PLEASE LOGIN TO KANNADANET.COM FOR REGULAR NEWS-UPDATES






 ಮಕ್ಕಳಲ್ಲಿ ಸೃಜನಶೀಲತೆ, ವೈಚಾರಿಕತೆ ಬೆಳೆಸಲು ಸಿನಿಮಾ ಪ್ರಭಾವಶಾಲಿ ಮಾಧ್ಯಮವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇದೇ ಮೊದಲ ಬಾರಿಗೆ ನ. 14 ರಿಂದ 20 ರವರೆಗೆ ಏರ್ಪಡಿಸಲಾಗಿರುವ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ನಗರದ ಲಕ್ಷ್ಮೀ ಚಿತ್ರಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಬಾರಿ ರಾಜ್ಯದ ಯಾವುದೋ ಒಂದು ಪ್ರದೇಶದಲ್ಲಿ ಜರುಗುತ್ತಿದ್ದ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಈ ಬಾರಿ ಸರ್ಕಾರ ಜಿಲ್ಲಾ ಮಟ್ಟಕ್ಕೂ ವಿಸ್ತರಿಸಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಮಕ್ಕಳಿಗೆ ಶೈಕ್ಷಣಿಕ ಪಠ್ಯ ಬೋಧನೆ, ಕ್ರೀಡೆಗಳ ಜೊತೆಗೆ ಮನರಂಜನೆಯೂ ಬೇಕು. ಈ ನಿಟ್ಟಿನಲ್ಲಿ ‘ಸಿನಿಮಾ’ ಒಂದು ಪ್ರಭಾವಶಾಲಿ ಮಾಧ್ಯಮವಾಗಿದ್ದು, ಮಕ್ಕಳಲ್ಲಿ ಮಾನವೀಯತೆ, ಸೃಜನಶೀಲತೆ, ವೈಚಾರಿಕತೆ ಬೆಳೆಸಲು ಅತ್ಯಂತ ಸಹಕಾರಿಯಾಗಲಿದೆ. ಈ ಬಾರಿ ಹಮ್ಮಿಕೊಳ್ಳಲಾಗಿರುವ ಮಕ್ಕಳ ಸಿನಿಮೋತ್ಸವದಲ್ಲಿ ಅಮೆರಿಕಾ, ಜ್ಹೆಕ್ ಗಣರಾಜ್ಯ, ಚೀನಾ, ಮಂಗೋಲಿಯಾ, ಹಂಗರಿ ಮುಂತಾದ ದೇಶಗಳ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು ಪ್ರಪಂಚದ ನಾನಾ ಪ್ರದೇಶದ ಭಾಷೆ, ಸಂಸ್ಕøತಿ, ಜೀವನಶೈಲಿ, ಭೌಗೋಳಿಕ ಪರಿಸರ, ಸಮಾಜದ ವಿವಿಧ ಮುಖಗಳ ಬಗ್ಗೆ ಮಕ್ಕಳಿಗೆ ವಿಸ್ತøತ ಪರಿಚಯ ಮಾಡಿಕೊಡುವ ಪೂರಕ ಸಾಧನವಾಗಿದೆ. ಮಕ್ಕಳ ಪ್ರೀತಿಯ ಚಾಚಾ ನೆಹರು ಅಂದರೆ ದೇಶದ ಮಾಜಿ ಪ್ರಧಾನಿ ದಿ. ಜವಾಹರ ಲಾಲ್ ನೆಹರು ಅವರ ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆಯೆಂದೇ ಆಚರಿಸುವ ಈ ಸಂದರ್ಭದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿನ ಚಿತ್ರಮಂದಿರಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಸ್ವಚ್ಛತೆಯ ಕೊರತೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ನಿಯಮಿತವಾಗಿ ಚಿತ್ರಮಂದಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಸ್ವಚ್ಛತೆ ಕಾಯ್ದುಕೊಳ್ಳದ ಚಿತ್ರಮಂದಿರಗಳ ಪರವಾನಗಿಯನ್ನು ರದ್ದುಪಡಿಸುವಂತಹ ಕಠಿಣ ಕ್ರಮಗಳನ್ನೂ ಸಹ ಕೈಗೊಳ್ಳಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಅವರು ಎಚ್ಚರಿಕೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್ ಅವರು ಅಂತರ ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಿರುವ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳದಂತಹ ಪ್ರದೇಶಗಳಲ್ಲಿ ಮಕ್ಕಳಿಗೆ ಅಂತರ ರಾಷ್ಟ್ರೀಯ ಚಲನಚಿತ್ರಗಳನ್ನು ವೀಕ್ಷಿಸುವಂತಹ ಒಳ್ಳೆಯ ಅವಕಾಶ ದೊರೆತಿದೆ. ಕೊಪ್ಪಳ ನಗರದ ಎಲ್ಲ ಶಾಲಾ ಮಕ್ಕಳು ಈ ಸಂದರ್ಭದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮೋತ್ಸವ ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಿನಿಮೋತ್ಸವವನ್ನು ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಉದ್ದೇಶವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಹೊಂದಿದೆ. ಈ ಬಾರಿಯ ಸಿನಿಮೋತ್ಸವವನ್ನು ನಗರದ ಲಕ್ಷ್ಮೀ, ಶಾರದಾ ಮತ್ತು ಕನಕಾಚಲ ಚಿತ್ರಮಂದಿರದಲ್ಲಿ ಆಯೋಜಿಸಿದ್ದು ನ. 20 ರವರೆಗೂ ನಿತ್ಯ ಬೆ. 8-30 ಗಂಟೆಗೆ ಪ್ರದರ್ಶನಗೊಳ್ಳಲಿವೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್ ಪೂಜಾರ್, ಬಿ.ಆರ್.ಸಿ. ಶರಣಪ್ಪ ಗೌರಿಪುರ, ಲಕ್ಷ್ಮೀ ಚಿತ್ರಮಂದಿರದ ವಿಶ್ವನಾಥ ಮಹಾಂತಯ್ಯನಮಠ ಮುಂತಾದವರು ಉಪಸ್ಥಿತರಿದ್ದರು. ಬೆಳ್ಳಿ ಮಂಡಲದ ಜಿಲ್ಲಾ ಸಂಚಾಲಕ ಮಂಜುನಾಥ ಗೊಂಡಬಾಳ ನಿರೂಪಿಸಿದರು, ಸಿನಿಮೋತ್ಸವಕ್ಕೆ ನೇಮಕಗೊಂಡಿರುವ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಿ. ಕುರಿ ವಂದಿಸಿದರು. ಲಕ್ಷ್ಮೀ ಚಿತ್ರಮಂದಿರದಲ್ಲಿ ಪ್ರದರ್ಶಿತಗೊಂಡ ಚೀನಾ ದೇಶದ ‘ಸಿಂಡ್ರೆಲಾ ಮೂನ್’ ಚಲನಚಿತ್ರವನ್ನು ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿ, ಗಣ್ಯರು ಮಕ್ಕಳೊಟ್ಟಿಗೆ ಕುಳಿತು ವೀಕ್ಷಿಸಿ, ಸಂಭ್ರಮಿಸಿದರು.

Advertisement

0 comments:

Post a Comment

 
Top