PLEASE LOGIN TO KANNADANET.COM FOR REGULAR NEWS-UPDATES

 ದೋಷಪೂರಿತ ಮೊಬೈಲ್ ಅನ್ನು ಹಿಂಪಡೆದು, ಗ್ರಾಹಕರಿಗೆ ಹೊಸ ಮೊಬೈಲ್ ನೀಡುವಂತೆ ಕೊಪ್ಪಳದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.
  ಸಂಜಯ್ ಕಾಟ್ವಾ ಎಂಬುವವರು ಕೊಪ್ಪಳದ ಗಣಪತಿ ಮೊಬೈಲ್ ವರ್ಲ್ಡ್ ಅವರಲ್ಲಿ ಸ್ಯಾಮಸಂಗ್ ಕಂಪನಿಯ ಹೊಸ ಮೊಬೈಲ್ ಅನ್ನು ೧೧೫೦೦ ರೂ. ನೀಡಿ ಖರೀದಿ ಮಾಡಿದರು.  ೪-೫ ತಿಂಗಳ ಬಳಿಕ ಮೊಬೈಲ್‌ನಲ್ಲಿ ಕೆಲವು ತೊಂದರೆಗಳು ಕಾಣಿಸಿದ್ದರಿಂದ, ಗಣಪತಿ ಮೊಬೈಲ್ ವರ್ಲ್ಡ್ ಅವರ ಬಳಿ ವಿಚಾರಿಸಿ, ಅವರ ಸೂಚನೆಯಂತೆ ಹುಬ್ಬಳ್ಳಿಯ ಸಿದ್ದಿವಿನಾಯಕ ಸ್ಯಾಮಸಂಗ್ ಸರ್ವೀಸಸ್ ಅವರಲ್ಲಿಗೆ ತೆರಳಿದಾಗ, ಮೊಬೈಲ್ ಫೋನ್‌ಗೆ ಹೊಸದಾಗಿ ಸಾಫ್ಟ್‌ವೇರ್ ಅಳವಡಿಸಿ ನೀಡಿದರು.  ಆದರೆ ಪುನಃ ಕೆಲ ತಿಂಗಳ ನಂತರ ತೊಂದರೆ ಮರುಕಳಿಸಿದಾಗ, ಸ್ಯಾಮಸಂಗ್ ವೆಬ್ ಕೇರ್ ಸೆಂಟರ್‌ನಲ್ಲಿ ದೂರು ದಾಖಲಿಸಿ, ದೋಷಪೂರಿತ ಫೋನಿನ ಖರೀದಿ ಮೊತ್ತವನ್ನು ಹಿಂದಿರುಗಿಸುವಂತೆ ಕೋರಿದ್ದರು.  ಕಂಪನಿಯವರ ಸೂಚನೆಯಂತೆ ಫೋನನ್ನು ಪುನಃ ಸರ್ವೀಸ್ ಮಾಡಿಸಿದರೂ, ಸರಿಯಾಗಲಿಲ್ಲ.  ಈ ಹಿನ್ನೆಲೆಯಲ್ಲಿ ಫೋನ್ ಖರೀದಿ ಮೊತ್ತವನ್ನು ಹಿಂದಿರುಗಿಸುವಂತೆ ಹಾಗೂ ವ್ಯಾಪಾರ, ಸಮಯದ ಹಾನಿ, ಮಾನಸಿಕ ಹಿಂಸೆಗೆ ಪರಿಹಾರ ದೊರಕಿಸುವಂತೆ ಸಂಜಯ್ ಕಾಟ್ವಾ ಸ್ಯಾಮಸಂಗ್ ಕಂಪನಿ ಹಾಗೂ ಗಣಪತಿ ಮೊಬೈಲ್ ವರ್ಲ್ಡ್ ಅವರ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ದಾಖಲಿಸಿದರು.
  ಪ್ರಕರಣದ ವಿಚಾರಣೆ ನಡೆಸಿದ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಪ್ರಭಾರಿ ಸದಸ್ಯ ಆರ್. ಬಂಡಾಚಾರ್ ಅವರು, ಮೊಬೈಲ್ ಫೋನನ್ನು ಸರ್ವೀಸ್ ಮಾಡಿಸಿದರೂ, ತೊಂದರೆ ನಿವಾರಣೆ ಆಗಿಲ್ಲ.  ದೋಷಪೂರಿತ ಮೊಬೈಲ್ ಮಾರಾಟ ಮಾಡಿರುವುದಾಗಿ ಪರಿಗಣಿಸಿದ್ದು, ದೂರುದಾರರಿಗೆ ೧೧೫೦೦ ರೂ. ಗಿಂತ ಕಡಿಮೆ ಅಲ್ಲದ ಬೆಲೆಯ ಹೊಸ ಮೊಬೈಲ್ ಅನ್ನು ೨೦೧೫ ರ ಫೆ. ೨೮ ರ ಒಳಗಾಗಿ ಹಾಗೂ ಪ್ರಕರಣದ ಖರ್ಚು ೨ ಸಾವಿರ ರೂ.ಗಳನ್ನು ಗ್ರಾಹಕರಿಗೆ ನೀಡುವಂತೆ ಗ್ರಾಹಕರ ವೇದಿಕೆ ಆದೇಶದಲ್ಲಿ ತಿಳಿಸಿದೆ.

Advertisement

0 comments:

Post a Comment

 
Top