PLEASE LOGIN TO KANNADANET.COM FOR REGULAR NEWS-UPDATES


ಪ್ರಸಕ್ತ ವರ್ಷದ ಆರಂಭದಲ್ಲಿ ಫ್ಯಾಸಿಸ್ಟ್ ವಿಷಸರ್ಪ ಭಾರತದ ಬಾಗಿಲಿಗೆ ಬಂದು ನಿಂತಿತು. ಈಗ ಹೊಸ ವರ್ಷ ಪ್ರವೇಶಿಸುವಾಗ ಇಡೀ ದೇಶದ ಮೇಲೆ ವಿಷಸರ್ಪ ಹೆಡೆಯಾಡಿಸುತ್ತಿದೆ. ಈ ದೇಶ ಮುಂದೆಲ್ಲಿ ಹೋಗುತ್ತದೆ? ಮುಂದೇನು ಆಗುತ್ತದೆ ಎಂದು ಊಹಿಸಲಾಗದಷ್ಟು ವೇಗದಲ್ಲಿ ವಿದ್ಯಮಾನಗಳು ಜರಗುತ್ತಿವೆ. ಅನಿವಾಸಿ ಪ್ರಧಾನಿಮಂತ್ರಿಯವರ ಅನುಪಸ್ಥಿತಿಯಲ್ಲಿ ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರ ಇಡೀ ದೇಶವನ್ನು ಈಗ ನಿಯಂತ್ರಿಸುತ್ತಿದೆ. ಯಾರು ಏನನ್ನು ಮಾತಾಡಬೇಕು? ಏನನ್ನು ಬರೆಯಬೇಕು? ಯಾವ ಸಿನೆಮಾ ತೆಗೆಯಬೇಕು ಎಂಬುದೆಲ್ಲ ಈ ಅಧಿಕಾರ ಕೇಂದ್ರದ ಮರ್ಜಿಗೆ ಒಳಪಟ್ಟಿರುತ್ತದೆ. ಹೊಸ ವರ್ಷದಲ್ಲಿ ಸಂಘ ಪರಿವಾರ ತನ್ನದೇ ಆದ ಕಾರ್ಯಸೂಚಿಯನ್ನು ಈಗಾಗಲೇ ಸಿದ್ಧಪಡಿಸಿದೆ. ಜನಸಾಮಾನ್ಯರು ದೇಶದ ಆರ್ಥಿಕ, ಸಾಮಾಜಿಕ ವಿಷಯಗಳ ಬಗ್ಗೆ ಚರ್ಚಿಸದಂತೆ, ಸರಕಾರದ ವಿರುದ್ಧ ತಿರುಗಿ ಬೀಳದಂತೆ ಅವರಲ್ಲಿ ಕೋಮುವಾದದ ಮತ್ತೇರಿಸುವ ಕೆಲಸ ಅವ್ಯಾಹತವಾಗಿ ನಡೆದಿದೆ. ಮೊದಲು ‘ಲವ್ ಜಿಹಾದ್’ ಆಯ್ತು, ಈಗ ಮರುಮತಾಂತರದ ವ್ಯಾಧಿ ಎಲ್ಲಾ ಕಡೆ ಹರಡುತ್ತಿದೆ. ಮುಸಲ್ಮಾನರನ್ನು ಮತ್ತು ಕ್ರೈಸ್ತರನ್ನು ಬಲವಂತವಾಗಿ ಹಿಂದೂಗಳನ್ನಾಗಿ ಮಾಡುವ ಕಾರ್ಯ ಆರಂಭವಾಗಿದೆ. ಇದನ್ನು ಯಾರೋ ಬಜರಂಗ ದಳದ ಕಾರ್ಯಕರ್ತರು ಮಾಡುತ್ತಿಲ್ಲ. ಆರೆಸ್ಸೆಸ್ ಸಂಚಾಲಕ ಮೋಹನ್ ಭಾಗವತ್ ಆಣತಿಯಂತೆ ಇದೆಲ್ಲ ನಡೆಯುತ್ತಿದೆ. ಹೊಸ ವರ್ಷದ ಜನವರಿ 30ರ ವೇಳೆಗೆ ದೇಶದ ಪ್ರಮುಖ ನಗರಗಳಲ್ಲಿ ಗಾಂಧಿ ಹಂತಕ ನಾಥುರಾಮ ಗೋಡ್ಸೆ ಪ್ರತಿಮೆಗಳನ್ನು ಅನಾವರಣ ಮಾಡುವ ಸಿದ್ಧತೆ ನಡೆದಿದೆ. ಉತ್ತರಪ್ರದೇಶದಲ್ಲಿ ಈಗಾಗಲೇ ಗೋಡ್ಸೆ ಮಂದಿರ ನಿರ್ಮಿಸಿ, ಆತನ ಮೂರ್ತಿಗೆ ಪೂಜಿಸಲಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಮಹಾಸಭೆ ಚಿಗಿತುಕೊಂಡಿದೆ. ತಾಂತ್ರಿಕವಾಗಿ ಇದಕ್ಕೂ ತಮಗೂ ಸಂಬಂಧವಿಲ್ಲವೆಂದು ಆರೆಸ್ಸೆಸ್ ಹೇಳಿದರೂ ಪರಸ್ಪರ ತಿಳುವಳಿಕೆ ಮೇಲೆ ಭಿನ್ನಭಿನ್ನ ಕಾರ್ಯಸೂಚಿಗಳಡಿಯಲ್ಲಿ ಈ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಸಾಧ್ವಿ ನಿರಂಜನ ಜ್ಯೋತಿ, ಸಾಕ್ಷಿ ಮಹಾರಾಜ್, ಯೋಗಿ ಆದಿತ್ಯನಾಥ ಸೇರಿದಂತೆ ವಿಶ್ವ ಹಿಂದೂ ಪರಿಷತ್ತಿನ ಸನ್ಯಾಸಿ ಗಳನ್ನು ನೋಡಿದರೆ ಆತಂಕ ಉಂಟಾಗುತ್ತದೆ. ಸ್ವಾಮಿ ವಿವೇಕಾನಂದ, ಗೌತಮ ಬುದ್ಧ, ಸ್ವಾಮಿ ರಾಮತೀರ್ಥ, ಸಿದ್ಧಾರೂಢರಂತಹ ಧಾರ್ಮಿಕ ವ್ಯಕ್ತಿಗಳನ್ನು ನೋಡಿದರೆ, ಗೌರವಭಾವನೆ ಮೂಡುತಿತ್ತು. ಅವರ ಮುಖದ ಮೇಲಿನ ಕಳೆ, ಆ ಸಾತ್ವಿಕ ತೇಜಸ್ಸು ಎಂತಹವರನ್ನೂ ಆಕರ್ಷಿಸುತ್ತಿತ್ತು. ಆದರೆ ಈಗಿನ ಸನ್ಯಾಸಿಗಳು ಭಯೋತ್ಪಾದಕರಂತೆ ಕಾಣುತ್ತಾರೆ. ಇವರಲ್ಲಿ ಅನೇಕರು ಅತ್ಯಾಚಾರದಂತಹ ಪ್ರಕರಣಗಳಲ್ಲಿ ಸಿಲುಕಿ ಜೈಲಿನ ಕಂಬಿ ಎಣಿಸುತ್ತಿದ್ದಾರೆ. ಇವರು ಬಾಯಿಬಿಟ್ಟರೆ, ನಂಜಿನ ಸಾಗರವೇ ಹರಿದು ಬರುತ್ತದೆ. ದೇಶದಲ್ಲಿ ಇಷ್ಟೆಲ್ಲ ನಡೆದಿರುವಾಗ ಪ್ರಧಾನಿ ನರೇಂದ್ರ ಮೋದಿ ಜಾಣಮೌನ ತಾಳಿದ್ದಾರೆ. ಇದು ದೇಶ ಒಡೆಯುವ ಶಕ್ತಿಗೆ ನೀಡುವ ವೌನ ಸಮ್ಮತಿಯಾಗಿದೆ. ಸಂಘ ಪರಿವಾರದ ಕಾರ್ಯಸೂಚಿ ಬರೀ ಗೋಹತ್ಯೆ ನಿಷೇಧ, ಲವ್ ಜಿಹಾದ್, ಮತಾಂತರ ನಿಷೇಧ, ಮಂದಿರ ನಿರ್ಮಾಣ ಇಷ್ಟಕ್ಕೆ ಸೀಮಿತವಾಗಿಲ್ಲ. ಅದರ ಅಂತಿಮ ಗುರಿ ಹಿಂದೂ ರಾಷ್ಟ್ರ ನಿರ್ಮಾಣ. ಹಿಂದೂ ರಾಷ್ಟ್ರ ನಿರ್ಮಾಣವಾಗಬೇಕಾದರೆ ಈಗಿರುವ ಪ್ರಜಾಪ್ರಭುತ್ವ ಆಡಳಿತ ಪದ್ಧತಿ ನಾಶವಾಗಬೇಕು. ಸರ್ವಜನರಿಗೂ ಸಮಾನಾವಕಾಶ ನೀಡಿದ ಸಂವಿಧಾನವನ್ನು ಕಸದ ಬುಟ್ಟಿಗೆ ಹಾಕಬೇಕು. ಇವೆಲ್ಲ ಸಂಘ ಪರಿವಾರದ ಅಜೆಂಡಾದಲ್ಲಿವೆ. ಈ ನಿಟ್ಟಿನಲ್ಲಿ ಜನರನ್ನು ಧ್ರುವೀಕರಣಗೊಳಿಸಲು ನಿರಂತರವಾಗಿ ಅವರನ್ನು ಉನ್ಮಾದದಲ್ಲಿ ಇಡಲು ಆರೆಸ್ಸೆಸ್ ಇಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗುತ್ತದೆ. ಮುಸಲ್ಮಾನರು ಮತ್ತು ಕ್ರೈಸ್ತರ ಮತಾಂತರಕ್ಕೆ ಮಾತ್ರ ಆರೆಸ್ಸೆಸ್ ತೃಪ್ತವಾಗುವುದಿಲ್ಲ. ಭಾರತದಲ್ಲಿ ಹಿಂದೂ ಧರ್ಮವೊಂದೇ ಅಸ್ತಿತ್ವದಲ್ಲಿ ಇರಬೇಕು. ಉಳಿದವರು ಅದರ ಗುಲಾಮರಂತಿರಬೇಕು ಎಂದು ಗೋಳ್ವಲ್ಕರ್ ಆಗಲೇ ಹೇಳಿದ್ದಾರೆ. ಹಿಂದೂ ಧರ್ಮವೆಂದರೆ ವೈದಿಕ ಮನುವಾದಿ ಧರ್ಮ. ಅಂತಲೇ ಅವೈದಿಕ ಧರ್ಮಗಳಾದ ಜೈನ್, ಬೌದ್ಧ, ಸಿಖ್ ಧರ್ಮಗಳನ್ನು ಸಂಘ ಪರಿವಾರ ಈಗ ಸಹಿಸಿದರೂ ಮುಂದೆ ಸಹಿಸುವುದಿಲ್ಲ. ಈ ಧರ್ಮಗಳಿಂದ ವ್ಯಕ್ತಿಗಳನ್ನು ಮತಾಂತರ ಮಾಡದೇ ಇದೇ ಧರ್ಮವನ್ನು ಆಪೋಷನ ಮಾಡಿಕೊಳ್ಳಲು ಸಂಘ ಪರಿವಾರ ಯೋಜನೆ ರೂಪಿಸಿದೆ. ದೇಶದಲ್ಲಿ ಜೈನರ ಸಂಖ್ಯೆ ಕ್ಷೀಣಿಸು ತ್ತಿದೆಯೆಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಇತ್ತೀಚೆಗೆ ಆತಂಕ ವ್ಯಕ್ತ ಪಡಿಸಿದ್ದರು. ಈ ರೀತಿಯ ಆತಂಕ ವ್ಯಕ್ತಪಡಿಸಿದ ಅವರೇ ವಿಶ್ವ ಹಿಂದೂ ಪರಿಷತ್ತಿನ ಉನ್ನತ ಸಮಿತಿಯೊಂದರ ನೇತೃತ್ವ ವಹಿಸಿದ್ದಾರೆ. ಇದು ಹಿಂದೂ ಧರ್ಮದಲ್ಲಿನ ಜೀರ್ಣವಾಗುವ ಮೊದಲ ಹೆಜ್ಜೆ. ಕ್ರಮೇಣ ಇಡೀ ಧರ್ಮವನ್ನೇ ಸಂಘಪರಿವಾರ ಪಚನ ಮಾಡಿಕೊಳ್ಳುತ್ತದೆ. ತಮ್ಮದು ವೈದಿಕೇತರ ಧರ್ಮ, ಚಾತುರ್‌ವರ್ಣಕ್ಕೆ ವಿರೋಧವಾಗಿರುವ ಧರ್ಮ ಎಂದು ಸಿದ್ಧಾಂತ ಪ್ರತಿಪಾದಿಸುವ ಜೈನರು ತಮಗೆ ಅರಿವಿಲ್ಲದೇ ಹಿಂದೂತ್ವದ ಬಲೆಗೆ ಬಿದ್ದಿದ್ದಾರೆ. ಬೌದ್ಧರು ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಆದರೂ ದಲೈಲಾಮಾ ಅವರು ಇತ್ತೀಚೆಗೆ ವಿಎಚ್‌ಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಿಖ್ಖರು ಮಾತ್ರ ತಮ್ಮ ಐಡೆಂಟಿಟಿ ಉಳಿಸಿಕೊಳ್ಳಲು ಹಿಂದೂತ್ವವಾದದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ.


ಇನ್ನು ದಲಿತರಲ್ಲಿ ಎಡ-ಬಲ ಎಂದು ಒಡೆಯಲಾಗಿದೆ. ದಲಿತರ ಸ್ವಾಭಿಮಾನದ ಸಂಕೇತವಾದ ಅಂಬೇಡ್ಕರ್ ಅವರ ಚಾರಿತ್ರವಧೆ ಮಾಡಲು ಕೂಡ ಸಂಘ ಪರಿವಾರ ಯತ್ನಿಸಿತು. ಆರೆಸ್ಸೆಸ್ ಸಿದ್ಧಾಂತವಾದಿ ಅರುಣ್ ಶೌರಿಯವರು ಅಂಬೇಡ್ಕರ್ ಅವರ ತೇಜೋವಧೆ ಮಾಡಿ ಒಂದು ಪುಸ್ತಕ ಬರೆದರು. ಇದರ ವಿರುದ್ಧ ದಲಿತರು ತಿರುಗಿಬಿದ್ದಾಗ, ಆರೆಸ್ಸೆಸ್ ತನ್ನ ಬಣ್ಣ ಬದಲಿಸಿ ತನ್ನ ಕಾರ್ಯಕ್ರಮಗಳಲ್ಲಿ ಭಗತ್‌ಸಿಂಗ್ ಫೋಟೊ ಅಕ್ರಮವಾಗಿ ಹಾಕಿದಂತೆ ಅಂಬೇಡ್ಕರ್ ಫೋಟೊ ಹಾಕುತ್ತಿದೆ. ಹಿಂದೂತ್ವದ ಈ ಉನ್ಮಾದದಲ್ಲಿ ರಾಷ್ಟ್ರಕವಿ ಕುವೆಂಪು ಅವರು ನೀಡಿದ ವಿಶ್ವ ಮಾನವ ಸಂದೇಶವನ್ನು ಯಾರು ಕೇಳುತ್ತಾರೆ. ಬಸವಣ್ಣನ ಅನುಯಾಯಿಗಳೇ ಚಡ್ಡಿ ಹಾಕಿ ಪಥಸಂಚಲನ ನಡೆಸುತ್ತಿರುವಾಗ, ಅವರು ನೀಡಿದ ಸಕಲ ಜೀವಾತ್ಮರ ಕಲ್ಯಾಣದ ಸಂದೇಶ ಕೇವಲ ಸ್ವಾಮಿಗಳ ಪ್ರವಚನಕ್ಕೆ ಸೀಮಿತವಾಗುತ್ತದೆ. ಈ ದೇಶದ ಸ್ವಾತಂತ್ರ್ಯ ಚಳವಳಿಯ ಐಕಾನ್‌ಗಳಾದ ಗಾಂಧಿ ಮತ್ತು ನೆಹರೂ ಅವರ ಮೇಲೆ ಸಂಘ ಪರಿವಾರ ದಾಳಿ ಆರಂಭಿಸಿ ಅವರ ತೇಜೋವಧೆ ಮಾಡುತ್ತಿದೆ. ಸ್ವಾತಂತ್ರ ಹೋರಾಟದ ಅರಿವಿಲ್ಲದ ಹೊಸ ಪೀಳಿಗೆಯಲ್ಲಿ ಗೋಡ್ಸೆ ಆರಾಧಕರನ್ನು ಸೃಷ್ಟಿಸಲಾಗುತ್ತಿದೆ. ಈ ಎಲ್ಲ ಗೊಂದಲದಲ್ಲಿ ದೇಶವನ್ನು ಲೂಟಿ ಮಾಡಲು ಕಾರ್ಪೊರೇಟ್ ಕಂಪೆನಿಗಳು ಮುತ್ತಿಗೆ ಹಾಕಿವೆ. ಇದನ್ನು ಪ್ರತಿರೋಧಿಸಬೇಕಾದ ಜನ ಜಾತಿ-ಧರ್ಮದ ದ್ವೇಷದ ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದಾರೆ. ಜನರನ್ನು ಈ ರೀತಿ ಹೊಡೆದಾಟಕ್ಕೆ ಹಚ್ಚಿ ಅಡ್ಡದಾರಿ ಹಿಡಿಸಿದ್ದಕ್ಕೆ ಆರೆಸ್ಸೆಸ್‌ಗೆ ದೇಶ-ವಿದೇಶದ ಕಾರ್ಪೊರೇಟ್ ಕಂಪೆನಿಗಳಿಂದ ಹಣ ಹರಿದು ಬರುತ್ತಿದೆ. ಈ ಹಣದಲ್ಲಿ ವಿಮಾನದಲ್ಲಿ ಹಾರಾಡುವ ಸಿಂಘಾಲ್, ತೊಗಾಡಿಯಾ ಅಂಥವರು ಯುವಕರಿಗೆ ಸ್ಫೂರ್ತಿಯ ನಾಯಕ ರಾಗುತ್ತಿದ್ದಾರೆ. ಕಾರ್ಪೊರೇಟ್ ಕಂಪೆನಿಗಳಿಗೆ ಅವಕಾಶ ಮಾಡಿಕೊಡಲು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಮೋದಿ ಸರಕಾರ ಈಗಾಗಲೇ ದುರ್ಬಲಗೊಳಿಸಿದೆ. ಇದರಿಂದ ಜೈವಿಕ ಪರಿಸರದ ಮೇಲೆ ಭಾರೀ ದುಷ್ಪರಿಣಾಮ ಉಂಟಾಗುತ್ತಿದೆ. ಗಣಿಗಾರಿಕೆಗೆ ಮುಕ್ತ ಅವಕಾಶ ನೀಡುತ್ತಿರುವುದರಿಂದ ನೀರು, ಗಾಳಿ ಕಲುಷಿತಗೊಳ್ಳುತ್ತಿದೆ. ಅರಣ್ಯ ನಾಶವಾಗುತ್ತಿದೆ. ಗಿರಿಜನರನ್ನು ಒಕ್ಕಲೆಬ್ಬಿಸ ಲಾಗುತ್ತಿದೆ. ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿ ಸೂಕ್ಷ್ಮ ಅರಣ್ಯಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ದೇಶದ ಬಗ್ಗೆ ಮಾತನಾಡುವ ಸಂಘಪರಿವಾರ ಈ ಕುರಿತು ತುಟಿ ಬಿಚ್ಚುವುದಿಲ್ಲ.

ಇದನ್ನು ಪ್ರತಿರೋಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದ ಜಾತ್ಯತೀತ ಶಕ್ತಿಗಳು ದಿಕ್ಕಾಪಾಲಾಗಿವೆ. ಜಾತ್ಯತೀತತೆಯನ್ನು ತಾನೇ ಗುತ್ತಿಗೆ ಹಿಡಿದಂತೆ ಮಾತನಾಡುತ್ತಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆ ಸೋಲಿನ ನಂತರ ತುರ್ತು ಚಿಕಿತ್ಸಾ ಘಟಕ ಸೇರಿದೆ. ಈಗ ಸೋಲಿನ ಕಾರಣ ಹುಡುಕಲು ಹೊರಟಿದೆ. ಹಿಂದೂಗಳು ಕೋಪಗೊಂಡಿದ್ದರಿಂದ ಕಾಂಗ್ರೆಸ್ ಸೋಲಬೇಕಾಯಿತು ಎಂದು ತಾನೇ ಭ್ರಮಿಸಿ ಹಿಂದೂಗಳನ್ನು ಓಲೈಸುವ ದಿಕ್ಕಿನತ್ತ ಸಾಗಲು ಸಿದ್ಧತೆ ನಡೆಸಿದೆ. ಇದು ಇನ್ನೊಂದು ಆತ್ಮಹತ್ಯಾ ಪ್ರಯತ್ನ. ಇನ್ನು ಎಡಪಕ್ಷಗಳನ್ನು ಬಿಟ್ಟರೆ ಬೇರೆ ಗತಿಯಿಲ್ಲ. ಕಮ್ಯುನಿಸ್ಟ್ ಪಕ್ಷಗಳು ಎಷ್ಟೇ ದುರ್ಬಲಗೊಂಡಿದ್ದರೂ ವಿನಾಶಕಾರಿ ಆರ್ಥಿಕ ನೀತಿ, ಕೋಮುವಾದದ ವಿರುದ್ಧ ಈಗಲೂ ದನಿಯೆತ್ತಿ ಹೋರಾಡುತ್ತಿದೆ. ಈ ಹೋರಾಟ ಆರ್ಥಿಕ ಬೇಡಿಕೆಗಳನ್ನು ಮೀರಿ ದಲಿತ, ಹಿಂದುಳಿದ, ಆದಿವಾಸಿ ಜನಸಮುದಾಯಗಳನ್ನು ಒಳಗೊಂಡ ವಿಶಾಲ ಹೋರಾಟ ರೂಪಗೊಳ್ಳಬೇಕಿದೆ. ಇಂತಹ ಜನ ಹೋರಾಟವೊಂದೇ ಈ ದೇಶದ ಪ್ರಜಾಪ್ರಭುತ್ವ ರಕ್ಷಿಸಬಲ್ಲದು. ಹೊಸ ವರ್ಷದಲ್ಲಿ ಸಂಘ ಪರಿವಾರದ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ಪ್ರಗತಿಪರರ ಏಕೈಕ ಕಾರ್ಯಸೂಚಿಯಾಗಬೇಕಿದೆ.

Advertisement

0 comments:

Post a Comment

 
Top