ಪೊಲೀಸ್ ಹುತಾತ್ಮರ ದಿನದ ಅಂಗವಾಗಿ, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ಗುಲಬರ್ಗಾ ವಲಯ ಐಜಿಪಿ ಸುರೇಶ್ ಮಹಮ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಜಿಲ್ಲಾಧಿಕಾರಿ ಆರ್.ಆರ್. ಜನ್ನು ಸೇರಿದಂತೆ ಅಧಿಕಾರಿ, ಗಣ್ಯರು, ಮಾಧ್ಯಮದವರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗುಲಬರ್ಗಾ ವಲಯ ಐಜಿಪಿ ಸುರೇಶ್ ಮಹಮ್ಮದ್ ಅವರು, ಪೊಲೀಸರು ತಮ್ಮ ಜೀವದ ಹಂಗು ತೊರೆದು, ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ಕಾನೂನು ಸುವ್ಯವಸ್ಥೆ ರಕ್ಷಣೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಮಾಡುವ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಈ ವರ್ಷ ಕರ್ತವ್ಯ ನಿರ್ವಹಣೆ ವೇಳೆ ದೇಶದಲ್ಲಿ ಒಟ್ಟು ೬೫೯ ಪೊಲೀಸರು ಹುತಾತ್ಮರಾಗಿದ್ದು, ಅವರೆಲ್ಲರನ್ನೂ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಈ ವರ್ಷ ಗುಲಬರ್ಗಾದಲ್ಲಿ ಮುನ್ನಾ ಎಂಬ ನಟೋರಿಯಸ್ ರೌಡಿಯ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಪಿಎಸ್‌ಐ ಮಲ್ಲಿಕಾರ್ಜುನ ಬಂಡಿ ಅವರನ್ನು ವಿಶೇಷವಾಗಿ ಸ್ಮರಿಸಬೇಕಾಗುತ್ತದೆ. ತ್ಯಾಗ ಮನೋಭಾವದಿಂದ ಕಾರ್ಯ ನಿರ್ವಹಿಸುವ ಪೊಲೀಸರ ಕಲ್ಯಾಣಕ್ಕಾಗಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ವರ್ಷ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳು ಅಲ್ಲದೆ ಉಟೋಪಹಾರ ಸೌಲಭ್ಯ ದೊರೆಯುವಂತೆ ಮಾಡಲು ಎಲ್ಲ ಜಿಲ್ಲೆಗಳಲ್ಲೂ ಪೊಲೀಸ್ ಕ್ಯಾಂಟೀನ್ ಪ್ರಾರಂಭಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಿದ್ದು, ಯಶಸ್ವಿಯಾದ ಹಿನ್ನೆಲೆಯಲ್ಲಿ ಗುಲಬರ್ಗಾಕ್ಕೂ ಸಹ ಪೊಲೀಸ್ ಪಬ್ಲಿಕ್ ಸ್ಕೂಲ್ ಪ್ರಾರಂಭಿಸಲು ಮಂಜೂರಾತಿ ದೊರೆತಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪೊಲೀಸ್ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೈದ್ರಾಬಾದ್-ಕರ್ನಾಟಕ ಭಾಗದ ಜಿಲ್ಲೆಗಳ ಪೊಲೀಸರಿಗೆ ಉನ್ನತ ಚಿಕಿತ್ಸೆ ಪಡೆಯಲು ದೂರದ ಬೆಂಗಳೂರಿಗೆ ಹೋಗಿ ಬರಲು ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ಹೈದ್ರಾಬಾದ್‌ನ ೫ ಉತ್ತಮ ಆಸ್ಪತ್ರೆಗಳನ್ನು ಆರೋಗ್ಯಭಾಗ್ಯ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗಿದೆ. ಅಲ್ಲದೆ ಪೊಲೀಸ್ ಸಿಬ್ಬಂದಿಗೆ ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಪೊಲೀಸ್ ಸಿಬ್ಬಂದಿಗೂ ಆರೋಗ್ಯಭಾಗ್ಯ ಯೋಜನೆಯಡಿ ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆಯಲು ಅನುಕೂಲವಾಗುವ ಹಾಗೆ ಕಾರ್ಯಕ್ರಮ ರೂಪಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮಾತನಾಡಿ, ಪೊಲೀಸರು ನಿತ್ಯ ಕಾನೂನು ಸುವ್ಯವಸ್ಥೆ ಪಾಲನೆ, ನ್ಯಾಯಾಲಯ, ಆಸ್ಪತ್ರೆ ಪ್ರಕರಣಗಳು, ಸಾರ್ವಜನಿಕರ ಹಿತಾಸಕ್ತಿ ಸೇರಿದಂತೆ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಇದೆ. ಅಲ್ಲದೆ ಕುಟುಂಬದ ಹಿತಾಸಕ್ತಿಯನ್ನೂ ಬದಿಗೊತ್ತಿ ಕರ್ತವ್ಯ ನಿರ್ವಹಿಸುವ ಸ್ಥಿತಿ ಇರುತ್ತದೆ. ಆದರೂ ಪೊಲೀಸರು ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವುದು ಅಭಿನಂದನೆಗೆ ಅರ್ಹವಾಗಿದೆ. ಪೊಲೀಸರು ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದೇ, ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದಂತೆ ಎಂದರು.
ಈ ವರ್ಷ ಹುತಾತ್ಮರಾದ ದೇಶದ ೬೫೯ ಪೊಲೀಸರ ಹೆಸರುಗಳನ್ನು ಹೇಳುವ ಮೂಲಕ ಸ್ಮರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್ ಅವರು, ಭಾರತ-ಚೀನಾ ಗಡಿಭಾಗದಲ್ಲಿ ೧೯೫೯ ರ ಅಕ್ಟೋಬರ್ ೨೧ ರಂದು ಚೀನಿ ಸೈನಿಕರಿಂದ ಗಡಿಭಾಗದ ಲೆಹ್ ಪ್ರದೇಶದಲ್ಲಿ ಅತಿಕ್ರಮಣ ನಡೆದಿತ್ತು. ಆಗ ದೇಶದ ಹಾರ್ಟ್‌ಸ್ವಿಂಗ್‌ನ ಸಿಆರ್‌ಪಿಎಫ್ ತುಕಡಿಯ ಸೈನಿಕರು ಕೆಚ್ಚೆದೆಯಿಂದ ಹೋರಾಟ ನಡೆಸಿದ ಘಟನೆಯಲ್ಲಿ ೧೦ ಸೈನಿಕರು ಹುತಾತ್ಮರಾದರು. ಹುತಾತ್ಮರ ತ್ಯಾಗ ಬಲಿದಾನದ ಸ್ಮರಣೆಗಾಗಿ ಈಗಲೂ ಈ ಭಾಗದ ೧೮೦೦೦ ಅಡಿ ಎತ್ತರದ ಪ್ರದೇಶದಲ್ಲಿ ಬೃಹತ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಈ ಹುತಾತ್ಮ ಮಹನೀಯರ ಸ್ಮರಣೆಗಾಗಿ ಪ್ರತಿ ವರ್ಷ ಅಕ್ಟೋಬರ್ ೨೧ ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆಂತರಿಕ ಭದ್ರತೆ, ಕಾನೂನು ಸುವ್ಯವಸ್ಥೆ ಪಾಲನೆಯ ಪ್ರಾಮಾಣಿಕ ಕರ್ತವ್ಯಕ್ಕೆ ಇಂತಹ ಹುತಾತ್ಮ ಪೊಲೀಸರು ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿವಿಧ ಗಣ್ಯರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಾಧ್ಯಮದವರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು.
0 comments:
Post a Comment