ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಕೊಪ್ಪಳದ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಹೊಸ ವರ್ಷಾಗಮನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಆರೈಕೆ ಮತ್ತು ಪೋಷಣೆ ಅವಶ್ಯವಿರುವ ಮಕ್ಕಳಿಗಾಗಿ ಕೊಪ್ಪಳದಲ್ಲಿ ನಡೆಸಲಾಗುತ್ತಿರುವ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಶ್ರೀಕಾಂತ ದ.ಬಬಲಾದಿ ಅವರ ನೇತೃತ್ವದಲ್ಲಿ ಮಕ್ಕಳಿಂದ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ, ಶ್ರೀಕಾಂತ ಬಬಲಾದಿ ಅವರು, ಮಕ್ಕಳು ದೇಶದ ಭವಿಷ್ಯವಾಗಿರುತ್ತಾರೆ, ಮಕ್ಕಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ದೇಶದ ಸಂಪತ್ತಾಗಬೇಕು ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಿಗೆ ಸಿಲುಕದಿರುವ ದೃಢ ನಿಶ್ಚಯ ಕೈಗೊಳ್ಳಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮುನಿರಾಜಪ್ಪ ಅವರು, ಹೊಸ ವರ್ಷದ ಮೊದಲನೇ ದಿನ ಭವ್ಯ ಭವಿಷ್ಯದ ಬಗ್ಗೆ ಸಂಕಲ್ಪವನ್ನು ಮಾಡಿದಲ್ಲಿ, ಯಶಸ್ಸು ಸಾಧಿಸಲು ಸಾಧ್ಯ ಎಂದರು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇಲಾಖೆಯಿಂದ ಅಗತ್ಯ ಸೌಲಭ್ಯ ಹಾಗೂ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಶೇಖರಗೌಡ ಜಿ. ರಾಮತ್ನಾಳ ಅವರು ಮಾತನಾಡಿ, ಬೆಳೆಯುವ ಸಿರಿ ಮೂಳಕೆಯಲ್ಲಿ ಎಂಬಂತೆ, ಮಕ್ಕಳು ಚಿಕ್ಕ ವಯಸ್ಸಿನಲ್ಲಿ ನಡೆಸುವ ಅಭ್ಯಾಸ, ಪ್ರಯತ್ನವು ಗುರಿ ಸಾಧನೆಗೆ ನೆರವಾಗುತ್ತದೆ. ಆದ್ದರಿಂದ ಸರ್ಕಾರದ ಆಶ್ರಯದಲ್ಲಿರುವ ಮಕ್ಕಳು ಒಳ್ಳೆಯ ಅಭ್ಯಾಸವನ್ನು ರೂಡಿಸಿಕೊಂಡು, ಸಮುದಾಯದಲ್ಲಿ ಉತ್ತಮ ನಾಗರಿಕರಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿ ಎಂದು ಹಾರೈಸಿದರು.
ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕ ಇಮಾಲಪ್ಪ ಸ್ವಾಗತಿಸಿ, ಪ್ರಾಸ್ಥಾವಿಕವಾಗಿ ಮಾತನಾಡಿದರು. ಆಪ್ತ ಸಮಾಲೋಚಕರಾದ ರವಿ ನಿರೂಪಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರವಿಕುಮಾರ ಪವಾರ ವಂದಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕರ ಬಾಲಮಂದಿರ ಸಿಬ್ಬಂದಿಗಳು ಹಾಗೂ ಮಕ್ಕಳು ಭಾಗವಹಿಸಿದ್ದರು.
0 comments:
Post a Comment