ರಾಮಕಥಾ ಗಾಯಕಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಆರೋಪ ಹೊತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರನ್ನು ಆರೋಪ ಸಾಬೀತಾಗುವವರೆಗೆ ಬಂಧಿಸಬಾರದೆಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮಿಗಳು ಒತ್ತಾಯಿಸಿದ್ದನ್ನು ಓದಿ, ಕೇಳಿ ಅಚ್ಚರಿಯಾಯಿತು. ಸಮಾನ ನಾಗರಿಕ ಸಂಹಿತೆಗಾಗಿ ನಿರಂತರವಾಗಿ ಆಗ್ರಹಿಸುತ್ತ ಬಂದ ಪೇಜಾವರರು ಒಮ್ಮಿಂದೊಮ್ಮೆಲೆ ತಮ್ಮ ನಿಲುವನ್ನು ಬದಲಿಸಿದ್ದು ಅನುಕೂಲ ಸಿಂಧು ಧೋರಣೆಯಲ್ಲವೇ ಎಂದು ಒಂದು ಕ್ಷಣ ಅನ್ನಿಸಿತು.
‘‘ಈ ದೇಶದಲ್ಲಿ ಅಲ್ಪಸಂಖ್ಯಾತರನ್ನು ಸರಕಾರ ತುಷ್ಟೀಕರಣ ಮಾಡುತ್ತಿದೆ. ಅವರಿಗೆ ಪ್ರತ್ಯೇಕ ಕಾನೂನು ಇದೆ’’ ಎಂದೆಲ್ಲ ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ವಿಚಾರಗಳನ್ನೇ ಪುನರುಚ್ಚರಿಸುತ್ತ ಬಂದ ಪೇಜಾವರ ಶ್ರೀಗಳು ವಿಶ್ವ ಹಿಂದೂ ಪರಿಷತ್ತಿನ ಮಾರ್ಗದರ್ಶಕ ಮಂಡಲದ ಮುಖ್ಯಸ್ಥರು. ಇಂಥವರು ಒಮ್ಮಿಂದೊಮ್ಮೆಲೇ ತಮ್ಮ ನಿಲುವನ್ನು ಬದಲಿಸಿ ‘‘ಪೀಠಾಧಿಪತಿಯೊಬ್ಬರನ್ನು ಕೇವಲ ಸಂದೇಹದ ಕಾರಣಕ್ಕೆ ಬಂಧಿಸುವುದು ಸರಿಯಲ್ಲ’’ ಎಂದಿರುವುದು ಸಹಜವಾಗಿ ಅವರ ಪ್ರಾಮಾಣಿಕತೆ ಬಗ್ಗೆ ಸಂದೇಹ ಮೂಡುವಂತೆ ಮಾಡಿತು. ಈ ದೇಶದ ಕಾನೂನು ಜಾತಿ, ಧರ್ಮ, ಸ್ಥಾನಮಾನದ ಆಧಾರದಲ್ಲಿ ಯಾರನ್ನು ಪ್ರತ್ಯೇಕಿಸಿ ನೋಡುವುದಿಲ್ಲ. ಯಾವುದೇ ಆರೋಪಕ್ಕೊಳಗಾದ ವ್ಯಕ್ತಿ ಬಟ್ಟೆ ಹೊಲಿಯುವ ದರ್ಜಿಯಾಗಿರಲಿ, ರಾಜ್ಯವನ್ನಾಳುವ ಮುಖ್ಯಮಂತ್ರಿ ಯಾಗಿರಲಿ ಎಲ್ಲರೂ ಕಾನೂನಿನ ಎದುರು ಸಮಾನರು. ಭಾರತೀಯ ಅಪರಾಧ ಸಂಹಿತೆಯಲ್ಲಿ ಪೀಠಾಧಿಪತಿಗಳಿಗೆಂದು ಪ್ರತ್ಯೇಕ ಕಾನೂನು ವಿಧಿಗಳಿಲ್ಲ. ಅತ್ಯಾಚಾರದಂಥ ಆರೋಪ ಯಾರ ಮೇಲೆಯೇ ಬರಲಿ ಅವರು ಬಂಧನಕ್ಕೊಳಗಾಗಿ ವಿಚಾರಣೆ ಎದುರಿಸಬೇಕು. ಯಡಿಯೂರಪ್ಪ ಸರಕಾರದಲ್ಲಿ ಮಂತ್ರಿಯಾಗಿದ್ದ ಹಾಲಪ್ಪ ಕೂಡ ಬಂಧನಕ್ಕೊಳಗಾಗಿದ್ದರು. ಭ್ರಷ್ಟಾಚಾರ ಆರೋಪದಲ್ಲಿ ಯಡಿಯೂರಪ್ಪ ಕೂಡ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದರು. ಇದೇ ಕಾನೂನು ಪೀಠಾಧಿಪತಿಗಳಿಗೂ ಅನ್ವಯಿಸುತ್ತದೆ. ಇದಕ್ಕೆ ವಿನಾಯಿತಿ ನೀಡಬೇಕೆಂದರೆ ಭಾರತೀಯ ಅಪರಾಧ ಸಂಹಿತೆಗೆ ತಿದ್ದುಪಡಿ ತರಬೇಕು. ಪ್ರಜಾಪ್ರಭುತ್ವದಲ್ಲಿ ಅಂಥ ತಿದ್ದುಪಡಿಗೆ ಅವಕಾಶವಿಲ್ಲ. ಆದರೆ ಪ್ರಜಾಪ್ರಭುತ್ವಕ್ಕಿಂತ ಮಠಪ್ರಭುತ್ವ ಶ್ರೇಷ್ಠ. ಸಂವಿಧಾನಕ್ಕಿಂತ ಸನಾತನ ಧರ್ಮವೇ ಪರಮೋಚ್ಚ ಎಂದು ನೇರವಾಗಿ ಹೇಳದಿದ್ದರೂ ಅಂತರಂಗದಲ್ಲಿ ಅದೇ ಭ್ರಮೆಯಲ್ಲಿರುವ ಪೇಜಾವರ ಸ್ವಾಮಿಗಳು ಹೇಳಿದಂತೆ ‘ಆರೋಪ ಸಾಬೀತಾ ಗುವವರೆಗೆ ರಾಘವೇಶ್ವರ ಭಾರತಿಯರನ್ನು ಬಂಧಿಸಬಾರದು’ ಎಂದು ಹೇಳಿದ್ದಾರೆ. ಆದರೆ ಇದರಿಂದ ಉದ್ಭವವಾಗುವ ಇತರ ಪ್ರಶ್ನೆಗಳಿಗೂ ಅವರು ಉತ್ತರಿಸಬೇಕಾಗುತ್ತದೆ. ಈ ದೇಶದಲ್ಲಿ ಯಾವುದೇ ವ್ಯಕ್ತಿಯ ಮೇಲೆ ದೂರು ಬಂದು ಎಫ್‌ಐಆರ್ ಸಿದ್ಧವಾದ ನಂತರ ಬಂಧನ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಬಂಧಿಸಿ ಜೈಲಿಗೆ ಕಳಿಸುವುದು ಒತ್ತಟ್ಟಿಗಿರಲಿ, ನಕ್ಸಲಿಯರೆಂದು ಯಾರ್ಯಾರನ್ನೊ ಗುಂಡಿಕ್ಕಿ ಕೊಲ್ಲುತ್ತಾರಲ್ಲ ಅಂಥ ಬಡಪಾಯಿಗಳ ಮೇಲಿನ ಆರೋಪ ಸಾಬೀತಾಗಿರುತ್ತದೆಯೆ? ಅಕಸ್ಮಾತ್ ಅವರು ನಿರಪರಾಧಿಯಾಗಿದ್ದರೆ ಹಾರಿಹೋದ ಪ್ರಾಣವನ್ನು ಯಾರು ತಂದು ಕೊಡುತ್ತಾರೆ? ನಕ್ಸಲರೆಂದು ಬಂಧಿಸಲ್ಪಟ್ಟಿರುವ ಅನೇಕರು ನಿರ್ದೋಷಿಗಳಾಗಿ ಬಿಡುಗಡೆಯಾಗಿ ಬಂದಿಲ್ಲವೇ? ಹಾಗಿದ್ದರೆ ಕೊಲ್ಲಲ್ಪಟ್ಟವರು ನಿರಪರಾಧಿಗಳೆಂದು ವಾದಿಸಿದರೆ ತಪ್ಪೇನು?
ನಕ್ಸಲರು ಒತ್ತಟ್ಟಿಗಿರಲಿ, ಭಯೋತ್ಪಾದಕ ರೆಂದು ಸಾವಿರಾರು ಯುವಕರನ್ನು ಈ ದೇಶದ ಕಾರಾಗೃಹಕ್ಕೆ ತಳ್ಳಲಾಗಿಲ್ಲವೆ? ಅಲ್ಪಸಂಖ್ಯಾತ ಸಮುದಾಯದ ಈ ತರುಣರ ಮೇಲಿನ ಆರೋಪ ಸಾಬೀತಾಗಿದೆಯೆ? ವಿಚಾರಣೆ ಇಲ್ಲದೆ ಈ ಸಾವಿರಾರು ಯುವಕರನ್ನು ಕತ್ತಲು ಕೋಣೆಗೆ ತಳ್ಳಿದ್ದೇಕೆ? ‘‘ಆರೋಪ ಸಾಬೀತಾಗುವವರೆಗೆ ಅವರನ್ನೇಕೆ ಬಂಧಿಸಿದ್ದೀರಿ?’’ ಎಂದು ಪೇಜಾವರರು ಯಾಕೆ ಕೇಳುವುದಿಲ್ಲ?
‘ಕೇವಲ ಸಂದೇಹದ ಕಾರಣಕ್ಕೆ ಪೀಠಾಧಿಪತಿಯೊಬ್ಬನನ್ನು ಬಂಧಿಸುವುದು ಸರಿಯಲ್ಲ’ ಎಂಬ ಪೇಜಾವರ ಅವರ ವಾದವನ್ನು ಉಳಿದವರಿಗೂ ಏಕೆ ಅನ್ವಯಿಸಬಾರದು? ಜೈಲಿನಲ್ಲಿ ಕೊಳೆ ಹಾಕಿದ ಅಲ್ಪಸಂಖ್ಯಾತ ಯುವಕರನ್ನು ಕೇವಲ ಸಂದೇಹದ ಮೇಲೆ ಬಂಧಿಸಿಲ್ಲವೇ? ಹೀಗೆ ಬಂಧಿಸಲ್ಪಟ್ಟು ಚಿತ್ರಹಿಂಸೆ ಅನುಭವಿಸಿದ ಗಿಲಾನಿ ನಿರ್ದೋಷಿಯಾಗಿ ಬಿಡುಗಡೆಯಾಗಿ ಬರಲಿಲ್ಲವೇ? ಹಾಗಿದ್ದರೆ ‘ಸರ್ವೆಜನಃ ಸುಖಿನೊಭವಂತು’ ಎನ್ನುವ ಪೇಜಾವರರು ಸಂದೇಹಕ್ಕೊಳಗಾದ ಎಲ್ಲರ ಪರವಾಗಿ ಮಾತಾಡುವರೇ?
ಆದರೆ ತಾರತಮ್ಯ ಸಿದ್ಧಾಂತದಲ್ಲಿ ನಂಬಿಕೆ ಇರುವ ಪೇಜಾವರ ಅವರಿಗೆ ಸಮಾನತೆಯಲ್ಲಿ ವಿಶ್ವಾಸವಿಲ್ಲ. ಅತ್ಯಾಚಾರ ಆರೋಪಕ್ಕೊಳಗಾದ ರಾಘವೇಶ್ವರ ಭಾರತಿ ಪರವಾಗಿ ವಕಾಲತ್ತು ವಹಿಸುವ ಪೇಜಾವರರು ನಿಡುಮಾಮಿಡಿ ಸ್ವಾಮಿಗಳೊಂದಿಗೆ ಮಡೆಸ್ನಾನದ ವಿರುದ್ಧ ಧರಣಿ ಕುಳಿತ ಶೂದ್ರ ಸಮುದಾಯದ ಸ್ವಾಮಿಗಳನ್ನು ಡೊಂಗಿಗಳೆಂದು ಕಾವಿ ವೇಷಧಾರಿಗಳೆಂದು ಹಿಯಾಳಿಸುತ್ತಾರೆ. ಇದಕ್ಕೆ ಪ್ರತಿರೋಧ ಬಂದ ತಕ್ಷಣ ತಾನು ಹಾಗೆ ಹೇಳಿಲ್ಲ ಎಂದು ಜಾರಿಕೊಳ್ಳುತ್ತಾರೆ.
ಅತ್ಯಾಚಾರ, ವ್ಯಭಿಚಾರದಂಥ ಆರೋಪ ಗಳಿಗೆ ರಾಘವೇಶ್ವರ ಸ್ವಾಮಿಯೊಬ್ಬರೇ ಗುರಿಯಾಗಿಲ್ಲ. ನಾಡಿನ ಕೆಲ ಮಠಾಧೀಶರು ಇಂಥ ಆರೋಪ ಕ್ಕೊಳಗಾಗಿ ಜೈಲಿಗೆ ಹೋಗಿದ್ದಾರೆ. ಈ ಸ್ವಾಮಿಗಳು ಸಾಂಸಾರಿಕರಿಗಿಂತ ರಸಿಕ ಜೀವನ ನಡೆಸುತ್ತಾರೆಂದು ಇಂಥವರನ್ನು ಹತ್ತಿರದಿಂದ ನೋಡಿದ ಭಕ್ತರೊಬ್ಬರು ಇತ್ತೀಚೆಗೆ ನನಗೆ ಹೇಳಿದರು. ಈ ಸ್ವಾಮಿಗಳು ಬೆಡ್‌ರೂಮ್‌ನಲ್ಲಿ ಬ್ಲೂಫಿಲಂ ನೋಡುತ್ತಾರೆಂದು ಕಣ್ಣಾರೆ ಕಂಡ ಸತ್ಯ ಹೇಳಿದರು. ಸನ್ಯಾಸಿಗಳಿಗೆ ನಿಸರ್ಗ ಸಹಜ ವಾಂಛೆ, ಮೋಹ, ವ್ಯಸನಗಳು ಇರಬಾರದೆಂದಿಲ್ಲ. ಆದರೆ, ಸಕಲೇಂದ್ರಿಗಳಯನ್ನು ಗೆದ್ದವರು ವಿರಾಗಿಗಳು ತಾವೆಂದು ಪೋಸ್ ಕೊಡುವವರನ್ನು ಅವರು ನಿಲ್ಲಿಸಬೇಕು. ಅತ್ಯಾಚಾರದಂಥ ಆರೋಪಕ್ಕೆ ಗುರಿಯಾಗುವ ಬದಲು ಮದುವೆಯಾಗಿ ಎಲ್ಲರಂತೆ ಸಹಜವಾಗಿ ಜೀವಿಸಬೇಕು. ಗುರುತರ ಆರೋಪಗಳು ಬಂದಾಗ ಕಾನೂನಿನಿಂದ ವಿನಾಯಿತಿ ಪಡೆಯುವ ಯತ್ನಕ್ಕೆ ಕೈ ಹಾಕಬಾರದು. ಇವರು ಪರಿಶುದ್ಧರಾಗಿದ್ದರೆ ಯಾವುದಕ್ಕೂ ಹೆದರದೇ ವಿಚಾರ ಎದುರಿಸಲಿ. ರಾಮಕಥಾ ಕಾರ್ಯಕ್ರಮ ನಡೆಸುವ ರಾಘವೇಶ್ವರರು ನಿಜವಾದ ರಾಮ ಭಕ್ತರಾಗಿದ್ದರೆ, ಯಾವ ತನಿಖೆಗೂ ಹೆದರಬಾರದು. ಪಾತಿವ್ರತ್ಯದ ಸಾಬೀತಿಗಾಗಿ ಸೀತೆಯನ್ನು ಅಗ್ನಿಪರೀಕ್ಷೆಗೆ ತಳ್ಳಿದ ದೇಶ ನಮ್ಮದು. ಸೀತೆಗೆ ಅನ್ವಯವಾಗುವುದು ಸ್ವಾಮಿಗಳಿಗೂ ಅನ್ವಯವಾಗಲಿ ಎಂದು ಪೇಜಾವರರು ಹೇಳಿದ್ದರೆ ಅವರ ಬಗ್ಗೆ ಗೌರವ ಉಂಟಾಗುತ್ತಿತ್ತು. ಆದರೆ ಪೇಜಾವರರು ಉಳಿದ ಸ್ವಾಮಿಗಳಂಥಲ್ಲ. ಅವರಿಗೆ ಅಧ್ಯಾತ್ಮಕ್ಕಿಂತ ಸಂಘ ಪರಿವಾರದ ರಾಜಕೀಯದಲ್ಲಿ ವಿಶೇಷ ಆಸಕ್ತಿ. ರಾಜಕೀಯ ಉದ್ದೇಶ ಇರುವವರಿಗೆ ಅವರದೇ ಆದ ಅಜೆಂಡಾಗಳಿರುತ್ತವೆ. ಹೀಗೆ ರಾಜಕೀಯ ಅಜೆಂಡಾಗಳನ್ನು ರಹಸ್ಯವಾಗಿ ಇಟ್ಟುಕೊಂಡಿರುವ ಮಠಾಧೀಶ ರಿಂದಾಗಿ ಭಾರತದ ಪ್ರಜಾಪ್ರಭುತ್ವ ಪ್ರಾಣ ಸಂಕಟದ ಅನುಭವಿಸುತ್ತಿದೆ. ಈ ಜನತಂತ್ರವನ್ನು ಕಾಪಾಡಲು ಜನರೇ ಪ್ರಜ್ಞಾವಂತರಾಗಿ ಮುಂದೆ ಬರಬೇಕಾಗಿದೆ. ಹಾಗೆ ಬಂದೆ ಬರುತ್ತಾರೆ.
0 comments:
Post a Comment