ಹೊನ್ನಂಬರಿ ಪ್ರಕಾಶನ ಪ್ರಕಟಿಸಿರುವ ’ಕಳವಳ ಕಳಕಳಿ’ಕೃತಿಯೂ ಸೇರಿದಂತೆ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ವಿವಿಧ ಲೇಖಕರ ೩೭ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ,ಪ್ರೋತ್ಸಾಹ ಧನ ವಿತರಿಸಿ ಮಾತನಾಡಿದ ಕನ್ನಡ,ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾದೇವಿ ಯುವಜನರು ಅಧ್ಯಯನಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು.ತಂತ್ರಜ್ಞಾನ,ಆಧುನಿಕ ಮಾಧ್ಯಮಗಳು ಇಂದು ಎಷ್ಟೇ ಮುಂದುವರೆದಿದ್ದರೂ ಸಹ ಪುಸ್ತಕಗಳನ್ನು ಓದುವ ಆನಂದ ಬೇರೆಲ್ಲಿಯೂ ಸಿಗಲಾರದು.ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಧನ ಸಹಾಯ ನೀಡುವ ಮೂಲಕ ಉತ್ತಮ ಕಾರ್ಯ ಮಾಡುತ್ತಿದೆ.ಪುಸ್ತಕ ಓದುವ ಅಭಿರುಚಿ ಬೆಳೆಸಲೂ ಕೂಡ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದರು.
ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಮಾತನಾಡಿ ಯುವ ಬರಹಗಾರರನ್ನು ಪ್ರೋತ್ಸಾಹಿಸಲು ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರ ಚೊಚ್ಚಲ ಕೃತಿಗೆ ಧನ ಸಹಾಯ ನೀಡುವ ಯೋಜನೆಯನ್ನು ರೂಢಿಸಿಕೊಂಡಿದೆ.ಆರಂಭದಲ್ಲಿ ಕೇವಲ ಎರಡು ಸಾವಿರ ರೂಪಾಯಿಗಳಾಗಿದ್ದ ಈ ಮೊತ್ತವನ್ನು ತಮ್ಮ ಅಧಿಕಾರಾವಧಿಯಲ್ಲಿ ಎಂಟು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಯಿತು.ಈಗ ಆ ಮೊತ್ತ ಹತ್ತು ಸಾವಿರ ರೂಪಾಯಿಗಳಿಗೆ ಏರಿರುವದು ಸಂತಸ. ಕನ್ನಡದ ಪ್ರತಿಭಾವಂತ ಯುವ ಬರಹಗಾರರನ್ನು ಗುರುತಿಸಿ,ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ ಮಾತನಾಡಿ ಹಿಂದಿನಿಂದ ಬಂದಿರುವ ಅರ್ಥಪೂರ್ಣ ಯೋಜನೆಗಳನ್ನು ಮುಂದುವರೆಸಿಕೊಂಡು ಬರುವದಲ್ಲದೆ. ರಾಜ್ಯದ ಎಲ್ಲ ಪದವಿ ಕಾಲೇಜುಗಳಲ್ಲಿ ಪುಸ್ತಕ ಪ್ರೇಮಿಗಳ ಬಳಗ ರಚಿಸಲು ಅರ್ಜಿಗಳನ್ನು ಕರೆಯಲಾಗಿದೆ.ಪ್ರತಿ ತಿಂಗಳು ಈ ಬಳಗದ ಮೂಲಕ ವಾಚನಾಭಿರುಚಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು.ಎಲ್ಲ ಕಾಲೇಜುಗಳ ಕನ್ನಡ ವಿಭಾಗದವರು ತಮ್ಮ ಸಂಸ್ಥೆಯಲ್ಲಿ ಪುಸ್ತಕ ಪ್ರೇಮಿಗಳ ಬಳಗ ರಚಿಸಲು ಕೂಡಲೇ ಅರ್ಜಿ ಸಲ್ಲಿಸಬೇಕು. ಪ್ರಾಧಿಕಾರವು ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ ನೀಡುವ ಪ್ರೋತ್ಸಾಹ ಧನದ ಮೊತ್ತಕ್ಕಿಂತಲೂ ಆ ಮೂಲಕ ದೊರೆಯುವ ಮಾನ್ಯತೆ ದೊಡ್ಡದು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ ಮಾತನಾಡಿದರು.ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಸೌಭಾಗ್ಯ ಸ್ವಾಗತಿಸಿ,ವಂದಿಸಿದರು.
0 comments:
Post a Comment