PLEASE LOGIN TO KANNADANET.COM FOR REGULAR NEWS-UPDATES

 ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ರಾಷ್ಟ್ರದಲ್ಲಿಯೇ ಪ್ರಪ್ರಥಮ ಬಾರಿಗೆ ರಾಷ್ಟ್ರ ಮಟ್ಟದ ಪುರಸ್ಕಾರವನ್ನು ನವದೆಹಲಿಯಲ್ಲಿ ಶುಕ್ರವಾರದಂದು ಕೇಂದ್ರ ಸರ್ಕಾರದ ನಗರಾಭಿವೃದ್ದಿ ಇಲಾಖೆ ಆಯೋಜಿಸಿರುವ ಅರ್ಬನ್ ಮೊಬಿಲಿಟಿ ಇಂಡಿಯಾ ಕಾನ್ಫರೆನ್ಸ್ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರರ್ಗಿ ವ್ಯಾಪ್ತಿಯ ವಿವಿಧ ನಗರಗಳಲ್ಲಿ ಹೊಸದಾಗಿ ಪ್ರಾರಂಭಿಸಿದ ನಗರ ಸಾರಿಗೆ ಸೇವೆಯ ಯೋಜನೆಯನ್ನು ಭಾರತ ಸರ್ಕಾರ ಗುರುತಿಸಿ ಬೆಸ್ಟ್ ಸಿಟಿ ಸರ್ವಿಸಸ್ ರಡಿಯಲ್ಲಿ ಇನ್ನೋವೇಶನ್ ಆಫ್ ಸಿಟಿ ಬಸ್ ಆಪರೇಷನ್ಸ್ ಯೋಜನೆಗೆ ಕೇಂದ್ರ ಸರ್ಕಾರದ ನಗರಾಭಿವೃದ್ದಿ ಇಲಾಖೆಯ ರಾಜ್ಯ ಸಚಿವ ಬಾಬುಲ ಸುಪ್ರಿಯೂ ಅವರು  ಪುರಸ್ಕಾರವನ್ನು ಕರ್ನಾಟಕ ಸರ್ಕಾರದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ  ಜಿ.ಎನ್.ಶಿವಮೂರ್ತಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.
ರಾಜ್ಯದಲ್ಲಿ ಹಿಂದುಳಿದ ಪ್ರದೇಶವಾದ ಹೈದ್ರಾಬಾದ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಸಾರಿಗೆ ಸೇವೆ ಒದಗಿಸುತ್ತಿರುವ ಈ.ಕ.ರ.ಸಾ.ಸಂಸ್ಥೆಗೆ ಇಂತಹ ಒಂದು ರಾಷ್ಟ್ರ ಮಟ್ಟದ ಪುರಸ್ಕಾರ ದೊರೆತಿರುವುದು ಅತೀ ಹೆಮ್ಮೆ ಮತ್ತು  ಈ.ಕ.ರ.ಸಾ.ಸಂಸ್ಥೆಯಲ್ಲಿ ನಗರ ಸಾರಿಗೆ ಸೇವೆಯ ಒಂದು ವಿನೂತನ ಅವಿಷ್ಕಾರ ಯೋಜನೆ ರೂಪಿಸಿ ಜಾರಿಗೊಳಿಸಿರುವುದಕ್ಕೆ ಈ ಒಂದು ಪುರಸ್ಕಾರ ಬಂದಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ವಿಜಯಪುರ, ಬೀದರ, ರಾಯಚೂರು, ಬಳ್ಳಾರಿ, ಕೊಪ್ಪಳ, ಹೊಸಪೇಟೆ, ಯಾದಗಿರಿ ಮತ್ತು ಸೇಡಂ ಪಟ್ಟಣಗಳಲ್ಲಿ ಹೊಸದಾಗಿ ನಗರ ಸಾರಿಗೆ ವಾಹನಗಳನ್ನು ಪ್ರಾರಂಭಿಸಿದ್ದು, ಈ ವಾಹನಗಳನ್ನು ವಿನೂತನ ಮಾದರಿಯ ವಾಹನಗಳಾಗಿದ್ದು, ಈ ಸಾರಿಗೆಗಳು ಸಾರ್ವಜನಿಕ ಪ್ರಯಾಣಿಕರಿಂದ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚಿನ ಜನಮನ್ನಣೆಗಳಿಸಿದ ಸಾರಿಗೆಗಳಾಗಿವೆ. ೯ ನಗರಗಳಲ್ಲಿ ಪ್ರಾರಂಭಿಸಿದ ನಗರ ಸಾರಿಗೆ ವಾಹನಗಳಿಗೆ ಪ್ರತ್ಯೇಕ ಬ್ರಾಂಡಿಂಗ್, ಆಕರ್ಷಕ ಬಣ್ಣ, ಉತ್ತಮ ಆಸನ, ಸ್ವಯಂ ಘೋಷಿತ ಬಸ್ ನಿಲುಗಡೆ ಸ್ಥಳಗಳ ಹೆಸರು ಘೋಷಣೆ, ಎಲ್‌ಇಡಿ ಮಾರ್ಗ ನಾಮಫಲಕ ಮುಂತಾದವುಗಳ ವ್ಯವಸ್ಥೆ ಕಲ್ಪಿಸಲಾಗಿದೆ. 
ಕಲಬುರಗಿ ನಗರ-ನೃಪತುಂಗ ನಗರ ಸಾರಿಗೆ, ವಿಜಯಪುರ ನಗರ-ವಿಜಯಪುರ ನಗರ ಸಾರಿಗೆ, ಬಳ್ಳಾರಿ ನಗರ-ಭುವನ ವಿಜಯ ಸಾರಿಗೆ, ರಾಯಚೂರು ನಗರ-ರಾಯರಥ ನಗರ ಸಾರಿಗೆ,  ಹೊಸಪೇಟೆ ನಗರ- ವಿಜಯರಥ ನಗರ ಸಾರಿಗೆ,  ಬೀದರ ನಗರ-ಕಲ್ಯಾಣ ಕರ್ನಾಟಕ ನಗರ ಸಾರಿಗೆ, ಯಾದಗೀರ ನಗರ-ಗಿರಿ ನಗರ ಸಾರಿಗೆ,  ಕೊಪ್ಪಳ ನಗರ-ಕಿಷ್ಕಿಂದ ನಗರ ಸಾರಿಗೆ, ಸೇಡಂ ಪಟ್ಟಣ-ರಾಷ್ಟ್ರಕೂಟ ನಗರ ಸಾರಿಗೆ. ಈ ೯ ನಗರಗಳಲ್ಲಿ ಒಟ್ಟು ೨೫೦ ನಗರ ಸಾರಿಗೆ ವಾಹನಗಳನ್ನು ಪ್ರಾರಂಭಿಸಲಾಗಿದ್ದು ಈ ವಾಹನಗಳು ಆಯಾ ನಗರಗಳಲ್ಲಿಯ ಪ್ರಮುಖ ರಸ್ತೆಗಳಲ್ಲಿ ಪ್ರತಿ ೫ ನಿಮಿಷದಿಂದ ೧೦ ನಿಮಿಷಕ್ಕೊಂದರಂತೆ ಸಾರಿಗೆ ಸರತಿಗಳು ಕಾರ್ಯಾಚರಸಿಲಾಗುತ್ತಿದ್ದು, ಈ ಸಾರಿಗೆಗಳಿಗೆ ಪ್ರಯಾಣ ದರ ಸಹ ಜನ ಸಾಮಾನ್ಯರೆ ಕೈಗೆಟುಕುವ ಹಾಗೆ ನಿಗದಿಪಡಿಸಿದ್ದು ಇದು ಪ್ರಯಾಣಿಕರಿಗೆ ತುಂಬಾ ಸಹಕಾರಿಯಾಗಿದೆ. ಇದರಿಂದ ನಗರದ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ನೌಕರರಿಗೆ ಮುಂತಾದವರಿಗೆ ತುಂಬಾ ಅನುಕೂಲಕರ ಸೇವೆಯಾಗಿದೆ.
ಯೋಜನೆಯ ಸಾಫಲ್ಯತೆಗಳು : ಪ್ರಯಾಣಿಕರ ಬೇಡಿಕೆಯ ತಕ್ಕಂತೆ ಪ್ರತಿ ೫ ನಿಮಿಷದಿಂದ ೧೦ ನಿಮಿಷಕ್ಕೊಂದರಂತೆ ಬಸ್‌ಗಳ ಲಭ್ಯತೆ. ನಗರ ಪ್ರಯಾಣಿಕರ ಪ್ರಯಾಣ ಅವಧಿಯಲ್ಲಿ ಉಳಿತಾಯ, ಪ್ರಯಾಣಿಕರ ಪ್ರಯಾಣ ವೆಚ್ಚದಲ್ಲಿ ಗಣನೀಯ ಉಳಿತಾಯ. ಬಸ್ ಕಾಯುವಿಕೆ ಅವಧಿ ಇಳಿಕೆ. ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ. ನಗರದ ವಾಯುಮಾಲ್ಯಿನ ಪ್ರಯಾಣ ನಿಯಂತ್ರಣ, ನಗರದ ಸಾರ್ವಜನಿಕರ ಉತ್ತಮ ಜೀವನ ಗುಣಮಟ್ಟದ ನಿರ್ವಹಣೆಗೆ ಸಹಕಾರಿ. ಸಮೂಹ ಸಾರಿಗೆಗೆ ಉತ್ತೇಜನ. ಗರಿಷ್ಠ ಮಟ್ಟದಲ್ಲಿ. ರಸ್ತೆ ಮೇಲಿನ ವಾಹನ ಮತ್ತು ಜನಸಾಂದ್ರತೆ ಓಡಾಟದ ಇಳಿಕೆ. 
ಈ.ಕ.ರ.ಸಾ.ಸಂಸ್ಥೆಯಲ್ಲಿ ಪ್ರಾರಂಭಿಸಿದ ನಗರ ಸಾರಿಗೆ ಸೇವೆಯನ್ನು ಯಶಸ್ವಿಯಾಗಿ ಕಾರ್ಯಾಚರಿಸಲು ಕಾರಣರಾದ ಸಂಸ್ಥೆಯ ಎಲ್ಲಾ ಅಧಿಕಾರಿ ಮತ್ತು ನೌಕರರ ಪರಿಶ್ರಮದಿಂದ ಈ ಯೋಜನೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸಿ ಪ್ರಶಸ್ತಿ ಪಡೆಯಲು ಕಾರಣರಾದ ಸಂಸ್ಥೆಯ ಎಲ್ಲಾ ಅಧಿಕಾರಿ ಮತ್ತು ನೌಕರರಿಗೆ ಹಾಗೂ ಈ ಸೇವೆಯನ್ನು ಅತ್ಯಂತ ಮನ್ಸಪೂರ್ವಕವಾಗಿ ಒಪ್ಪಿಕೊಂಡ ಪ್ರಯಾಣಿಕ ಬಂಧುಗಳಿಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ನಗರದ ಪ್ರಯಾಣಿಕರಿಗೆ ಮತ್ತು ಉಳಿದ ಭಾಗಗಳಲ್ಲಿಯೂ ಇನ್ನು ಹೆಚ್ಚಿನ ಮತ್ತು ವ್ಯವಸ್ಥಿತ ಬಸ್ ಸೇವೆ ಒದಗಿಸಲು ಪ್ರಯತ್ನಿಸಲಾಗುವುದೆಂದು ಈ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಎನ್. ಶಿವಮೂರ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top