ಸದೃಢ ದೇಶ ಅಥವಾ ಸಮಾಜ ನಿರ್ಮಾಣ ಮಾಡಲು ಮಕ್ಕಳ ಹಕ್ಕುಗಳ ರಕ್ಷಣೆ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಯುನಿಸೆಫ್-ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಅಧ್ಯಕ್ಷರುಗಳಿಗೆ ಮಕ್ಕಳ ಹಕ್ಕುಗಳ ಗ್ರಾಮಸಭೆ ಕುರಿತು ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಹಕ್ಕುಗಳ ಬಗ್ಗೆ ಇನ್ನೂ ಜನರಲ್ಲಿ ಅರಿವಿನ ಕೊರತೆ ಇದೆ. ಮಕ್ಕಳ ಬದುಕು, ಆರೋಗ್ಯ, ವಿಕಾಸ ಹಾಗೂ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಮಕ್ಕಳ ಸ್ವಚ್ಛಂದ ಬದುಕಿಗೆ ತೊಂದರೆಯಾಗದಂತೆ, ಹಾಗೂ ಅವರ ಅಭಿಪ್ರಾಯಗಳಿಗೂ ಮನ್ನಣೆ ದೊರೆಯಬೇಕೆಂಬುದು ಕಾಯ್ದೆಯ ಆಶಯವಾಗಿದೆ. ಆದರೆ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳು ಹಾಗೂ ಅವುಗಳ ರಕ್ಷಣೆಯ ಕುರಿತು ಜಾಗೃತಿ ಇಲ್ಲದಿರುವುದರಿಂದ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿವೆ. ಮಕ್ಕಳ ಹಕ್ಕುಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿಯೇ ಇದೀಗ ಗ್ರಾಮ ಸಭೆಗಳನ್ನು ಆಯೋಜಿಸಲು ಸರ್ಕಾರ ಸೂಚನೆ ನೀಡಿದ್ದು, ಇಂತಹ ಗ್ರಾಮಸಭೆಗಳಲ್ಲಿ ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ ದೊರೆಯಬೇಕು. ಮಕ್ಕಳ ಸಾಮಾನ್ಯ ಬದುಕಿಗೆ ತೊಂದರೆ ಕಂಡುಬಂದಲ್ಲಿ, ಸೂಕ್ತ ನಿರ್ಧಾರಗಳನ್ನು ಇದೇ ಸಭೆಗಳಲ್ಲಿ ಕೈಗೊಳ್ಳಬೇಕು. ಮಕ್ಕಳ ಶಿಕ್ಷಣ ಹಕ್ಕುಗಳ ಬಗ್ಗೆ ಹೋರಾಟ ನಡೆಸಿದ ಪಾಕಿಸ್ತಾನದ ಮಲಾಲ ಇದಕ್ಕಾಗಿ ಇತ್ತೀಚೆಗೆ ನೋಬೆಲ್ ಪ್ರಶಸ್ತಿ ಪಡೆದು ಖ್ಯಾತರಾದಂತೆ, ಮಕ್ಕಳ ಶಿಕ್ಷಣಕ್ಕೆ ಪ್ರೇರೇಪಿಸಲು ಪ್ರತಿಯೊಂದು ಗ್ರಾಮಗಳಲ್ಲೂ ಮಲಾಲ ನಂತಹ ಬಾಲೆಯರು ಹುಟ್ಟಿ ಬರಬೇಕು. ಪ್ರತ ನಂತಹ ಮಕ್ಕಳ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ಸ್ಥಳೀಯ ಸರ್ಕಾರವೆಂದೇ ಬಿಂಬಿತವಾಗಿರುವ ಗ್ರಾಮ ಪಂಚಾಯತಿಗಳಿಗೆ ಹೆಚ್ಚಿನ ಹೊಣೆಗಾರಿಕೆ ಇದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಹೇಳಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಮಕ್ಕಳ ಹಕ್ಕುಗಳ ಟ್ರಸ್ಟ್ ನಿರ್ದೇಶಕ ವಾಸುದೇವ ಶರ್ಮಾ ಅವರು ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ಬಗ್ಗೆ ಅರಿವು ಮೂಡಿಸಲು ಮಕ್ಕಳ ಗ್ರಾಮಸಭೆಗಳು ಸೂಕ್ತ ವೇದಿಕೆಯಾಗಿದೆ. ಇತ್ತೀಚೆಗೆ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಕಾಯ್ದೆಯ ಜೊತೆಗೆ ಸಮುದಾಯದ ಪಾತ್ರವೂ ಪ್ರಮುಖವಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಶೇಖರಗೌಡ ಕಾರ್ಯಾಗಾರ ಕುರಿತು ಮಾತನಾಡಿದರು. ಯುನಿಸೆಫ್‌ನ ಹರೀಶ್ ಜೋಗಿ ಅವರು ಪ್ರಾರಂಭದಲ್ಲಿ ಸ್ವಾಗತಿಸಿದರು. ಜಿಲ್ಲೆಯ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಪಿಡಿಓಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
0 comments:
Post a Comment