment

 
Top