ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಮೂರು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೀಡಲಾಗುವ ಆಹಾರಧಾನ್ಯಗಳನ್ನು ಪಡಿತರ ಚೀಟಿ ಪದ್ಧತಿಯಲ್ಲಿ ಕಡ್ಡಾಯವಾಗಿ ವಿತರಿಸುವ ವ್ಯವಸ್ಥೆಯನ್ನು ಹದಿನೈದು ದಿನಗಳ ಒಳಗಾಗಿ ಜಾರಿಗೆ ತರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಉಮಾಶ್ರೀ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಿದರು.
ಕೊಪ್ಪಳ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳ ಮೂಲಕ ಮೂರು ವರ್ಷದೊಳಗಿನ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಪೂರಕ ಪೌಷ್ಠಿಕ ಆಹಾರಧಾನ್ಯಗಳನ್ನು ವಿತರಿಸುವ ವ್ಯವಸ್ಥೆ ಇದ್ದು, ಆದರೆ ಆಹಾರಧಾನ್ಯಗಳ ವಿತರಣೆಯಲ್ಲಿ ಸಾಕಷ್ಟು ಲೋಪದೋಷಗಳಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಆಹಾರಧಾನ್ಯಗಳನ್ನು ನಿಗದಿಗಿಂತ ಕಡಿಮೆ ಪ್ರಮಾಣದಲ್ಲಿ ವಿತರಿಸಿ, ರಜಿಸ್ಟರ್‌ನಲ್ಲಿ ಅಧಿಕ ಪ್ರಮಾಣ ನಮೂದಿಸುತ್ತಿರುವುದು ಹಾಗೂ ರಜಿಸ್ಟರ್‌ಗಳಲ್ಲಿ ಸಾಕಷ್ಟು ತಿದ್ದುಪಡಿ ಮಾಡುತ್ತಿರುವುದನ್ನು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಮನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಹಾರಧಾನ್ಯಗಳನ್ನು ಪಡಿತರ ಚೀಟಿ ಪದ್ಧತಿಯಲ್ಲಿ ವಿತರಿಸುವಂತೆ ಈಗಾಗಲೆ ಸೂಚನೆ ನೀಡಲಾಗಿದ್ದರೂ, ಜಿಲ್ಲೆಯ ಯಾವುದೇ ಕಡೆ ಇಂತಹ ವ್ಯವಸ್ಥೆ ಜಾರಿಯಾಗಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನಿದರ್ಶನವಾಗಿದೆ. ಜಿಲ್ಲೆಯಲ್ಲಿ ಅಪೌಷ್ಠಿಕತೆ ಹೆಚ್ಚಿನ ಪ್ರಮಾಣದಲ್ಲಿರುವ ಬಗ್ಗೆ ವರದಿಗಳಿವೆ. ಅಪೌಷ್ಠಿಕತೆ ನಿವಾರಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ, ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯದಿಂದಾಗಿ ಈ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈಗಾಗಲೆ ಪಡಿತರ ಚೀಟಿ ಪದ್ಧತಿಯ ನಮೂನೆಯನ್ನು ಎಲ್ಲ ಸಿಡಿಪಿಓಗಳಿಗೆ ನೀಡಲಾಗಿದ್ದು, ಹದಿನೈದು ದಿನಗಳ ಒಳಗಾಗಿ ಪಡಿತರ ಚೀಟಿ ಪದ್ಧತಿ ಮೂಲಕ ಆಹಾರಧಾನ್ಯ ವಿತರಿಸಿ, ಅಂತಹ ಪಡಿತರ ಕಾರ್ಡ್‌ಗಳಲ್ಲಿ ಆಹಾರಧಾನ್ಯ ಪ್ರಮಾಣ ನಮೂದಿಸಬೇಕು. ಅಲ್ಲದೆ ಆಕಸ್ಮಿಕ ಭೇಟಿ ಸಂದರ್ಭದಲ್ಲಿ ಇಂತಹ ಪಡಿತರ ಕಾರ್ಡ್‌ಗಳು ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಮನೆಗಳಲ್ಲಿರಬೇಕು ಎಂಬುದಾಗಿ ತಾಕೀತು ಮಾಡಿದರಲ್ಲದೆ, ತಪ್ಪಿದಲ್ಲಿ, ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಸಿಡಿಪಿಓಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ತನಿಖೆಗೆ ಆದೇಶ : ಕೊಪ್ಪಳದ ಗಣೇಶನಗರದ ಅಂಗನವಾಡಿ ಕೇಂದ್ರಕ್ಕೆ ಬುಧವಾರದಂದು ಆಕಸ್ಮಿಕ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ, ಆಹಾರಧಾನ್ಯ ವಿತರಣೆ ರಜಿಸ್ಟರ್‌ನಲ್ಲಿ ಸಾಕಷ್ಟು ತಿದ್ದುಪಡಿಗಳಾಗಿದ್ದು, ಈ ಕುರಿತು ಆ ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ತಪ್ಪೊಪ್ಪಿಗೆ ನೀಡಿದ್ದಾರೆ. ಆಹಾರಧಾನ್ಯ ವಿತರಣೆಯಲ್ಲಿ ಆದ ಲೋಪದೋಷ ಹಾಗೂ ಅಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ, ಒಂದು ವಾರದೊಳಗೆ ವರದಿಯನ್ನು ಸಲ್ಲಿಸಬೇಕು. ಅಲ್ಲದೆ ಜಿಲ್ಲೆಯ ಇತರೆ ಅಂಗನವಾಡಿ ಕೇಂದ್ರಗಳ ಮೂಲಕ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿರುವ ಕುರಿತು ಆಯಾ ಮೇಲ್ವಿಚಾರಕರು ಹಾಗೂ ಸಿಡಿಪಿಓ ಗಳು ರಜಿಸ್ಟರ್‌ಗಳನ್ನು ಪರಿಶೀಲಿಸಿ, ವರದಿ ನೀಡಬೇಕು. ಈ ಕುರಿತ ಸಮಗ್ರ ವರದಿ ಸಚಿವರಿಗೆ ಸಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರಿಗೆ ಸಚಿವೆ ಉಮಾಶ್ರೀ ಅವರು ಸೂಚನೆ ನೀಡಿದರು.
ಬಹುಧಾನ್ಯ ಮಿಶ್ರಿತ ಆಹಾರ ವಿತರಣೆ : ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಾಗಿದ್ದು, ೨೬೩೯ ಮಕ್ಕಳು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಶ್ರೀಮಂತರ ಮಕ್ಕಳು ಬರುವುದಿಲ್ಲ. ಬಡ ರೈತರ ಅಥವಾ ಕೂಲಿ ಕಾರ್ಮಿಕರ ಮಕ್ಕಳೇ ದಾಖಲಾಗುವುದು ಸಾಮಾನ್ಯ. ಆದರೆ ಅಪೌಷ್ಠಿಕತೆ ಸುಧಾರಣೆಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರ ವ್ಯವಸ್ಥೆ ಸರಿ ಇಲ್ಲ. ಇದರಿಂದಾಗಿ ಅಪೌಷ್ಠಿಕತೆ ಸುಧಾರಣೆ ಪ್ರಮಾಣ ಕಡಿಮೆ ಇದೆ. ಅಪೌಷ್ಠಿಕತೆ ನಿವಾರಣೆಗೆ ಮಕ್ಕಳಿಗೆ ಮೊಟ್ಟೆ ಹಾಗೂ ಬಹುಧಾನ್ಯ ಮಿಶ್ರಿತ ಪುಡಿ ಆಹಾರ ವಿತರಣೆ ಮಾಡುವುದು ಅತ್ಯಂತ ಅವಶ್ಯಕತೆ ಇದೆ. ಪೌಷ್ಠಿಕ ಆಹಾರ ತಜ್ಞರೂ ಸಹ ಬಹುಧಾನ್ಯ ಮಿಶ್ರಿತ ಆಹಾರ ಪದ್ಧತಿಗೆ ಶಿಫಾರಸ್ಸು ಮಾಡಿದ್ದರೂ, ಸಹ ಜಿಲ್ಲೆಯಲ್ಲಿ ಈ ವ್ಯವಸ್ಥೆ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವರು. ನಾಳೆಯಿಂದಲೇ ಬಹುಧಾನ್ಯ ಮಿಶ್ರಿತ ಆಹಾರ ನೀಡಿಕೆಯನ್ನು ಪ್ರಾರಂಭಿಸಬೇಕು ಅಲ್ಲದೆ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯ ಶೀಘ್ರ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಾಲಸಂಜೀವಿನಿ : ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಬಾಲಸಂಜೀವಿನಿ ಯೋಜನೆ ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಈ ಯೋಜನೆಯಡಿ ಚಿಕಿತ್ಸೆ ನೀಡಲು ಯಾವುದೇ ಆಸ್ಪತ್ರೆಯನ್ನು ನಿಗದಿಪಡಿಸದೆ, ದೂರದ ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಗೆ ಇಲ್ಲಿನ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವುದು ಬೇಸರದ ಸಂಗತಿಯಾಗಿದೆ. ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿಯೇ ಎಲ್ಲ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲು ಆರೋಗ್ಯ ಇಲಾಖೆ ಅಧಿಕಾರಿಗಳು ಯತ್ನಿಸಬೇಕು. ಅಥವಾ ನಿಗದಿತ ಎಲ್ಲ ವ್ಯವಸ್ಥೆ ಇರುವ ಜಿಲ್ಲೆಯ ಯಾವುದೇ ಖಾಸಗಿ ಆಸ್ಪತ್ರೆಯನ್ನು ನಿಗದಿಪಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳ ವ್ಯವಸ್ಥೆಯ ಬಗ್ಗೆ ಸಿಡಿಪಿಓ ಗಳು ಹಾಗೂ ಉಪನಿರ್ದೇಶಕರು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಜರುಗದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು. ಅಲ್ಲದೆ ಈ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯಾವುದೇ ಅಂಗನವಾಡಿ ಕೇಂದ್ರಗಳಲ್ಲಿ ಅಥವಾ ಇಲಾಖೆಯಲ್ಲಿ ಸರ್ಕಾರದ ಹಣ ದುರುಪಯೋಗ ಅಥವಾ ಆಹಾರಧಾನ್ಯಗಳ ವಿತರಣೆಯಲ್ಲಿ ಲೋಪ ಕಂಡುಬಂದಲ್ಲಿ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಸಚಿವೆ ಉಮಾಶ್ರೀ ಅವರು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿ.ಪಂ. ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಡಿ. ಪವಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿನಿರ್ದೇಶಕ ಓಬಳಪ್ಪ ಸೇರಿದಂತೆ ಜಿಲ್ಲಾ ಪಂಚಾಯತಿ ಹಲವು ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಮೇಲ್ವಿಚಾರಕಿಯರು, ಸಿಡಿಪಿಓಗಳು ಉಪಸ್ಥಿತರಿದ್ದರು.
0 comments:
Post a Comment