PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ಚಲನಚಿತ್ರ ಅಕಾಡೆಮಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಕೊಪ್ಪಳದ ಲಕ್ಷ್ಮಿ, ಶಾರದಾ ಮತ್ತು ಕನಕಾಚಲ ಚಿತ್ರಮಂದಿರಗಳಲ್ಲಿ ನ. ೧೪ ರಿಂದ ೨೦ ರವರೆಗೆ ನಡೆಯಲಿರುವ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ದೇಶ-ವಿದೇಶಗಳ ೧೬ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.  ಇಂತಹ ಚಲನಚಿತ್ರಗಳ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದೆ.
     ಟೈನಾ (ಬ್ರೆಜಿಲ್) : ಇದು ಅಮೆಝಾನ್ ಬುಡಕಟ್ಟಿನ ಐದು ವರ್ಷದ ಅನಾಥ ಬಾಲಕಿ ಟೈನಾಳ ಕತೆ. ತಾನು ಒಬ್ಬ ಸೈನಿಕಳಾಗಿ ತನ್ನ ಕುಟುಂಬದ ಮೂಲವನ್ನು ತಿಳಿಯಬೇಕೆಂಬುದು ಅವಳ ಹೆಬ್ಬಯಕೆ. ಹೀಗೆ ಹೊರಟ ಟೈನಾಗೆ ಆಕಸ್ಮಿಕವಾಗಿ, ದಾರಿ ತಪ್ಪಿದ ನಗರದ ಹುಡುಗಿ ಲೋರ ಮತ್ತು ಗೋಬಿ ಎಂಬ ಸ್ಥಳೀಯ ಹುಡುಗರು ಸಿಗುತ್ತಾರೆ. ಹೀಗೆ ಹೊರಟ ಅವರು ಮೂವರೂ ತಮ್ಮ ರೋಮಾಂಚಕ ಪಯಣದಲ್ಲಿ ತಮ್ಮ ತಮ್ಮ ನಡುವಿನ ವ್ಯತ್ಯಾಸಗಳನ್ನು ಗೆಲ್ಲುವುದು ಹೇಗೆ ಎಂದು ಕಂಡುಕೊಳ್ಳುತ್ತಾರೆ. ಅದು, ಟೈನಾಳ ಕುಟುಂಬದ ಕಡು ವೈರಿ ಮತ್ತು ಇಡೀ ಕಾಡನ್ನೇ ನಾಶ ಮಾಡಲು ಹೊರಟಿದ್ದ ದುಷ್ಟತನದ ಅವತಾರವಾದ ಜುರುಪಾರಿಯನ್ನು ಟೈನಾ ಎದುರಿಸಿದಾಗ ಆಗುವುದೇನು ಎಂಬುದು ಕುತೂಹಲಕಾರಿ.
ಯೆಲ್ಲೋ ಕೋಲ್ಟ್ (ಮಂಗೋಲಿಯಾ) : ಮಂಗೋಲಿಯಾದ ಕುದುರೆ ಬೆಳೆಸುವ ಕಸುಬಿನ ಅಲೆಮಾರಿ ಜನಾಂಗದ ಕುಟುಂಬವೊಂದರ ಕಿರಿಯ ಮಗ ಗ್ಯಾಲ್ಟ್ ಮನೆಗೆ ಹಿಂದಿರುಗುತ್ತಾನೆ. ಮೂರು ವರ್ಷದ ಚಿಕ್ಕ ಹುಡುಗನಾಗಿದ್ದಾಗಿನಿಂದ ಇವನನ್ನು ದತ್ತು ಪಡೆದಿದ್ದ ಅವನ ಮಾವ ಅಸುನೀಗುತ್ತಾನೆ. ಮಾವನ ಸಾವಿನ ದುಃಖದಲ್ಲಿದ್ದ ಗ್ಯಾಲ್ಟ್‌ಗೆ ಕುದುರೆ ಮರಿಯೊಂದರೊಡನೆ ಸ್ನೇಹ ಬೆಳೆಯುತ್ತದೆ. ಹಳ್ಳಿಯ ವಾರ್ಷಿಕ ಕುದುರೆ ಓಟದ ಸ್ಪರ್ಧೆಗೆಂದು ಈ ಮರಿಗೆ ಗ್ಯಾಲ್ಟ್ ರಹಸ್ಯವಾಗಿ ತರಬೇತಿ ಆರಂಭಿಸುತ್ತಾನೆ. ಯೆಲ್ಲೋ ಕೋಲ್ಟ್ , ಇರಾನ್‌ನ ಒಳ್ಳೆಯ ಚಲನಚಿತ್ರ ವಿಧಾನಗಳ ಸಾಲಿನಲ್ಲಿರುವ ಉತ್ತಮ ಚಿತ್ರ ಎನ್ನಬಹುದು. ಒಂದು ಕಿನ್ನರ ಲೋಕದ ಕತೆಯೇನೋ ಎಂಬಂತಹ ಪ್ರೀತಿಯ ಜಗತ್ತು ತೋರಿ ಈ ಚಿತ್ರ ಆಪ್ತವಾಗುತ್ತದೆ.
ಪನಿ ಕ್ಲುಕಿ (ಜ್ಹೆಕ್ ಗಣರಾಜ್ಯ) : ಇದೊಂದು ಹಾಸ್ಯಮಯ ಚಿತ್ರ. ಮಾರ್ಕ್ ಟ್ವೇನ್ ಅವರ ಟಾಮ್ ಸಾಯರ್‌ನ ಸಾಹಸಗಳು ಎಂಬ ಪ್ರಸಿದ್ಧ ಕಾದಂಬರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ೨೦ನೇ ಶತಮಾನದ ಕೊನೆಯ ಭಾಗದಲ್ಲಿ ಝೆಕ್ ನಗರವೊಂದರಲ್ಲಿ ನಡೆಯುವ ಈ ಕತೆಯು ಮೂರು ಪಾತ್ರಧಾರಿಗಳ ಸುತ್ತಲೂ ಸುತ್ತುತ್ತದೆ. ಥಾಮಸ್, ಹ್ಯುಬರ್ಟ್ ಮತ್ತು ಜೋಝ್ಕಾ, ಟಾಮ್ ಸಾಯರ್ ಅವರ ಕಾದಂಬರಿಯಲ್ಲಿನ ಕತೆಗಳಲ್ಲಿರುವಂತೆ ಏನೇನೋ ಮಾಡಿ ಸದಾ ಕಾಲ ಸಿಕ್ಕಿ ಹಾಕಿಕೊಳ್ಳುತ್ತಿರುತ್ತಾರೆ. ಆದರೆ, ಬ್ಯಾಂಕ್ ಒಂದರಿಂದ ಕಳುವಾಗಿದ್ದ ಸಂಪತ್ತನ್ನು ಇವರು ಪತ್ತೆ ಮಾಡಿದಾಗ, ಅವರ ಹಿಂದಿನ ಎಲ್ಲ ಪಾಪಕೃತ್ಯಗಳನ್ನು ಕ್ಷಮಿಸಲಾಗುತ್ತದೆ.
ಬ್ಲೂ ಟೈಗರ್ (ಜ್ಹೆಕ್ ಗಣರಾಜ್ಯ)  : ಝೆಕ್‌ನ ನಗರದ ಜೊಹಾಂಕಾ ಮತ್ತು ಮಾತ್ಯಾರಿಗೆ ಆಡಲು ಇರುವುದು ಒಂದು ಹಸಿರು ಸಸ್ಯೋದ್ಯಾನ.  ನಗರದ ದುಷ್ಟ ಮೇಯರ್ ಆ ಉದ್ಯಾನವನವನ್ನ ತೆಗೆದು ಅಲ್ಲಿ ಬೇರೇನೋ ಮಾಡಲು ಹೊರಟಾಗ, ಜೋಹಾಂಕಾ ಮತ್ತು ಮಾತ್ಯಾಗೆ ಏನು ಮಾಡೋದು ಅಂತ ತೋಚದೆ, ಮೇಯರ್‌ನ ಯೋಜನೆಯನ್ನ ನಿಲ್ಲಿಸಲು ಯೋಚಿಸ್ತಾರೆ. ಇದ್ದಕ್ಕಿದ್ದ ಹಾಗೆ ನಗರದಲ್ಲಿ ಒಂದು ಗೂಢವಾದ ನೀಲಿ ಹುಲಿಯೊಂದು ಓಡಾಡುತ್ತಿರುವ ಬಗ್ಗೆ ಪುಕಾರು ಏಳುತ್ತದೆ. ಮೇಯರ್‌ನನ್ನು ಎದುರಿಸಿ ಉದ್ಯಾನವನ್ನು ಅವರು ರಕ್ಷಿಸಲಾಗುತ್ತದೆ ಏನು? ಪರಿಸರದ ವಿಚಾರವನ್ನು ಹೊಂದಿರುವ ಸೊಗಸಾದ ಈ ಸಿನೆಮಾದಲ್ಲಿ ಚುರುಕಾದ ಚಟುವಟಿಕೆಗಳು ಮತ್ತು ಮೈ ನವಿರೇಳಿಸುವ ಆನಿಮೇಷನ್ ಇದೆ.
ಗೂಪಿ ಗವ್ವಯ್ಯ ಬಾತಾ ಬಜಾಯ (ಭಾರತ) : ಎರಡು ದೊಡ್ಡ ಪ್ರಮಾದದ ಗುಣಗಳಿರುವ ವ್ಯಕ್ತಿ ಮತ್ತು ಒಬ್ಬ ಪ್ರೀತಿ ಪಾತ್ರ ಸಂಗೀತಗಾರ ಮುಖ್ಯ ಪಾತ್ರಗಳೊಂದಿಗೆ ಪ್ರೇತದ ಭೇಟಿಯಾಗುತ್ತದೆ. ಯುದ್ಧಗಳನ್ನು ತಪ್ಪಿಸಿ, ವರಗಳನ್ನು ಪಡೆಯಲು ರಾಜಕುಮಾರಿಯನ್ನು ಮದುವೆಯಾಗುತ್ತದೆ. ಸಾಮಾನ್ಯ ಜನರು ನೆಮ್ಮದಿಯಿಂದ ಬದುಕುವಂತಾಗಲು ಪ್ರೇತಗಳ ಭೇಟಿಯನ್ನು ಬಳಸಿಕೊಂಡ ಬಗ್ಗೆ ಮನೋಜ್ಞವಾಗಿ ಚಿತ್ರದಲ್ಲಿ ಮೂಡಿಬಂದಿದೆ.
ಕಫಲ್ (ಭಾರತ) : ಮಕರ್ ಮತ್ತು ಕಮ್ರು ಹಳ್ಳಿಯಲ್ಲಿ ಹುಡುಗರಾಗಿದ್ದರೂ ಅವರ ಕೆಲಸ ಮಾತ್ರ ಪಟ್ಟಣದಲ್ಲಿ. ಮಕರ್‌ನ ಸ್ನೇಹಿತರ ತಂದೆಯಂದಿರು ತಮ್ಮ ಕುಟುಂಬದ ಜನರನ್ನು ಆಗಾಗ ನಿಯಮಿತವಾಗಿ ಭೇಟಿ ಮಾಡಿ ಉಡುಗೊರೆಗಳನ್ನು ನೀಡುತ್ತಾರೆ. ಆದರೆ ಮಕರ್ ಮತ್ತು ಕಮ್ರು ಕಳೆದ ಐದು ವರ್ಷಗಳಿಂದ ತಮ್ಮ ತಂದೆಯನ್ನೇ ನೋಡಿಲ್ಲ. ಅವರು ಯಾವಾಗಲೊ ಒಮ್ಮೆ ಮನೆಗೆ ಬಂದು ಹೋಗುತ್ತಿದ್ದರೂ ಯಾವ ಉಡುಗೊರೆಗಳನ್ನೂ ಮಕ್ಕಳಿಗೆ ತಂದಿರುವುದಿಲ್ಲ. ಯಾವಾಗಲು ಅವರನ್ನು ಬೈಯುವುದರಲ್ಲಿ ಮತ್ತು ಶಿಸ್ತು ಕಲಿಸುವುದರಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಮಕರ್‌ನ ಸ್ನೇಹಿತರಾದ ಬೂಪಿ ಮತ್ತು ಪೂಸು ನಿನ್ನ ತಂದೆ ಒಬ್ಬ ಮೋಸಗಾರ ಎಂದು ಅವನಿಗೆ ಮನದಟ್ಟು ಮಾಡುತ್ತಾರೆ. ಅರಣ್ಯದಲ್ಲಿ ಸಿಗುವ ಒಂದು ಮ್ಯಾಜಿಕ್ ಮದ್ದಿನ ಮೂಲಕ ಅವನಿಗೆ ಪಾಠ ಕಲಿಸಲು ಮುಂದಾಗುತ್ತಾರೆ. ಹೀಗೆ ಕಥೆ ಮಕ್ಕಳು ಕಣ್ಬಿಟ್ಟು ನೋಡುವಂತೆ ಮಾಡುತ್ತದೆ.
ಜರ್ನಿ ಆಫ್ ಬಿಗಿನಿಂಗ್ ಅಫ್ ಟೈಮ್ (ಜ್ಹೆಕ್ ಗಣರಾಜ್ಯ) : ಒಂದು ವಾಯುವಿಹಾರದ ಸಮಯದಲ್ಲಿ ಒಬ್ಬ ಹುಡುಗ ತನ್ನ ಸ್ನೇಹಿತರೊಂದಿಗೆ ಒಂದು ನೆಲಗವಿಯಂತಹ ಪ್ರದೇಶಕ್ಕೆ ಬರುತ್ತಾನೆ. ಅಲ್ಲಿಯ ವಾತಾವರಣ ಅವರಿಗೆ  ಸಖೇದಾಶ್ಚರ್ಯ ತರುತ್ತದೆ. ಅನೇಕ ದಶಲಕ್ಷ ವರ್ಷಗಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಜೀವಿಗಳು ಈಗಲೂ ಅಸ್ತಿತ್ವದಲ್ಲಿವೆ ಎಂದರೆ ಹೇಗೆ? ಎಂದು ಚಿಂತನೆಗೆ ಹಚ್ಚುತ್ತದೆ. ಉತ್ತರಕ್ಕಾಗಿ ಅವರು ಪುಸ್ತಕಗಳು ಮತ್ತು ಮ್ಯೂಸಿಯಂಗಳ ಮೊರೆ ಹೋಗುತ್ತಾರೆ.  ಇದೂಂದು ಅತ್ಯುತ್ತಮ ಶೈಕ್ಷಣಿಕ ಫ್ಯಾಂಟಸಿ ಚಿತ್ರವಾಗಿ ಮೂಡಿಬಂದಿರುವುದೇ ಈ ಚಿತ್ರದ ಹೆಗ್ಗಳಿಕೆ.
ಸಿಂಡ್ರೆಲಾ ಮೂನ್ (ಚೀನಾ) :  ಒಂದು ದಿನ ಅನಾಥ ಬಾಲಕಿ ಮೀಮೀ, ಅವಳ ಚಿಕ್ಕಮ್ಮನ ಮಾತನ್ನು ಧಿಕ್ಕರಿಸಿ, ಹುಣ್ಣಿಮೆಯ ನೃತ್ಯಕೂಟಕ್ಕೆ ಹೋಗುವ ತನ್ನ ಆಸೆಯನ್ನು ಈಡೇರಿಸಿಕೊಳ್ಳುತ್ತಾಳೆ. ಅವಳಮ್ಮ ತನ್ನ ನಿಧನಕ್ಕೆ ಮೊದಲು ಕೊಟ್ಟಿದ್ದ ಮಾಯಾ ಚಪ್ಪಲಿಯನ್ನು ಧರಿಸಿ ಅಲ್ಲಿಗೆ ಹೋಗಿದ್ದ ಮೀಮೀ, ತನ್ನ ಬದುಕಿನ ಗುರಿಯೇನು ಎಂಬುದನ್ನು ಕೊನೆಗೂ ನಿರ್ಧರಿಸಿಕೊಳ್ಳುತ್ತಾಳೆ... ಮತ್ತು ಈ ಭಯಗ್ರಸ್ಥ ಜಗದ ಹಣೆಬರವನ್ನೂ ಕಂಡುಕೊಳ್ಳುತ್ತಾಳೆ.
ಚಿಲ್ಡ್ರನ್ ಆಫ್ ಹೆವೆನ್ (ಇರಾನ್) : ಝೋಹ್ರಾಳ ಶೂ ಮಾಯ, ಅವಳಣ್ಣ ಅಲಿಯೇ ಕಳೆದದ್ದು. ಬಡವರಾದ ಅವರಿಗೆ ಇನ್ನೊಂದು ಜೊತೆ ಶೂ ಎಲ್ಲಿಂದ ಬರಬೇಕು. ಏನಾದರೂ ಉಪಾಯ ಹೂಡಬೇಕು. ಇರುವ ಒಂದೇ ಜೊತೆಯನ್ನು ಅವರು ಶಾಲೆ ಸಮಯಕ್ಕೆ ಸರಿಹೊಂದುವಂತೆ ಹಂಚಿಕೊಳ್ಳುತ್ತಾರೆ. ಅವರ ಉಪಾಯ ಎಷ್ಟು ದಿನ ನಡೆಯಬಹುದು? ಚಿತ್ರ ಕುತೂಹಲಕಾರಿಯಾಗಿ ಮೂಡಿಬಂದಿದೆ.
ಇನ್ ದಿ ನೇಮ್ ಆಫ್ ಶೆರ್ಲಾಕ್ ಹೋಮ್ಸ್ (ಹಂಗರಿ) : ಶೆರ್ಲಾಕ್ ಚಿತ್ರ ಇಡೀ ಇಬ್ಬರು ಹುಡುಗರ ಸುತ್ತ ಕೇಂದ್ರೀಕೃತಗೊಂಡಿದೆ. ಹೋಮ್ಸ್ ಮತ್ತು ವ್ಯಾಟ್ಸನ್ ನಗರದ ಮಕ್ಕಳ ಕಣ್ಮರೆಯಾಗುವಿಕೆಯ ಕುರಿತು ತಮ್ಮ ತನಿಖೆಯಲ್ಲಿ ಮಗ್ನರಾಗಿರುತ್ತಾರೆ. ಅಂತಿಮವಾಗಿ ಕತ್ತಲೆಯ ಮಾರ್ಗ ಸಹಜ ನೈಸರ್ಗಿಕತೆಯಂತೆ ಭಾಸವಾಗುತ್ತದೆ.
ಕ್ಲಾರಾ ಅಂಡ್ ದಿ ಸಿಕ್ರೆಟ್ ಆಫ್ ದಿ ಬೇರ‍್ಸ್ :- ಪ್ರಕೃತಿಯ ಸಮತೋಲನ ಅಪಾಯದ ಅಂಚಿನಲ್ಲಿದೆ ಎಂದು ತಿಳಿದು ಕ್ಲಾರಾ ಮತ್ತು ಅವಳ ಸ್ನೇಹಿತೆಯ ಹೃದಯ ಮಿಡಿಯುತ್ತದೆ. ಕಾನನದ ಕರಡಿಗಳ ಕಣ್ಮರೆಯ ರಹಸ್ಯ ಪರಿಹರಿಸಲು ಶತಮಾನಗಳಿಂದ ಜಾರಿಯಲ್ಲಿರುವ ರಣನೀತಿಯನ್ನು ಭೇದಿಸಿ ಮುನ್ನುಗ್ಗುತ್ತಾರೆ. ಹೀಗೆ ಚಿತ್ರ ಒಂದು ಕುತೂಹಲಕಾರಿ ಜಿಜ್ಞಾಸೆ ನೀಡುತ್ತದೆ.
ಇನುಕ್ (ಗ್ರೀನ್ ಲ್ಯಾಂಡ್) : ಇನುಕ್ ಆರ್ಕ್‌ಟಿಕ್ ಎಂಬ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿರುವ ಏಳು ವರ್ಷದ ಬಾಲಕ. ಒಂದು ಸಲ ಅವನಿಗೆ ಮಾಂತ್ರಿಕ ಅಂಮ್ಯುಲೆಟ್ ಸಿಗುತ್ತದೆ. ಅದರಿಂದ ಅವನು ಪ್ರಾಣಿಗಳೊಂದಿಗೆ ಸಂವಹನ ನಡೆಸುವ ವಿಶೇಷವಾದ ಶಕ್ತಿ ಪಡೆಯುತ್ತಾನೆ. ಇನುಕ್ ತನ್ನ ಸ್ನೇಹಿತರ ಜೊತೆಗೂಡಿ ಸಂಶೋಧನಾ ವಿಷಯವಾಗಿ ತನ್ನದೇ ಆದ ಒಂದು ಸ್ವಂತ ಅನ್ವೇಷಣಾ ಯಾತ್ರೆ ಕೈಗೊಳ್ಳುತ್ತಾನೆ. ಅದು ಒಂದು ವಿಶ್ವ ಪರ್ಯಟನೆಯ ಜೊತೆ ಜೊತೆಗೆ ತನ್ನನ್ನು ತಾನು ಕಂಡುಕೊಳ್ಳುವ ಯಾತ್ರೆಯಾಗಿಯೂ ಕಂಡು ಬರುತ್ತದೆ.
ಅಲೆಗಳು (ಭಾರತ) : ಪುಟ್ಟು ಮತ್ತು ಮೀನುಗಾರಿಕೆ ವೃತ್ತಿಯಿರುವ ಕರ್ನಾಟಕದ ಒಂದು ಹಳ್ಳಿಯಲ್ಲಿ ವಾಸಿಸುತ್ತಿರುತ್ತಾರೆ. ಒಮ್ಮೆ ಅವರು ತಮ್ಮ ಕಿಡಿಗೇಡಿತನದಿಂದ ಸಾಕ್ಷಿ ಸಮೇತ ಸಿಕ್ಕಿ ಬೀಳುತ್ತಾರೆ. ಬಸುವಿನ ಅಜ್ಜಿಯ ಕಥೆ ಸಮುದ್ರದ ದೂರದ ನಡುಗಡ್ಡೆಯಲ್ಲಿಯ ಘಟನೆಯೊಂದಕ್ಕೆ ಹೋಗಿ ನಿಲ್ಲುತ್ತದೆ. ಅಲ್ಲಿ ನಡುಗಡ್ಡೆಯಲ್ಲಿ ಯಾರೋ ಒಂದು ದೀಪದ ಹಿಂದೆ ಏನೋ ಬಿಟ್ಟು ತನ್ನ ಹಾರೈಕೆಗಳೆಲ್ಲ ನನಸಾಗಲಿ ಎಂದು ಪ್ರಾರ್ಥನೆಗೈಯ್ಯುತ್ತಾರೆ. ಪ್ರಾರ್ಥನೆ ತನ್ನ ಇಚ್ಛೆಗೆ ಪರಿಹಾರವಾಗಿ ಬರಲಿ ಎಂಬ ಹಂಬಲ. ಪುಟ್ಟ ಮತ್ತು ಬಸು ತಮ್ಮ ಸಣ್ಣ ಮರದ ದೋಣಿಯಂತೆ ತೇಲುವ ವಸ್ತುವಿನಿಂದ ಸಾಹಸಕ್ಕೆ ಧುಮುಕಲು ನಿರ್ಧರಿಸುತ್ತಾರೆ.
  ಇಂತಹ ಸದಭಿರುಚಿಯ ಮಕ್ಕಳ ಚಲನಚಿತ್ರಗಳು ಅಂತರ ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದ್ದು, ಕೊಪ್ಪಳ ನಗರದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಸಿದ್ದತೆಗಳನ್ನು ಕೈಗೊಂಡಿದೆ.

ನ. ೧೪ ರಿಂದ ಮಕ್ಕಳ ಚಲನಚಿತ್ರೋತ್ಸವ : ಚಿತ್ರಮಂದಿರ ಹಾಗೂ ಚಲನಚಿತ್ರಗಳ ವಿವರ
 ಕರ್ನಾಟಕ ಚಲನಚಿತ್ರ ಅಕಾಡೆಮಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಕೊಪ್ಪಳದ ಲಕ್ಷ್ಮಿ, ಶಾರದಾ ಮತ್ತು ಕನಕಾಚಲ ಚಿತ್ರಮಂದಿರಗಳಲ್ಲಿ ನ. ೧೪ ರಿಂದ ೨೦ ರವರೆಗೆ ನಡೆಯಲಿದೆ.
  ಚಿತ್ರಮಂದಿರವಾರು ಪ್ರದರ್ಶನಗೊಳ್ಳುವ ಚಲನಚಿತ್ರಗಳ ವಿವರ ಇಂತಿದೆ.  ನ. ೧೪ ರಂದು ಶಾರದಾ- ಟೈನಾ, ಲಕ್ಷ್ಮಿ- ಸಿಂಡ್ರೆಲಾ ಮೂನ್, ಕನಕಾಚಲ- ಸಿಂಡ್ರೆಲಾ ಮೂನ್.  ನ. ೧೫ ರಂದು ಶಾರದಾ- ಬ್ಲೂ ಟೈಗರ್, ಲಕ್ಷ್ಮಿ- ಕೋಬ್, ಕನಕಾಚಲ- ಟಚಿಂಗ್ ವೈಲ್ಡ್ ಹಾರ್ಸಸ್.  ನ. ೧೬ ರಂದು ಶಾರದಾ- ಗೂಪಿ ಗವ್ವಾಯಾ ಬಾತಾ ಬಜಾಯಾ, ಲಕ್ಷ್ಮಿ- ಇನ್ ದಿ ನೇಮ್ ಆಫ್ ಶೆರ‍್ಲಾಕ್ ಹೋಮ್ಸ್, ಕನಕಾಚಲ- ಇನ್ ದಿ ನೇಮ್ ಆಫ್ ಶೆರ‍್ಲಾಕ್ ಹೋಮ್ಸ್.  ನ. ೧೭ ರಂದು ಶಾರದಾ- ಯಲೋ ಕೋಲ್ಟ್, ಲಕ್ಷ್ಮಿ- ಅಲೆಗಳು, ಕನಕಾಚಲ- ಅಲೆಗಳು.  ನ. ೧೮ ರಂದು ಶಾರದಾ- ಕಫಲ್, ಲಕ್ಷ್ಮಿ- ಕ್ಲಾರಾ ಅಂಡ್ ದಿ ಸಿಕ್ರೆಟ್ ಆಫ್ ದಿ ಬೇರ‍್ಸ್, ಕನಕಾಚಲ- ಕ್ಲಾರಾ ಅಂಡ್ ದಿ ಸಿಕ್ರೆಟ್ ಆಫ್ ದಿ ಬೇರ‍್ಸ್.  ನ. ೧೯ ರಂದು ಶಾರದಾ- ಚಿಲ್ಡ್ರನ್ ಆಫ್ ಹೆವೆನ್, ಲಕ್ಷ್ಮಿ- ಇನುಕ್, ಕನಕಾಚಲ- ಇನುಕ್.  ನ. ೨೦ ರಂದು ಶಾರದಾ- ಪನಿ ಕ್ಲುಕಿ, ಲಕ್ಷ್ಮಿ-  ಜರ್ನಿ ಆಫ್ ದಿ ಬಿಗಿನಿಂಗ್ ಆಫ್ ಟೈಮ್ , ಕನಕಾಚಲ-  ಜರ್ನಿ ಆಫ್ ದಿ ಬಿಗಿನಿಂಗ್ ಆಫ್ ಟೈಮ್.  ಪ್ರತಿದಿನ ಬೆಳಿಗ್ಗೆ ೮-೩೦ ಗಂಟೆಗೆ ಚಲನಚಿತ್ರಗಳ ಪ್ರದರ್ಶನ ಪ್ರಾರಂಭವಾಗಲಿದೆ.
  ಕೊಪ್ಪಳ ನಗರದ ಶಾಲೆಗಳ ಮಕ್ಕಳಿಗೆ ಚಿತ್ರಮಂದಿರಗಳಿಗೆ ಸುರಕ್ಷಿತವಾಗಿ ಕರೆದುಕೊಂಡು, ಬಂದು ಹೋಗುವ ವ್ಯವಸ್ಥೆಯನ್ನು ಆಯಾ ಶಾಲಾ ಶಿಕ್ಷಕರಿಗೆ ವಹಿಸಿಕೊಡಲಾಗಿದೆ.  ಹೆಚ್ಚಿನ ಮಾಹಿತಿಗೆ ಎಸ್.ಬಿ. ಕುರಿ- ೯೦೬೦೦೦೬೮೯೮ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ಯಾಮಸುಂದರ್ ಅವರು ತಿಳಿಸಿದ್ದು, ಮಕ್ಕಳ ಚಲನಚಿತ್ರೋತ್ಸವ ಯಶಸ್ವಿಗೊಳಿಸುವಂತೆ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮನವಿ ಮಾಡಿಕೊಂಡಿದ್ದಾರೆ.  

Advertisement

0 comments:

Post a Comment

 
Top