PLEASE LOGIN TO KANNADANET.COM FOR REGULAR NEWS-UPDATES

-: ಮೌಲಾನಾ ಅಬುಲ್ ಕಲಾಂ ಆಝಾದ್ :-
ಯುವಕ ಆಝಾದ್‌ರ ಪ್ರತಿಭೆ ಸಾಧನೆಗಳನ್ನು ಗಮನಿಸಿ ಹುಟ್ಟಿದ ದಿನದಂದೇ ಆಝಾದ್‌ರಿಗೆ ಐವತ್ತು ವರ್ಷ ವಯಸ್ಸು ಆಗಿತ್ತು ಎಂದು ಸರೋಜಿನಿ ನಾಯ್ಡು ಹೇಳಿದ್ದರು. ಆಝಾದ್‌ರ ಕುಟುಂಬ ಭಾರತೀಯ ಮೂಲದ್ದೇ ಆದರೂ ತಂದೆ ಅರೇಬಿಯಾಕ್ಕೆ ಹೋಗಿ ಅಲ್ಲಿಂದಲೇ ಮದುವೆಯಾದ್ದರಿಂದ ಆಝಾದ್‌ರ ಹುಟ್ಟು ಅಲ್ಲೇ ಆಯಿತು. ಭಾರತೀಯ ಖೈರುದ್ದೀನ್ ಹಾಗೂ ಅರೇಬಿಯನ್ ಮಹಿಳೆ ಆಲಿಯಾರ ಪುತ್ರನಾಗಿ ೧೮೮೮ರ ನವೆಂಬರ್ ಮೋಹಿದ್ದೀನ್ ಅಹ್ಮದ್ ಮುಂದೆ ಧಾರ್ಮಿಕ ವಿದ್ವತ್ತಿನಿಂದಾಗಿ ’ಮೌಲಾನಾ’ ಎಂಬುದಾಗಿ ಬಹುಭಾಷೆಗಳ ಪರಿಣಿತಿಯಿಂದಾಗಿ ’ಅಬುಲ್ ಕಲಾಂ’ (ಭಾಷೆಗಳ ಪಿತ) ಎಂಬುದಾಗಿ ತೀವ್ರ ಸ್ವಾತಂತ್ರ್ಯ ವಾಂಛೆಯಿಂದ ’ಆಝಾದ್’ ಎಂಬುದು ಸೇರಿಕೊಂಡು ’ಮೌಲಾನಾ ಅಬುಲ್ ಕಲಾಂ ಆಝಾದ್’ ಎಂದು ಖ್ಯಾತಿವೆತ್ತರು.
        ಆಝಾದ್‌ಗೆ ಹತ್ತು ವರ್ಷವಾದಾಗಲೇ ಕುಟುಂಬ ಕಲ್ಕತ್ತೆಗೆ ಬಂತು. ಚಿಕ್ಕಂದಿನಿಂದಲೇ ಧಾರ್ಮಿಕ ಜ್ಞಾನವನ್ನು ಪಡೆದರು. ಅರಬ್ಬೀ, ಉರ್ದು, ಪರ್ಷಿಯನ್, ಇಂಗ್ಲೀಷ್ ಭಾಷೆಗಳನ್ನು ಗಣಿತ, ಸಾಹಿತ್ಯ, ಯುನಾನಿ ವೈದ್ಯ ವಿಜ್ಞಾನಗಳನ್ನು ಕರಗತ ಮಾಡಿಕೊಂಡು ಬಹುಶ್ರುತರಾಗಿದ್ದರು. ಅದ್ಭುತ ಪ್ರತಿಭೆಯಾಗಿ ಬೆಳೆದ ಅವರು ಬರೀ ೧೬ನೇ ವಯಸ್ಸಿನಲ್ಲೇ ಪ್ರಚಂಡ ವಾಗ್ಮಿಯೂ, ಪ್ರಸಿದ್ಧ ಬರಹಗಾರರೂ ಆದರು. ಉರ್ದು ವಿದ್ವಾಂಸರ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ, ಬೇಟಿ ತೆಗೆದು ಸಿಕ್ಕಿದ (ಆಶುಭಾಷಣ/ Piಛಿಞ ಚಿಟಿಜ Sಠಿeeಛಿh) ವಿಷಯದಲ್ಲಿ ಎರಡೂ ಗಂಟೆಗೂ ಹೆಚ್ಚು ಕಾಲ ನಿರರ್ಗಳವಾಗಿ ಮಾತನಾಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದಾಗಲೂ ’ಲಿಸಾನುಸ್ಸಿದ್‌ಖ್’ ಬರಹಗಳ ಮೂಲಕ ಬ್ರಿಟೀಷರನ್ನು ನಡುಗಿಸುವಾಗಲೂ ಆಝಾದರ ವಯಸ್ಸು ೧೬ ಮಾತ್ರ !
        ೧೯೦೮ರಲ್ಲಿ ಅವರ ರಾಜಕೀಯ ವಿಚಾರಧಾರೆ ಕ್ರಾಂತಿಕಾರಿ ಚಟುವಟಿಕೆಗಳ ಕಡೆಗೆ ತಿರುಗಿತು. ಇರಾಕ್, ಸಿರಿಯಾ, ಈಜಿಪ್ಟ, ಮತ್ತು ತುರ್ಕಿ ದೇಶಗಳನ್ನು ಸಂದರ್ಶಿಸಿದರು. ದೇಶದ ರಾಜಕೀಯ ವಿಮೋಚನೆಯಲ್ಲಿ ಮುಸ್ಲಿಮರು ಸಕ್ರೀಯ ಪಾತ್ರ ವಹಿಸಬೇಕು ಎಂಬ ಚಿಂತನೆ ಬಲಗೊಂಡಿತು. ಈ ಚಿಂತನೆಯೇ ಉತ್ಕೃಷ್ಟವಾದ ನವೀನ ಶೈಲಿಯ, ಮನಸೂರೆಗೊಳ್ಳುವಂತಹ ಪತ್ರಿಕೆ ’ಅಲ್-ಹಿಲಾಲ್’ ಪ್ರಕಟಣೆಗೆ ಕಾರಣವಾಯಿತೆಂದು ಡಬ್ಲ್ಯೂ.ಸಿ.ಸ್ಮಿತ್(W.ಅ.Smiಣh) ಹೇಳುತ್ತಾರೆ. ’ಅಲ್-ಹಿಲಾಲ್’ ಇಸ್ಲಾಮಿನ ಬೋಧನೆಗಳನ್ನು ಮತ್ತು ದೇಶದ ಸ್ವಾತಂತ್ರ್ಯವನ್ನು ಏಕಕಾಲದಲ್ಲಿ ಪ್ರಚುರಗೊಳಿಸುತ್ತಿತ್ತು. ಆಝಾದ್‌ರಿಗೆ ಇವೆರಡರಲ್ಲಿ ಯಾವ ವಿರೋಧಭಾಸವೂ ಕಾಣಲಿಲ್ಲ. ಗುಲಾಮತನ್ದ ವಿರಿದ್ಧ ಹೋರಾಟಕ್ಕೆ ಮತ್ತು ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ’ಕುರ್‌ಆನ್’ ಆಜ್ಞಾಪಿಸುತ್ತದೆ ಎಂದರು. ಪ್ರಕಟಣೆಯ ಮೂರು ತಿಂಗಳುಗಳಲ್ಲಿಯೇ ಈ ಪತ್ರಿಕೆಯ ಸಂಚಿಕೆಗಳನ್ನು ಪುನಃ ಮುದ್ರಣಗೊಳಿಸಬೇಕಾಯಿತು. ಏಕೆಂದರೆ ಪ್ರತಿ ಹೊಸ ಓದುಗ ಪತ್ರಿಕೆಯ ಎಲ್ಲಾ ಪ್ರತಿಗಳನ್ನು ಓದ ಬಯಸುತ್ತಿದ್ದ. ಪ್ರಕಟಣೆಯ ಎರಡು ವರ್ಷಗಳಲ್ಲಿಯೇ ೨೬೦೦೦ ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗುತ್ತಿದ್ದವು.
        ೧೯೧೨ರಲ್ಲಿ ಆರಂಭವಾದ ’ಆಲ್-ಲಾಲ್’ ಪತ್ರಿಕೆ ತನ್ನ ಕ್ರಾಂತಿಕಾರಕ ಬರಹಗಳಿಂದ ಬ್ರಿಟೀಷರ ಕೆಂಗೆಣ್ಣಿಗೆ ಗುರಿಯಾಯಿತು. ಸರಕಾರದ ಆದೇಶದ ಮೇರೆಗೆ ಒಮ್ಮೆ ರೂ.೨೦೦೦/- ಮತ್ತೊಮ್ಮೆ ರೂ.೧೦೦೦೦/- ಠೇವಣಿ ಕಟ್ಟಬೇಕಾಯಿತು. ಎರಡೂ ಸಲ ಈ ಮೊತ್ತವನ್ನು ಮುಟ್ಟುಗೋಲು ಹಾಕಲಾಯಿತು. ೧೯೧೪ರಲ್ಲಿ ಪತ್ರಿಕೆ ಮುಚ್ಚಿಹೋಯಿತು. ಪತ್ರಿಕೆ ನಿಷೇಧಿಸಿದಾಗ ಜಗ್ಗದ ಆಝಾದ್ ೧೯೧೫ರಲ್ಲಿ ’ಅಲ್‌ಬಲಾಗ್’ ಪತ್ರಿಕೆ ಆರಂಭಿಸಿದರು. ಆದರೆ, ’ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್’ ಆಡಿಯಲ್ಲಿ ಆಝಾದ್‌ರನ್ನು ಕಲ್ಕತ್ತಾದಿಂದ ಹೊರಹಾಕಲಾದಾಗ ಈ ಪತ್ರಿಕೆಯನ್ನು ನಿಷೇಧಿಸಲಾಯಿತು. ಜೊತೆಗೆ ಇವರನ್ನು ಬಿಹಾರದ ರಾಂಚಿಯ ಜೈಲಿನಲ್ಲಿ ನಾಲ್ಕು ವರ್ಷಗಳ ಕಾಲ ಬಂಧಿಸಿಡಲಾಯಿತು.
        ಗಾಂಧೀಜಿಯವರು ಅಹಿಂಸೆ ಮತ್ತು ಅಸಹಕಾರವನ್ನು ಬ್ರಿಟೀಷರ ವಿರುದ್ಧ ಅಸ್ತ್ರವನ್ನಾಗಿ ಪ್ರಯೋಗಿಸಿದಾಗ, ಆಝಾದ್ ಇದರಿಂದ ಪ್ರಭಾವಿತರಾಗಿ ತಮ್ಮನ್ನು ಗಾಂಧೀಜಿಯವರೊಡನೆ ಗುರುತಿಸಿಕೊಂಡರು. ಹಿಂದೂ-ಮುಸ್ಲಿಂ ಮೈತ್ರಿ ನಿರ್ಮಾಣ ಕಾರ್ಯದಲ್ಲಿ ತೀವ್ರವಾಗಿ ಗಿರಿತಿಸಿಕೊಂಡ ಆಝಾದ್ ತಮ್ಮ ೩೫ನೇ ವಯಸ್ಸಿನಲ್ಲೇ ಪ್ರತಿಷ್ಠಾಪಿತ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷತೆಯನ್ನು ಅಲಂಕರಿಸಿದರು. ಆವೇಶ ಪೂರ್ಣ ಬರಹಗಳು ಮತ್ತು ರೋಮಾಂಚನಕಾರಿ ಭಾಷಣಗಳ ಮೂಲಕ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಯನ್ನು, ಕೋಮು ಸೌಹಾರ್ದತೆ, ರಾಷ್ಟ್ರೀಯ ಭಾವೈಕ್ಯತೆಗಳ ಅನಿವಾರ್ಯತೆಯನ್ನು ಜನ-ಮನಸ್ಸುಗಳಿಗೆ ತಲುಪಿಸಿದರು.
        ೧೯೩೯ರಲ್ಲಿ ಮತ್ತೊಮ್ಮೆ ಕಾಂಗ್ರೆಸ್ಸಿನ ಅಧ್ಯಕ್ಷರಾಗುವ ಮೂಲಕ ಎರಡನೇ ಬಾರಿ ಈ ಘನ ಹುದ್ದೆ ನಿರ್ವಹಿಸಿ  ತಮ್ಮ ನಾಯಕತ್ವ ಸಾಮಾರ್ಥ್ಯವನ್ನು ಮೆರೆದ ಆಝಾದ್ ೧೯೩೯-೪೫ರ ನಿರ್ಣಾಯಕ ಅವಧಿಯನ್ನು ಸಮರ್ಥವಾಗಿ ನಿರ್ವಹಿಸಿದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ’ಮೌಲಾನಾ ಅಬುಲ್ ಕಲಾಂ ಆಝಾದ್’ ೧೯೪೨ರ ಆಗಷ್ಟ್ ೯ರ ’ಕ್ವಿಟ್ ಇಂಡಿಯಾ’ (ಬ್ರಿಟೀಷರೇ ಭಾರತ ಬಿಟ್ಟು ತೊಲಗಿ) ಚಳವಳಿಗೆ ನಾಯಕತ್ವ ನೀಡಿ ಅಹ್ಮದ್‌ನಗರ ಕೋಟೆ ಜೈಲಿನಲ್ಲಿ ಬಂಧಿತರಾದರು. ಆಝಾದರ  ಬಿಡುವಿಲ್ಲದ ರಾಜಕೀಯ ಕಾರ್ಯಕ್ರಮಗಳು, ದೀರ್ಘ ಸೆರೆಮನೆವಾಸದ ಕಾರಣಗಳಿಂದ ಅವರ ಪತ್ನಿ ಝಲೇಖ ಬೇಗಂರೊಂದಿಗೆ ಇರಲು ಸಾಧ್ಯವಾಗಲಿಲ್ಲ. ಇವರ ಏಕೈಕ ಮಗು ನಾಲ್ಕನೇಯ ವರ್ಷದಲ್ಲಿಯೇ ನಿಧನ ಹೊಂದಿತ್ತು. ೧೯೪೪ರಲ್ಲಿ ಆಝಾದ್ ಪುನಃ ಜೈಲಿನಲ್ಲಿದ್ದರು. ಅವರ ಪತ್ನಿ ೧೫೦೦ ಕಿ.ಮೀ. ದೂರದಲ್ಲಿದ್ದರು. ’ಗುಆರ್-ಏ-ಖಾತಿರ್’ ಕೃತಿಯಲ್ಲಿ ಆಝಾದ್ ಈ ರೀತಿ ಬರೆದಿದ್ದಾರೆ.
        ಮಾರ್ಚ್ ೨೩ ರಂದು ಟೆಲಿಗ್ರಾಮ್ ಮುಖಾಂತರ ಅವಳು ತೀವ್ರ ಅಸ್ವಸ್ಥಳಾಗಿರುವುದು ತಿಳಿಯಿತು. ಪತ್ರಿಕೆಗಳಲ್ಲೂ ಅದೇ ವಿಷಯವಿತ್ತು. ಈ ಸಂಬಂಧ ಸರ್ಕಾರಕ್ಕೆ ಏನಾದರೂ ಮನವಿ ಮಾಡ ಬಯಸಿದ್ದರೆ, ಅದನ್ನು ಬಾಂಬೆಗೆ ಕಳುಹಿಸಿ ಕೊಡುವುದಾಗಿ ಜೇಲ್ ಸೂಪರಿಂಟೆಂಡೆಂಟ್ ತಿಳಿಸಿದರು. ನಾನು ಸರ್ಕಾರಕ್ಕೆ ಯಾವುದೇ ಮನವಿ ಮಾಡುವುದಿಲ್ಲವೆಂದು ಅವನಿಗೆ ದೃಢವಾಗಿ ತಿಳಿಸಿದೆ.
        ಕೊನೆಗೂ ನನ್ನ ಕಷ್ಟಗಳ ಬಟ್ಟಲು ತುಂಬಿತು. ಏಪ್ರಿಲ್ ೯ರಂದು ಸೂಪರಿಂಟೆಂಡೆಂಟ್ ದುಃಖದ ವಾರ್ತೆ ಇರುವ ಟಿಲಿಗ್ರಾಮ್ ನನ್ನ ಕೈಗೆ ಕೊಟ್ಟ. ಈ ರೀತಿ ೩೬ವರ್ಷಗಳ ನಮ್ಮ ವೈವಾಹಿಕ ಜೀವನ ಕೊನೆಗೊಂಡಿತು. ನನ್ನ ಆತ್ಮವಿಶ್ವಾಸ ಕೈ ಕೊಡದಿದ್ದರೂ ಕಾಲ ಕೆಳಗಿನ ಭೂಮಿ ಕುಸಿದಂತಾಯಿತು.
        "ಆಝಾದ್‌ರ ದೇಶನಿಷ್ಠೆ ಅವರ ಧರ್ಮನಿಷ್ಠೆಯಷ್ಟೇ ಅಚಲ ಎಂದಿದ್ದರೂ ಗಾಂಧೀಜಿ." ೧೯೪೭ ಮಾರ್ಚ್ ವೇಳೆಗೆ ಸರ್ದಾರ್ ಮತ್ತು ನೆಹರೂ ದೇಶ ವಿಭಜನೆಯನ್ನು ಒಪ್ಪಿಕೊಂಡಿದ್ದರು. ’ನಾವು ಇಷ್ಟಪಟ್ಟರೂ, ಪಡದಿದ್ದರೂ ಭಾರತದಲ್ಲಿ ಎರಡು ರಾಷ್ಟ್ರಗಳಿವೆ’ ಎಂದು ಪಟೇಲರು ನುಡಿದಾಗ ಆಝಾದ್ ಬಹಳ ನೊಂದುಕೊಂಡಿದ್ದರು. ವಿಭಜನೆಗೆ ನಿಮ್ಮ ವಿರೋದವನ್ನು ತ್ಯಜಿಸಿ ಎಂದು ಕೇಳಿಕೊಂಡಿದ್ದರು. ೩೧ಮಾರ್ಚ್ ಆಝಾದ್ ಗಾಂಧೀಜಿಯನ್ನು ಭೇಟಿಮಾಡಿದರು. ಆಝಾದ್‌ರ ಹೇಳಿಕೆಯ ಪ್ರಕಾರ, ಗಾಂಧೀಜಿ ಅವರಿಗೆ ಈ ರೀತಿ ಹೇಳಿದರು: "ದೇಶದ ವಿಭಜನೆ ಈಗ ಒಂದು ದೊಡ್ಡ ಬೆದರಿಕೆಯಾಗಿದೆ. ವಲ್ಲಭಭಾಯಿ ಮತ್ತು ನೆಹರೂ ಶರಣಾಗತರಾಗಿದ್ದಾರೆಂದು ಹೇಳಲಾಗುತ್ತಿದೆ. ನೀವು ನನ್ನೊಡನೆ ಇರುವಿರಾ ಅಥವಾ ನೀವೂ ಬದಲಾಗುವಿರಾ?"
        ಆಝಾದ್ ಉತ್ತರಿಸಿದರು, "ದೇಶ ವಿಭಜನೆಗೆ ನನ್ನ ವಿರೋಧ ಇಂದು ಇರುವಷ್ಟು ಎಂದೂ ಉಗ್ರವಾಗಿರಲಿಲ್ಲ... ನನ್ನ ಭರವಸೆ ಈಗ ಉಳಿದಿರುವುದು ನಿಮ್ಮಲ್ಲೇ ನೀವೂ ದೇಶ ವಿಭಜನೆಯನ್ನು ಒಪ್ಪಿಕೊಂಡರೆ, ದೇಶ ಕೈ ಬಿಟ್ಟು ಹೋದಂತೆಯೆ." ಇದಕ್ಕೆ ಗಾಂಧೀಜಿ ಉತ್ತರಿಸಿದರು: "ಎಂತಹ ಪ್ರಶ್ನೆಯನ್ನು ಕೇಳುತಿದ್ದೀರಿ! ಕಾಂಗ್ರೆಸ್ ದೇಶ ವಿಭಜನೆಯನ್ನು ಒಪ್ಪ ಬಯಸಿದರೆ ಅದು ನನ್ನ ಮೃತದೇಹದ ಮೇಲಷ್ಟೇ ಆದರೆ ಕೇವಲ ಎರಡು ತಿಂಗಳ ಅವಧಿಯಲ್ಲಿ ಗಾಂಧೀಜಿ ನಿಲುವನ್ನು ಬದಲಾಯಿಸಿದ್ದರು. ’ ದೇಶ ಇಬ್ಭಾಗವಾಗದೇ ಈಗ ಗತ್ಯಂತರವಿಲ್ಲ’ ಎಂದು ಹೇಳಿ ಆಝಾದ್‌ರನ್ನು ಸ್ಥಂಬಿಭೂತಗೊಳಿಸಿದ್ದರು.
        ಸ್ವಾತಂತ್ರ್ಯ ವ್ಯಾಪ್ತಿಯ ಜೊತೆ ದೇಶವಿಭಜನೆಯ ಆಘಾತವೆರಗಿದಾಗ ತಮ್ಮ ನೋವನ್ನು ಕೆಲವು ನಾಯಕರ ಕುರಿತ ಟೀಕೆಯನ್ನು ಆತ್ಮಚರಿತ್ರೆ ’India Wins Freedom’’ ನಲ್ಲಿ ದಾಖಲಿಸಿದ್ದಾರೆ. ಉರ್ದು ಭಾಷೆಯಲ್ಲೂ ಅವರು ಹಲವು ಕೃತಿಗಳನ್ನು ರಚಿಸಿದ್ದಾರೆ.
        ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿ ಶಾಲಾ ಕಾಲೇಜುಗಳ ಸ್ಥಾಪನೆಯಲ್ಲಿ ತೊಡಗಿಸಿಕೊಂಡ ಅವರು ’ಆಧುನಿಕ ಭಾರತದ ಶಿಕ್ಷಣ ಶಿಲ್ಪಿ’ ಎಂದು ಗುರುತಿಸಲ್ಪಟ್ಟಿದ್ದಾರೆ.
        ೧೯೫೮ರ ಫೆಬ್ರವರಿ ೨೨ರಂದು ತಮ್ಮ ೭೦ನೇ ಪ್ರಾಯದಲ್ಲಿ ಆಝಾದ್ ಕೊನೆಯುಸಿರೆಳೆದರು. ಆ ಬಳಿಕ ಮೂರುವರೆ ದಶಕ ತಡವಾಗಿಯಾದರೂ ೧೯೯೨ರಲ್ಲಿ ಅವರಿಗೆ ಮರಣೋತ್ತರ ’ಭಾರತರತ್ನ’ ಪ್ರಶಸ್ತಿಯಿತ್ತು ಗೌರವಿಸಲಾಯಿತು.

ಅಲಿಬಾಬಾ, ಬಾಬಾಮಿಯಾ 
ಶಿಕ್ಷಕರು
ಲಿಟಲ್ ಹಾರ್ಟ್ಸ್ ಶಾಲೆ ಗಂಗಾವತಿ
ಸಂಚಾರಿ: ೭೪೧೧೮೩೪೭೦೬

Advertisement

0 comments:

Post a Comment

 
Top