PLEASE LOGIN TO KANNADANET.COM FOR REGULAR NEWS-UPDATES


  ‘‘ಹೀಗೆ ಕನಸೊಂದು ಆಕಾರ ತಳೆಯಿತು. ಕೇವಲ ಸಣ್ಣ ಲಾಭಕ್ಕಾಗಿ ಸ್ಥಳೀಯ ಗೂಂಡಾಗಳ ಸಂಗಡ ಸೆಣಸದೆ ಹೊಸ ಸಾಮಾಜಿಕ ವ್ಯವಸ್ಥೆಯೊಂದನ್ನು ಸೃಜಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು. 1982ರ ಫೆಬ್ರವರಿ 22ರಂದು ಆಗಲೇ ಅಸ್ತಿತ್ವದಲ್ಲಿದ್ದ ‘ನಿಷಾದ ಜಲ ಶ್ರಮಿಕ ಸಂಘ’ ಕೆಹೇಲ್ ಗಾಂವ್‌ನಲ್ಲಿ ಸಭೆಯೊಂದನ್ನು ಕರೆಯಿತು. ಈ ಸಭೆ ಜಲ್‌ಕರ್ ಜಮೀನ್ದಾರರ ವಿರುದ್ಧ ಚಳವಳಿಯನ್ನು ರೂಪಿಸಲು ತೀರ್ಮಾನಿಸಿತು. ಇದು ಗಂಗಾ ಮುಕ್ತಿ ಆಂದೋಲನದ ಆರಂಭ. ಅದೇ ವರ್ಷ ಎಪ್ರಿಲ್ 4ರಂದು ಸುತ್ತಲಿನ 19 ಗ್ರಾಮಗಳ 120 ಮಂದಿ ಕೆಹೇಲ್‌ಗಾಂವ್‌ನಲ್ಲಿ ಸಭೆ ಸೇರಿ ಅಹಿಂಸಾತ್ಮಕ ಮಾರ್ಗಗಳಿಂದ ಈ ಚಳವಳಿಯನ್ನು ನಡೆಸಲು ತೀರ್ಮಾನಿಸಿದರು. ಈ ವಿಷಯ ಹರಡುತ್ತಿದ್ದಂತೆಯೇ ಜಮೀನ್ದಾರರು ಮತ್ತು ಅವರ ಬಾಡಿಗೆಯ ಗೂಂಡಾಗಳು ಅಪಹಾಸ್ಯ ಮಾಡಿದರು. ಆದರೆ ಗಂಗಾ ಮುಕ್ತಿ ಆಂದೋಲನದ ಹೆಸರಿನಲ್ಲಿ ಇವರೆಲ್ಲ ಒಗ್ಗಟ್ಟಾದ ನಂತರ ಅವರು ಹಿಂದಿನಂತಿಲ್ಲ ಎಂಬುದು ಅರಿವಿಗೆ ಬಂದಿತ್ತು. ಅನಿಲ್ ಪ್ರಕಾಶ ಈ ಎಲ್ಲ ಕ್ರಿಯೆಗೆ ಚುರುಕಾದ ಪ್ರೇರಣೆಗಾಗಿ ಒಂದು ಬಲವತ್ತರವಾದ ನಿದರ್ಶನವನ್ನು ನೀಡಿದರು:
‘‘ವಾಲ್ಮೆಕಿ ಒಬ್ಬ ಅಪರಾಧಿ. ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡ ನಂತರ ಆತ ರಾಮಾಯಣ ರಚಿಸಿದ. ಆದ ಕಾರಣ ವಿನಾಶದ ಶಕ್ತಿಗಳನ್ನು ಸತ್ಕಾರ್ಯಕ್ಕೆ ಬಳಸಿಕೊಳ್ಳಬಹುದು ಮತ್ತು ಅದು ಶ್ರೇಷ್ಠ ಫಲ ನೀಡುತ್ತದೆ. ಈಗ ನಮ್ಮಲ್ಲಿ ಹಲವಾರು ವಾಲ್ಮೀಕಿಗಳು ಇದ್ದಾರೆ. ಅವರನ್ನು ಗುರುತಿಸಿ ಅವರಿಗೆ ಸಲ್ಲುವ ಗೌರವ ನೀಡಬೇಕು ಮತ್ತು ಅವರನ್ನು ಸರಿದಾರಿಗೆ ಕೊಂಡೊಯ್ಯಬೇಕು.’’
1983 ಮಾರ್ಚ್ 23ರಂದು ಜಿ.ಎಂ.ಎ ವತಿಯಿಂದ ಕೆಹೇಲ್‌ಗಾಂವ್‌ನಿಂದ ಬಾಗಲ್ಪುರದವರೆಗೆ ದೋಣಿ ಜಾಥಾ ನಡೆಸಲಾಯಿತು. ‘‘ಜಲ್, ಬನ್ಸ್ ಔಜಾರ್ ಹಮಾರ, ಗಂಗಾ ಪರ್ ಅಧಿಕಾರ್ ಹಮಾರಾ’’ (ನೀರು, ಹುಟ್ಟು ಮತ್ತು ಮೀನುಗಾರಿಕೆಯ ಉಪಕರಣಗಳು ನಮ್ಮವು, ಗಂಗೆಯ ಮೇಲಿನ ಅಧಿಕಾರ ಕೂಡ ನಮ್ಮದು)
ರಜನಿ ಭಕ್ಷಿ(ಬಾಪು ಕುಬಿಯಲ್ಲಿ)
           
       ಕಳೆದ ವಾರ ಕಾರವಾರಕ್ಕೆ ಸಮೀಪದ ಗೋವಾದ ‘ಕಾನ್‌ಕೂನ್’ ಸಮುದ್ರ ದಂಡೆಯಲ್ಲಿ ಮರಳಿನ ಸಮೃದ್ಧತೆಯ ಸ್ಪರ್ಶ ಸುಖವನ್ನು ನನ್ನ ಪಾದಗಳು ಅನುಭವಿಸುತ್ತಿದ್ದವು. ನನ್ನ ಜೊತೆಯಲ್ಲಿದ್ದ ಗ್ರಂಥಾಲಯದ ಅಧಿಕಾರಿಗಳೂ ಸಮುದ್ರದ ಅಲೆಗಳ ಜೊತೆಗೆ ತರಾವರಿ ವಿದೇಶಿಯರ ಪ್ರವಾಸದ ಸಂಭ್ರಮವನ್ನು ಕಂಡು ತಲ್ಲೀನರಾಗಿದ್ದರು. ಅದೇ ಸಮಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನಾರಾಯಣ ಮೂರ್ತಿ ಮರಕಿಣಿಯ ಉದ್ದನೆಯ ಮೇಸೇಜ್ ಮೊಬೈಲ್‌ಗೆ ಬಂದಿತ್ತು. ಅದನ್ನು ಓದುತ್ತಾ ಸೂರ್ಯ ಸಮುದ್ರದ ಆಳಕ್ಕೆ ಮುಳುಗುವ ರೀತಿಯಲ್ಲಿ; ಆ ವೈಭವದ ಮೂರ್ತಿ ಬೆಳಗಿನಿಂದ ಸಾಕಷ್ಟು ಬೆಳಕನ್ನು ಚೆಲ್ಲಿ ಆಯಾಸಗೊಂಡವನಂತೆ ವಿರಾಮಕ್ಕೆ ಹೊರಟಿದ್ದ. ಕತ್ತಲು ನಿಧಾನವಾಗಿ ಬೆಳಕಿನ ಜಾಗವನ್ನು ತುಂಬಲು ಆವರಿಸಿಕೊಳ್ಳುತ್ತಿತ್ತು. ಮರಕಿಣಿಯ ಮೇಸೇಜ್‌ನ್ನು ಓದುತ್ತಲೇ ಖುಷಿಪಟ್ಟೆ. ಕಳೆದ ಮುವತ್ತೈದು ವರ್ಷಗಳಿಂದ ಪರಿಚಯವಿರುವ ಪುಸ್ತಕ ಪ್ರೇಮಿ.ಸದಾ ತುಂಟತನದಿಂದ ನಗುತ್ತ ಮಾತಿನ ಮೊನಚನ್ನು ಉಳಿಸಿಕೊಂಡಿರುವಂಥವನು. ಅಡಿಕೆ, ತೆಂಗು ಮತ್ತು ಭತ್ತದ ಕೃಷಿಯಲ್ಲಿ ಅನನ್ಯತೆಯಿಂದ ತೊಡಗಿಸಿಕೊಂಡೇ ಉತ್ತಮ ಗ್ರಂಥಗಳನ್ನು ಹಾಗೂ ನಿಯತಕಾಲಿಕೆಗಳನ್ನು ಸಂಗ್ರಹಿಕೊಂಡಿರುವಂಥವನು. ಎಷ್ಟೋ ವರ್ಷಗಳಿಂದ ‘‘ಬಾರಯ್ಯ ಶೂದ್ರ ಒಂದೆ ರಡು ದಿವಸ ಈ ಬ್ರಾಹ್ಮಣನ ಮನೆಯಲ್ಲಿದ್ದು ಹೋಗು. ಅದೇನು ಆ ಬೆಂಗಳೂರು ಎಂಬ ನರಕದಲ್ಲಿ ಸಾಯ್ತೀಯ’’ ಎಂದು ಆಹ್ವಾನಿಸುತ್ತಲೇ ಇದ್ದಾನೆ. ಆದರೆ ಹೋಗಲು ಮನಸ್ಸಿದ್ದರೂ ನನ್ನ ನಾನಾ ರೀತಿಯ ‘420’ ಕೆಲಸಗಳಲ್ಲಿ ಹೋಗಲಾಗುತ್ತಿಲ್ಲ. ಹಾಗೆ ನೋಡಿದರೆ; ದಕ್ಷಿಣ ಕನ್ನಡದ ಮತ್ತು ಉತ್ತರ ಕನ್ನಡದ ಗೆಳೆಯ ಗೆಳತಿಯರನ್ನು ನೋಡಿದಾಗ; ನಿಜವಾಗಿಯೂ ಹೊಟ್ಟೆಕಿಚ್ಚು. ಸದಾ ಹಸಿರು ತುಂಬಿಕೊಂಡಿರುವ ಪ್ರದೇಶದ ಜೊತೆಗೆ ಸಮುದ್ರವನ್ನ್ನೂ ಇಟ್ಟುಕೊಂಡಿದ್ದಾರೆ. ನಾನಾ ರೀತಿಯ ಜಲಪಾತಗಳನ್ನು ಇಟ್ಟು ಕೊಂಡಿದ್ದಾರೆ. ಇರಲಿ, ಮರಕಿಣಿಯು ಈ ಬಾರಿಯ ‘ಕಸ್ತೂರಿ’ಯಲ್ಲಿ ‘ಕನಸಿಗೊಂದು ಕಣ್ಣು’ ವಿನಲ್ಲಿ ಕುವೆಂಪು ಮತ್ತು ಕಾಳಿಂಗರಾವ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿದ್ದರು. ಮೆಸೇಜ್ ಓದಿ ಮರಕಣಿ ಜೊತೆ ಮಾತಾಡುತ್ತಲೇ ಅಲೆಗಳನ್ನು ಸಂಭ್ರಮಿಸಿದ್ದೆ. ಸುಮಾರು ಅರ್ಧ ಗಂಟೆಗೂ ಮೇಲ್ಪಟ್ಟು ಕುರ್ಚಿಯ ಮೇಲೆ ಕೂತು ಮುಂದೆ ಮೇಜಿನ ಮೇಲೆ ಮಿಣಮಿಣ ಬೆಳಕನ್ನು ಚೆಲ್ಲುತ್ತಿದ್ದ ದೀಪದ ಬುಡ್ಡಿಯನ್ನು ನೋಡಿ ಏನೇನೋ ನೆನಪುಗಳು ಬಂದು ಹೋದವು. ಮೇಲೆ ಬಾಲ್ಯದಲ್ಲಿ ನನ್ನೂರಿಗೆ ವಿದ್ಯುತ್ ಬರುವ ಮುನ್ನ ಇಂಥ ದೀಪದ ಬೆಳಕಿನಲ್ಲಿ ಅಲ್ಲವೇ ಬೆಳೆದದ್ದು ಅನ್ನಿಸಿತು. ಹಾಗೆಯೇ ಹೊಂಗೆ ಎಣ್ಣೆಯ ದೀಪದ ಬೆಳಕಿನಲ್ಲಿ ಓದುತ್ತಲೇ ತೂಕಡಿಸಿ ತಲೆಯ ಮುಂಭಾಗದ ಕೂದಲು ಸುಟ್ಟುಹೋಗಿದ್ದು; ಎಲ್ಲವೂ ಶ್ರೀಮಂತವಾಗಿ ಕಾಡತೊಡಗಿದ್ದವು.ಹಾಗೆಯೇ ನಾಲ್ಕೈದು ವರ್ಷಗಳ ಹಿಂದೆ ಅಂಡಮಾನ್‌ಗೆ ಹೋಗಿದ್ದಾಗ ಸಮುದ್ರದ ದಂಡೆಯಲ್ಲಿ ಸುನಾಮಿಯಲ್ಲಿ ಜೀವ ಕಳೆದುಕೊಂಡವರಿಗಾಗಿ; ಸಾಕಷ್ಟು ಮಂದಿ ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿದ್ದ ವಿಷಾದಮಯತೆಯ ಕ್ಷಣವನ್ನು ಕಂಡು ಮನಸ್ಸಿಗೆ ಪಿಚ್ಚೆನ್ನಿಸಿತ್ತು. ಹಾಗೆಯೇ ಅದೇ ಒಂದು ಲೋಕವೆನ್ನುವ ಹಡಗಿನಲ್ಲಿ ಪ್ರಯಾಣ ಮಾಡುವಾಗ ರಾತ್ರಿ ಮತ್ತು ಹಗಲು ಕೊಡುವ ನಾನಾ ರೀತಿಯ ಅನುಭವವನ್ನು ಮೆಲುಕು ಹಾಕುತ್ತಾ ಅಲೆಗಳ ಶಬ್ದದಲ್ಲಿ ‘ಹಾಯ್’ತನದ ಸಂತೋಷದಲ್ಲಿ ತಲ್ಲೀನನಾಗಿದ್ದೆ. ಅಷ್ಟೇ ಅಲ್ಲ; ಕಾನ್‌ಕೂನ್ ಬೀಚ್ ಸಾವಿರಾರು ಮಂದಿ ಬದುಕಲು ಜಾಗ ಕೊಟ್ಟಿದೆ. ಎಷ್ಟು ಚೆನ್ನಾಗಿ ಪ್ರವಾಸ ಕೇಂದ್ರವಾಗಿ ಪರಿವರ್ತಿಸಿದ್ದಾರೆ ಅನ್ನಿಸುತ್ತದೆ. ಎಂತೆಂಥ ವರ್ಣಮಯ ಕಾಟೇಜ್‌ಗಳು. ಮನುಷ್ಯ ತನ್ನ ಬದುಕಿನಲ್ಲಿ ಸುಖವನ್ನು ಹುಡುಕಿಕೊಂಡು ಎಲ್ಲೆಲ್ಲೋ ತಿರುಗುತ್ತಾನೆ. ‘ಕೊನೆಗೂ ಏನು?’ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವೌನಿಯಾಗಿ ಮರೆಯಾಗಿ ಬಿಡುತ್ತಾನೆ. ಇಂಥ ಪ್ರಶ್ನೆಗಳು ದ್ವಿಗುಣವಾಗುತ್ತಲೇ ಹೋಗುತ್ತಿರುತ್ತವೆ. ಬದುಕಲು ಹೊಟ್ಟೆಪಾಡಿಗಾಗಿ ಬಹುದೂರ ಸಾಗುವ ದೋಣಿಗಳು. ಬೃಹದಾಕಾರದ ಅಲೆಗಳು. ಇಂಥವರ ಮಧ್ಯೆ ಬದುಕುವ ಸಾವಿರಾರು ಮಿನುಗಾರರನ್ನು ಸಂಘಟಿಸಿದ ಕೇರಳದ ಬಹುದೊಡ್ಡ ಮೀನುಗಾರರ ನಾಯಕ ಟಾಮ್‌ಕೊಚೇರಿ ನೆನಪಾದರು. ಅವರ ಜೊತೆಯಲ್ಲಿ ಮೀನುಗಾರರಿಗೆ ಜಯಕಾರ ಹಾಕುತ್ತಾ ಸಾವಿರಾರು ಮಂದಿಯ ಜೊತೆಯಲ್ಲಿ ನಾನೂ ಒಬ್ಬನಾಗಿ ಬಿಟ್ಟಿದ್ದೆ. ಎಂಥ ವೈಭವ ಪೂರಿತ ಸಮುದ್ರ ದಂಡೆ. ಅಂಥ ಟಾಮ್‌ಕೊಚೇರಿಯವರಿಂದ ಮರ್ಸಿ ಎಂಬ ಹುಡುಗಿಯನ್ನು ಅರಿಯಲು ಸಾಧ್ಯವಾಯಿತು. ಆ ಹುಡುಗಿ ಮೀನುಗಾರರ ಗುಡಿಸಲುಗಳಲ್ಲಿ ಸುತ್ತಾಡಿ, ಆತ್ಮೀಯಳಾಗಿ ಗಂಡಸರಿಗೆ ಕುಡಿತವನ್ನು ಬಿಡಿಸುತ್ತಾ ಹೋದವಳು. ಅಂಥ ಸಮೂಹದ ಮಧ್ಯೆ ಪೀಟರ್ ಎಂಬ ಮೀನುಗಾರ ತನ್ನ ಐವತ್ತೈದನೆಯ ವಯಸ್ಸಿನಲ್ಲಿ ಕುಡಿತ ಬಿಟ್ಟು ಕವಿಯಾದವನು. ಲೇಖಕನಾದವನು. ಆತನ ಬಗ್ಗೆ ನಾನು ‘ಪೀಟರ್ ದಿ ಗ್ರೇಟ್’ ಎಂದು ಲೇಖನ ಬರೆದಾಗ; ಅದನ್ನು ಓದಿಸಿಕೊಂಡು ಎರ್ನಾಕುಲಂನ ಮೀನುಗಾರರ ಗುಡಿಸಲುಗಳ ಮುಂದೆ ನನ್ನನ್ನ್ನು ಅಪ್ಪಿಕೊಂಡು ಸಂಭ್ರಮಿಸಿದ್ದ. ನಮ್ಮೆಲ್ಲರ ಬದುಕಿಗೆ ಇಂಥ ಆಕಸ್ಮಿಕಗಳೆಂಬ ‘ಆಸ್ಮಿತೆ’ಗಳು ಆಪ್ತವಾಗಿ ಬಿಟ್ಟಿರುತ್ತವೆ. ಆದರೆ ನವೆಂಬರ್ ಒಂದರಂದು ರಾಜ್ಯೋತ್ಸವ ಪ್ರಶಸ್ತಿಯನ್ನು ತೆಗೆದುಕೊಳ್ಳುವಾಗ ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಮುಖ್ಯಮಂತ್ರಿಗಳು ವ್ಯವಸ್ಥೆ ಮಾಡಿದ್ದ ‘ಟೀ ಸಂಭ್ರಮ’ದಲ್ಲಿ ಕಲ್ಗಟಗಿಯ ‘ವಿಮೋಚನೆ ಅಭಿವೃದ್ದಿ ಸಂಸ್ಥೆ’ಯ ಫಾದರ್‌ಡಾ. ಜಾಕೋಬ್ ಅವರು ಪರಿಚಯವಾದರು. ಅವರು ಕೇರಳ ಮೂಲದವರು. ಇಲ್ಲಿ ಬಂದು ಕನ್ನಡವನ್ನು ಕಲಿತು ಜನರ ಮಧ್ಯೆ ಕೆಲಸ ಮಾಡುತ್ತಿರುವಂಥವರು. ಒಮ್ಮೆ ವಿಧಾನಸಭೆಯ ಸದಸ್ಯರಾಗಿದ್ದವರು. ಅವರ ಬಳಿ ಕೇರಳದ ಅನುಭವಗಳನ್ನು ಹೇಳುವಾಗ ಟಾಮ್ ಕೊಚೇರಿಯವರನ್ನು ಪ್ರಸ್ತಾಪಿಸಿದೆ. ಆಗ ಫಾದರ್ ಜಾಕೋಬ್ ಅವರು ಅತ್ಯಂತ ನಮ್ರತೆಯಿಂದ ಆ ಗ್ರೇಟ್ ಮೀನುಗಾರರ ಸಂಘಟಕ ಟಾಮ್ ಅವರನ್ನು ನೆನಪಿಸಿಕೊಂಡು ಎರಡು ವರ್ಷಗಳ ಹಿಂದೆ ನಿಧನರಾದರು ಎಂದಾಗ; ಮನಸ್ಸಿಗೆ ಒಂದು ರೀತಿಯಲ್ಲಿ ಪಿಚ್ಚೆನ್ನಿಸಿತ್ತು. ಎಂಥ ಅದ್ಭುತ ಗಾಂಧಿವಾದಿ ಅತ್ಯಂತ ಅಹಿಂಸಾತ್ಮಕವಾಗಿಯೇ ಭಾರತದ ಉದ್ದಗಲಕ್ಕೂ ಮೀನುಗಾರ ಶ್ರಮಿಕರಲ್ಲಿ ರೋಮಾಂಚನವನ್ನು ಮೂಡಿಸಿದವರು. ಒಂದು ದೃಷ್ಟಿಯಿಂದ ರಜನಿಭಕ್ಷಿ ಅವರ ಕೃತಿಯಿಂದ ಪ್ರಸ್ತಾಪಿಸಿರುವ ಅನಿಲ್‌ಪ್ರಕಾಶ್ ರೀತಿಯ ವ್ಯಕ್ತಿತ್ವವನ್ನು ಕೊಚೇರಿಯವರು ಹೊಂದಿದ್ದರು.ಎಂಥ ಎತ್ತರದ ವ್ಯಕ್ತಿತ್ವ. ಭೌತಿಕವಾಗಿಯೂ ಅಷ್ಟೇ.

 ಈ ರೀತಿಯಲ್ಲಿ ಗಾಂಧೀಜಿಯವರ ಚಿಂತನೆಗಳಿಂದ ಪ್ರಣೀತಗೊಂಡ ನೂರಾರು ಮಂದಿ ಅತ್ಯಂತ ವಿನಯದಿಂದ ಎಂತೆಂಥೆದೋ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲ ಜನ ಸಾಮಾನ್ಯರ ದುಃಖ ದುಮ್ಮಾನಗಳಲ್ಲಿ ಭಾಗಿಯಾಗಿರುವಂಥವರು. ಬಹುಪಾಲು ಮಂದಿ ಉನ್ನತಾಧಿಕಾರಿಗಳಾಗಿದ್ದವರು. ಜಗತ್ತಿನ ಉದ್ದಗಲಕ್ಕೂ ಇಂಥ ವಿಸ್ಮಯಗಳಿಗೆ ಕೊರತೆ ಇಲ್ಲ. ಒಂದು ದೃಷ್ಟಿಯಿಂದ ರಜನಿ ಭಕ್ಷಿಯವರ ‘ಬಾಪುಕುಬಿ’ ಕೃತಿಯು ಹೀಗೆ ಶ್ರೀಮಂತವಾಗಿ ಜನ ಸಾಮಾನ್ಯರ ನಡುವೆ ಬದುಕುತ್ತಿರುವ ಸಾಧಕರ ಪರಿಚಯ ಕೋಶವಾಗಿದೆ. ಈ ಎಲ್ಲಾ ನೆನಪುಗಳ ಮಧ್ಯೆ ಆ ‘ಕಾನ್ ಕೂನ್’ ಸಮುದ್ರ ದಂಡೆಯನ್ನು ಒಲ್ಲದ ಮನಸ್ಸಿನಿಂದ ಬಿಡುವಾಗ; ಇದ್ದಕ್ಕಿದ್ದಂತೆ ಜೊಯಲ್ ರೊಹಮನ್ ಎಂಬ ಯುವಕ ಪರಿಚಯವಾದ. ಆತನಿಗೆ ಮುವತ್ತೈದು ವರ್ಷವಾಗಿರಬಹುದು. ವೃತ್ತಿಯಲ್ಲಿ ಭೂಮಾಪಕ. ಗಾಂಧೀಜಿಯವರನ್ನು ಓದಿಕೊಂಡು ಬೆಳೆದವನು. ಆತನ ಮಾತುಕತೆಯಿಂದ ಗಾಂಧೀಜಿಯವರನ್ನು ಅರಿಯಲು ಎಷ್ಟೊಂದು ದಾಹವನ್ನು ತುಂಬಿಕೊಂಡಿದ್ದಾನೆ ಅನ್ನಿಸಿತು. ಇಂಥ ಮಾತಿನ ಮಧ್ಯೆ ಆತ ತನ್ನ ವೃತ್ತಿಯ ಒಬ್ಬ ಸರ್ವೇಯರನನ್ನು ಭಾರತದಲ್ಲಿ ಕಂಡೆ ಎಂದು ಪುಳಕಿತನಾಗಿ ಹೇಳಿದಾಗ; ಮನುಷ್ಯ ಸಂಬಂಧಗಳು ಎಂತೆಂಥ ವಿಚಿತ್ರ ಪದರುಗಳಿಂದ ಆವರಿಸಿಕೊಂಡಿರುತ್ತದೆ ಅನ್ನಿಸಿತು. ಹೀಗೆಯೇ ಮಾತುಕತೆಯ ನಡುವೆ ನನಗೆ ಪ್ರಿಯನಾದ ಲೇಖಕ ಫ್ರಾಂಜ್ ಕಾಪ್ಕ ಬಗ್ಗೆ ಪ್ರಸ್ತಾಪಿಸಿದಾಗ; ಅವನ ಬರವಣಿಗೆಯನ್ನು ಕುರಿತು ಆತ್ಮೀಯವಾಗಿ ವ್ಯಾಖ್ಯಾನಿಸಿದ್ದರು. ಆಗ ನನ್ನ ಪಾಡಿಗೆ ಸುಮ್ಮನೆ ಗುನುಗುನಿಸಿಕೊಂಡೆ: ಗಾಂಧೀಜಿಯವರು ಹೇಗೆ ಅರಿವಿನ ಬಾಗಿಲುಗಳನ್ನು ವಿಸ್ತರಿಸುತ್ತಾರೆ ಎಂದು. ಆ ಜರ್ಮನಿಯ ರೊಹಮನ್ ಅವರ ಪರಿಚಯದಿಂದ ಗ್ರಂಥಾಲಯದ ಹಿರಿಯ ನಿರ್ದೇಶಕರಾದ ಕೆ.ಜಿ.ವೆಂಕಟೇಶ್ ಮತ್ತು ಡಾ. ಹೊಸಮನಿಯವರು ಸಂಭ್ರಮವನ್ನು ಅನುಭವಿಸಿದ್ದರು. ಕೊನೆಗೆ ಆತನ ‘ಇ’ಮೇಲ್‌ನ್ನು ಪಡೆದು ಬೀಳ್ಕೊಡುವಾಗ; ಎಷ್ಟೋ ವರ್ಷಗಳ ಆಪ್ತ ಬಂಧುವನ್ನು ಬಿಟ್ಟು ಹೊರಡುತ್ತಿದ್ದೇವೆ ಅನ್ನಿಸಿತ್ತು.

           ಕಾರವಾರದಲ್ಲಿ ಈ ಬಾರಿಯ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪ್ರಭಾಕರ ರಾಣೆ, ಪುರಸಭೆಯ ಅಧ್ಯಕ್ಷರಾದ ಲೀಲಾವತಿಬಾಯಿ ಹಾಗೂ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾದ ಸರಸ್ವತಿಗೌಡ ಅವರು ತುಂಬಾ ಆಪ್ತರೆನ್ನಿಸಿಬಿಟ್ಟರು. ಹಾಗೆ ನೋಡಿದರೆ ಪ್ರಭಾಕರ ರಾಣೆಯವರು ಕೇವಲ ಆರೇ ತಿಂಗಳು ಗ್ರಂಥಾಲಯದ ಸಚಿವರಾಗಿದ್ದರು. ಅದ್ಭುತ ಕನಸುಗ ಳನ್ನು ತುಂಬಿಕೊಂಡಿದ್ದವರು. ಗ್ರಂಥಾ ಲಯ ಚಳವಳಿಯ ಮೂಲಕ ಪುಸ್ತಕ ಸಂಸ್ಕೃತಿಯನ್ನು ನಮ್ಮ ಜನರ ಬಳಿಗೆ ಹೇಗೆ ಕರೆದೊಯ್ಯಬೇಕು ಎಂಬುದರ ಬಗ್ಗೆ ಒಂದು ದೀರ್ಘ ಟಿಪ್ಪಣಿಯನ್ನು ಸಿದ್ಧ ಪಡಿಸಲು ನಮಗೆ ಸೂಚಿಸಿದರು. ಬೆಂಗಳೂರಿನ ಅವರ ಮನೆಯಲ್ಲಿ ಎರಡು ದಿವಸ ಬರಗೂರು ರಾಮ ಚಂದ್ರಪ್ಪ, ಎಚ್.ಎಸ್.ಶಿವಪ್ರಕಾಶ್, ರಮಜಾನ್‌ದರ್ಗಾ ಮತ್ತು ನಾನು ಕೂತು ಸಾಕಷ್ಟು ಚರ್ಚೆ ಮಾಡಿ ಸಿದ್ಧಪಡಿಸಿಕೊಟ್ಟೆವು. ತುಂಬ ಮೆಚ್ಚ್ಚುಗೆಯಿಂದ ಸ್ವೀಕರಿಸಿದರು. ಆದರೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ಆಗ ಬಹಳಷ್ಟು ಪತ್ರಿಕೆಗಳು ಅವರ ಪರವಾಗಿ ಸಂಪಾದಕೀಯಗಳನ್ನು ಬರೆಯಲಾಯಿತು. ಲಂಕೇಶ್ ಅವರೂ ತೀವ್ರರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಅಬ್ದುಲ್ ನಝೀರ್ ಸಾಬ್ ಅವರ ಕನಸಿನ ಕೂಸುಗಳು ಎನ್ನುವ ರೀತಿಯಲ್ಲಿ ಇಂದು ನೂರಾರು ಮಂದಿ ಹೆಣ್ಣುಮಕ್ಕಳು ಪಂಚಾಯತ್ ರಾಜ್ ವ್ಯವಸ್ಥೆಯ ತೆಕ್ಕೆಯೊಳಗೆ ಬಂದಿದ್ದಾರೆ. ಅವರೆಲ್ಲ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅಂಥವರ ಕೊಡುಗೆಯಾಗಿ ಕಂಡವರು ಲೀಲಾವತಿಬಾಯಿಯವರು ಮತ್ತು ಸರಸ್ವತಿಗೌಡ ಅವರು. ಪುಸ್ತಕ ಸಂಸ್ಕೃತಿಯ ಬಗ್ಗೆ ಎಷ್ಟು ಚೆನ್ನಾಗಿ ಮಾತಾಡಿದರು. ನಮ್ಮ ಪ್ರಜಾಪ್ರತಿನಿಧಿಗಳು ಹೀಗಿರಬೇಕು ಎಂದು ಮುಕ್ತವಾಗಿ ನನ್ನ ಮಾತಿನಲ್ಲಿ ಕೊಂಡಾಡಿದೆ. ಗ್ರಂಥಾಲಯ ಸಪ್ತಾಹದ ನೆಪದಲ್ಲಿ ಉತ್ತರಕನ್ನಡದ ನೂರಾರು ಕಿ.ಮೀಟರ್ ಉದ್ದಗಲದ ಶ್ರೀಮಂತ ಕಾಡನ್ನು ನಿಜವಾಗಿಯೂ ಸಮೃದ್ಧವಾಗಿ ಅನುಭವಿಸಿದೆ. ಅದರ ಮಧ್ಯೆ ಮಾರಿಕಣಿವೆ ಜಲಪಾತ, ವಿಭೂತಿ ಜಲಪಾತ, ಯಾಣ ಒಂದು ರೀತಿಯ ಸೊಬಗನ್ನು ತುಂಬಿಕೊಟ್ಟಿದೆ. ಈ ಎಲ್ಲಾ ಸೊಬಗಿನ ಹಿನ್ನೆಲೆೆಯಲ್ಲಿ ಹಿರಿಯ ಕವಿಗಳಾದ ವಿಷ್ಣು ನಾಯಕ್ ಅವರು ಗ್ರಂಥಾ ಲಯಕ್ಕೆ ಸಂಪಾದಿಸಿ ಕೊಟ್ಟ ‘ಕರಾವಳಿ ದೀಪ್ತಿ’ ಕೃತಿಯೂ ಏನೇನೋ ಹೇಳಲು ಹೊರಟಿರುವಂಥದ್ದು. ಹಿಂದೆ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ರವೀಂದ್ರನಾಥ ಟಾಗೂರು ಅವರು ಹೇಗೆ ಮುವತ್ತೇಳು ವರ್ಷ ರೈತರ ನಡುವೆ ಕೆಲಸ ಮಾಡಿದರು, ‘ಶ್ರೀನಿಕೇತನ’ ಸಂಸ್ಥೆಯ ಮೂಲಕ ಸಹಕಾರಿ ಸಂಘಗಳ ಚೌಕಟ್ಟಿನಲ್ಲಿ ರೈತರ ಬೆಳವಣಿಗೆಗೆ ಕಾರಣಕರ್ತರಾದರು ಎಂಬ ಲೇಖನವನ್ನು ‘ದೀಪಿ’್ತಯಲ್ಲಿ ಮರು ಮುದ್ರಿಸಿದಾಗ; ಅಲ್ಲಿಯ ಬಹಳಷ್ಟು ಮಂದಿ ಟಾಗೂರರು ಹೀಗೆಲ್ಲಾ ಕೆಲಸ ಮಾಡಿದ್ದಾರಾ? ಎನ್ನುವ ಧ್ವನಿಯನ್ನು ತುಂಬಿಕೊಂಡೇ ಹತ್ತೊಂಬತ್ತರಂದು ರಾತ್ರಿ ಕಾರವಾರದ ಸಮುದ್ರದ ದಂಡೆಗೆ ಹೋದೆ. ನಮ್ಮ ವಸತಿಗೃಹದಿಂದ ಒಂದು ಕಿ.ಮೀಟರ್ ದೂರವಿದ್ದದ್ದು. ನನ್ನ ಜೊತೆ ಹಿರಿಯರಾದ ಉಲ್ಲಾಸ್ ನಾಯಕ್ ಬಂದರು. ತುಂಬುಗತ್ತಲು. ಸಮುದ್ರ ಎಷ್ಟು ಸುಂದರವಾಗಿ ಕಾಣತೊಡಗಿತ್ತು. ಸುಮಾರು ಅರ್ಧಗಂಟೆಗೂ ಮೇಲ್ಪಟ್ಟು ಅಲೆಗಳ ವೈಭವವನ್ನು ನೋಡುತ್ತಾ ನಡೆಯುವಾಗ ಎಷ್ಟು ಖುಷಿ ಅನ್ನಿಸುತ್ತಿತ್ತು. ಅಲೆಗಳು ಮರಳಿನ ದಡಕ್ಕೆ ಅಪ್ಪಳಿಸಿದಾಗ ಮಿಣಮಿಣ ಮಿಂಚುವ ಬೆಳ್ಳಿಯ ರೀತಿಯ ಪಟ್ಟಿ ಉದ್ದಕ್ಕೂ ಚಾಚಿಕೊಂಡಂತೆ. ಬಹುದೂರದ ರಸ್ತೆಯ ಬದಿಯಿಂದ ಬೀಳುತ್ತಿದ್ದ ವಿದ್ಯುತ್ ಅರೆಬರೆ ಬೆಳಕಿನಲ್ಲಿ ಸಾವಿರಾರು ಏಡಿಗಳು ಮನಮೋಹಕವಾಗಿ ಜಿಗಿಯುತ್ತಿದ್ದವು. ರವೀಂದ್ರನಾಥ್ ಟಾಗೂರರು ಒಂದಷ್ಟು ಕಾಲ ಅಣ್ಣನ ಆಶ್ರಯದಲ್ಲಿ ಇರುವಾಗ ಇಲ್ಲಿಯ ಕಾಡನ್ನು ಮತ್ತು ಸಮುದ್ರದ ದಂಡೆಯನ್ನು ಕವಿಯಾಗಿ, ದಾರ್ಶನಿಕರಾಗಿ ಅನುಭವಿಸಿದವರು. ಸುಮ್ಮನೆ ಭಾವನಾತ್ಮಕವಾಗಿ ಯೋಚಿಸುತ್ತಾ ಹೋದೆ: ಟಾಗೂರರ ನಡಿಗೆಯ ಹೆಜ್ಜೆಗುರುತು ಕಾಣಿಸುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು. ಹಾಗೆಯೇ ಗೋವಾದ ಕಾನ್‌ಕೂನ್ ಬೀಚ್‌ಗಿಂತ ಚೆನ್ನಾಗಿ ಇದನ್ನು ಪ್ರವಾಸ ತಾಣವಾಗಿ ಬೆಳಸಬಹುದಾಗಿತ್ತು. ಸಾವಿರಾರು ಜನರ ಬದುಕಿಗೆ ದಾರಿ ಮಾಡಿಕೊಡಬಹುದಾಗಿತ್ತು. ಆದರೆ ಇಚ್ಛಾಶಕ್ತಿಯ ಕೊರತೆಯಿಂದ ಆಗಿಲ್ಲ.
-varthabharati

Advertisement

0 comments:

Post a Comment

 
Top