PLEASE LOGIN TO KANNADANET.COM FOR REGULAR NEWS-UPDATES

 ಒಬ್ಬ ಹೆಣ್ಣು ಮಗಳು ಮಧ್ಯರಾತ್ರಿ ೧೨ ಗಂಟೆಗೆ ಮೈತುಂಬ ಬಂಗಾರದ ಒಡವೆ ಹಾಕಿಕೊಂಡು; ಧೈರ್ಯವಾಗಿ ಒಬ್ಬಳೇ ನಡೆದಾಡುತ್ತಾಳೋ ಅಂದೇ ನಿಜವಾದ ಸ್ವಾತಂತ್ರ್ಯ ನಮಗೆ ಬಂದಂತೆ ಎಂದು ಮಹಾತ್ಮಾ ಗಾಂಧೀಜಿ ಅಂದು ನುಡಿದಿದ್ದರು. ಆದರೆ ಇಂದು ಒಬ್ಬ ಹೆಣ್ಣು ಮಗಳು ಹಗಲಿನಲ್ಲಿಯೇ ಒಬ್ಬಂಟಿಗಳಾಗಿ ಸುರಕ್ಷಿತವಾಗಿ ನಡೆದಾಡಲು ಆಗುತ್ತಿಲ್ಲವಲ್ಲ, ಇದು ಸ್ವತಂತ್ರ ಭಾರತದ ವಾತಾವರಣವೆ?
            ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೊ ಮಹೇಶ್ವರಾ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಗುರುವೇ ದೈವ ಎನ್ನುವ ಕಾಲವೊಂದಿತ್ತು. ಆದರೀಗ ಗುರುವೇ-ನ್-ಮಹಾ ಎನ್ನುವಂತಹ  ವಿದ್ಯಾರ್ಥಿ ಪೀಳಿಗೆಯನ್ನು ಹುಟ್ಟು ಹಾಕಿದ್ದೆವಲ್ಲಾ? ಇದು ಸ್ವತಂತ್ರ ಭಾರತದ ಸಾಧನೆಯಾ?
            ಹರ ಮುನಿದರೆ ಗುರು ಕಾಯುವ ಎನ್ನುವ ಕಾಲವೊಂದಿತ್ತು. ಆದರೆ ಈಗ ಕಾಯುವವನೇ ಕೊಲುವವನಾದಾಗ, ಬೇಲಿಯೇ ಎದ್ದು ಹೊಲ ಮೇಯ್ದರೆ ಎಂಬಂತೆ ಶಿಕ್ಷಕನೇ ಕಾಮುಕನಾಗಿದ್ದಾನಲ್ಲಾ? ಇದು ಸ್ವತಂತ್ರ ಭಾರತದ ಸಾಧನೆಯಾ?
ಬ್ರಷ್ಟಾಚಾರ ಎಂಬ ಸಸಿಯನ್ನು ಕಿತ್ತು ಹಾಕದೆ ಗೊಬ್ಬರ, ನೀರು ಹಾಕಿ ಅದನ್ನು ಇಂದು ಹೆಮ್ಮರವಾಗಿ ಬೆಳೆಸಿದ್ದೆವಲ್ಲಾ ಇದೇನಾ ಸ್ವತಂತ್ರ ಭಾರತದ ಸಾಧನೆ? ಸುಳ್ಳು ಆಶ್ವಾಸನೆ ನೀಡಿ ರೈತರ ಹೆಸರಲ್ಲಿ ಅಧಿಕಾರ ಸ್ವಿಕರಿಸಿ ರೈತ ದೇಶದ ಬೆನ್ನೆಲುಬು ಎಂದು ಭಾಷಣ ಮಾಡಿ ಇತ್ತ ಆ ಬೆನ್ನೆಲುಬನ್ನೇ ಮುರಿಯುತ್ತಾ ಕ್ರಷಿಯನ್ನೇ ನಿರ್ಲಕ್ಷಿಸುತ್ತಿದ್ದಾರಲ್ಲಾ ಇದೇನಾ ಸ್ವತಂತ್ರ ಭಾರತದ ಸಾಧನೆ?
          ನಮ್ಮ ಕಣ್ಣಿದುರಿಗೇ ಗಣಿಧಣಿಗಳು ನಮ್ಮ ಸಂಪತ್ತನ್ನು ಮಾರಿ ಭರತ ಭೂಮಿಯನ್ನು ಬಂಜರು ಭೂಮಿ ಮಾಡುತ್ತಿರುವುದನ್ನು ನೋಡಿಯೂ ಹೇಡಿಯಾಗಿ ಕೈಕಟ್ಟಿ ಕುಳಿತಿರುವ ಪರಿಸ್ಥಿತಿ ಸರ್ಕಾರಕ್ಕೆ ಸಮಾಜಕ್ಕೆ ಬಂದಿದೆಯಲ್ಲಾ ಇದೇನಾ ಸ್ವತಂತ್ರ ಭಾರತದ ಸಾಧನೆ?ಸ್ವಾತಂತ್ರ್ಯ ಸಿಕ್ಕು ೬೩ ವರ್ಷವಾದರೂ ಈಗಲೂ ಬ್ರಾಹ್ಮಣ, ಶ್ರೀಮಂತರೆಂಬ ಮದವೇರಿದ ಆನೆಗಳ ಕಾಲಲ್ಲಿ ಸಿಕ್ಕು ದಲಿತರು, ಬಡವರು ಒದ್ದಾಡುತ್ತಿದ್ದಾರಲ್ಲಾ ಇದೇನಾ ಸ್ವತಂತ್ರ ಭಾರತದ ಸಾಧನೆ?
         ಜಾತಿ ಎಂಬ ಕವಚದಿಂದ ಹೊರ ಬಂದ ಬುದ್ಧ, ಬಸವಣ್ಣ ಎಲ್ಲರನ್ನೂ ಹೊರ ತರಲು ಪ್ರಯತ್ನಿಸಿದರೂ ಅವರ ಮಾತನ್ನು ಧಿಕ್ಕರಿಸಿ ಜಾತಿಯೆಂಬ ಕವಚವನ್ನು ತಮ್ಮ ಮೈಗಂಟಿಸಿಕೊಂಡಿದ್ದಾರಲ್ಲಾ, ಹೆಸರಿಗೆ ಮಾತ್ರ ಜಾತ್ಯಾತೀತ ರಾಷ್ಟ್ರ-ಪ್ರಾಣ ಬಿಟ್ಟೇವು ಜಾತಿ ಬಿಡೆವು ಎನ್ನುವ ಜನರಿದ್ದಾರಲ್ಲಾ ಇದೇನಾ ಸ್ವತಂತ್ರ ಭಾರತದ ಸಾಧನೆ?
       ಏಕಲವ್ಯನಂಥಹ ಅದೆಷ್ಟೋ ಪ್ರತಿಭೆಗಳು ಬಡತನದಲ್ಲಿಯೇ ಕಮರಿಹೋಗುತ್ತಿವೆ. ಆ ಮೊಗ್ಗುಗಳನ್ನು ಅರಳುವ ಮುನ್ನವೇ ಚಿವುಟಿ ಹಾಕುತ್ತಿದ್ದಾರಲ್ಲಾ ಇದೇನಾ ಸ್ವತಂತ್ರ ಭಾರತದ ಸಾಧನೆ?
            ಶಿಕ್ಷಣ ಪಡೆದು ಸಂಸ್ಕ್ರತಿ ಮರೆಯುತ್ತಿದ್ದಾರೆ, ಮನುಷ್ಯ ನಾಗರಿಕನಾಗಿ ಅನಾಗರಿಕನಂತೆ ವರ್ತಿಸುತ್ತಿದ್ದಾನೆ. ೨೧ ನೇ ಶತಮಾನದಲ್ಲೂ ಮೂಢನಂಬಿಕೆಗಳಿಂದ ಹೊರಬರದೆ ಕಣ್ಣಿದ್ದೂ ಕುರುಡರಾಗಿದ್ದಾರಲ್ಲಾ ಇದೇನಾ ಸ್ವತಂತ್ರ ಭಾರತದ ಸಾಧನೆ?
                         
- ಸುವರ್ಣ ಶಿ. ಕಂಬಿ
 ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರಾಮವಿವಿ, ಜ್ಞಾನಶಕ್ತಿ ಆವರಣ, ತೊರವಿ, ವಿಜಾಪುರ-೫೮೬೧೦೮
ಮೊ.ನಂ: ೮೭೯೨೨೪೩೧೨೩

Advertisement

0 comments:

Post a Comment

 
Top