PLEASE LOGIN TO KANNADANET.COM FOR REGULAR NEWS-UPDATES

(  ಗಾಂಧೀಜಿಯವರ ಜಯಂತಿ ಅಂಗವಾಗಿ ಈ ಲೇಖನ  )

     ’ಗಾಂಧಿ’ ಎಂಬ ಹೆಸರೇ ಚೈತನ್ಯದಾಯಕ, ಬದಲಾವಣೆಗೆ ತುಡಿಯಲು ಸ್ಫೂರ್ತಿ.  ಇಡೀ ಜಗತ್ತಿಗೆ ಅಹಿಂಸೆಯ ಪಾಠ ಕಲಿಸಿದ ಹೆಸರು.  ಗಾಂಧಿ, ’ಮಹಾತ್ಮಾ’ ಗಾಂಧಿಯಾಗುವತ್ತ ಹೆಜ್ಜೆ ಹಾಕಿದ ಕಿರುನೋಟ ಇಲ್ಲಿದೆ.
  ಗಾಂಧಿಜಿಗೆ ಆಗ ೧೨ ವರ್ಷ. ಶಾಲೆಯ ವಿದ್ಯಾರ್ಥಿ. ಚಿಕ್ಕವರಿದ್ದಾಗಿನಿಂದಲೂ ಅವರಿಗೆ ಸುಳ್ಳು ಹೇಳಿ ಗೊತ್ತಿರಲಿಲ್ಲ. ಒಂದು ಸಲ ಆತನ ಶಾಲೆಗೆ ಕಲಿಕೆಯ ಗುಣಮಟ್ಟ ಪರೀಕ್ಷಿಸಲು ಶಾಲಾ ಇನ್ಸ್‌ಪೆಕ್ಟರ್ ಒಬ್ಬರು ಬಂದರು. ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಲು ಐದು ಪದಗಳ ಉಕ್ತಲೇಖನ ನೀಡಿದರು. ಅದರಲ್ಲಿ ಏeಣಣಟe ಎಂಬ ಪದವೂ ಇತ್ತು ಅದನ್ನು ಮೋಹನ್‌ದಾಸ್ ತಪ್ಪಾಗಿ ಬರೆದ. ತರಗತಿಯ ಉಪಾಧ್ಯಾಯರು ಅದನ್ನು ನೋಡಿದವರೇ ಪಕ್ಕದ ಹುಡುಗ ಬರೆದಿರುವುದನ್ನು ನೋಡಿ ಬರಿ ಎಂದು ಸನ್ನೆ ಮಾಡಿದರು.
  ಅವರು ಏಕೆ ಸನ್ನೆ ಮಾಡಿದರೆಂದು ಮೋಹನ್‌ಗೆ ಗೊತ್ತಾಯಿತು. ಆದರೂ ’ಕಾಪಿ’ ಮಾಡುವುದು ತಪ್ಪು ಎಂದು ಅವರ ಮನಸ್ಸು ಹೇಳಿತು. ಅವರು ತಮ್ಮ ಉಪಾಧ್ಯಾಯರ ಸೂಚನೆಯಂತೆ ’ಕಾಪಿ’  ಮಾಡಲಿಲ್ಲ ಇನ್ಸ್‌ಪೆಕ್ಟರ್ ಪರಿಶೀಲಿಸಿದಾಗ ಗಾಂಧಿಯೊಬ್ಬರೇ ತಪ್ಪು ಬರೆದಿದ್ದರು. ಇದರಿಂದ ಉಪಾಧ್ಯಾಯರು ಸಿಟ್ಟಾದರು. ’ದಡ್ಡ!’ ಎಂದರು. ಗಾಂಧಿ ಉಪಾಧ್ಯಾಯರಿಗೆ ಎದುರು ಮಾತು ಹೇಳಲಿಲ್ಲ. ನಾನು ದಡ್ಡನಾದೆನಲ್ಲ ಎಂದು ದುಃಖಪಡಲಿಲ್ಲ. ತಾನು ಕಾಪಿ ಮಾಡಲಿಲ್ಲವಲ್ಲ ಎಂದು ಸಂತೋಷಪಟ್ಟರು. ಗಾಂಧಿ ಅವರು ಚಿಕ್ಕವರಿದ್ದಾಗ ಕೆಲವು ತಪ್ಪು ಕೆಲಸಗಳನ್ನು ಮಾಡಿದರು. ಆದರೆ ಯಾವಾಗ ಅದು ತಪ್ಪು ಎಂದು ಅವರಿಗೆ ಮನವರಿಕೆಯಾಯಿತೋ ನೇರವಾಗಿ ತಮ್ಮ ತಂದೆಯ ಬಳಿ ಹೋಗಿ ತಪ್ಪನ್ನು ಒಪ್ಪಿಕೊಡರು. ತಂದೆಯ ಕಣ್ಣುಗಳು ಒದ್ದೆಯಾದವು. ಅದಕ್ಕಿಂತ ಶಿಕ್ಷೆ ಬೇರೆ ಬೇಕೆ? ’ಆ ಮಮತೆಯ ಕಣ್ಣೀರು ನನ್ನ ಪಾಪಗಳನ್ನೆಲ್ಲ ತೊಳೆಯಿತು. ಅಹಿಂಸೆಯ ಪಾಠ ಕಲಿಸಿತು’ ಎಂದು ಗಾಂಧಿಯವರೇ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ : ಮೋಹನದಾಸ ಕರಮಚಂದ ಗಾಂಧಿ ಬ್ಯಾರಿಸ್ಟರ್ ಪದವಿಗಾಗಿ ಇಂಗ್ಲೆಂಡ್‌ಗೆ ತೆರಳಿದರು.  ಬ್ಯಾರಿಸ್ಟರ್ ಆಗಿ ಅವರು ಭಾರತಕ್ಕೆ ಹಿಂದಿರುಗಿದಾಗ ಅವರಿಗೆ ಇನ್ನೂ ೨೨ ವರ್ಷ. ಗಾಂಧಿ ತಮ್ಮ ವಕೀಲ ವೃತ್ತಿ ಪ್ರಾರಂಭಿಸಿದರು. ಇದೇ ವೇಳೆಗೆ ಪೋರ್‌ಬಂದರಿನ ಒಂದು ವ್ಯಾಪಾರ ಸಂಸ್ಥೆ, ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಸಂಸ್ಥೆಯ ಮೊಕದ್ದಮೆ ನಡೆಸಲು ಗಾಂಧಿಯವರನ್ನು ವಕೀಲರನ್ನಾಗಿ ನೇಮಿಸಿಕೊಂಡರು. ಅದನ್ನು ವಹಿಸಿಕೊಂಡು ದಕ್ಷಿಣ ಆಫ್ರಿಕಾಗೆ ಹೋದರು. ಗಾಂಧಿಯೊಳಗೆ ಬದಲಾವಣೆಯ ಗಾಳಿ ಬೀಸಲು ಆರಂಭಿಸಿದ್ದೇ ಆಗ. ಎಲ್ಲೆಲ್ಲೂ ವರ್ಣದ್ವೇಷ. ಅಲ್ಲಿಯ ಸರ್ಕಾರ, ಭಾರತೀಯರನ್ನು ಕೀಳಾಗಿ ಕಾಣುತ್ತಿತ್ತು. ಗಾಂಧಿಯವರನ್ನು ’ಕೂಲಿ ಬ್ಯಾರಿಸ್ಟರ್’ ಎಂದೇ ಅಲ್ಲಿಯ ಜನ ಕರೆಯುತ್ತಿದ್ದರು. ಒಮ್ಮೆ ’ ದರ್ಬಾನ್’ ಎಂಬ ಊರಿನಲ್ಲಿ ’ಪ್ರಿಟೋರಿಯಾ’ ಎಂಬ ಊರಿಗೆ ರೈಲಿನ ಮೊದಲನೆಯ ತರಗತಿಯಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ಅವರ ಮೈ ಬಣ್ಣವನ್ನು ನೋಡಿ ರೈಲ್ವೆ ಅಧಿಕಾರಿಗಳು ಅವರನ್ನು ರೈಲಿನಿಂದ ಹೊರಕ್ಕೆ ತಳ್ಳಿದರು. ದಕ್ಷಿಣ ಆಫ್ರಿಕಾದಲ್ಲಿದ್ದ ಭಾರತೀಯರನ್ನು ಗಾಂಧಿ ಒಂದುಗೂಡಿಸಿದರು. ಹೀಗೆ ಅಲ್ಲಿರುವಾಗಲೇ ಒಮ್ಮೆ ಅವರಿಗೆ ದಕ್ಷಿಣ ಆಫ್ರಿಕಾ ಸಂಸತ್ತಿನ ಮುಂದೆ ಭಾರತೀಯರ ಮತದಾನದ ಹಕ್ಕು ಕಸಿದುಕೊಳ್ಳುವ ಒಂದು ಮಸೂದೆ ಬರುತ್ತದೆ ಎಂಬ ಸುದ್ದಿ ಕಂಡಿತು. ಈ ಮಸೂದೆ ಕಾನೂನಾದರೆ ಅಲ್ಲಿಯ ಭಾರತೀಯರಿಗೆ ಒಂದು ದೊಡ್ಡ ಪೆಟ್ಟು. ಗಾಂಧಿ ಇದರ ವಿರುದ್ಧ ಭಾರತೀಯರನ್ನು ಅಣಿಗೊಳಿಸಲು ಆರಂಸಿದರು.  ಹೀಗಾಗಿ ಗಾಂಧಿ ಇನ್ನಷ್ಟು ಕಾಲ ಅಲ್ಲಿಯೇ ನೆಲೆ ನಿಲ್ಲಬೇಕಾಗಿ ಬಂದಿತು. ದಕ್ಷಿಣ ಆಫ್ರಿಕಾದ ಬಿಳಿಯ ಜನರು ಕಪ್ಪು ಜನರನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದರು. ಗಾಂಧಿಯವರು ಸತ್ಯ, ಅಹಿಂಸೆ ಮಾರ್ಗದಲ್ಲಿ ಇದನ್ನು ಎದುರಿಸಿದರು. ಈ ಹೋರಾಟ ’ಸತ್ಯಾಗ್ರಹ’ ಹುಟ್ಟಲು ಕಾರಣವಾಯಿತು. ಆಗ ಉಂಟಾದ ಅನೇಕ ಕಷ್ಟಗಳನ್ನು ಸಹಿಸಿಕೊಂಡರು. ಮಹಿಳೆಯರು ಈ ಹೋರಾಟದಲ್ಲಿ ಭಾಗವಹಿಸಿದರು. ಗಾಂಧಿಯವರ ಪತ್ನಿ ಕಸ್ತೂರಿಬಾ ಇದರ ಮುಂದಾಳತ್ವ ವಹಿಸಿದರು. ಕೊನೆಗೆ ಜಯವಾಯಿತು. ಭಾರತೀಯರ ಮೇಲೆ ಹೇರಿದ್ದ ತಲೆಗಂದಾಯ, ಅವರ ವಿರುದ್ಧ ಜಾರಿ ಮಾಡಿದ್ದ ಕೆಟ್ಟ ಕಾನೂನುಗಳು ರದ್ದಾದವು. ಗಾಂಧಿ ಅವರು ಸಹಿಸಿದ ಕಷ್ಟ, ಮಾಡಿದ ತ್ಯಾಗ ಅಪಾರ, ಭಾರತೀಯರಿಗೆ ಈ ಹೋರಾಟ ಒಂದು ಹೊಸ ಶಕ್ತಿ ಕೊಟ್ಟತು. ಹೊಸ ಆಸೆ ಮೂಡಿತು. 
ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿ : ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹಕ್ಕೆ ದೊರಕಿದ ಜಯದ ಚಿಲುಮೆ  ಭಾರತಕ್ಕೂ ತಲುಪಲು ತಡವಾಗಲಿಲ್ಲ. ಶಸ್ತ್ರ ಬಲವಿಲ್ಲದ, ವಿದ್ಯಾವಂತರಲ್ಲದ ಜನರೂ ಕೂಡ ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಬಹುದು. ಇದರಿಂದ ಇಂಗ್ಲೀಷರ ದಬ್ಬಾಳಿಕೆಯನ್ನು ಎದುರಿಸಿ ಸ್ವಾತಂತ್ರ್ಯ ಗಳಿಸಬಹುದು ಎಂಬ ನಂಬಿಕೆ ದೃಢವಾಯಿತು. ತಮ್ಮ ಬದುಕನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಮೀಸಲಿಡಬೇಕೆಂದು ನಿರ್ಧರಿಸಿ ಭಾರತಕ್ಕೆ ಹಿಂದಿರುಗಿದರು. ಸರಳ ಉಡುಪನ್ನು ಅಂಗೀಕರಿಸಿದರು, ಭಾರತದ ಸ್ಥಿತಿಗತಿಗಳನ್ನು ಚೆನ್ನಾಗಿ ಅಭ್ಯಸಿಸಲು ಪ್ರಾರಂಭಿಸಿದರು. ಗಾಂಧಿಯವರು ಅಹಮದಾಬಾದಿನ ಹತ್ತಿರ ಸಾಬರಮತಿ ನದಿಯ ದಂಡೆಯ ಮೇಲೆ ಸತ್ಯಾಗ್ರಹ ಆಶ್ರಮವನ್ನು ಸ್ಥಾಪಿಸಿದರು. ಸತ್ಯಾಗ್ರಹ ಆಶ್ರಮ ಒಂದು ದೊಡ್ಡ ಪ್ರಯೋಗ ಶಾಲೆಯಾಯಿತು. ಸತ್ಯ, ಅಹಿಂಸೆ, ಬ್ರಹ್ಮಚರ್ಯ ಆಶ್ರಮದ ಗುರಿಯಾದವು. ಇದು ಸತ್ಯಾಗ್ರಹಿಗಳನ್ನು ತಯಾರಿಸುವ ತರಬೇತಿ ಶಾಲೆಯಾಯಿತು. ರಚನಾತ್ಮಕ ಕೆಲಸಗಳ ಪ್ರಸಾರಕ್ಕೆ ಒಂದು ಜೀವ ಕೇಂದ್ರವಾಯಿತು. ದೇಶದಲ್ಲಿ ತಲೆದೋರುತ್ತಿದ್ದ ಅನ್ಯಾಯಗಳ ವಿರುದ್ಧ ಗಾಂಧೀಜಿ ಸತ್ಯಾಗ್ರಹಗಳನ್ನು ನಡೆಸಿದರು. ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುವ ’ರೌಲೆಟ್’ ಮಸೂದೆಯನ್ನು ಸರ್ಕಾರ ತಂದಿತು. ಗಾಂಧೀಜಿ ಈ ಮಸೂದೆಯ ವಿರುದ್ಧ ಚಳುವಳಿ ನಡೆಸಬೇಕಾಯಿತು ಯಾವುದನ್ನೂ ಲೆಕ್ಕಿಸದೆ ಸರ್ಕಾರ ಮಸೂದೆಯನ್ನು ಕಾನೂನನ್ನಾಗಿ ಮಾಡಿತು. ಅದು ದೇಶವನ್ನೇ ಕೆರಳಿಸಿತು. ಸರ್ಕಾರ ಹೀನವಾದ ದಬ್ಬಾಳಿಕೆ ನಡೆಸಿತು. ಅಮೃತಸರದ ’ಜಲಿಯನ್ ವಾಲಾಬಾಗ್‌ನಲ್ಲಿ ಸಾವಿರಾರು ನಿರಪರಾಧಿ ಜನಗಳನ್ನು ಗುಂಡಿಕ್ಕಿ ಕೊಂದಿತು.  ಜನರಿಗೆ ಬಹಿರಂಗವಾಗಿ ಛಡಿ ಏಟು ಶಿಕ್ಷೆ ಕೊಟ್ಟರು. ಈ ಅತ್ಯಾಚಾರವನ್ನು ಯಾವ ರೀತಿ ವಿರೋಧಿಸಬೇಕೆಂದು ಗಾಂಧಿ ಯೋಚಿಸತೊಡಗಿದರು. ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಅಸಹಕಾರವೇ ತಕ್ಕ ಉಪಾಯವೆಂದು ನಿರ್ಧರಿಸಿದರು. ಜನರಿಗೆ ಅಹಿಂಸೆಯ ತರಬೇತಿ ಅವಶ್ಯಕತೆಯನ್ನು ಗಾಂಧಿಯವರು ಮನಗಂಡರು. ಅದಕ್ಕಾಗಿ ’ ಯಂಗ್’ ಇಂಡಿಯಾ’ ’ನವ ಜೀವನ’ ಎಂಬ ಎರಡು ಪತ್ರಿಕೆಗಳನ್ನು ಹೊರತಂದರು. ಅಹಮದಾಬಾದಿನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿಯವರನ್ನು ಚಳವಳಿಯ ಏಕೈಕ ನಾಯಕರೆಂದು ಘೋಷಿಸಲಾಯಿತು. ತಮ್ಮ ಕರಾರುಗಳನ್ನು ಪೂರ್ಣಗೊಳಿಸಿದರೆ ಒಂದು ವರ್ಷದಲ್ಲಿ ರಾಷ್ಟ್ರಕ್ಕೆ ಸ್ವರಾಜ್ಯ ದೊರಕುವುದೆಂದು ಗಾಂಧಿಯವರು ಸಾರಿದರು.  
ಸ್ವರಾಜ್ಯ ಕಲ್ಪನೆ : ೧೯೨೪ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯಿತು. ಗಾಂಧಿಯವರೇ ಅಧಿವೇಶನಾಧ್ಯಕ್ಷರು, ಶಾಸನ ಸಭೆಗಳಿಗೆ ಹೋಗಬೇಕೆನ್ನುವವರಿಗೆ ಸಮ್ಮತಿ ಕೊಡಲಾಯಿತು.  ಅವರು ತಮ್ಮ ಪಕ್ಷಕ್ಕೆ ಸ್ವರಾಜ್ಯ ಪಕ್ಷ ಎಂದು ಕರೆದರು. ಲಾಹೋರಿನಲ್ಲಿ ಕಾಂಗ್ರೆಸ್ ಅಧಿವೇಶನಕ್ಕೆ ನೆಹರು ಅಧ್ಯಕ್ಷರು. ಸಂಪೂರ್ಣ ಸ್ವಾತಂತ್ರ್ಯವೇ ಕಾಂಗ್ರೆಸ್ಸಿನ ಗುರಿ ಎಂದು ಸಾರಿತು. ಈ ನಿರ್ಣಯವನ್ನು ಕಾರ್ಯರೂಪಕ್ಕೆ ತರುವುದು ಗಾಂಧಿಯವರ ಹೊಣೆಯಾಯಿತು. ಸ್ವರಾಜ್ಯ ಸಿಗುವವರೆಗೆ ತಮ್ಮ ಸಬರಮತಿ ಆಶ್ರಮಕ್ಕೆ ಹಿಂದಿರುಗುವುದಿಲ್ಲವೆಂದು ಗಾಂಧಿ ಸಾರಿದರು. ಆಶ್ರಮವನ್ನು ಬಿಟ್ಟುಬಿಟ್ಟರು. ಸಂಪೂರ್ಣ ಸ್ವಾತಂತ್ರ್ಯ ಸಾಧಿಸಲು ದಂಡಿಯಾತ್ರೆ’ ಯನ್ನು ಕೈಗೊಂಡು ಉಪ್ಪಿನ ಸತ್ಯಾಗ್ರಹ ಹೂಡಿದರು. ’ಬ್ರಿಟಿಷರ ಆಳ್ವಿಕೆ ಒಂದು ಶಾಪ. ಇದನ್ನು ತೆಗೆದು ಹಾಕುವುದು ನಮ್ಮ ಸಂಕಲ್ಪ’ ಎಂದು ಗಾಂಧಿಯವರು ಘೋಷಿಸಿದರು. ಜನರು ಗುಂಪು ಗುಂಪಾಗಿ ಬಂದು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಪೊಲೀಸರು ಸತ್ಯಾಗ್ರಹಿಗಳ ಮೇಲೆ ಲಾಠಿ ಪ್ರಹಾರ ಮಾಡುತ್ತಲೇ ಇದ್ದರು. ಗಾಂಧಿಯವರನ್ನು ದಸ್ತಗಿರಿ ಮಾಡಿದರು. ಆದರೆ ಸತ್ಯಾಗ್ರಹದ ಬಿರುಸು ಮಾತ್ರ ಕಡಿಮೆ ಆಗಲಿಲ್ಲ. ಕೊನೆಗೆ ಗಾಂಧಿಯವರು ಸೆರೆಮನೆಯಿಂದ ಬಿಡುಗಡೆ ಆದರು. ಮಾತುಕತೆ ನಡೆದು ಗಾಂಧಿ-ಇರ್ವಿನ್ ಒಪ್ಪಂದವಾಯಿತು.  ಈ ಒಪ್ಪಂದದ ಫಲವಾಗಿ ಗಾಂಧಿಯವರು ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಪರಿಷತ್ತಿಗೆ ಹೋದರು. ದೇಶಕ್ಕೆ ಸ್ವಾತಂತ್ರ್ಯ ಬೇಕೇ ಬೇಕೆಂದು ಕಾಂಗ್ರೆಸ್ಸಿನ ಬೇಡಿಕೆ. ೧೯೩೨ರಲ್ಲಿ ಇಂಗ್ಲೆಂಡಿನ ಮುಖ್ಯ ಪ್ರಧಾನಿ ರ್ಯಾಮ್ಸೆಮೆಕ್ ಡೊನಾಲ್ಡರು ಭಾರತಕ್ಕೆ ಜಾತಿವಾರು ಪ್ರಾತಿನಿಧ್ಯ ಕೊಡುವುದಾಗಿ ಸಾರಿದರು. ಅಸ್ಪೃಶ್ಯರನ್ನು ಹಿಂದುಗಳಲ್ಲವೆಂದು  ಭಾವಿಸಿ ಅವರಿಗೆ  ಪ್ರತ್ಯೇಕ ಓಟು ಕೊಡುವ ಹಕ್ಕು ಕೊಟ್ಟರು. ಇದನ್ನು ರದ್ದು ಮಾಡದಿದ್ದರೆ ಆಮರಣ ಉಪವಾಸ ಕೈಗೊಳ್ಳುವೆ ಎಂದು ಗಾಂಧಿ ತಿಳಿಸಿದರು. ಆದರೆ ದುಂಡು ಮೇಜಿನ ಪರಿಷತ್ತು ಗಾಂಧಿ ಮಾತಿಗೆ ಕಿವಿಗೊಡಲಿಲ್ಲ. ಗಾಂಧಿಯವರು ಅಮರಣ ಉಪವಾಸ ಕೈಗೊಂಡರು. ಇದರ ಪರಿಣಾಮವಾಗಿ ಪ್ರತ್ಯೇಕ ಮತಾಧಿಕಾರದ ತೀರ್ಮಾನವನ್ನು ಇಂಗ್ಲೆಂಡಿನ ಪಾರ್ಲಿಮೆಂಟ್ ರದ್ದು ಮಾಡಿತು. ಗಾಂಧಿಯವರು ಹರಿಜನ ಕಾರ್ಯಕ್ಕಾಗಿ ದೇಶವನ್ನೆಲ್ಲಾ ಸುತ್ತಾಡಿದರು. ಸನಾತನಿ ಹಿಂದೂಗಳು ಇವರ ಕಾರ್ಯವನ್ನು ವಿರೋಧಿಸಿದರು. ಆದರೆ ಅದು ಏನೂ ಪರಿಣಾಮ ಬೀರಲಿಲ್ಲ. ಈ ಪ್ರವಾಸದಿಂದ ಅಸ್ಪೃಶ್ಯತಾ ಭಾವನೆ ಹೋಗತೊಡಗಿತು.  ಜನರೇ ಈ ಆಂದೋಳನಕ್ಕೆ ಮುಂದೆ ಬಂದರು. ಈ ಪ್ರವಾಸ ಮುಗಿದ ಮೇಲೆ ಗಾಂಧಿಯವರು ವಾರ್ಧಾಗೆ ಬಂದು ನೆಲೆಸಿದರು. ಆಶ್ರಮ ತೆಗೆದರು. ತಮ್ಮ ಸಮಯವನ್ನು ಖಾದಿ- ಗ್ರಾಮೋದ್ಯೋಗಗಳ ಬೆಳವಣಿಗೆಗೆ ಉಪಯೋಗಿಸಿದರು. ಹರಿಜನ ಕಾರ್ಯ ಮತ್ತು ಇತರ ಗ್ರಾಮಾಭಿವೃದ್ಧಿ ಕಾರ್ಯಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡರು. 
ಸ್ವಾತಂತ್ರ್ಯಕ್ಕೆ ಅಂತಿಮ ಹೋರಾಟ : ೧೯೪೦ರಲ್ಲಿ ಎರಡನೆಯ ಮಹಾಯುದ್ಧದ ಬೆಂಕಿ ಎಲ್ಲಾ ಕಡೆಗೂ ಹರಡಿತು. ಬ್ರಿಟಿಷ್ ಸರ್ಕಾರದೊಂದಿಗೆ ಕಾಂಗ್ರೆಸ್ಸು ಮತ್ತು ಗಾಂಧಿಯವರು ನಡೆಸಿದ ಸಂಧಾನಗಳೆಲ್ಲವು ವಿಫಲವಾದವು. ೧೯೪೦ನೇ ಅಕ್ಟೋಬರ್‌ನಲ್ಲಿ ಗಾಂಧಿಯವರು ವೈಯಕ್ತಿಕ ಸತ್ಯಾಗ್ರಹ ಪ್ರಾರಂಭ ಮಾಡಿದರು. ವಿನೋಭಾಜಿಯವರೇ ಪ್ರಥಮ ಸತ್ಯಾಗ್ರಹಿ, ಜವಹರಲಾಲ್ ನೆಹರು ಎರಡನೆಯ  ಸತ್ಯಾಗ್ರಹಿ. ಸತ್ಯಾಗ್ರಹ ಪ್ರಾರಂಭಿಸುವುದಕ್ಕೆ ಮುಂಚೆಯೇ ಜವಹರಲಾಲರನ್ನು ಸರ್ಕಾರ ಬಂಧಿಸಿತು. ಯುದ್ಧವಿರೋಧಿ ಘೋಷಣೆ ಮಾಡಿ ಸಾವಿರಾರು ಸತ್ಯಾಗ್ರಹಿಗಳು ಸೆರೆಮನೆ ಸೇರಿದರು. ೧೯೪೨ರಲ್ಲಿ ಜನವರಿಯಲ್ಲಿ ವೈಯಕ್ತಿಕ ಸತ್ಯಾಗ್ರಹವನ್ನು ಕಾಂಗ್ರೆಸ್ ಸಮಿತಿಯು ನಿಲ್ಲಿಸಲು ತೀರ್ಮಾನಿಸಿತು. ೧೯೪೨ನೇ ಆಗಸ್ಟ್ ೮ರಂದು ಮುಂಬಯಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಸೇರಿತು. ಯುದ್ಧದ ಪರಿಸ್ಥಿತಿಯ ಬಗ್ಗೆ ವಿಚಾರ ವಿನಿಮಯ ಮಾಡಿತು. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗದೆ ಭಾರತಕ್ಕೆ ಉಳಿಗಾಲವಿಲ್ಲ ಎಂದು ನಿರ್ಧಾರಕ್ಕೆ ಬಂದಿತು. ಆಗಲೇ ಗಾಂಧಿಯವರು ’ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಘೋಷಿಸಿದರು. ’ಮಾಡು ಇಲ್ಲವೇ ಮಡಿ’ ಎಂದು ಕರೆ ನೀಡಿದರು. ಗಾಂಧಿಯವರನ್ನು ಬಂಧಿಸಿದರು. ಜನ ರೊಚ್ಚಿಗೆದ್ದರು. ಆಂದೋಲನ ಉಗ್ರವಾಯಿತು. ಆಂದೋಲನದ ಜ್ವಾಲೆ ಕಡಿಮೆ ಆಗಲಿಲ್ಲ. ಸಹಸ್ರಾರು ಜನರು ಮಡಿದರು. ೧೯೪೩ನೇ ಫೆಬ್ರವರಿಯಲ್ಲಿ ಗಾಂಧಿಯವರು ೨೧ ದಿನಗಳ ಉಪವಾಸ ಪ್ರಾರಂಭಿಸಿದರು. ಉಪವಾಸದ ದಿನಗಳಾದಂತೆ ಇವರ ಪ್ರಕೃತಿ ತೀರ ಕಳವಳಕ್ಕೆ ಕಾರಣವಾಯಿತು. ಗಾಂಧಿಯವರನ್ನು ಬಿಡುಗಡೆ ಮಾಡಬೇಕೆಂದು ದೇಶದ ಎಲ್ಲಾ ರಾಜಕೀಯ ಪಕ್ಷಗಳೂ ಸರಕಾರವನ್ನು ಭಿನ್ನವಿಸಿಕೊಂಡವು. ಸರ್ಕಾರ ಸಮ್ಮತಿಸಿತು. ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಮಣಿದು ೧೯೪೭ನೇ ಆಗಸ್ಟ್ ೧೫ರಂದು ಬ್ರಿಟಿಷರು ತಮ್ಮ ಅಧಿಕಾರವನ್ನೆಲ್ಲಾ ಬಿಟ್ಟುಕೊಟ್ಟರು. ಭಾರತ ಸ್ವತಂತ್ರ ದೇಶವಾಯಿತು. ಆದರೆ ಭಾರತ, ಪಾಕಿಸ್ತಾನ ಎಂದು ಎರಡು ಭಾಗಗಳಾದವು. ಪಂಜಾಬ ಮತ್ತು ಬಂಗಾಲ ಪ್ರಾಂತಗಳು ಇಬ್ಭಾಗವಾದವು. ಆಗಸ್ಟ್ ೧೫ ಕ್ಕೆ ೮-೧೦ ದಿನಗಳ ಮುಂಚೆ ಜಾತಿ ದಂಗೆ ವಿಕೋಪಕ್ಕೆ ಹೋಯಿತು. ಸಾವಿರಾರು ಜನ ಬೀದಿ ಪಾಲಾದರು. ಕೊಡಲೇ ಗಾಂಧಿಯವರು ಕಲ್ಕತ್ತಾಗೆ ಧಾವಿಸಿದರು. ಹಿಂದೂ ಮುಸಲ್ಮಾನರು ದಂಗೆಯನ್ನು ನಿಲ್ಲಿಸಿ ಮೊದಲಿನಂತೆ ಅಣ್ಣ-ತಮ್ಮಂದಿರ ಹಾಗೆ ಇರಬೇಕು, ಇಲ್ಲವಾದರೆ ತಾವು ಅಮರಣ ಉಪವಾಸ ಕೈಗೊಳ್ಳುವುದಾಗಿ ಗಾಂಧಿಯವರು ಘೋಷಿಸಿದರು. ಇಡೀ ದೇಶವೇ ಚಿಂತೆಯಲ್ಲಿ ಮುಳುಗಿತು. ಗಾಂಧಿಯವರೇ ಉಪವಾಸ ಪ್ರಾರಂಭಿಸಿದರು. ಕೂಡಲೇ ಎಲ್ಲಾ ಗಲಾಟೆಗಳೂ ನಿಂತವು.
ಹೇ ರಾಮ್ : ೧೯೪೮ನೇ ಜನವರಿ ೩೦ರಂದು ಗಾಂಧಿಯವರು ಬೆಳಿಗ್ಗೆ ಎದ್ದು ನಿತ್ಯದಂತೆ ತಮ್ಮ ಎಲ್ಲ ಕೆಲಸಗಳನ್ನು ಮುಗಿಸಿದರು. ೧೦ ಗಂಟೆಗೆ ಊಟ ಮುಗಿಸಿದರು. ಬರೆಯುವುದನ್ನೆಲ್ಲಾ ಬರೆದರು. ಮಧ್ಯಾಹ್ನ ವಲ್ಲಭಭಾಯಿ ಜೊತೆಯಲ್ಲಿ ಬಹಳ ಹೊತ್ತು ಮಾತನಾಡುತ್ತಿದ್ದರು. ಪ್ರಾರ್ಥನೆಯ ಹೊತ್ತಾದರೂ ಮಾತು ಮುಗಿಯಲಿಲ್ಲ. ಮನೂ ಗಾಂಧಿಯವರು, ಗಾಂಧೀಜಿಯವರ ಮುಂದೆ ಗಡಿಯಾರ ಇಟ್ಟರು.  ಗಡಿಯಾರ ನೋಡಿದ ಕೂಡಲೇ ಪ್ರಾರ್ಥನೆಗೆ ಹೊರಟರು. ಹತ್ತು ನಿಮಿಷ ತಡವಾಗಿತ್ತು. ಗಾಂಧಿಯವರು ಜನಸಮುದಾಯಕ್ಕೆ ಕೈ ಮುಗಿಯುತ್ತಾ ಹೊರಟಿದ್ದರು. ಇನ್ನೇನು ಪ್ರಾರ್ಥನೆಯ ವೇದಿಕೆಯನ್ನು ಹತ್ತಬೇಕು, ಅಷ್ಡರಲ್ಲಿ ನಾಥೂರಾಮ್ ಗೋಡೆ ಎಂಬುವನು ಮುಂದೆ ಬಂದು ಅವರ ಎದೆಗೆ ಹಾಗೂ ಹೊಟ್ಟೆಗೆ ಮೂರು ಗುಂಡು ಹಾರಿಸಿದ. ಗಾಂಧಿಯವರು ’ಹೇ ರಾಮ್, ಹೇ ರಾಮ್’ ಎಂದು ನೆಲಕ್ಕೆ ಬಿದ್ದರು. ಗಾಂಧೀಜಿಯವರ ನಶ್ವರ ದೇಹ ನಶಿಸಿತು. ಮಹಾತ್ಮ ಗಾಂಧಿ ಅಮರರಾದರು!!


                            ಪ್ರಕಟಣೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ

Advertisement

0 comments:

Post a Comment

 
Top