ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಜಿಲ್ಲೆಯ ೧೦೦ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಘೋಷಣೆ ಮಾಡುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮ ರೂಪಿಸಿ, ಯಶಸ್ವಿ ಗ್ರಾಮಗಳ ಪಟ್ಟಿಯನ್ನು ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿ ಗ್ರಾಮ ಪಂಚಾಯತಿಯಲ್ಲಿ ಒಂದು ಗ್ರಾಮದಂತೆ ಒಟ್ಟು ೧೩೪ ಗ್ರಾ.ಪಂ.ಗಳಲ್ಲಿ ತಲಾ ಒಂದು ಗ್ರಾಮವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಗುರುತಿಸಲು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಈ ನಿಟ್ಟಿನಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲದೆ ಅಂತಹ ಗ್ರಾಮಗಳ ಪಟ್ಟಿಯನ್ನು ಜ. ೧೫ ರ ಒಳಗಾಗಿ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕು. ಅಲ್ಲದೆ ಇದಕ್ಕಾಗಿ ಸಾಮಾಜಿಕ ಲೆಕ್ಕ ಪರಿಶೋಧನೆ ಮಾಡಿಸಿ ವರದಿ ನೀಡಲು ಇಲಾಖೆಯ ಎಲ್ಲ ಸಿಬ್ಬಂದಿಗಳು ಸೂಕ್ತ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಲು ಶ್ರಮಿಸಬೇಕು. ಸಾರ್ವಜನಿಕರು ಎಲ್ಲಾ ಶೌಚಾಲಯಗಳನ್ನು ಕಟ್ಟಿಸಿದ ನಂತರ ಶೌಚಾಲಯ ಉಪಯೋಗಿಸುವ ಕುರಿತು ಸೀಟಿ ಅಭಿಯಾನದಂತಹ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದಕ್ಕಾಗಿ ಶಾಲಾ ಮಕ್ಕಳು, ಗ್ರಾ.ಪಂ. ಸಿಬ್ಬಂದಿ ಹಾಗೂ ಆಸಕ್ತ ನಿರುದ್ಯೋಗಿ ಪದವೀಧರರನ್ನು ಒಗ್ಗೂಡಿಸಿಕೊಂಡು ಪ್ರತಿದಿನ ಮುಂಜಾನೆ/ಸಾಯಂಕಾಲ ಇಂತಹ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ ಆಯ್ಕೆಗೊಂಡಿರುವ ೧೦೦ ಗ್ರಾಮಗಳಿಗೆ ಜೈವಿಕ ಗೊಬ್ಬರ ತಯಾರಿಸಲು ಎಲ್ಲಾ ತಿಪ್ಪೆ ಗುಂಡಿಗಳಿಗೆ ಅವಶ್ಯಕ ಕ್ರಮ ಕೈಗೊಂಡು ಮಾಧ್ಯಮ/ಅಮೃತ ಸಿಂಚನ ಈ ಗ್ರಾಮಗಳಿಗೆ ಪೂರೈಸಲು ಕ್ರಮ ವಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಸಹಕಾರ ವ್ಯಕ್ತವಾಗುತ್ತಿದ್ದು, ಅವರಿಂದಲೂ ಸಹ ಸೂಕ್ತ ಪ್ರದೇಶಗಳನ್ನು ಗುರುತಿಸಿ, ಉಪಯುಕ್ತಗೊಳಿಸಲು ಕ್ರಮ ವಹಿಸಬೇಕು. ಇಂತಹ ಮಹತ್ವದ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಜಿಲ್ಲೆಯಲ್ಲಿ ಒಂದು ಲಕ್ಷದ ಒಂದನೇ ಶೌಚಾಲಯ ಘೋಷಣೆ ಮಾಡಲಿದ್ದಾರೆ. ತಾಲೂಕ ಮಟ್ಟದ ಅಧಿಕಾರಿಗಳು ಇದನ್ನು ಒಂದು ಆಂದೋಲನ ರೂಪದಲ್ಲಿ ಹಮ್ಮಿಕೊಂಡು ಜಿಲ್ಲೆಯಲ್ಲಿ ನಿಗದಿತ ಗುರಿಯನ್ನು ಮುಟ್ಟಲು ಪ್ರತಿಯೊಬ್ಬರೂ ಪರಿಶ್ರಮದಿಂದ ಕೆಲಸ ನಿರ್ವಹಿಸಬೇಕು. ಜ.೩೦ ರವರೆಗೂ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಜೆಯ ಮೇಲೆ ತೆರಳದೆ, ಕೇಂದ್ರಸ್ಥಾನದಲ್ಲಿ ಕೆಲಸ ನಿರ್ವಹಿಸುವಂತಾಗಲು ಅಗತ್ಯ ಕ್ರಮ ಕೈಗೊಳ್ಳಲು ಈಗಾಗಲೆ ಎಲ್ಲ ತಾಲೂಕಾ ಪಂಚಾಯತಿ, ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ತಿಳಿಸಿದ್ದಾರೆ.
0 comments:
Post a Comment